ಬೆಂಗಳೂರು; ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯ ರಿಪೇರಿ, ದುರಸ್ತಿ ಮತ್ತು ನವೀಕರಿಸಲು 2.50 ಕೋಟಿ ರು. ಮೊತ್ತದಲ್ಲಿ ಲೋಕೋಪಯೋಗಿ ಇಲಾಖೆಯು ಅಂದಾಜು ವೆಚ್ಚ ಸಿದ್ಧಪಡಿಸಿದೆ. ಸುಮಾರು 15 ಕ್ಕೂ ಹೆಚ್ಚು ವರ್ಷಗಳಿಂದ ಮುಖ್ಯಮಂತ್ರಿ ಕೊಠಡಿಯನ್ನು ನವೀಕರಿಸಿರಲಿಲ್ಲ. ಹೀಗಾಗಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಠಡಿಯನ್ನು ನವೀಕರಿಸಲು ಮೌಖಿಕವಾಗಿ ಸೂಚಿಸಿದ್ದರು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಸೂಚನೆ ಮೇರೆಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‍ಗಳು ಕೊಠಡಿ ನವೀಕರಣ ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಬೆನ್ನಲ್ಲೇ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ 323ನೇ ಸಂಖ್ಯೆಯಲ್ಲಿರುವ ಮುಖ್ಯಮಂತ್ರಿಗಳ ಕೊಠಡಿಯನ್ನು ನವೀಕರಣದ ಕಾಮಗಾರಿಯು ಮುನ್ನೆಲೆಗೆ ಬಂದಿದೆ.
ಅನಗತ್ಯ ಖರ್ಚು ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದೀಗ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕೊಠಡಿಯನ್ನು ಅಂದಾಜು 2.50 ಕೋಟಿ ರು. ವೆಚ್ಚದಲ್ಲಿ ನವೀಕರಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೊಠಡಿ ನವೀಕರಿಸಲಾಗಿತ್ತು. ಆ ನಂತರ ಬಂದ ಮುಖ್ಯಮಂತ್ರಿಗಳ ಅವಧಿಯಲ್ಲಿ ವಿಧಾನಸೌಧದಲ್ಲಿನ 323ನೇ ಸಂಖ್ಯೆಯ ಕೊಠಡಿಯನ್ನು ನವೀಕರಿಸಿರಲಿಲ್ಲ. ಬದಲಿಗೆ ಕೊಠಡಿಗೆ ಸುಣ್ಣ, ಬಣ್ಣ ಮತ್ತು ಪೀಠೋಪಕರಣಗಳಿಗೆ ಪಾಲಿಷ್ ಮಾಡಲಾಗುತ್ತಿತ್ತೇ ವಿನಃ ಇಡೀ ಕೊಠಡಿಯನ್ನು ಸಂಪೂರ್ಣವಾಗಿ ನವೀಕರಿಸಿರಲಿಲ್ಲ.
ಅಲ್ಲದೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೂ ಈ ಕೊಠಡಿಯು ನವೀಕೃತಗೊಂಡಿರಲಿಲ್ಲ. ಆದರೀಗ ಈ ಕೊಠಡಿ ನವೀಕರಿಸಲು ಖುದ್ದು ಸಿದ್ದರಾಮಯ್ಯ ಅವರೇ ಅಧಿಕಾರಿಗಳನ್ನು ಕರೆದು ಇಡೀ ಕೊಠಡಿಯನ್ನು ನವೀಕರಿಸಲು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಮುಖ್ಯಮಂತ್ರಿಗಳ ಕೊಠಡಿಯಲ್ಲಿನ ಒಳಾಂಗಣವನ್ನು ಹೊಸ ವಿನ್ಯಾಸದೊಂದಿಗೆ ನವೀಕರಿಸಲಾಗುತ್ತಿದೆ. ಕೆಫೆಟೇರಿಯಾ, ಶೌಚಾಲಯ, ಕೊಠಡಿಯ ನೆಲ, ಗೋಡೆಗಳ ವಿನ್ಯಾಸ, ವಾಲ್ ಪೇಟಿಂಗ್, ವಿರಾಮ ಕೊಠಡಿ, ಅವರ ಕೊಠಡಿ, ಸಂದರ್ಶಕರ ಕೊಠಡಿಯನ್ನೂ ನವೀಕರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
ಮುಖ್ಯಮಂತ್ರಿ ಕೊಠಡಿ ನವೀಕರಣ ಸಂಬಂಧ ಮುಖ್ಯಮಂತ್ರಿ ಸಚಿವಾಲಯದಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಯಾವುದೇ ಪತ್ರ ವ್ಯವಹಾರ ನಡೆದಿಲ್ಲ. ಇದಕ್ಕೂ ಮುನ್ನವೇ ಕಾಮಗಾರಿಗಳು ಆರಂಭವಾಗಿವೆ. ಕಾಮಗಾರಿ ಪೂರ್ಣಗೊಂಡ ನಂತರ ಇಲಾಖೆಯು 4(ಜಿ)ಗೆ ಘಟನೋತ್ತರ ಅನುಮೋದನೆ ಪಡೆಯಲಿದೆ ಎಂದು ಗೊತ್ತಾಗಿದೆ.
ಈ ಸಂಬಂಧ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸತ್ಯನಾರಾಯಣ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರಿಗೆ ವಾಟ್ಸಾಪ್ ಮೂಲಕ ‘ದಿ ಫೈಲ್’ ಮಾಹಿತಿ ಕೋರಿತ್ತು. ಆದರೆ ಇಬ್ಬರೂ ಸಹ ಇದುವರೆಗೂ ಯಾವುದೇ ಮಾಹಿತಿ, ಪ್ರತಿಕ್ರಿಯೆ ನೀಡಿಲ್ಲ. ಅವರು ಪ್ರತಿಕ್ರಿಯೆ ನೀಡಿದ ನಂತರ ಇದೇ ವರದಿಯನ್ನು ನವೀಕರಿಸಲಿದೆ.
ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸರ್ಕಾರಿ ನಿವಾಸವನ್ನು ದುರಸ್ತಿ ಹೆಸರಿನಲ್ಲಿ 1.38 ಕೋಟಿ ರು. ವೆಚ್ಚದಲ್ಲಿ ಅಲಂಕರಿಸಲಾಗಿದೆ. ಉಪ ಮುಖ್ಯಮಂತ್ರಿಗಳಿಗೆ ಹಂಚಿಕೆಯಾಗಿರುವ ಸರ್ಕಾರಿ ನಿವಾಸವನ್ನು ನವೀಕರಿಸುತ್ತಿರುವುದು ತೆರಿಗೆ ಹಣ ದುಂದುವೆಚ್ಚಕ್ಕೆ ದಾರಿಮಾಡಿಕೊಟ್ಟಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಡಿಸಿಎಂ ವಸತಿಗೃಹದ ಗಾರ್ಡ್‌ನ್ ಲೈಟ್ಸ್ ಸೇರಿ ದುರಸ್ತಿಗೆ 1.38 ಕೋಟಿ ವೆಚ್ಚ; ಬರಗಾಲದಲ್ಲೂ ದುಂದುವೆಚ್ಚ
ಉಪ ಮುಖ್ಯಮಂತ್ರಿಯವರಿಗೆ ಹಂಚಿಕೆ ಮಾಡಲಾಗಿರುವ ವಸತಿಗೃಹ ಕೆ ಕೆ ದಕ್ಷಿಣ -1ರ ದುರಸ್ತಿ ಕಾಮಗಾರಿಗಳನ್ನು ಒಟ್ಟಾರೆ 1.38 ಕೋಟಿ ರು. ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು ಕೆಟಿಪಿಪಿ ಕಾಯ್ದೆ 4 ಜಿ ವಿನಾಯಿತಿ ದೊರೆತಿತ್ತು.
ಏನೆಲ್ಲಾ ದುರಸ್ತಿ ಆಗಿತ್ತು?
ಕಿಚನ್ ಕ್ಯಾಬಿನೆಟ್, ವಾಲ್ ಪೆನಲಿಂಗ್, ಪೈಟಿಂಗ್, ಬಾಗಿಲು, ಕಿಟಕಿ, ಗ್ರಿಲ್, ಕರ್ಟನ್ ರಾಡ್, ಕಾರ್ಟ್ ಕ್ಲಾತ್, ಪೀಠೋಪಕರಣಗಳಿಗೆ 98 ಲಕ್ಷ ರು., ಎಲ್‌ಇಡಿ ಫಿಟ್ಟಿಂಗ್ಸ್, ಸ್ಟ್ರೀಟ್ ಲೈಟ್ಸ್, ಲಾನ್ ಲೈಟ್ಸ್, ಗಾರ್ಡ್‌ನ್ ಲೈಟ್ಸ್, ವಾಟರ್ ಹೀಟರ್ಸ್, ಸೀಲಿಂಗ್ ಫ್ಯಾನ್, ಇನ್ನಿತರೆ ಎಲೆಕ್ಟ್ರಿಕ್ ಉಪಕರಣಗಳು ಮತ್ತು ದುರಸ್ತಿಗಳಿಗೆ 40 ಲಕ್ಷ ರು ಸೇರಿ ಒಟ್ಟಾರೆ 1.38 ಕೋಟಿ ರು. ವೆಚ್ಚವಾಗಲಿದೆ.
ಕುಮಾರಕೃಪ ನಿವಾಸದಿಂದ ಕಾವೇರಿ ನಿವಾಸಕ್ಕೆ ಸ್ಥಳಾಂತರಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ನಿವಾಸಕ್ಕೂ ಪೀಠೋಪಕರಣಗಳ ಪೂರೈಸಲು 3 ಕೋಟಿ ರು. ಖರ್ಚಾಗಿತ್ತು.
ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಹಿತ ಸಚಿವರ ಕಚೇರಿ ದುರಸ್ತಿ ಮತ್ತು ಬಣ್ಣ ಬಳಿಯುವ ಹೆಸರಿನಲ್ಲಿ 3.80 ಕೋಟಿ ರು ಬಿಡುಗಡೆ ಮಾಡಲಾಗಿತ್ತು. ಸಚಿವರ ವಸತಿ ಗೃಹಗಳಿಗೆ ಗೃಹಪಯೋಗಿ ವಸ್ತು ಮತ್ತು ಪೀಠೋಪಕರಣಗಳ ಪೂರೈಕೆಗಾಗಿ 3.40 ಕೋಟಿ ರು. ಬಿಡುಗಡೆಯಾಗಿತ್ತು.
ಅನಗತ್ಯ ಖರ್ಚು ಮತ್ತು ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಆರ್ಥಿಕ ಶಿಸ್ತು ಕಾಪಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದನ್ನು ಸ್ಮರಿಸಬಹುದು.