ಬೆಂಗಳೂರು; ಕೋವಿಡ್ ಕಾಲದಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ನಿಯಮಗಳ ಉಲ್ಲಂಘನೆ, ಅವ್ಯವಹಾರ ಸೇರಿದಂತೆ ವಿವಿಧ ರೀತಿಯ ಅಕ್ರಮಗಳ ಕುರಿತು ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಮೈಕಲ್ ಡಿ ಕುನ್ಹಾ ಅವರ ನೇತೃತ್ವದ ಆಯೋಗವು ‘ದಿ ಫೈಲ್’ಗೆ ಸಮನ್ಸ್ ಜಾರಿ ಮಾಡಿದೆ.
ಈ ವರದಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ದಾಖಲೆಗಳನ್ನು ಸಲ್ಲಿಸಬೇಕು ಎಂದು ಕುನ್ಹಾ ಅವರ ನೇತೃತ್ವದ ವಿಚಾರಣೆ ಆಯೋಗವು ಖುದ್ದು ಹಾಜರಾತಿಗೆ ಸಮನ್ಸ್ ಜಾರಿಗೊಳಿಸಿತ್ತು.
ಆಯೋಗದ ಸೂಚನೆಯಂತೆ ‘ದಿ ಫೈಲ್’ 2024ರ ಅಕ್ಟೋಬರ್ 24ರಂದು ಆಯೋಗದ ಮುಂದೆ ಹಾಜರಾಗಿತ್ತು.
ಸರಣಿ ರೂಪದಲ್ಲಿ ಪ್ರಕಟಿಸಿದ್ದ ವರದಿಗಳ ಪಿಡಿಎಫ್ ಪ್ರತಿಗಳನ್ನು ಪೆನ್‌ಡ್ರೈವ್‌ನಲ್ಲಿ ಅಡಕಗೊಳಿಸಿ ಸಲ್ಲಿಸಿದೆ.
ಅಲ್ಲದೇ ವಿಚಾರಣೆ ಆಯೋಗವು ಕೇಳಿದ್ದ ಪ್ರಶ್ನೆಗಳಿಗೂ ‘ದಿ ಫೈಲ್’ ಉತ್ತರ ಒದಗಿಸಿದೆ.
ಎನ್-95 ಮಾಸ್ಕ್, ಪಲ್ಸ್ ಆಕ್ಸಿಮೀಟರ್, ಪ್ಯಾರಾಮೀಟರ್, ರ್‍ಯಾಟ್ ಕಿಟ್, ವೆಂಟಿಲೇಟರ್ಸ್, ಸ್ಯಾನಿಟೈಜರ್ಸ್ ಸೇರಿದಂತೆ ಇನ್ನಿತರೆ ವೈದ್ಯಕೀಯ ಸಲಕರಣೆಗಳ ಖರೀದಿ ಸಂಬಂಧ ಪ್ರಾಥಮಿಕ ದಾಖಲೆಗಳನ್ನಾಧರಿಸಿ ‘ದಿ ಫೈಲ್’ 2020ರಿಂದಲೇ ವರದಿಗಳನ್ನು ಪ್ರಕಟಿಸಿತ್ತು.
ಅಲ್ಲದೇ ಕುನ್ಹಾ ಅವರ ನೇತೃತ್ವದ ವಿಚಾರಣೆ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿ ಆಧರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ಮುಖ್ಯಾಂಶಗಳನ್ನು ಆಧರಿಸಿ ‘ದಿ ಫೈಲ್’ ವರದಿಗಳನ್ನು ಪ್ರಕಟಿಸಿತ್ತು.
ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಸದನದಲ್ಲಿ ‘ದಿ ಫೈಲ್’ ವರದಿಗಳನ್ನು ಉಲ್ಲೇಖಿಸಿ ಹಿಂದಿನ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದನ್ನು ಸ್ಮರಿಸಬಹುದು.
ದಾಖಲೆಗಳು ಇಲ್ಲದೆಯೇ ‘ದಿ ಫೈಲ್’ ವರದಿಗಳನ್ನು ಪ್ರಕಟಿಸಿಲ್ಲ. ಕೋವಿಡ್ ಅವಧಿಯಲ್ಲಿ ವೈದ್ಯಕೀಯ ಸಲಕರಣೆಗಳ ಖರೀದಿಗೆ ಸಂಬಂಧಿಸಿದಂತೆಯೂ ಅಂದು ಲಭ್ಯವಿದ್ದ ಪ್ರಾಥಮಿಕ ದಾಖಲೆಗಳನ್ನು ಆಧರಿಸಿ ವರದಿಗಳನ್ನು ಪ್ರಕಟಿಸಿತ್ತು. ಪ್ರಕಟವಾಗಿದ್ದ ವರದಿಗಳಲ್ಲಿಯೇ ದಾಖಲೆಗಳನ್ನು ಅಡಕಗೊಳಿಸಿತ್ತು. ಹಾಗಾಗಿಯೇ ವಿಚಾರಣೆ ಆಯೋಗದ ಮುಂದೆ ‘ದಿ ಫೈಲ್’ ತನ್ನ ಹೇಳಿಕೆಯನ್ನು ದಾಖಲು ಮಾಡಿದೆ. ಅಲ್ಲದೇ ಇದು ಪತ್ರಿಕೋದ್ಯಮದ ಸರಿಯಾದ ಮಾದರಿ ಎಂದು ನಾವು ತಿಳಿದಿದ್ದೇವೆ.