ರ‍್ಯಾಪಿಡ್ ಆಟಿಜೆನ್‌ ಕಿಟ್‌ ಪೂರೈಕೆ ಆದೇಶ ರದ್ದು; ಕಮಿಷನ್‌ ವ್ಯವಹಾರ ಕುದುರದಿರುವುದು ಕಾರಣವೇ?

ಬೆಂಗಳೂರು; ಕೊರೊನಾ ನಾಗಲೋಟಕ್ಕೆ ಕಡಿವಾಣ ಹಾಕುವ ಹಾಗೂ ಶಂಕಿತರಲ್ಲಿ ಸೋಂಕು ಪತ್ತೆ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವ ಉದ್ದೇಶದಿಂದ 13.50 ಕೋಟಿ ಮೊತ್ತದಲ್ಲಿ 3 ಲಕ್ಷ ರ‍್ಯಾಪಿಡ್ ಆಟಿಜೆನ್‌ ಕಿಟ್‌ಗಳನ್ನು ಖರೀದಿಸಲು ಆಸ್ಚೋ ಏಜೆನ್ಸಿಗೆ (ಎಲ್‌-1) ನೀಡಿದ್ದ ಆದೇಶವನ್ನು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ರದ್ದುಗೊಳಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ರ‍್ಯಾಪಿಡ್ ಆಟಿಜೆನ್‌ ಕಿಟ್‌ ಮೂಲಕ ನಡೆಸುವ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಿರುವ ಗುರಿ ತಲುಪುತ್ತಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಹೇಳಿಕೆ ನೀಡಿದ್ದರ ಬೆನ್ನಲ್ಲೇ 3 ಲಕ್ಷ ಕಿಟ್‌ ಖರೀದಿಗೆ ನೀಡಿದ್ದ ಆದೇಶವನ್ನು ಒಮ್ಮೆಲೆ ರದ್ದುಗೊಳಿಸಿರುವುದು ಪರೀಕ್ಷೆ ಸಂಖ್ಯೆಗಳು ಇನ್ನಷ್ಟು ಇಳಿಮುಖವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಆಸ್ಚೋ ಏಜೆನ್ಸಿಸ್‌ಗೆ ತಡವಾಗಿ ಆದೇಶದ ಪ್ರತಿಯನ್ನು ನೀಡಿತ್ತು. ಬಳಿಕ ಉಪಕರಣಗಳನ್ನು ನಿಗದಿತ ಅವಧಿಯಲ್ಲಿ ಪೂರೈಕೆ ಮಾಡಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಆದೇಶವನ್ನು ರದ್ದುಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಏಜೆನ್ಸಿಯು ಅಧಿಕಾರಿಗಳಿಗೆ ಕಮಿಷನ್‌ ನೀಡದಿರುವುದೇ ಆದೇಶ ರದ್ದುಗೊಳ್ಳಲು ಮೂಲ ಕಾರಣ ಎಂದು ಹೇಳಲಾಗುತ್ತಿದೆ.

ಪ್ರಕರಣದ ಹಿನ್ನೆಲೆ

ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಒಟ್ಟು 13.50 ಕೋಟಿ ಮೊತ್ತದ 5 ಲಕ್ಷ ಪ್ರಮಾಣದ ಕಿಟ್‌ ಖರೀದಿಗೆ 2020ರ ಜುಲೈ 28ರಂದು ಕೊಟೇಷನ್‌ ಕರೆದಿತ್ತು. ಇದರಲ್ಲಿ ಎಲ್‌-1 ಆಗಿದ್ದ ಆಸ್ಚೋ ಏಜೆನ್ಸೀಸ್‌ಗೆ ಆಗಸ್ಟ್‌ 5ರಂದು ಸರಬರಾಜು ಆದೇಶ ನೀಡಿತ್ತು. ಕೆಡಿಲ್‌ಡಬ್ಲ್ಯೂಎಸ್‌ ಕಂಪನಿಯ ಅಧಿಕೃತ ಈ-ಮೈಲ್‌ಗೆ ಆಗಸ್ಟ್‌ 8ಕ್ಕೆ ಮೇಲ್‌ ಕಳಿಸಿತ್ತು ಎಂದು ತಿಳಿದು ಬಂದಿದೆ.

ಆಗಸ್ಟ್‌ 5ರಂದು ನೀಡಿರುವ ಆದೇಶದ ಪ್ರಕಾರ ಉಪಕರಣಗಳನ್ನು ಆಗಸ್ಟ್‌ 11ರೊಳಗೆ ಸರಬರಾಜು ಮಾಡಬೇಕು. ಆದರೆ ಕೆಡಿಎಲ್‌ಡಬ್ಲ್ಯೂಎಸ್‌ನ ಮೂಲಗಳ ಪ್ರಕಾರ ಈ ಕಂಪನಿಗೆ ಆಗಸ್ಟ್‌ 8ರಂದು ಸರಬರಾಜು ಆದೇಶದ ಈ-ಮೈಲ್‌ ತಲುಪಿತ್ತು ಎಂದು ಗೊತ್ತಾಗಿದೆ.

ಕಂಪನಿ ಅಧಿಕೃತ ಈ-ಮೇಲ್‌ಗೆ ಆದೇಶ ತಲುಪಿದ ನಂತರ ಉಪಕರಣಗಳನ್ನು ಸರಬರಾಜು ಮಾಡಲು 7 ದಿನ ಅವಧಿ ಕಾಲಾವಕಾಶ ಇರುತ್ತೆ. ಆದರೆ ಕಂಪನಿಯ ಅಧಿಕೃತ ಈ-ಮೈಲ್‌ಗೆ ಆಗಸ್ಟ್‌ 8ರಂದು ಆದೇಶ ತಲುಪಿದೆ ಎಂದು ಹೇಳಲಾಗಿದೆ. ಇದರ ಪ್ರಕಾರ ಉಪಕರಣಗಳನ್ನು ಅಗಸ್ಟ್‌ 14ರೊಳಗೆ ಸರಬರಾಜು ಮಾಡಬೇಕು. ಆದರೆ ಈ ಅವಧಿ ಪೂರ್ಣಗೊಳ್ಳುವ ಮುನ್ನವೇ ಅಂದರೆ ಆಗಸ್ಟ್‌ 12ರಂದೇ ಸರಬರಾಜು ಆದೇಶವನ್ನು ರದ್ದುಗೊಳಿಸಿರುವುದು ಸರಿಯಲ್ಲ ಎಂಬ ವಾದಗಳು ಕೇಳಿ ಬಂದಿವೆ. ಅಧಿಕಾರಿಗಳ ಈ ನಡೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಇನ್ನು 5 ಲಕ್ಷದ ಉಪಕರಣಗಳಿಗೆ ಕೊಟೇಷನ್‌ ಕರೆದಿದ್ದ ಸೊಸೈಟಿಯು ಈ ಪ್ರಮಾಣಕ್ಕೆ ಏಜೆನ್ಸಿಯಿಂದ 67.50 ಲಕ್ಷ ರು.ಗಳನ್ನು ಭದ್ರತಾ ಠೇವಣಿ ರೂಪದಲ್ಲಿರಿಸಿದೆ ಎಂದು ಗೊತ್ತಾಗಿದೆ. ಆದರೆ ಏಜೆನ್ಸಿಗೆ 5 ಲಕ್ಷದ ಬದಲಿಗೆ 3 ಲಕ್ಷ ಉಪಕರಣಗಳಿಗಷ್ಟೇ ಆದೇಶ ನೀಡಿದೆ. ಇದು ಕೂಡ ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ. 3 ಲಕ್ಷ ಉಪಕರಣಗಳಿಗಷ್ಟೇ ಆದೇಶ ನೀಡುವ ಉದ್ದೇಶವಿದ್ದರೆ ಈ ಪ್ರಮಾಣಕ್ಕೆ ತಕ್ಕಂತೆ ಭದ್ರತಾ ಠೇವಣಿ ಹಣವನ್ನೇಕೆ ಪಡೆದಿಲ್ಲ ಎಂಬ ಪ್ರಶ್ನೆಯೂ ಎದುರಾಗಿದೆ.

ಕೆಡಿಎಲ್‌ಡಬ್ಲ್ಯೂಎಸ್‌ನಲ್ಲಿ ಇಷ್ಟೆಲ್ಲಾ ಅಪರಾತಪರಾಗಳು ನಡೆಯುತ್ತಿದ್ದರೂ ಆರೋಗ್ಯ ಸಚಿವ ಬಿ ಶ್ರೀರಾಮುಲು ಅವರು ಗಮನಿಸದಿರುವುದು ಕೂಡ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಕೊರೊನಾ ನಾಗಲೋಟಕ್ಕೆ ಕಡಿವಾಣ ಹಾಕುವ ಹಾಗೂ ಶಂಕಿತರಲ್ಲಿ ಸೋಂಕು ಪತ್ತೆ ಕಾರ್ಯ ತ್ವರಿತವಾಗಿ ಮುಗಿಸಲು ರ‍್ಯಾಪಿಡ್ ಆಟಿಜೆನ್‌ ಕಿಟ್‌ನ ಮೂಲಕ ಪರೀಕ್ಷೆ ನಡೆಯಲಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗವಾಗಿತ್ತು. ರಾಜ್ಯದ ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳು ಈ ಕಿಟ್‌ ಬಳಸಿ ಪರೀಕ್ಷೆ ನಡೆಸಲು ಮುಂದಾಗಿದ್ದವು. ಕಂಟೈನ್ಮೆಂಟ್‌ ವಲಯಗಳು ಅಥವಾ ಹಾಟ್ ಸ್ಟಾಟ್‌ ವಲಯಗಳು, ಅನಾರೋಗ್ಯದಂತಹ ಐಎಲ್‌ಐ ಸೇರಿ ಎಲ್ಲ ರೋಗ ಲಕ್ಷಣದ ಜನರನ್ನು ಈ ಕಿಟ್‌ ಮೂಲಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ರ‍್ಯಾಪಿಡ್ ಆಂಟಿಜೆನ್‌ ಟೆಸ್ಟ್‌ ಬಳಕೆ ಆರಂಭವಾದರೆ, ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಆಗಸ್ಟ್‌ 18-19ರ 24 ಗಂಟೆಯಲ್ಲಿ 30,399 ಸೇರಿದಂತೆ ಈವರೆವಿಗೆ ಒಟ್ಟು 5,82,124 ಪರೀಕ್ಷೆಗಳನ್ನು ನಡೆಸಲಾಗಿದೆ.

the fil favicon

SUPPORT THE FILE

Latest News

Related Posts