ಬೆಂಗಳೂರು; ಸರ್ಕಾರಿ ಅಧಿಕಾರಿ, ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರವೂ ವರ್ಗಾವಣೆ ಆದೇಶಗಳು ಹೊರಬೀಳುತ್ತಿವೆ. ಮುಖ್ಯಮಂತ್ರಿಯವರ ಪೂರ್ವಾನುಮೋದನೆಯಿಲ್ಲದೆಯೇ ವರ್ಗಾವಣೆ ಮಾಡುವಂತಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿದ್ದ ಟಿಪ್ಪಣಿಯನ್ನೇ ಅಧಿಕಾರಿ ವರ್ಗವು ಕಾಲ ಕಸವನ್ನಾಗಿಸಿಕೊಂಡಿದೆ.
ಈ ಮಧ್ಯೆ ತಮ್ಮ ಗಮನಕ್ಕೆ ಬಾರದೇ ವರ್ಗಾವಣೆ ಮಾಡಬಾರದು ಎಂದು ಸ್ವತಃ ಉಪ ಮುಖ್ಯಮಂತ್ರಿ ಅವರೂ ಮುಖ್ಯಮಂತ್ರಿ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ವಿಶೇಷವೆಂದರೇ ಈ ಪತ್ರವನ್ನಾಧರಿಸಿ ತೆರೆದಿದ್ದ ಕಡತವು, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರ ಬಳಿ 2024ರ ಜುಲೈನಿಂದ ಇದೆ. ನಾಲ್ಕು ತಿಂಗಳಾದರೂ ಈ ಕಡತಕ್ಕೆ ಇನ್ನೂ ಮುಕ್ತಿ ದೊರೆತಿಲ್ಲ.
ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ 2023ರ ಆರಂಭದಲ್ಲಿ ಹೊರಬಿದ್ದಿದ್ದ ವರ್ಗಾವಣೆ ಆದೇಶಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕೂಡ ಇವುಗಳನ್ನೇ ಬಳಸಿಕೊಂಡು ಸಿದ್ದರಾಮಯ್ಯ ಮತ್ತು ಸರ್ಕಾರದ ಮೇಲೆ ಮುಗಿಬಿದ್ದಿದ್ದವು.
‘ದಿ ಫೈಲ್’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?
ಈ ಬೆಳವಣಿಗೆ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗಮನಕ್ಕೆ ಬಾರದೇ ಯಾವುದೇ ವರ್ಗಾವಣೆ ಆದೇಶಗಳನ್ನು ಹೊರಡಿಸಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದರು. ಈ ಸಂಬಂಧ ಟಿಪ್ಪಣಿಯನ್ನೂ ಹೊರಡಿಸಿದ್ದರು. ಆದರೂ ಸಹ ಮುಖ್ಯಮಂತ್ರಿಗಳ ಮಾತನ್ನೂ ಮೀರಿ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗುತ್ತಿದೆ.
ಇದರ ಮಧ್ಯೆಯೇ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೂ ಸಹ ತಮ್ಮ ಗಮನಕ್ಕೆ ಬಾರದೇ ವರ್ಗಾವಣೆಯನ್ನು ಮಾಡಬಾರದು ಎಂದೂ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಬರೆದಿರುವ ಪತ್ರವೂ ಚರ್ಚೆಗೆ ಗ್ರಾಸವಾಗಿದೆ.
ಹೀಗಾಗಿ 2024ರ ಡಿಸೆಂಬರ್ 17ರಂದು ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ಕಟ್ಟಾಜ್ಞೆ ಹೊರಡಿಸಿದ್ದಾರೆ.
ಟಿಪ್ಪಣಿಯಲ್ಲೇನಿದೆ?
ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿರುವುದರಿಂದ ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡುವುದು ಅತ್ಯಗತ್ಯವಾಗಿದ್ದಲ್ಲಿ ಮುಖ್ಯಮಂತ್ರಿಯವರ ಪೂರ್ವಾನುಮೋದನೆಯನ್ನು ಪಡೆಯಬೇಕು ಎಂದು 2024ರ ಜನವರಿ 3ರಂದು ಹೊರಡಿಸಿದ್ದ ಟಿಪ್ಪಣಿಯಲ್ಲಿ ತಿಳಿಸಲಾಗಿತ್ತು.
ಒಂದು ವೇಳೆ ಪೂರ್ವಾನುಮೋದನೆಯನ್ನು ಪಡೆಯದೇ, ಯಾವುದೇ ವರ್ಗಾವಣೆಗಳನ್ನು ಮಾಡಿದಲ್ಲಿ ಸಂಬಂಧಪಟ್ಟ ಸರ್ಕಾರಾದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರನ್ನು ನೇರ ಜವಾಬ್ದಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟ ಪಡಿಸಿತ್ತು. ಆದರೂ ಈ ನಿರ್ದೇಶನವನ್ನು ಉಲ್ಲಂಘಿಸಿ ಪದೇಪದೇ ಘಟನೋತ್ತರ ಅನುಮೋದನೆ ಕೋರಿ ಕಡತಗಳನ್ನು ಸಲ್ಲಿಸುತ್ತಿರುವುದನ್ನು ಗಮನಿಸಲಾಗಿದೆ.
ಆದ್ದರಿಂದ ಸುತ್ತೋಲೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಯಾವುದೇ ವರ್ಗಾವಣೆ ಕಡತಗಳನ್ನು ಮುಖ್ಯಮಂತ್ರಿಗಳ ಅನುಮೋದನೆ ಇಲ್ಲದೇ ಹೊರಡಿಸಬಾರದು. ಮತ್ತು ಇನ್ನು ಮುಂದೆ ಕಡತಗಳನ್ನು ಘಟನೋತ್ತರ ಅನುಮೋದನೆಗೆ ಮಂಡಿಸದಂತೆ ಸ್ಪಷ್ಟವಾಗಿ ಎಲ್ಲಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಸೂಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಡಿಸೆಂಬರ್ 17ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್ ಅವರ ಬಳಿ2024-25ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಕುರಿತು ಕಡತವು 2024ರ ಸೆ.10ರಿಂದಲೂ ಅವರ ಬಳಿ ( FD/54/KGID/2024-ADV-FINANCE) ಇದೆ.
ಅಲ್ಲದೇ ಉಪ ಮುಖ್ಯಮಂತ್ರಿಗಳ ಗಮನಕ್ಕೆ ಬಾರದೇ ವರ್ಗಾವಣೆಯನ್ನು ಮಾಡಬಾರದು ಎಂಬ ಕಡತವೂ (DPAR/393/SKM/2024) ಸಹ ಅತೀಕ್ ಅವರ ಬಳಿ 2024ರ ಜುಲೈ 22ರಿಂದ ಇದೆ.
ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಮತ್ತು ವಕ್ಫ್ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣದ ಕುರಿತು ತೆರೆದಿರುವ ಕಡತಕ್ಕೆ 11 ತಿಂಗಳಾದರೂ ಇನ್ನೂ ಮುಕ್ತಿ ದೊರೆತಿಲ್ಲ.
ಜಮೀರ್ ವಿರುದ್ಧ ಲೋಕಾಯುಕ್ತ ತನಿಖೆ; ಸಿಎಂ ಎಸಿಎಸ್ ಬಳಿ 11 ತಿಂಗಳಿನಿಂದಲೂ ಧೂಳಿಡಿದ ಕಡತ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮುಖ್ಯಮಂತ್ರಿಗಳ ಅನುಮೋದನೆಗೆ ಕಳಿಸಿರುವ ಬಹುತೇಕ ಕಡತಗಳಿಗೆ ಕಳೆದ ಒಂದು ವರ್ಷದಿಂದಲೂ ಧೂಳು ಮೆತ್ತಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಎಲ್ ಕೆ ಅತೀಕ್ ಅವರ ಬಳಿಯೇ 2023ರ ಮೇ 20ರಿಂದ 2024ರ ಡಿಸೆಂಬರ್ 4ರವರೆಗೆ ಒಟ್ಟು 371 ಕಡತಗಳು ವಿಲೇವಾರಿ ಆಗದೇ ಬಾಕಿ ಉಳಿದಿವೆ.
ಮುಖ್ಯಮಂತ್ರಿ ಅವರ ಅನುಮೋದನೆಗೆ ಸ್ವೀಕೃತವಾಗಿರುವ, ಅನುಮೋದನೆ ನೀಡಿರುವ, ಅನುಮೋದನೆಗೆ ಬಾಕಿ ಇರುವುದಕ್ಕೆ ಸಂಂಧಿಸಿದಂತೆ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಎಷ್ಟು ಕಡತಗಳು ಬಾಕಿ ಇವೆ ಎಂಬ ಕುರಿತಾದ ಮಾಹಿತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಕಚೇರಿಗಳು 120 ದಿನಗಳಾದರೂ ಮಾಹಿತಿ ಒದಗಿಸಿರಲಿಲ್ಲ.
120 ದಿನಗಳಾದರೂ ಕಡತಗಳ ಮಾಹಿತಿ ಒದಗಿಸದ ಸಿಎಂ ಸಚಿವಾಲಯ; ಹಿರಿಯ ಅಧಿಕಾರಿಯಿಂದ ತಡೆ?
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಆಪ್ತ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಸೇರಿದಂತೆ ಒಟ್ಟಾರೆ 12ಕ್ಕೂ ಹೆಚ್ಚು ಅಧಿಕಾರಿಗಳು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತ್ಯೇಕವಾದ ಕಚೇರಿ ಮತ್ತು ಸಿಬ್ಬಂದಿಯನ್ನೂ ಒದಗಿಸಿದೆ. ಮುಖ್ಯಮಂತ್ರಿ ಸಚಿವಾಲಯದ ಪ್ರತೀ ಕಚೇರಿಯಲ್ಲಿ ಮಾಹಿತಿ ಹಕ್ಕು ಅಧಿಕಾರಿಯನ್ನು ನೇಮಿಸಲಾಗಿದೆ. ಆದರೂ ಆರ್‌ಟಿಐ ಅಡಿಯಲ್ಲಿ ಕೋರಿದ್ದ ಮಾಹಿತಿ ನೀಡಿರಲಿಲ್ಲ.
8 ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗೆ ಬಾಕಿ; 21,009 ಕಡತಗಳಿಗೆ ತ್ರಿಶಂಕು ಭಾಗ್ಯ
ಈ ಕಚೇರಿಗಳಲ್ಲಿನ ಕಡತಗಳ ಮಾಹಿತಿಗಾಗಿ ‘ದಿ ಫೈಲ್’ 2024ರ ಜೂನ್ 1ರಂದೇ ಆರ್‍ಟಿಐ ಅಡಿಯಲ್ಲಿ ಮಾಹಿತಿ ಕೋರಿತ್ತು. ಕಡತಗಳ ಕುರಿತಾದ ಮಾಹಿತಿಯನ್ನು ಆರ್‍ಟಿಐ ಅಡಿ ಒದಗಿಸಬಾರದು ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಧೀನ ಅಧಿಕಾರಿಯೊಬ್ಬರಿಗೆ ತಡೆಯೊಡ್ಡಿದ್ದಾರೆ. ಹೀಗಾಗಿ 120 ದಿನಗಳಾದರೂ ಮಾಹಿತಿ ನೀಡಲಾಗುತ್ತಿಲ್ಲ. ಕಡತಗಳ ಮಾಹಿತಿ ನೀಡದಂತೆ ಮೇಲಾಧಿಕಾರಿಗಳ ಒತ್ತಡವೂ ಇದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯದ ಮತ್ತೊಬ್ಬ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಪ್ರತಿಕ್ರಿಯಿಸಿದ್ದರು.
ಕಚೇರಿಗಳಲ್ಲಿ ಕೆಲಸ ಮಾಡದ ಶೇ.47ರಷ್ಟು ಸಿಬ್ಬಂದಿ; ರಾಶಿ ರಾಶಿ ಕಡತಗಳು, ಆಡಳಿತ ವ್ಯವಸ್ಥೆ ಕುಂಠಿತ
ಕಡತ ವಿಲೇವಾರಿಯಲ್ಲಿ ವಿಳಂಬವು ಹಿಂದಿನ ಬಿಜೆಪಿ ಸರ್ಕಾರದಿಂದಲೂ ಮುಂದುವರದಿದೆ.
ಇಲಾಖೆ ಹಂತದಲ್ಲೇ 31,308 ಕಡತಗಳು ವಿಲೇವಾರಿಗೆ ಬಾಕಿ; ಸಿಎಂ ಸೂಚನೆಗೂ ಕಿಮ್ಮತ್ತಿಲ್ಲ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಅವರ ಸಚಿವಾಲಯದಲ್ಲಿಯೂ ಕಡತಗಳು ವಿಲೇವಾರಿಯಾಗದೇ ಧೂಳಿಡಿದಿದ್ದವು.
ಸಿಎಂ ಇಲಾಖೆಯಲ್ಲೇ ವಿಲೇವಾರಿಗೆ 3,351 ಕಡತ ಬಾಕಿ; ನೂರು ದಿನ ಪೂರೈಸಿದ್ದರೂ ಚುರುಕಿಲ್ಲ
ಅಲ್ಲದೇ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿಯೇ 1.69 ಲಕ್ಷ ಕಡತಗಳು ವಿಲೇವಾರಿಯಾಗದೇ ತೆವಳತ್ತಿದ್ದವು.
ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!
ಈ ಕುರಿತು ‘ದಿ ಫೈಲ್’ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಆ ನಂತರ ಕಡತ ಯಜ್ಞ ನಡೆಸಿದ್ದರು.
‘ದಿ ಫೈಲ್’ ವರದಿ ಪರಿಣಾಮ; ಕಡತ ವಿಲೇವಾರಿ ಮಾಡದ ಮೈಗಳ್ಳರಿಗೆ ಸಿಎಂ ತರಾಟೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ ಕೆ ಅತೀಕ್ ಅವರು ಕಳೆದ ಒಂದು ವರ್ಷದಿಂದಲೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಿಪಿಎಆರ್, ಇ-ಆಡಳಿತ, ಹಣಕಾಸು, ನಗರಾಭಿವೃದ್ಧಿ, ಕಾನೂನು ಸಂಸದೀಯ ವ್ಯವಹಾರಗಳು, ಜಲ ಸಂಪನ್ಮೂಲ, ಪಿಡಬ್ಲ್ಯೂಡಿ, ಗೃಹ, ವಾಣಿಜ್ಯ ಮತ್ತು ಕೈಗಾರಿಕೆ, ಐಟಿ, ಬಿಟಿ, ವಿಜ್ಞಾನ ತಂತ್ರಜ್ಞಾನ, ಇಂಧನ, ಮೂಲಸೌಕರ್ಯ, ನೀತಿ ನಿರೂಪಣೆ, ಅಂತರರಾಜ್ಯ ಜಲ ವಿವಾದ, ಭಾರತ ಸರ್ಕಾರದೊಂದಿಗೆ ವ್ಯವಹರಿಸುವುದು ಮತ್ತು ಈ ಇಲಾಖೆಗಳಿಗೆ ಸಂಬಂಧಿಸಿದ ಸಚಿವ ಸಂಪುಟದ ವಿಷಯಗಳನ್ನು ಹಂಚಿಕೆ ಮಾಡಿದೆ.