ಮುನಿರತ್ನರ ರಾಕ್‌ಲೈನ್‌ ಟೆಲಿಕಮ್ಯುನಿಕೇಷನ್‌ಗೆ 20 ಕೋಟಿ; ಅರ್ಜಿಗೂ ಮುನ್ನವೇ ಸಾಲ ಮಂಜೂರು

ಬೆಂಗಳೂರು; ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರು ನಿರ್ದೇಶಕರಾಗಿರುವ ರಾಕ್‌ಲೈನ್‌ ಟೆಲಿಕಮ್ಯುನಿಕೇಷನ್‌ ಪ್ರೈವೈಟ್‌ ಲಿಮಿಟೆಡ್‌, ಸಾಲಕ್ಕೆ ಮನವಿ ಮಾಡುವ ಮುಂಚಿತವಾಗಿಯೇ  ಅಪೆಕ್ಸ್‌ ಬ್ಯಾಂಕ್‌ 20 ಕೋಟಿ ರು ಸಾಲ ಮಂಜೂರು ಮಾಡಿತ್ತು.  ಹಾಗೆಯೇ ಯೋಜನಾ ವರದಿಯು ಸಹ  ದಾಖಲೆಗಳು ಇರಲಿಲ್ಲ.  ಕಂಪನಿಯ ಹಣಕಾಸು ಸಾಮರ್ಥ್ಯದ ವರದಿಗೆ ಸಂಬಂಧಿಸಿದ ಯಾವುದೇ  ದಾಖಲೆಗಳು ಇರದಿದ್ದರೂ 20 ಕೋಟಿ ಮೊತ್ತದ ಸಾಲ ಮಂಜೂರಾಗಿತ್ತು.

 

ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿರುವ ಬೆನ್ನಲ್ಲೇ  ಮುನಿರತ್ನ ನಿರ್ದೇಶಕರಾಗಿರುವ ರಾಕ್‌ಲೈನ್‌ ಟೆಲಿ ಕಮ್ಯುನಿಕೇಷನ್‌ಗೆ ಅಪೆಕ್ಸ್‌ ಬ್ಯಾಂಕ್‌ 20.00 ಕೋಟಿ ಸಾಲ ನೀಡಿದ್ದ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಡೂರು ಶಾಸಕ ಹಾಗೂ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಬೆಳ್ಳಿ ಪ್ರಕಾಶ್‌ ಅವರ ಅವಧಿಯಲ್ಲಿಯೇ ರಾಕ್‌ಲೈನ್‌ ಟೆಲಿಕಮ್ಯುನಿಕೇಷನ್‌ ಪ್ರೈವೈಟ್‌ ಲಿಮಿಟೆಡ್‌ಗೆಗೆ ವ್ಯಾಪಾರ ವ್ಯವಹಾರ ವೃದ್ಧಿಸುವ ಉದ್ದೇಶಕ್ಕೆ 20 ಕೋಟಿ ಸಾಲ ನೀಡಲಾಗಿತ್ತು.

 

ಅಪೆಕ್ಸ್‌ ಬ್ಯಾಂಕ್‌ನ 2022-23ನೇ ಸಾಲಿಗೆ ಸಂಬಂಧಿಸಿದಂತೆ ಶಾಸನಬದ್ಧ ಲೆಕ್ಕ ಪರಿಶೋಧಕರು ನೀಡಿರುವ ವರದಿಯಲ್ಲಿ ರಾಕ್‌ಲೈನ್‌ ಟೆಲಿಕಮ್ಯುನಿಕೇಷನ್‌ಗೆ ನೀಡಿರುವ ಸಾಲದ ವ್ಯವಹಾರದ ಕುರಿತಾದ ವಿವರಗಳಿವೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ಮೀರೇಳೆತ ಸಾಲದ ಸ್ವರೂಪದಲ್ಲಿ 20 ಕೋಟಿ ರು.ಗಳನ್ನು 2022ರ ಏಪ್ರಿಲ್‌ 7ರಂದು ಮಂಜೂರು (ಖಾತೆ ಸಂಖ್ಯೆ; 18/698/000016) ಮಾಡಿದೆ. ಈ ಸಾಲ ಪಡೆಯಲು ಬೆಂಗಳೂರು ಉತ್ತರ ತಶಾಲೂಕಿನ ಜಾಲ ಹೋಬಳಿಯ ಬೆಟ್ಟ ಹಲಸೂರು ಗ್ರಾಮದಲ್ಲರುವ ಸರ್ವೆ ನಂಬರ್‍‌ 3, 201, ರಲ್ಲಿನ 3 ಎಕರೆ 10 ಗುಂಟೆ ಜಮೀನನ್ನು ಭದ್ರತೆಯನ್ನಾಗಿ ತೋರಿಸಿರುವುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

 

 

 

 

ಈ ಕಂಪನಿಗೆ ಸಾಲ ಮಂಜೂರು ಮಾಡಿರುವ ಪ್ರಕ್ರಿಯೆಗಳ ಬಗ್ಗೆ ಶಾಸನಬದ್ಧ ಲೆಕ್ಕ ಪರಿಶೋಧಕರು ಅವಲೋಕನ ಮಾಡಿದ್ದಾರೆ. ಸಾಲ ಮಂಜೂರಾತಿ ಕುರಿತು ಆಡಳಿತ ಮಂಡಳಿಯ ಸಭೆಯ ಅನುಮೋದನೆ ಕುರಿತೂ ವಿಶ್ಲೇಷಣೆ ಮಾಡಿದ್ದಾರೆ.

 

‘ಸಾಲಗಾರರು 2022ರ ಮಾರ್ಚ್‌ 30ರಂದು ಸಾಲ ಮಂಜೂರಾತಿ ಕೋರಿ ಮನವಿ ಸಲ್ಲಿಸಿದ್ದರು. ಸಾಲಗಾರ ಸಂಸ್ಥೆಯ ಆಳಿತ ಮಂಡಳಿ ಸಭೆಯು 2022ರ ಮಾರ್ಚ್‌ 30ರಂದು ಕೈಗೊಂಡಿದ್ದ ಠರಾವಿನಲ್ಲಿ ಮೀರೇಳೆತ ಸಾಲ ಸೌಲಭ್ಯವನ್ನು ಮಂಜೂರು ಮಾಡಲು ಕೋರಿರುವುದನ್ನು ಪರಿಶೀಲಿಸಿರುತ್ತೇವೆ. ಆದಾಗ್ಯೂ ಕಂಪನಿ ಸಲ್ಲಿಸಿದ ಮನವಿಯ ದಿನಾಂಕದ ಮುಂಚಿತವಾಗಿಯೇ 2022ರ ಮಾರ್ಚ್‌ 16ರಂದು ನಡೆದ ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯು 20.00 ಕೋಟಿ ಮೊತ್ತದ ಮೀರೇಳೆತ ಸಾಲವನ್ನು ಮಂಜೂರು ಮಾಡಿರುತ್ತದೆ,’ ಎಂದು ಲೆಕ್ಕ ಪರಿಶೋಧಕರು ಅವಲೋಕಿಸಿರುವುದು ತಿಳಿದು ಬಂದಿದೆ.

 

 

 

ಅದೇ ರೀತಿ ಈ ಕಂಪನಿಯ 20 ಕೋಟಿ ಸಾಲಕ್ಕೆ ಭದ್ರತೆಯಾಗಿ ನೀಡಿರುವ ಜಮೀನು ಸಹ ಬಿ ಖಾತೆಯಲ್ಲಿದೆ. ಹೀಗಾಗಿ ಬ್ಯಾಂಕ್‌ ಅತ್ಯಂತ ಸೂಕ್ಷ್ಮವಾಗಿ ಖಾತೆ ಮೇಲ್ವಿಚಾರಣೆ ಮಾಡುವುದು ಅವಶ್ಯಕವಾಗಿದೆ ಎಂದು ಲೆಕ್ಕ ಪರಿಶೋಧಕರು ಅಭಿಪ್ರಾಯ ಪಟ್ಟಿರುವುದು ಗೊತ್ತಾಗಿದೆ.

 

ರಾಕ್‌ಲೈನ್‌ ಟೆಲಿ ಕಮ್ಯುನಿಕೇಷನ್‌ ಪ್ರೈವೈಟ್‌ ಲಿಮಿಟೆಡ್‌ ನಕಾರಾತ್ಮಕವಾದ ನಿವ್ವಳ ಸಂಪತ್ತನ್ನು ಹೊಂದಿದೆ. 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ಬಂಡವಾಳ ನಿಧಿ, ಮೀಸಲು ನಿಧಿ ಸೇರಿ ಒಟ್ಟಾರೆ 74.67 ಲಕ್ಷ ರು. ಹೊಂದಿತ್ತು. ಅದೇ ರೀತಿ 2020-21ನೇ ಹಣಕಾಸು ವಷ್ದಲ್ಲಿ ಒಟ್ಟಾರೆ 61.08 ಲಕ್ಷ ಮಾತ್ರ ನಿವ್ವಳ ಸಂಪತ್ತು ಹೊಂದಿತ್ತು ಎಂಬುದು ತಿಳಿದು ಬಂದಿದೆ.

 

‘ಮಂಜೂರಾತಿ ಪತ್ರದಲ್ಲಿ ನಮೂದಿಸಿದಂತೆ ಸಾಲ ಮರು ಪಾವತಿ ಬಾಧ್ಯತೆಗಳನ್ನು ನಿರ್ವಹಿಸಲಾಗುತ್ತಿದೆಯೆ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಸಾಲಗಾರರ ಹಣಕಾಸು ಸ್ಥಿತಿಯನ್ನು ನಿಗದಿತವಾಗಿ ವಿಮರ್ಶಿಸುವುದು ಅವಶ್ಯವಿರುತ್ತದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

 

ಮತ್ತೊಂದು ವಿಶೇಷ ಸಂಗತಿ ಎಂದರೇ ಈ ಕಂಪನಿಯು 2021ರ ಮಾರ್ಚ್‌ 31ರ ಅಂತ್ಯಕ್ಕೆ ಹಣಕಾಸು ದಾಖಲೆಗಳ ಪ್ರಕಾರ ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ 14.82 ಕೋಟಿ ರು, ಕೆನರಾ ಬ್ಯಾಂಕ್‌ನಿಂದಲೂ ಮೀರೇಳೆತ ಸಾಲ ಪಡೆದಿದೆ. ಆದರೆ ಬ್ಯಾಂಕ್‌, ಸಂಸ್ಥೆಯಿಂದ ಪಡೆದ ಎನ್‌ಒಸಿ ಪತ್ರವು ದಾಖಲೆಗಳಲ್ಲಿ ಕಂಡು ಬಂದಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

 

ಅಷ್ಟೇ ಅಲ್ಲದೇ ಅಪೆಕ್ಸ್‌ ಬ್ಯಾಂಕ್‌ನ ಲೆಕ್ಕ ಪರಿಶೋಧನೆ ಕೈಗೊಂಡಿದ್ದ ಲೆಕ್ಕ ಪರಿಶೋಧಕರಿಗೆ ಈ ಕಂಪನಿಯ ಹಣಕಾಸು ದಾಖಲೆಗಳು ಹಾಗೂ 2022-23ನೇ ಸಾಲಿನ ತಾತ್ಕಾಲಿಕ ಹಣಕಾಸು ತಃಖ್ತೆಗಳನ್ನು ಪರಿಶೀಲನೆಗೆ ನೀಡಿರಲಿಲ್ಲ. ಹಾಗೆಯೇ ಯೋಜನಾ ವರದಿಯು ಸಹ ದಾಖಲೆಗಳಲ್ಲಿ ಕಂಡುಬಂದಿರುವುದಿಲ್ಲ. ಕಂಪನಿಯ ಹಣಕಾಸು ಸಾಮರ್ಥ್ಯದ ವರದಿಗೆ ಸಂಬಂಧಿಸಿದ ದಾಖಲೆಗಳೂ ಇರುವುದಿಲ್ಲ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ 20.00 ಕೋಟಿ ಸಾಲ ಪಡೆದಿದ್ದ ರಾಕ್‌ಲೈನ್‌ ಟೆಲಿಕಮ್ಯುನಿಕೇಷನ್‌ ಸಾಲದ ನಿಬಂಧನೆಗಳನ್ನು ಪಾಲಿಸಿಲ್ಲ. ಮಂಜೂರಾತಿಯ 12ರ ನಿಬಂಧನೆಯಂತೆ ಸಾಲಗಾರ ಸಂಸ್ಥೆಯು ಬ್ಯಾಂಕ್‌ನ ಪ್ರಧಾನ ಕಚೇರಿಯ ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದು ತನ್ನ ಎಲ್ಲಾ ವಹಿವಾಟುಗಳನ್ನು ಇದೇ ಖಾತೆಯ ಮೂಲಕವೇ ನಿರ್ವಹಿಸಬೇಕು.

 

ಆದರೆ ಸಾಲಗಾರ ಸಂಸ್ಥೆಯು ಪ್ರಧಾನ ಕಚೇರಿ ಶಾಖೆಯಲ್ಲಿ ಚಾಲ್ತಿ ಖಾತೆ ತೆರೆದಿತ್ತಾದರೂ ಬಡ್ಡಿಯನ್ನು ಪಾವತಿಸುವ ಪ್ರಕ್ರಿಯೆ ಮಾತ್ರ ಖಾತೆಯ ಮೂಲಕ ನಡೆಸಿತ್ತು. 2023ರ ಮಾರ್ಚ್‌ 31ವರೆಗೆ ತನ್ನ ವ್ಯವಹಾರಗಳನ್ನು ಖಾತೆಯ ಮುಖಾಂತರ ಮಾಡಿಲ್ಲ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

 

ಅಪೆಕ್ಸ್‌ ಬ್ಯಾಂಕ್‌ ಅಕ್ರಮಗಳು; ‘ದಿ ಫೈಲ್‌’ನ 16 ಸರಣಿ ವರದಿಗಳನ್ನು ವಿಸ್ತರಿಸಿದ ಪ್ರಜಾವಾಣಿ

ಮತ್ತೊಂದು ವಿಶೇಷ ಸಂಗತಿ ಎಂದರೇ ಸಾಲದ ಮೊತ್ತವನ್ನು ಕಂಪನಿಯು ಡ್ರಾ ಮಾಡಿದೆ. ಅದನ್ನು ಸಾಲಗಾರರ ಬ್ಯಾಂಕ್‌ನಲ್ಲಿರುವ ಇತರೆ ಬ್ಯಾಂಕ್‌ಗಳಲ್ಲಿ ನಿರ್ವಹಿಸುತ್ತಿರುವ ಖಾತೆಗಳಿಗೆ ವರ್ಗಾಯಿಸಿದೆ. ಹೀಗಾಗಿ ಸಾಲದ ಮೊತ್ತವನ್ನು ಮುಖ್ಯ ಉದ್ದೇಶಕ್ಕೆ ಬಳಸಿರುವ ಬಗ್ಗೆ ಲೆಕ್ಕ ಪರಿಶೋಧಕರು ಪರಿಶೀಲನೆ ಮಾಡಲು ಸಾಧ್ಯವಾಗಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts