ಆಂದೋಲನ ವರದಿ ಫೇಕ್‌ ನ್ಯೂಸ್‌ ಪೋಸ್ಟರ್‌; ಮಾಹಿತಿಯೇ ಇಲ್ಲವೆಂದ ಇಲಾಖೆ, ಲಾಂಛನ ದುರ್ಬಳಕೆಯಾಗಿದ್ದರೂ ಮೌನ

ಬೆಂಗಳೂರು; ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿ ಕಮಿಷನ್‌ಗಾಗಿ ಬೇಡಿಕೆ ಇರಿಸಲಾಗಿತ್ತು ಎಂದು ಆಂದೋಲನ ಪತ್ರಿಕೆ ಪ್ರಕಟಿಸಿದ್ದ ವಿಶೇ‍ಷ ವರದಿಯನ್ನೇ ಫೇಕ್‌ ನ್ಯೂಸ್‌ ಎಂಬ ಪೋಸ್ಟರ್‌ನ್ನು ತನ್ನದೇ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದ್ದ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯು ಇದೀಗ ಈ ಸಂಬಂಧ ಯಾವುದೇ ಸಭೆ ನಡೆಸಿಲ್ಲ ಮತ್ತು ಯಾವುದೇ ಮಾಹಿತಿಯೂ ಇಲ್ಲವೆಂದು ಅಧಿಕೃತವಾಗಿ ಉತ್ತರ ಒದಗಿಸಿದೆ.

 

ಆಂದೋಲನ ಪತ್ರಿಕೆಯ ವರದಿಯು ಫೇಕ್‌ ನ್ಯೂಸ್‌ ಎಂದು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿತ್ತು. ಆದರೀಗ ಇಲಾಖೆಯು ಈ ಸಂಬಂಧ ಯಾವುದೇ ಸಭೆ, ಮಾಹಿತಿ ಇಲ್ಲವೆಂದು ಹೇಳಿರುವುದು, ಮೇಲ್ನೋಟಕ್ಕೆ ಸರ್ಕಾರದ ಅಧಿಕೃತ ಲಾಂಛನ ಮತ್ತು ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣವು ದುರ್ಬಳಕೆ ಆಗಿರುವುದು ಕಂಡು ಬಂದಿದೆ.

 

ಈ ಕುರಿತು ‘ದಿ ಫೈಲ್‌’ ಮುಖ್ಯಮಂತ್ರಿ ಸಚಿವಾಲಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಆರ್‌ಟಿಐ ಅಡಿಯಲ್ಲಿ 2023ರ ಅಕ್ಟೋಬರ್‌ 16 ಮತ್ತು 17ರಂದು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಉತ್ತರಿಸಿರುವ ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಸಂಬಂಧ ಯಾವುದೇ ಸಭೆ ನಡೆದಿಲ್ಲ, ಕಡತವನ್ನೂ ತೆರೆದಿಲ್ಲ ಎಂದು ಉತ್ತರಿಸಿದೆ.

 

ಕಮಿಷನ್‌ಗೆ ಬೇಡಿಕೆ ಇರಿಸಿದ್ದು ರಾಜ್ಯ ಸರ್ಕಾರವನ್ನು ತೀವ್ರ ಮುಜುಗರದಲ್ಲಿ ಸಿಲುಕಿಸಿತ್ತು. ಇದರಿಂದ ತಪ್ಪಿಸಿಕೊಳ್ಳಲು ಆಂದೋಲನ ಪತ್ರಿಕೆಯ ವರದಿಯೇ ಫೇಕ್‌ ನ್ಯೂಸ್‌ ಎಂದು ತನ್ನದೇ ಇಲಾಖೆಯ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಹರಿಯಬಿಟ್ಟಿತ್ತು. ಆದರೀಗ ಇದರ ಮಾಹಿತಿಯೇ ತನಗಿಲ್ಲ ಎಂದು ನುಣುಚಿಕೊಳ್ಳುತ್ತಿರುವುದರ ಹಿಂದೆ ಹಲವು ಶಂಕೆಗಳು ವ್ಯಕ್ತವಾಗಿವೆ.

 

ತನ್ನದೇ ಇಲಾಖೆಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್‌ ಹರಿಯಬಿಟ್ಟಿದ್ದರೂ ಈ ಸಂಬಂಧ ಯಾವುದೆ ಮಾಹಿತಿ ಇಲ್ಲವೆಂದು ಹೇಳುತ್ತಿರುವ ಇಲಾಖೆಯು, ತನ್ನದೇ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್‌ ಪ್ರಕಟಿಸಿರುವವರ ವಿರುದ್ಧ ಸೈಬರ್‌ ಠಾಣೆಗೇಕೆ ದೂರನ್ನು ಸಲ್ಲಿಸಲಿಲ್ಲ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

 

ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯೇ ಈ ಸಂಬಂಧ ಯಾವುದೇ ಸಭೆಗಳನ್ನು ನಡೆಸಿಲ್ಲ, ಮಾಹಿತಿಯೂ ತನಗಿಲ್ಲ ಎಂದು ನೀಡಿರುವ ಮಾಹಿತಿಯು, ಸರ್ಕಾರದ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣವನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಪ್ರವೇಶಿಸಿದ್ದರೇ ಎಂಬ ಕುರಿತು ಹಲವು ಅನುಮಾನಗಳು ದಟ್ಟವಾಗಿವೆ.

 

ದಸರಾ ಸಂದರ್ಭದಲ್ಲಿ ಕಾರ್ಯಕ್ರಮ ನೀಡಲು ಸರ್ಕಾರದ ಅಧಿಕಾರಿಗಳು ರಾಜೀವ್‌ ತಾರಾನಾಥ್‌ ಅವರ ಬಳಿ ಕಮಿಷನ್‌ಗೆ ಬೇಡಿಕೆ ಇರಿಸಿದ್ದರು ಎಂದು ಆಂದೋಲನ ಪತ್ರಿಕೆಯು ವರದಿ ಪ್ರಕಟಿಸಿದ್ದರ ಬೆನ್ನಲ್ಲೇ ಕರ್ನಾಟಕ ಸರ್ಕಾರದ ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಇದೊಂದು ಫೇಕ್‌ ನ್ಯೂಸ್‌ ಎಂಬ ಪೋಸ್ಟರ್‌ನ್ನು ಪ್ರಕಟಿಸಿತ್ತು. ಇದು ಮಾಧ್ಯಮ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

 

‘ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಂದೋಲನ ದಿನಪತ್ರಿಕೆಯ ಫೇಕ್‌ ನ್ಯೂಸ್‌ ಕುರಿತಂತೆ ಯಾವುದೇ ಕಡತವನ್ನು ತೆರೆದಿರುವುದಿಲ್ಲ, ಯಾವುದೇ ಸಭೆ, ನಡವಳಿಗಳ ಮಾಹಿತಿ ಇರುವುದಿಲ್ಲ,’ ಎಂದು ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಎಂ ಕೆ ಕಿರಣ್‌ ಅವರು 2023ರ ನವೆಂಬರ್‌ 9ರಂದು ಉತ್ತರಿಸಿದ್ದಾರೆ.

 

ಅದೇ ರೀತಿ ಮುಖ್ಯಮಂತ್ರಿಯವರ ವಾರ್ತಾಧಿಕಾರಿ ಕಚೇರಿಯಲ್ಲಿಯೂ ಯಾವುದೇ ಕಡತವನ್ನು ತೆರೆದಿಲ್ಲ. ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನೂ ನಡೆಸಿಲ್ಲ ಎಂದು ಮುಖ್ಯಮಂತ್ರಿಗಳ ಸಚಿವಾಲಯವು ಮಾಹಿತಿ ಒದಗಿಸಿದೆ.

 

ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯಮಂತ್ರಿಗಳ ಸಚಿವಾಲಯವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರ ಕಚೇರಿಗೂ ರವಾನಿಸಿತ್ತು. ಆದರೆ ಇದುವರೆಗೂ ಮಾಧ್ಯಮ ಸಲಹೆಗಾರರ ಕಚೇರಿಯಿಂದ ಯಾವುದೇ ಮಾಹಿತಿಯೂ ಬಂದಿಲ್ಲ.

 

ಸುಳ್ಳು ಸುದ್ದಿಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ. ಹೀಗಿರುವಾಗ ಆಂದೋಲನ ದಿನಪತ್ರಿಕೆಯ ವರದಿಯನ್ನು ಸುಳ್ಳು ಸುದ್ದಿ ಎಂದು ತನ್ನದೇ ಇಲಾಖೆಗೆ ಸೇರಿದ ಸಾಮಾಜಿಕ ಜಾಲತಾಣದಲ್ಲಿ ಫೇಕ್‌ ನ್ಯೂಸ್‌ ಎಂದು ಪೋಸ್ಟರ್‌ ಪ್ರಕಟಿಸಿದ್ದು ಯಾರು ಎಂಬ ಬಗ್ಗೆ ಮಾಹಿತಿಯೇ ಇಲ್ಲ ಮಾಧ್ಯಮ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

 

‘ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿಯಲ್ಲಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ,’ ಎಂದು ಇದೇ ಸಂದರ್ಭದಲ್ಲಿ ಸಚಿವ  ಎಚ್.ಸಿ.ಮಹದೇವಪ್ಪ ಹೇಳಿದ್ದರು.

 

ದಸರಾ ಹಿನ್ನೆಲೆಯಲ್ಲಿ ಕಾರ್ಯಕ್ರಮ ‌ನೀಡಲು ರಾಜೀವ ತಾರಾನಾಥ ಅವರಿಗೆ ಸಂಭಾವನೆಯನ್ನೂ ಗೊತ್ತು ಮಾಡಲಾಗಿತ್ತು. ಬಳಿಕ ಅಧಿಕಾರಿಗಳು ತಾರಾನಾಥ ಅವರನ್ನು ಸಂಪರ್ಕಿಸಿ, ನಿಮ್ಮ ಸಂಭಾವನೆಗಿಂತ ಮೂರು ಲಕ್ಷ ರೂ. ಹೆಚ್ಚು ಕೊಡುತ್ತೇವೆ. ಹೆಚ್ಚುವರಿಯಾಗಿ ಜಮೆಯಾಗಿರುವ 3 ಲಕ್ಷ ರೂ. ಹಣವನ್ನು ನಮಗೆ ವಾಪಸ್ ನೀಡಬೇಕು ಎಂದು ಅಧಿಕಾರಿಗಳು ಕೇಳಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

 

ಈ ವಿಚಾರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಅಧಿಕಾರಿಗಳ ನಡೆಯನ್ನು ಹಲವರು ಖಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿತ್ತು. ಆದರೆ ತನಿಖೆ ಪ್ರಗತಿ ಕುರಿತು ಸರ್ಕಾರವು ಇದುವರೆಗೂ ಏನನ್ನೂ ಬಹಿರಂಗಪಡಿಸಿಲ್ಲ.

the fil favicon

SUPPORT THE FILE

Latest News

Related Posts