ಬೆಂಗಳೂರು; ಬರಗಾಲದಲ್ಲೂ ರಾಜ್ಯದ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಿಸಿ ಉಣಬಡಿಸಿದ್ದ 49,855 ಅಡುಗೆ ಸಿಬ್ಬಂದಿಗಳಿಗೆ 2 ತಿಂಗಳಾದರೂ ವೇತನ ನೀಡಿಲ್ಲ. ಅದೇ ರೀತಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ 2024ರ ಜೂನ್ ಮತ್ತು ಜುಲೈ ತಿಂಗಳ ವೇತನವೂ ಬಿಡುಗಡೆ ಆಗಿಲ್ಲ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರ ಸೇರಿದಂತೆ ಒಟ್ಟು 6 ತಾಲೂಕಿನ ಸಾವಿರಕ್ಕೂ ಹೆಚ್ಚು ಅಡುಗೆ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ಇದಕ್ಕೆ ಅನುದಾನ ಕೊರತೆಯೇ ಕಾರಣ ಎಂದು ಗೊತ್ತಾಗಿದೆ.
ಮಧ್ಯಾಹ್ನ ಉಪಹಾರ ಯೋಜನೆಗೆ ಸಂಬಂಧಿಸಿದಂತೆ ಬಿಸಿಯೂಟ ತಯಾರಕರ ವಿವಿಧ ಸಮಸ್ಯೆಗಳ ಬಗ್ಗೆ 2024ರ ಅಕ್ಟೋಬರ್ 23ರಂದು ನಡೆದಿದ್ದ ಸಭೆಯಲ್ಲಿ ಈ ಸಂಗತಿಯು ಬಯಲಾಗಿದೆ.
ಅದೇ ರೀತಿ ರಾಜ್ಯದ ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ 5ರಿಂದ 10 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಬಿಸಿಯೂಟ ತಯಾರಕರಿಗೆ ಇಡಗುಂಟು ಹಣ ನೀಡುವ ವಿಚಾರದಲ್ಲೂ ಯಾವುದೇ ಪ್ರಗತಿಯೂ ಆಗಿಲ್ಲ ಎಂದು ಗೊತ್ತಾಗಿದೆ.
2024ರ ಅಕ್ಟೋಬರ್ 23ರಂದು ನಡೆದಿದ್ದ ಸಭೆಯಲ್ಲಿ ಬಿಸಿಯೂಟ ತಯಾರಕರು ವಿವಿಧ ಸಮಸ್ಯೆಗಳನ್ನು ಸರ್ಕಾರದೊಂದಿಗೆ ಹಂಚಿಕೊಂಡಿದ್ದಾರೆ. ಆದರೆ ಇವರ್‍ಯಾರಿಗೂ ಸಮಾಧಾನಕರ ಉತ್ತರ ನೀಡದ ಸರ್ಕಾರವು ಬಿಸಿಯೂಟ ತಯಾರಕರ ಆಕ್ರೋಶವನ್ನೂ ಎದುರಿಸಿದೆ ಎಂದು ತಿಳಿದು ಬಂದಿದೆ.
2024ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಎದುರಾಗಿದ್ದ ಬರಗಾಲದಲ್ಲೂ 49,855 ಸಂಖ್ಯೆಯ ಅಡುಗೆ ಸಿಬ್ಬಂದಿ ರಾಜ್ಯದ ಶಾಲಾ ಮಕ್ಕಳಿಗೆ ಬಿಸಿಯೂಟ ಉಣಬಡಿಸಿದ್ದರು. ಈ ಸಂಬಂಧ ಗೌರವ ಧನ ಪಾವತಿಸಬೇಕಿತ್ತು. 60;40ರ ಅನುಪಾತದಂತೆ ಒಟ್ಟಾರೆ 12.16 ಕೋಟಿ ಅನುದಾನ ಬಿಡುಗಡೆ ಆಗಬೇಕಿತ್ತು. ಇದರಲ್ಲಿ ಕೇಂದ್ರ ಸರ್ಕಾರದ್ದು 7.29 ಕೋಟಿ ರು ಇದ್ದರೇ ರಾಜ್ಯ ಸರ್ಕಾರದ ಪಾಲು 4.86 ಕೋಟಿ ರು. ಇತ್ತು.
ಈ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು 2024ರ ಏಪ್ರಿಲ್ ಮತ್ತು ಆಗಸ್ಟ್ 26ರಂದು ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಇದುವರೆಗೂ ಅನುದಾನ ಬಿಡುಗಡೆ ಆಗಿಲ್ಲ. ಹೀಗಾಗಿ ಬಿಸಿಯೂಟ ತಯಾರಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗೊತ್ತಾಗಿದೆ.
ಅಲ್ಲದೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಯೂಟ ತಯಾರಕರಿಗೆ 2024ರ ಜೂನ್ ಮತ್ತು ಜುಲೈ ತಿಂಗಳ ವೇತನವೂ ಬಿಡುಗಡೆ ಆಗಿಲ್ಲ. ಜೂನ್ 2024ರಲ್ಲಿ 1,12953, ಜುಲೈನಲ್ಲಿ 1,12,855, ಆಗಸ್ಟ್ 1,12,988, ಸೆಪ್ಟಂಬರ್ ನಲ್ಲಿ 1,13,098 ಮಂದಿ ಕೆಲಸ ಮಾಡಿದ್ದರು. ಆದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವೇತನವೇ ಬಿಡುಗಡೆ ಆಗಿಲ್ಲ ಎಂದು ತಿಳಿದು ಬಂದಿದೆ.
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ತಾಂತ್ರಿಕ ದೋಷ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್‌ನ ಸಮಸ್ಯೆಯಿಂದಾಗಿ ಜೂನ್ ತಿಂಗಳ ವೇತನ ಪಾವತಿಯಾಗಿಲ್ಲ. ಜುಲೈ ತಿಂಗಳಲ್ಲಿ ಕನಕಪುರದ 661, ಕೆ ಆರ್ ಪೇಟೆಯ 148, ಮದ್ದೂರಿನ 26, ಮಂಡ್ಯದ 151, ಚಿತ್ತಾಪುರದ 107, ಸುರಪುರದ 65 ಮಂದಿ ಸೇರಿದಂತೆ ಒಟ್ಟಾರೆ 1,158 ಅಡುಗೆ ಸಿಬ್ಬಂದಿಗೆ ವೇತನ ಪಾವತಿ ಆಗಿಲ್ಲ. ಇದಕ್ಕೆ ಅನುದಾನ ಕೊರತೆಯೇ ಕಾರಣ ಎಂದು ಗೊತ್ತಾಗಿದೆ.
ಉಳಿದ ಸಿಬ್ಬಂದಿಯ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ತಾಂತ್ರಿಕ ದೋಷ, ಆಧಾರ್ ಲಿಂಕ್‌ನ ಸಮಸ್ಯೆಯಿಂದಾಗಿ ವೇತನ ಪಾವತಿಗೆ ತೊಂದರೆ ಆಗಿದೆ. ಅದೇ ರೀತಿ 2024ರ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನಕ್ಕೂ ಅನುದಾನ ಬಿಡುಗಡೆ ಆಗಿಲ್ಲ. ಕೇಂದ್ರ ಸರ್ಕಾರದಿಂದ ಮೊದಲನೇ ಕಂತಿನ ಅನುದಾನವೂ ಬಿಡುಗಡೆ ಆಗಿಲ್ಲ. ಹೀಗಾಗಿ ಈ ಮೂರು ತಿಂಗಳ ವೇತನ ಪಾವತಿ ಆಗಿಲ್ಲ ಎಂದು ತಿಳಿದು ಬಂದಿದೆ.
ಹೀಗಾಗಿ ರಾಜ್ಯ ಯೋಜನೆ ಆಗಿರುವ ಕ್ಷೀರಭಾಗ್ಯ ಯೋಜನೆಯಡಿ ಅಡುಗೆ ಸಿಬ್ಬಂದಿಗಳ ಹೆಚ್ಚುವರಿ ಸಂಭಾವನೆ ಮೊತ್ತವನ್ನು (TOP-UP- ಲೆಕ್ಕ ಶೀರ್ಷಿಕೆ – 2202-00-101-18, 2202=01-196-02) ಉಪ ಶೀರ್ಷಿಕೆ 324 ಅಡಿ ನಿಗದಿಯಾಗಿರುವ 303 ಕೋಟಿ ರು ಅನುದಾನ ಪೈಕಿ 123.73 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಸಹಮತಿ ಕೋರಿದೆ. ಆದರೆ ಇದುವರೆಗೂ ಆರ್ಥಿಕ ಇಲಾಖೆಯ ಬಳಿಯೇ ಈ ಪ್ರಸ್ತಾವನೆ ಬಾಕಿ ಇದೆ. ಆರ್ಥಿಕ ಇಲಾಖೆ ಸಹಮತಿ ದೊರಕದ ಹೊರತು ಅಡುಗೆ ಸಿಬ್ಬಂದಿಗೆ ವೇತನ ಪಾವತಿ ಆಗುವುದಿಲ್ಲ ಎಂದು ತಿಳಿದು ಬಂದಿದೆ.
ಹಾಗೆಯೇ 60 ವರ್ಷ ವಯಸ್ಸು ಪೂರ್ಣಗೊಂಡು ಸೇವೆಯಿಂದ ಬಿಡುಗಡೆ ಆಗಿರುವ ಅಡುಗೆ ಸಿಬ್ಬಂದಿಗೆ ಇಡಿಗಂಟು ಪಾವತಿಸಬೇಕಿತ್ತು. ಈ ಸಂಬಂಧ ಹೊರಡಿಸಬೇಕಿರುವ ಸರ್ಕಾರದ ಆದೇಶಕ್ಕೆ ಸಚಿವರ ಅನುಮೋದನೆ ದೊರೆತಿದೆ. ಆದರೆ ಇದುವರೆಗೂ ಆದೇಶ ಹೊರಡಿಸಿಲ್ಲ. ಉಪ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಮುಕ್ತಾಯವಾದ ನಂತರವಷ್ಟೇ ಇಡಿಗಂಟಿನ ಕುರಿತಾದ ಆದೇಶವು ಹೊರಬೀಳಲಿದೆ ಎಂದು ಗೊತ್ತಾಗಿದೆ.
ಈ ಸಂಬಂಧ ಅಧಿಕಾರಿಗಳು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.