ಕೋವಿಡ್‌ ಅಕ್ರಮಗಳು; ‘ದಿ ಫೈಲ್‌’ ಹೊರಗೆಳೆದಿದ್ದ ಪ್ರಕರಣಗಳು ಕುನ್ಹಾ ವರದಿಯಲ್ಲಿ ಉಲ್ಲೇಖ

ಬೆಂಗಳೂರು; ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರು ನೀಡಿರುವ ಮಧ್ಯಂತರ ವರದಿಯು ‘ದಿ ಫೈಲ್‌’ ಪ್ರಕಟಿಸಿದ್ದ ವರದಿಗಳ ಮೇಲೂ ಬೆಳಕು ಚೆಲ್ಲಿದೆ.

 

ಪಿಪಿಇ ಕಿಟ್‌, ಮಾಸ್ಕ್‌, ಆಕ್ಸಿಜನ್‌, ವೆಂಟಿಲೇಟರ್‍‌, ಸ್ಯಾನಿಟೈಸರ್‍‌, ಆರ್‍‌ಟಿಪಿಸಿಆರ್‍‌, ರ್‍ಯಾಪಿಡ್‌ ಆಂಟಿಜನ್‌ ಟೆಸ್ಟ್‌ ಕಿಟ್‌ ಹೀಗೆ ವಿವಿಧ ರೀತಿಯ ವೈದ್ಯಕೀಯ ಸಲಕರಣೆ ಮತ್ತು ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ.

 

ಕೆಟಿಪಿಪಿ ನಿಯಮ ಉಲ್ಲಂಘಿಸಿ ಮಾಡಿರುವ ಖರೀದಿ, ನಿರ್ದಿಷ್ಟ ಕಂಪನಿಗಳಿಗೆ ಆಗಿರುವ ಆರ್ಥಿಕ ಲಾಭ, ಸರ್ಕಾರಕ್ಕೆ ಆಗಿರುವ ನಷ್ಟ ಹೀಗೆ ಹತ್ತಾರು ಮಗ್ಗುಲಿನಲ್ಲಿ ‘ದಿ ಫೈಲ್‌’ 2020, 2021 ಮತ್ತು 2022ರಲ್ಲಿ 50ಕ್ಕೂ ಹೆಚ್ಚು ಸರಣಿ ವರದಿಗಳನ್ನು ಪ್ರಕಟಿಸಿತ್ತು.

 

ಇದೀಗ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಅವರು ನೀಡಿರುವ ಮಧ್ಯಂತರ ವರದಿಯಲ್ಲಿ ಈ ಎಲ್ಲಾ ಪ್ರಕರಣಗಳನ್ನೂ ಉಲ್ಲೇಖಿಸಿದೆ. ಈ ಖರೀದಿ ಪ್ರಕ್ರಿಯೆಯಲ್ಲಿ ಆಗಿರುವ ಲೋಪ, ಅಕ್ರಮ, ಉಲ್ಲಂಘನೆಗಳನ್ನು ಎತ್ತಿ ಹಿಡಿದಿದೆ.

 

ಖಾಸಗಿ ವಾಹನಗಳನ್ನು ಬಳಸದೆಯೇ ಕೋವಿಡ್‌-19ರ ಜಾಗೃತಿ ಕಾರ್ಯಕ್ರಮಗಳ ಹೆಸರಿನಲ್ಲಿ 5 ಕೋಟಿ ರು ಗೂ ಹೆಚ್ಚಿನ ಮೊತ್ತಕ್ಕೆ ಕೆಡಿಎಲ್‌ಡಬ್ಲ್ಯೂಎಸ್‌ನ ಅಧಿಕಾರಿಗಳು ಬಿಲ್‌ ಸೃಷ್ಟಿಸಿದ್ದರು. ಟೆಂಪೋ ಟ್ರಾವಲರ್‍‌, ಇನ್ನೋವಾ, ಆಂಬುಲೆನ್ಸ್‌ ಮತ್ತು ಟ್ಯಾಕ್ಸಿ ಸೇರಿದಂತೆ ಒಟ್ಟು 396 ವಾಹನಗಳನ್ನು ಖಾಸಗಿಯವರಿಗೆ ಬಾಡಿಗೆ ಆಧಾರದ ಮೇಲೆ ಪಡೆದುಕೊಂಡಿತ್ತು. ಬಹುತೇಕ ವಾಹನಗಳು ಅಧಿಕಾರಿಗಳ ಸಂಬಂಧಿಕರಿಗೆ ಸೇರಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕುರಿತು ‘ದಿ ಫೈಲ್‌’ 2020ರ ಮೇ 25ರಂದು ವರದಿ ಪ್ರಕಟಿಸಿತ್ತು.

 

ಕೋವಿಡ್‌ ಬಿಲ್ವಿದ್ಯೆ; ವಾಹನ ಬಳಸದಿದ್ದರೂ 5 ಕೋಟಿ ರು.ಪಾವತಿ?

 

ಕುನ್ಹಾ ಅವರು ನೀಡಿರುವ ವರದಿಯಲ್ಲಿ ಆಂಬುಲೆನ್ಸ್‌ ಸೇರಿದಂತೆ ಖಾಸಗಿ ವಾಹನಗಳ ಬಳಕೆಯಿಂದಾಗಿರುವ 4.14 ಕೋಟಿ ನಷ್ಟವನ್ನು ಅಧಿಕಾರಿಗಳಿಂದ ವಸೂಲು ಮಾಡಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

 

 

ಲತಾ ಸ್ಟೀಲ್‌ ಫರ್ನಿಚರ್‍‌ನಿಂದ ಫಿಂಗರ್‍‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‍‌ ಖರೀದಿ ಮಾಡಿದ್ದನ್ನು ‘ದಿ ಫೈಲ್‌ 2020ರ ಸೆ.17ರಂದು ವರದಿ ಪ್ರಕಟಿಸಿತ್ತು. 2020ರ ಮಾರ್ಚ್‌ ಮತ್ತು ಮೇ ತಿಂಗಳ್ಲಿ ಫಿಂಗರ್‍‌ ಟಿಪ್‌ ಪಲ್ಸ್‌ ಆಕ್ಸಿಮೀಟರ್‍‌ ಸಾಧನಗಳನ್ನು ಖರೀದಿ ಮಾಡಿತ್ತು. ಆದರೆ ಈ ದರದಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದವು. ಇದರಿಂದ ಸರ್ಕಾರಕ್ಕೆ 2.27 ಕೋಟಿಯಷ್ಟು ನಷ್ಟವುಂಟಾಗಿದೆ ಎಂದು ವರದಿಯಲ್ಲಿ ದಾಖಲೆ ಸಹಿತ ವಿವರಿಸಿತ್ತು.

 

ಸ್ಟೀಲ್ ಫರ್ನಿಚರ್ಸ್ ಕಂಪನಿಯಿಂದಲೂ ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್ ಖರೀದಿ; ಪೂರ್ವ ನಿರ್ಧರಿತ ಒಪ್ಪಂದವೇ?

 

ಇದೀಗ ಕುನ್ಹಾ ಅವರು ನೀಡಿರುವ ವರದಿಯಲ್ಲಿ ಲತಾ ಸ್ಟೀಲ್‌ ಫರ್ನಿಚರ್‍‌ ಕಂಪನಿ ಮತ್ತು ಈ ಕಂಪನಿಯಿಂದ ಖರೀದಿಸಿರುವ ಪಲ್ಸ್‌ ಆಕ್ಸಿಮೀಟರ್‍‌ ಉಪಕರಣದ ಖರೀದಿಯಲ್ಲಿನ ಅಕ್ರಮದ ವಿವರಗಳನ್ನು ಉಲ್ಲೇಖಿಸಿದೆ.

 

104 ಆರೋಗ್ಯ ಸಹಾಯವಾಣಿ ಮತ್ತು ಆಪ್ತಮಿತ್ರ ಟೆಲಿಮೆಡಿಸಿನ್‌ ಸೇವೆ ಪಡೆಯಲು ಕರೆದಿfದ ಟೆಂಡರ್‍‌ನಲ್ಲಿ ಅಕ್ರಮ ಎಸಗಿತ್ತು. 104 ಸೇವೆಗಳಿದ್ದರೂ ಸಹ ಆಪ್ತ ಮಿತ್ರ ಟೆಲಿಮೆಡಿಷಿನ್‌ ಸೇವೆ ಪಡೆಯಲು ಟೆಂಡರ್‍‌ ಕರೆದಿತ್ತು. ಎಲ್‌-1 ಕಂಪನಿಗೆ ಕಾರ್ಯಾದೇಶ ನೀಡದೇ ಪ್ರತ್ಯೇಕವಾಗಿ ಆಪ್ತ ಟೆಲಿಮೆಡಿಸಿನ್‌ ಸೇವೆ ಹೆಸರಿನಲ್ಲಿ 11 ಕೋಟಿ ರು ವೆಚ್ಚ ಮಾಡಲು ಹೊರಟಿದೆ ಎಂದು 2021ರ ಏಪ್ರಿಲ್‌ 28ರಂದು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ಆಪ್ತಮಿತ್ರ ಟೆಲಿಮೆಡಿಸಿನ್‌ಗೆ 11 ಕೋಟಿ; ಪ್ರತ್ಯೇಕ ಕಂಪನಿಗಳಿಗೆ ನೀಡಿದ ಗುತ್ತಿಗೆ ಹಿಂದಿದೆ ವ್ಯವಹಾರ?

 

ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರು ನೀಡಿರುವ ಮಧ್ಯಂತರ ವರದಿಯಲ್ಲಿಯೂ ಆಪ್ತಮಿತ್ರ ಟೆಲಿಮೆಡಿಸಿನ್‌ ಕುರಿತಾದ ಅಕ್ರಮವನ್ನು ವಿವರಿಸಿದೆ.

 

ಮೆಡಿ ಅರ್ಥ್ ಲೈಫ್‌ಕೇರ್‍‌ ಪ್ರೈವೈಟ್‌ ಲಿಮಿಟೆಡ್‌ ಮತ್ತು ಅಲೈಡ್‌ ಮೆಡಿಕಲ್‌ ನಿಂದ ಎನ್‌-95 ಮಾಸ್ಕ್‌, ಬೈಪಾಪ್‌, ಮಲ್ಟಿ ಪ್ಯಾರಾ ಮೀಟರ್‍ ‌ಮಾನಿಟರ್‍‌ ಸೇರಿ ವಿವಿಧ ಉಪಕರಣಗಳನ್ನು ಖರೀದಿಸಿತ್ತು. ಈ ಉಪಕರಣಗಳ ದರದಲ್ಲಿ ಭಾರೀ ವ್ಯತ್ಯಾಸವಿತ್ತು. ಈ ಕುರಿತು ‘ದಿ ಫೈಲ್‌2020ರ ಮೇ 22ರಂದು ವರದಿ ಪ್ರಕಟಿಸಿತ್ತು.

 

ಮಾಸ್ಕ್‌, ಮಲ್ಟಿ ಪ್ಯಾರಾಮೀಟರ್‌ ಮಾನಿಟರ್‌ ಖರೀದಿಯಲ್ಲಿ ಅಕ್ರಮ; ದರದಲ್ಲಿ ಭಾರೀ ವ್ಯತ್ಯಾಸ?

 

ಮಲ್ಟಿ ಪ್ಯಾರಾಮೀಟರ್‍‌ ಮಾನಿಟರ್‍‌ ಖರೀದಿಯಲ್ಲಿನ ಅಕ್ರಮಗಳ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಅವರ ವರದಿಯಲ್ಲಿಯೂ ಪ್ರಸ್ತಾಪವಾಗಿದೆ.

 

ಕೊರೋನಾ ಸೋಂಕನ್ನು ಪತ್ತೆ ಹಚ್ಚುವ ಸಲುವಾಗಿ ರ್‍ಯಾಪಿಡ್‌ ಆಂಟಿಜೆನ್‌ ಕಿಟ್‌ ಗಳನ್ನು ಖರೀದಿಸಲಾಗಿತ್ತು. ಈ ಸಂಬಂಧ ಕಂಪನಿಗೆ ಸರಬರಾಜು ಆದೇಶವನ್ನೂ ನೀಡಲಾಗಿತ್ತು. ಆದರೆ ದಿಢೀರ್ ಎಂದು ಆದೇಶವನ್ನೇ ರದ್ದುಗೊಳಿಸಿತ್ತು. ಇದಕ್ಕೆ ಕಮಿಷನ್‌ ವ್ಯವಹಾರವೇ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು 2020ರ ಆಗಸ್ಟ್‌ 20ರಂದು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

 

ರ‍್ಯಾಪಿಡ್ ಆಟಿಜೆನ್‌ ಕಿಟ್‌ ಪೂರೈಕೆ ಆದೇಶ ರದ್ದು; ಕಮಿಷನ್‌ ವ್ಯವಹಾರ ಕುದುರದಿರುವುದು ಕಾರಣವೇ?

 

ಈ ಪ್ರಕರಣದ ಕುರಿತು ಕುನ್ಹಾ ಅವರ ವರದಿಯಲ್ಲಿ ಪ್ರಸ್ತಾಪವಾಗಿದೆ.

 

ಆಕ್ಸಿಜನ್‌ ಉಪಕರಣ ಖರೀದಿಯಲ್ಲಿಯೂ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಕೇರಳದಲ್ಲಿಉಪಕರಣವೊಂದಕ್ಕೆ 2.86 ಲಕ್ಷ ರು. ಇದ್ದರೇ ಕರ್ನಾಟಕದಲ್ಲಿ 4.26 ಲಕ್ಷ ದರದಲ್ಲಿ ಖರೀದಿಸಿತ್ತು. ಈ ಉಪಕರಣಗಳನ್ನು ಶ್ರೀ ವೆಂಕಟೇಶ್ವರ ಎಂಟರ್‍‌ಪ್ರೈಸೆಸ್‌ ಮತ್ತು ಹೋಮೆಡಿಕ್ಸ್‌ ನಿಂದ ಖರೀದಿಸಲಾಗಿತ್ತು. ಈ ಕುರಿತು 2020ರ ಜುಲೈ 22ರಂದು ‘ದಿ ಫೈಲ್‌’ ವರದಿ ಪ್ರಕಟಿಸಿತ್ತು.

ಆಕ್ಸಿಜನ್‌ ಉಪಕರಣಕ್ಕೂ ದುಪ್ಪಟ್ಟು ದರ; ಕೇರಳದಲ್ಲಿ 2.86 ಲಕ್ಷ, ಕರ್ನಾಟಕದಲ್ಲಿ 4.26 ಲಕ್ಷ

 

ಕುನ್ಹಾ ಅವರ ಅವರ ವರದಿಯಲ್ಲಿ ಆಕ್ಸಿಜನ್‌ ಉಪಕರಣ ಖರೀದಿ ಕುರಿತು ಮತ್ತು ವೆಂಕಟೇಶ್ವರ ಎಂಟರ್‍‌ ಪ್ರೈಸೆಸ್‌ ಮತ್ತು ಹೋಮೆಡಿಕ್ಸ್‌ ಕಂಪನಿ ಕುರಿತು ಪ್ರಸ್ತಾಪ ಮಾಡಿದೆ.

 

ಕೋವಿಡ್‌ ಅವಧಿಯಲ್ಲಿ ನಡೆದಿದ್ದ ಅಕ್ರಮಗಳ ಕುರಿತು ‘ದಿ ಫೈಲ್‌’ ವರದಿ ಆಧರಿಸಿ ಕರ್ನಾಟಕ ರಾಷ್ಟ್ರಸಮಿತಿಯು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಗೆ ದೂರು ಸಲ್ಲಿಸಿತ್ತು. ಈ ದೂರನ್ನಾಧರಿಸಿ ಸಮಿತಿಯು ತನಿಖೆ ನಡೆಸಿತ್ತು. ನಂತರ ವಿಧಾನಸಭೆಗೆ ವರದಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts