ಡಿಕೆಶಿಯಿಂದ ಸಾಲ ಪಡೆದಿರುವ ದವನಂ ಕನ್ಸ್‌ಟ್ರಕ್ಷನ್ಸ್‌ಗೆ ಟಿಡಿಆರ್‍‌ ಪ್ರಸ್ತಾವನೆ; ನಿಯಮಬಾಹಿರ ಲಾಭ?

ಬೆಂಗಳೂರು; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರಿಂದ 1.14 ಕೋಟಿ ರು ಸಾಲ ಪಡೆದಿರುವ ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ  ಈಗಿನ ಕಾಂಗ್ರೆಸ್‌ ಸರ್ಕಾರವು ತರಾತುರಿಯಲ್ಲಿ ಟಿಡಿಆರ್‍‌ ಪರಿಹಾರ ನೀಡಲು ಮುಂದಾಗಿದೆ. ಅಂದಾಜು 150 ಕೋಟಿ ರು ಮೌಲ್ಯದ ಟಿಡಿಆರ್‌ನ್ನು   ದವನಂಗೆ ನಿಯಮಬಾಹಿರವಾಗಿ ಲಾಭ ಮಾಡಿಕೊಡಲಿದೆ.

 

ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ ನ ಮನವಿ ಪ್ರಕಾರ ಭೂ ಪರಿಹಾರ ಪಾವತಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಕಷ್ಟವಾಗಬಹುದು, ಆರ್ಥಿಕ ಹೊರೆಯಾಗಬಹುದು ಎಂದು ಆರ್ಥಿಕ ಇಲಾಖೆಯು ಹೇಳಿತ್ತು. ಇನ್ನು ಮುಂದೆ ಯಾವುದೇ ಇಂತಹ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಮಂಡಿಸಬಾರದು ಎಂದು ಆಯುಕ್ತರಿಗೆ ಸೂಚಿಸಿತ್ತು. ಆದರೂ ಟಿಡಿಆರ್‌ ಪ್ರಸ್ತಾವನೆಯನ್ನು ಎರಡನೇ  ಬಾರಿಗೆ ಮಂಡಿಸಿದೆ.

 

ಈ ಸಂಬಂಧ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಮಧ್ಯೆ ಬಿರುಸಿನ ವೇಗದಲ್ಲಿ ಕಡತ ಚಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕಡತದ (DOH/25/SBM/2023-HSD2-HOUSING) ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅರಮನೆ ಮೈದಾನದ ಎರಡೂ ಕಡೆಗಳಲ್ಲಿರುವ ರಸ್ತೆಗಳ ವಿಸ್ತರಣೆಗಾಗಿ ಮೈದಾನದ ಖಾಲಿ ಭೂಮಿ ವಶಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಿದ್ದರ ಬೆನ್ನಲ್ಲೇ ಇದೀಗ ದವನಂ ಪ್ರಕರಣದ ಟಿಡಿಆರ್‍‌ ಪ್ರಕರಣವೂ ಮುನ್ನೆಲೆಗೆ ಬಂದಿದೆ.

 

ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈವೈಟ್‌ ಲಿಮಿಟೆಡ್‌ ಜಮೀನನ್ನು ಖರೀದಿಸಿರುವ ಜಾಗದ ಪೈಕಿ 3,388.56 ಚ ಮೀ ನಷ್ಟು ಜಾಗದಲ್ಲಿ ಕೊಳಚೆ ನಿವಾಸಿಗಳು ವಾಸವಿದ್ದಾರೆ. ಭೂ ಮಾಲೀಕತ್ವ ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ ಹೆಸರಿನಲ್ಲಿದ್ದರೂ ವಾಸ್ತವದಲ್ಲಿ ಸ್ವಾಧೀನದಲ್ಲಿಲ್ಲ. ಹೀಗಾಗಿ ಟಿಡಿಆರ್‍‌ ಪರಿಹಾರ ನೀಡಲು ನಿಯಮದಲ್ಲಿ ಅವಕಾಶವಿಲ್ಲ. ಆದರೂ ನಿಯಮ ಉಲ್ಲಂಘಿಸಿ ಟಿಡಿಆರ್‍‌ ಪರಿಹಾರ ನೀಡಲು ಹೊರಟಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.

 

‘ಆಯುಕ್ತರು ಪ್ರಸ್ತಾಪಿಸಿದಂತೆ ಖಾಸಗಿ ಮಾಲೀಕತ್ವದಲ್ಲಿರುವ ಭೂ ಮಾಲೀಕರಿಗೆ ಕರ್ನಾಟಕ ಟೌನ್ ಕಂಟ್ರಿ ಪ್ಲ್ಯಾನಿಂಗ್‌ ಸುಗ್ರೀವಾಜ್ಞೆ 2021ರಲ್ಲಿ ಕೊಳಚೆ ಪ್ರದೇಶಗಳಿಗೆ ಟಿಡಿಆರ್‍‌ ನೀಡಲು ಅವಕಾಶ ಕಲ್ಪಿಸಿರುವಂತೆ ಟಿಡಿಆರ್‍‌ ಮುಖಾಂತರ ಭೂ ಪರಿಹಾರ ಪಾವತಿಸಿದ್ದಲ್ಲಿ ಈಗಾಗಲೇ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆ ಹೊರಡಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂ ಪರಿಹಾರ ನೀಡುವಂತೆ ಬಂದಿರುವ ಪ್ರಸ್ತಾವನೆಗಳಲ್ಲಿ ಇದೇ ತರಹದಂತೆ ನಮಗೂ ಭೂಪರಿಹಾರ ಪಾವತಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಸರ್ಕಾರಕ್ಕೆ ಕಷ್ಟಕರ ಎನಿಸಹುದು. ಈಗಾಗಲೇ ಆರ್ಥಿಕ ಇಲಾಖೆಯಯವರು ತಮ್ಮ ಸ್ಪಷ್ಟ ನಿಲುವನ್ನು ತಿಳಿಸಿರುವ ಹಿನ್ನೆಲೆ ಇನ್ನೂ ಮುಂದೆ ಯಾವುದೇ ಇಂತಹ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಮಂಡಿಸದಂತೆ ಆಯುಕ್ತರಿಗೆ ತಿಳಿಸಬೇಕು,’ ಎಂದು ವಸತಿ ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.

 

 

ಈ ಸಂಗತಿಯನ್ನು ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಭೂ ಪರಿಹಾರ ನೀಡುವ ಸಲುವಾಗಿ ಕಡತಕ್ಕೆ ಮಿಂಚಿನ ವೇಗ ದೊರೆತಿದೆ. ಅಷ್ಟೇ ಅಲ್ಲ ವಸತಿ ಇಲಾಖೆಯು ಸಹ ತನ್ನ ಅಭಿಪ್ರಾಯವನ್ನು ಬದಲಿಸಿದೆ.

 

‘ಕೊಳಚೆ ಪ್ರದೇಶವೆಂದು ಘೋಷಿಸಿರುವ ಖಾಸಗಿ ಜಮೀನನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ)ಕಾಯ್ದೆ 1973ರ ಕಲಂ 174 ಅಡಿ ಭೂ ಸ್ವಾಧೀನ ಮಾಡಿರುವ ಕೊಂಡಿರುವ ಜಮೀನಿಗೆ ಆರ್ಥಿಕ ಭೂ ಪರಿಹಾರ ನೀಡುವುದಕ್ಕೆ ಸಂಬಂಧಿಸಿದೆ. ಆದರೆ ಈ ಪ್ರಕರಣದಲ್ಲಿ ಭೂ ಮಾಲೀಕರಿಗೆ ಅವರು ಮಂಡಳಿಗೆ ಬಿಟ್ಟುಕೊಡುವ ಜಾಗಕ್ಕೆ ಆರ್ಥಿಕ ಪರಿಹಾರದ ಬದಲಾಗಿ ಟಿಡಿಆರ್‍‌ ಮುಖಾಂತರ ಭೂ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಂಡಳಿ, ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗುವುದಿಲ್ಲ ಎಂಬ ಅಭಿಪ್ರಾಯದೊಂದಿಗೆ ಆರ್ಥಿಕ ಇಲಾಖೆಯ ಸಹಮತಿ ಕೋರಿ ಕಡತ ಸಲ್ಲಿಸಬಹುದು,’ ಎಂದು ವಸತಿ ಇಲಾಖೆಯು 2024ರ ಮಾರ್ಚ್‌ 13ರಂದು ಹೇಳಿದೆ.

 

 

ಹಾಗೆಯೇ ಆರ್ಥಿಕ ಮತ್ತು ಕಾನೂನು ಇಲಾಖೆಯೊಡನೆ ಸಮಾಲೋಚನೆ ಮಾಡುತ್ತಿರುವ ಪ್ರಕರಣಗಳ ಬಗ್ಗೆಯೂ ವಸತಿ ಇಲಾಖೆಯು ಮತ್ತೊಂದು ಅಭಿಪ್ರಾಯ ನೀಡಿದೆ.

 

‘ಕರ್ನಾಟಕ ಕೊಳಚೆ ಪ್ರದೇಶಗಳ ಕಾಯ್ದೆ 1973ರ ಕಲಂ 3 ಅಥವಾ 11ರ ಅಡಿ ಕೊಳಚೆ ಪ್ರದೇಶವೆಂದು ಘೋಷಿಸಿರುವ ಖಾಸಗಿ ಜಮೀನನ್ನು ಇದೇ ಕಾಯ್ದೆ ಕಲಂ 17ರ ಅಡಿ ಭೂ ಸ್ಬಾಧೀನಪಡಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿ ಪ್ರಾಥಮಿಕ, ಅಂತಿಮ ಅಧಿಸೂಚನೆ ಹೊರಡಿಸಿದ್ದು ಖಾಸಗಿ ಜಮೀನಿನ ಭೂ ಮಾಲೀಕರಿಗೆ ಹಣಕಾಸಿನ ರೂಪದಲ್ಲಿ ಸುಮಾರು 253.11 ಕೋಟಿ ರು. ಬಿಡುಗಡೆ ಮಾಡಬೇಕಿದೆ,’ ಎಂಬ ಅಂಶವನ್ನು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

 

ಪ್ರಕರಣದ ಹಿನ್ನೆಲೆ

 

ಬೆಂಗಳೂರು ನಗರದ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಗೌಸ್‌ಲ್ಯಾಂಡ್‌ ಓಕಳಿಪುರಂ ಕೊಳಚೆ ಪ್ರದೇಶವನ್ನು (ಅಧಿಸೂಚನೆ ಸಂಖ್ಯೆ; ಕೆಎಸ್‌ಎ/ಸಿಆರ್‍‌/-107/02-03 ದಿನಾಂಕ 12/08/2022) ಕಾಯ್ದೆ ಕಲಂ 3 ರ ಅಡಿ 1.12 ಎಕರೆ ಕೊಳಚೆ ಪ್ರದೇಶವೆಂದು ಘೋಷಿಸಿತ್ತು. ಇದರಲ್ಲಿ ಸಿಟಿಎಸ್‌ ನಂ 1300ರಲ್ಲಿ 0-19 ಗುಂಟೆ ಹಾಗೂ ಸಿಟಿಎಸ್‌ ನಂ 12997/4 ರಲ್ಲಿ 0-33 ಗುಂಟೆ ಇತ್ತು ಎಂಬುದು ದಾಖಲೆಯಿಂದ ತಿಳಿದು ಬಂದಿದೆ.

 

ಈ ಪೈಕಿ 0-33 ಗುಂಟೆ (ಸಿಟಿಎಸ್‌ ನಂ 1297/4) ವಿಸ್ತೀರ್ಣದ ಜಮೀನನ್ನು ನ್ಯಾಷನಲ್‌ ಟೆಕ್ಸ್‌ಟೈಲ್ಸ್‌ ಕಾರ್ಪೋರೇಷನ್‌ ಲಿಮಿಟೆಡ್‌ನಿಂದ 2005ರಲ್ಲಿ ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ ಖರೀದಿಸಿತ್ತು. ಆದರೆ ಈ ಜಮೀನಿನಲ್ಲಿ ಕೊಳಚೆ ಪ್ರದೇಶದ ನಿವಾಸಿಗಳು ವಾಸವಿದ್ದರು. ಹೀಗಾಗಿ ಈವರೆವಿಗೂ ಯಾವುದೇ ಭೂ ಪರಿಹಾರ ನೀಡಿಲ್ಲ ಎಂದು ಗೊತ್ತಾಗಿದೆ.

 

ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ ಟಿಡಿಆರ್‍‌ ಪರಿಹಾರ ಕೋರಿ 2022ರಲ್ಲಿಯೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಮನವಿ ಸಲ್ಲಿಸಿತ್ತು.

 

 

 

 

ಖಾಸಗಿ ಭೂಮಿಯ ಮೇಲೆ ಇರುವ ಕೊಳಚೆ ಪ್ರದೇಶದ ಮರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ 2021ರಲ್ಲಿ ಜಾರಿಗೆ ಬಂದಿರುವ ಸುಗ್ರೀವಾಜ್ಞೆ ಪ್ರಕಾರ ಟಿಡಿಆರ್‍‌ ನೀಡಲು ಅವಕಾಶ ಕಲ್ಪಿಸಿದೆ. ಹೀಗಾಗಿ 0-33 ಗುಂಟೆ ಜಮೀನನ್ನು ಸರ್ಕಾರ/ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಭೂ ಸ್ರ್ವಾಧೀನಪಡಿಸಿಕೊಂಡು ಟಿಡಿಆರ್‍‌ ಮೂಲಕ ಭೂ ಪರಿಹಾರ ನೀಡಬೇಕು ಎಂದು ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ, ಮನವಿಯಲ್ಲಿ ಕೋರಿತ್ತು.

 

‘ಸದರಿ ಗೌಸ್‌ಲ್ಯಾಂಡ್‌ ಓಕಳಿಪುರಂ ಕೊಳಚೆ ಪ್ರದೇಶದಲ್ಲಿ ಕೊಳಗೇರಿ ನಿವಾಸಿಗಳು ವಾಸಿಸುತ್ತಿರುವ ಪ್ರಸ್ತಾವಿತ 0-33 ಗುಂಟೆ (3,388.66 ಚ ಮೀ) ಪ್ರದೇಶವನ್ನು ನಿಮ್ಮ ಮಂಡಳಿ/ಸರ್ಕಾರಕ್ಕೆ ಬಿಟ್ಟುಕೊಡಲು ನಾವು ಸಿದ್ಧರಿದ್ದು ನಾವು ಬಿಟ್ಟುಕೊಡಲಾದ ಗೌಸ್‌ಲ್ಯಾಂಡ್‌ ಕೊಳಚೆ ಪ್ರದೇಶವಿರುವ ಜಾಗಕ್ಕೆ ಟಿಡಿಆರ್‍‌ ಮುಖಾಂತರ ನಮಗೆ ಪರಿಹಾರ ಪಾವತಿಸಬೇಕು,’ ಎಂದು ಕೋರಿರುವುದು ಪತ್ರದಿಂದ ಗೊತ್ತಾಗಿದೆ.

 

 

 

ಈ ಸಂಬಂಧ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ  ಮಹೇಶ್‌ ಕುಮಠಳ್ಳಿ ಅವರ ಅಧ್ಯಕ್ಷತೆಯಲ್ಲಿ 2022ರ ನವೆಂಬರ್‍‌ 4ರಂದು ಸಭೆ ನಡೆದಿತ್ತು.

 

 

 

ಕೊಳಚೆ ಪ್ರದೇಶದ ಒಟ್ಟಾರೆ 1.12 ಎಕರೆ ಜಮೀನಿನ ಪೈಕಿ 0-33 ಗುಂಟೆ ಜಮೀನಿಗೆ ಭೂ ಮಾಲೀಕರಾದ ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ ಗೆ ಟಿಡಿಆರ್‍‌ ಮುಖಾಂತರ ಭೂ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

 

 

ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಟಿಡಿಆರ್‍‌ ನೀಡುವ ಬಗ್ಗೆ ಪತ್ರ ವ್ಯವಹಾರಗಳು ನಡೆದಿತ್ತೇ ವಿನಃ ಈ ಬಗ್ಗೆ ಯಾವುದೇ ತೀರ್ಮಾನವಾಗಿರಲಿಲ್ಲ. ಜಮೀನು ಅವರ ಸ್ವಾಧೀನದಲ್ಲಿ ಇಲ್ಲದ್ದಿದ್ದ ಕಾರಣಕ್ಕಾಗಿ ಹಿಂದಿನ ಸರ್ಕಾರವು ಟಿಡಿಆರ್‍‌ ಪರಿಹಾರ ನೀಡಿರಲಿಲ್ಲ ಎಂದು ತಿಳಿದು ಬಂದಿದೆ.

 

ದವನಂ ಕನ್ಸ್‌ಟ್ರಕ್ಷನ್ಸ್‌ ಪ್ರೈ ಲಿ ಗೆ ಡಿ ಕೆ ಶಿವಕುಮಾರ್‍‌ ಅವರು ಸಾಲ ನೀಡಿದ್ದಾರೆ.

 

 

ಇದನ್ನು  ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಸ್ವಯಂ ಘೋಷಣೆ ಪ್ರಮಾಣ ಪತ್ರದಲ್ಲಿ ಘೋಷಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts