ಇಲಾಖೆ ಹಂತದಲ್ಲೇ 31,308 ಕಡತಗಳು ವಿಲೇವಾರಿಗೆ ಬಾಕಿ; ಸಿಎಂ ಸೂಚನೆಗೂ ಕಿಮ್ಮತ್ತಿಲ್ಲ

ಬೆಂಗಳೂರು; ಕಡತ ವಿಲೇವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೆಷ್ಟೇ ಗಡುವು ನೀಡಿ ಎಚ್ಚರಿಕೆ ನೀಡಿದ್ದರೂ 2021ರ ಅಕ್ಟೋಬರ್‌ 25ರ ಅಂತ್ಯಕ್ಕೆ ಒಟ್ಟು 31,308 ಕಡತಗಳು ವಿಲೇವಾರಿಗೆ ಬಾಕಿ ಉಳಿದಿವೆ.

ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಕಡತಗಳು ವಿಲೇವಾರಿಯಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಬೆನ್ನಲ್ಲೇ 18 ಇಲಾಖೆಗಳ ಮುಖ್ಯಸ್ಥರ ಹಂತದಲ್ಲೇ 31,308 ಕಡತಗಳು ವಿಲೇವಾರಿಯಾಗಿಲ್ಲ ಎಂಬುದು ಬಹಿರಂಗವಾಗಿದೆ.

ಬಸವರಾಜ ಬೊಮ್ಮಾಯಿ ಅವರು ನಿಭಾಯಿಸುವ ಹಣಕಾಸು ಇಲಾಖೆಯಲ್ಲಿಯೇ 2021ರ ಅಕ್ಟೋಬರ್‌ 27ರ ಅಂತ್ಯಕ್ಕೆ 3,351 ಕಡತಗಳು ಬಾಕಿ ಉಳಿದಿದ್ದವು.

18 ಇಲಾಖೆಗಳಲ್ಲಿ 16,543 ಭೌತಿಕ ಕಡತ (ಎಫ್‌ಎಂಎಸ್‌)ಮತ್ತು ಇ- ಆಫೀಸ್‌ ವಿಭಾಗದಲ್ಲಿ 14,765 ಕಡತಗಳು ವಿಲೇವಾರಿಗೆ ಬಾಕಿ ಇವೆ. ಅಕ್ಟೋಬರ್‌ 25ರ ಅಂತ್ಯಕ್ಕೆ ವಿಲೇವಾರಿಯಾಗದೇ ಕಡತಗಳು ಬಾಕಿ ಇರುವ ಸಂಬಂಧ ಇಲಾಖಾವಾರು ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕಡತಗಳ ವಿಲೇವಾರಿಗೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಪೈಕಿ ನಗರಾಭಿವೃದ್ಧಿ ಇಲಾಖೆಯು ಅಗ್ರ ಸ್ಥಾನದಲ್ಲಿದೆ.

 

 

ಕಡತಗಳು ಬಾಕಿ ಇರುವ ವಿವರ (ಎಫ್‌ಎಂಎಸ್‌-ಇ-ಆಫೀಸ್‌)

ಸಿಆಸುಇ (ಜನಸ್ಪಂದನ) – 62

ಜಲಸಂಪನ್ಮೂಲ ಇಲಾಖೆ-4,422

ಸಿಆಸುಇ (ಇ-ಆಡಳಿತ) – 122

ವೈದ್ಯಕೀಯ ಶಿಕ್ಷಣ – 2,771

ಮೂಲಭೂತ ಸೌಲಭ್ಯ ಅಭಿವೃದ್ಧಿ- 109

ವಸತಿ ಇಲಾಖೆ- 207

ಕಾನೂನು ಇಲಾಖೆ- 1,104

ಕೃಷಿ ಇಲಾಖೆ- 1,497

ಸಣ್ಣ ನೀರಾವರಿ- 1,049

ಆಹಾರ ಮತ್ತು ನಾಗರೀಕ ಸರಬರಾಜು – 554

ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌- 3,080

ಉನ್ನತ ಶಿಕ್ಷಣ – 1,405

ವಾಣಿಜ್ಯ ಮತ್ತು ಕೈಗಾರಿಕೆ – 2,857

ಸಿಆಸುಇ (ಆಡಳಿತ ಸುಧಾರಣೆ) – 235

ತೋಟಗಾರಿಕೆ, ರೇಷ್ಮೆ – 1,101

ಪ್ರವಾಸೋದ್ಯಮ- 516

ನಗರಾಭಿವೃದ್ಧಿ – 9,350

ಯೋಜನೆ, ಸಾಂಖ್ಯಿಕ- 865

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಂದೇ ಕಡತ ವಿಲೇವಾರಿಗೆ ಸೂಚಿಸಿದ್ದರಲ್ಲದೆ 15 ದಿನದಲ್ಲಿ ಕಡತಗಳು ವಿಲೇವಾರಿಯಾಗಿರಬೇಕು ಎಂದೂ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದರು. ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರು ಪ್ರತಿ ತಿಂಗಳೂ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರಾದರೂ ಕಡತ ವಿಲೇವಾರಿಯಲ್ಲಿ ಒಂದಿನಿತೂ ಪ್ರಗತಿಯಾಗಿಲ್ಲ. ಹಣಕಾಸು ಇಲಾಖೆಯಲ್ಲಿಯೇ 3,351 ಕಡತಗಳು ವಿಲೇವಾರಿಯಾಗದಿರುವುದು ಮುಖ್ಯಮಂತ್ರಿ ನೀಡಿದ್ದ ಎಚ್ಚರಿಕೆ ಸಂದೇಶವನ್ನು ಕಸದ ಬುಟ್ಟಿಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಆರ್ಥಿಕ ಇಲಾಖೆಯ 69 ಶಾಖೆಗಳಲ್ಲಿ 7 ದಿನದವರೆಗೆ 8 ರಿಂದ 15 ದಿನ, 16ರಿಂದ 30 ದಿನ, 31ರಿಂದ 60 ದಿನ ಮತ್ತು 60 ದಿನಗಳ ನಂತರ ದಿನಗಳಲ್ಲಿ ಸೃಜಿಸಲಾದ ಕಡತಗಳು ಕೊಳೆಯುತ್ತಿವೆ. 0-7 ದಿನಗಳವರೆಗೆ ವಿಲೇವಾರಿಯಾಗದಿರುವ ಕಡತಗಳ ಸಂಖ್ಯೆ 1,484ರಷ್ಟಿದೆ. 8-15 ದಿನದವರೆಗೆ 329, 16-30 ದಿನದವರೆಗೆ 292, 31-60 ದಿನದವರೆಗೆ 348, 60 ದಿನಗಳ ನಂತರ ಒಟ್ಟು 898 ಕಡತಗಳು ವಿಲೇವಾರಿಯಾಗದೆ ಬಾಕಿ ಇದೆ.

ಹಾಗೆಯೇ 2021ರ ಆಗಸ್ಟ್‌ ಅಂತ್ಯಕ್ಕೆ 41 ಆಡಳಿತ ಇಲಾಖೆಗಳಲ್ಲಿ 1.60 ಲಕ್ಷ ಕಡತಗಳು ವಿಲೇವಾರಿಗೆ ಬಾಕಿ ಇದ್ದವು. ಈ ಪೈಕಿ 31,077 ಕಡತಗಳು ಈ ಆಫೀಸ್‌ನಲ್ಲಿಯೇ ವಿಲೇವಾರಿ ಆಗಿರಲಿಲ್ಲ. ನಗರಾಭಿವೃದ್ಧಿ ಇಲಾಖೆಯಲ್ಲಿ 11,250, ಕಂದಾಯ ಇಲಾಖೆಯಲ್ಲಿ 9,314, ಪ್ರಾಥಮಿಕ, ಪ್ರೌಢಶಿಕ್ಷಣದಲ್ಲಿ 7,689, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲಿ 5,446, ಜಲ ಸಂಪನ್ಮೂಲ ಇಲಾಖೆಯಲ್ಲಿ 5,490 ಕಡತಗಳು ಬಾಕಿ ಇದ್ದವು. ಈ ಕುರಿತು ‘ದಿ ಫೈಲ್‌’ ಸೆ.2ರಂದು ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ವಿಲೇವಾರಿಗೆ ಬಾಕಿ ಇವೆ 1.69 ಲಕ್ಷ ಕಡತಗಳು; ಕುಂತಲ್ಲೇ ಕುಳಿತಿದೆ ಮೈಗಳ್ಳರ ಸರ್ಕಾರ!

ಭೌತಿಕ ಕಡತ ವಿಲೇವಾರಿಗೆ ಯಾವುದೇ ಗಡುವು ನಿಗದಿಪಡಿಸದಿದ್ದರೂ 15 ದಿನಕ್ಕಿಂತ ಹೆಚ್ಚು ಬಾಕಿ ಇರಬಾರದು ಎಂಬ ಮೌಖಿಕ ಸೂಚನೆ ಇದೆ. 15 ದಿನದೊಳಗೆ ಭೌತಿಕ ಕಡತಗಳನ್ನು ವಿಲೇವಾರಿ ಮಾಡಬೇಕು. ನ್ಯಾಯಾಲಯ ಪ್ರಕರಣ, ಭೂ ವ್ಯಾಜ್ಯ, ಇಲಾಖೆ ವಿಚಾರಣೆ ಸಂಬಂಧಿಸಿದ ಕಡತಗಳು ಆಯಾ ಪ್ರಕರಣಗಳು ಇತ್ಯರ್ಥವಾಗುವವರೆಗೂ ಕಡತಗಳು ವಿಲೇವಾರಿಗೆ ಬಾಕಿ ಇರಿಸಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.

ಆದರೆ ಈ ಪ್ರಕರಣಗಳನ್ನು ಹೊರತುಪಡಿಸಿಯೂ ಹಲವು ಇಲಾಖೆಗಳಲ್ಲಿ ಸಾಮಾನ್ಯ ಕಡತಗಳೂ ವಿಲೇವಾರಿಗೆ 15 ದಿನಕ್ಕಿಂತಲೂ ಹೆಚ್ಚು ದಿನಗಳ ಕಾಲ ಕಡತಗಳನ್ನು ಬಾಕಿ ಇರಿಸಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

SUPPORT THE FILE

Latest News

Related Posts