ನೇಮಕಾತಿ ಅಕ್ರಮ; ಸಿದ್ದರಾಮಯ್ಯರ ಆದೇಶ ಬದಿಗೊತ್ತಿ ಸಿಬಿಐ ತನಿಖೆಯೇ ಬೇಡವೆಂದಿದ್ದ ಹೆಚ್‌ಡಿಕೆ

ಬೆಂಗಳೂರು; ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ನಲ್ಲಿ 102 ಸಿಬ್ಬಂದಿಗಳ ನೇರ ನೇಮಕಾತಿ ಪ್ರಕರಣಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸೂಚಿಸಿದ್ದರೂ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರು ಇದನ್ನು ತಿರಸ್ಕರಿಸಿದ್ದರು.

 

ಸಿದ್ದರಾಮಯ್ಯ ಮತ್ತು ಹೆಚ್‌ ಡಿ ಕುಮಾರಸ್ವಾಮಿ ಅವರ ಮಧ್ಯೆ ನಡೆದಿರುವ ಮಾತಿನ ಚಕಮಕಿಯ ನಡುವೆಯೇ ಅಪೆಕ್ಸ್‌ ಬ್ಯಾಂಕ್‌ನಲ್ಲಿನ ನೇರ ನೇಮಕಾತಿ ಕುರಿತಾದ ಸಿಬಿಐ ತನಿಖೆಗೆ ಸಂಬಂಧಿಸಿದ ಟಿಪ್ಪಣಿ ಹಾಳೆಯೊಂದು ಮುನ್ನೆಲೆಗೆ ಬಂದಿದೆ. ಟಿಪ್ಪಣಿ ಹಾಳೆಯ (ಸಿಇ 44 ಸಿಎಲ್‌ಎಲ್‌ 2013) ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮುಡಾ, ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ  ನಡೆದಿದೆ ಎನ್ನಲಾಗಿರುವ ವಿವಿಧ ರೀತಿಯ ಅಕ್ರಮಗಳ ಬಗ್ಗೆ  ಸಿಬಿಐ ತನಿಖೆ ನೀಡುವ ವಿಚಾರದಲ್ಲಿ ಜಟಾಪಟಿ ನಡೆಯುತ್ತಿರುವ ಹೊತ್ತಿನಲ್ಲೇ ಅಪೆಕ್ಸ್‌ ಬ್ಯಾಂಕ್‌ ತನಿಖೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಹೆಚ್‌ ಡಿ ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳ ಟಿಪ್ಪಣಿ ಹಾಳೆಯೂ ಮುನ್ನೆಲೆಗೆ ಬಂದಿದೆ.

 

ಟಿಪ್ಪಣಿಯಲ್ಲೇನಿದೆ?

 

2012-13ನೇ ಸಾಲಿನಲ್ಲಿ 102 ಸಿಬ್ಬಂದಿಗಳ ನೇರ ನೇಮಕಾತಿ ಮುಖೇನ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುವ ಬಗ್ಗೆ ಈ ಕಡತದಲ್ಲಿ ಪ್ರಸ್ತಾಪಿಸಲಾಗಿರುವುದನ್ನು ಗಮನಿಸಲಾಗಿದೆ.

 

ಉಲ್ಲೇಖಿತ ಭ್ರಷ್ಟಾಚಾರ ಪ್ರಕರಣವನ್ನು ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸಿಕೊಡುವುದಾಗಿ ಅಂದಿನ ಸಹಕಾರ ಸಚಿವರು ವಿಧಾನಸಭೆಗೆ ಉತ್ತರ ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತರನ್ನು ಕೋರಲಾಗಿತ್ತು. ಆದರೆ ವಸ್ತುಸ್ಥಿತಿ ವಿಷಯವು ಲೋಕಾಯುಕ್ತ ಸಂಸ್ಥೆಯ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂಬ ಕಾರಣಕ್ಕಾಗಿ ಲೋಕಾಯುಕ್ತ ಸಂಸ್ಥೆಯು ಪ್ರಕರಣದ ತನಿಖೆ ನಡೆಸಿಲ್ಲ ಎಂಬುದನ್ನು ಕೂಡ ಗಮನಿಸಲಾಗಿದೆ.

 

ಮುಂದುವರೆದು ಉಲ್ಲೇಖಿತ ಪ್ರಕರಣವನ್ನು ಸಿಐಡಿ/ಸಿಒಡಿಗೆ ವಹಿಸಬಹುದೆಂಬುದಾಗಿ ಕಾನೂನು ಇಲಾಖೆಯು ಕೂಡ ಈ ಹಿಂದೆ ಅಭಿಪ್ರಾಯ ಪಟ್ಟಿದೆ ಎಂಬುದು ಕಡತದಿಂದ ಕಂಡು ಬಂದಿದೆ. ಆದರೆ ಅಂದಿನ ಮುಖ್ಯಮಂತ್ರಿಯವರು ಕಂಡಿಕೆ (89) ಅನ್ವಯ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆದೇಶಿಸಿರುವುದು ಕಂಡು ಬಂದಿದೆ.

 

 

ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ನಲ್ಲಿ 2012-13ನೇ ಸಾಲಿನಲ್ಲಿ 102 ಸಿಬ್ಬಂದಿಗಳನ್ನು ನೇರ ನೇಮಕಾತಿ ಮುಖೇನ ನೇಮಕ ಮಾಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಅಧಿಕಾರಿ, ಸಂಸ್ಥೆಯಿಂದ ಪ್ರಾಥಮಿಕ ತನಿಖೆಯನ್ನು ಕೂಡ ಕೈಗೊಂಡಿಲ್ಲ ಎಂಬುದನ್ನು ಗಮನಿಸಲಾಗಿದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.

 

ವಸ್ತು ಸ್ಥಿತಿ ಹೀಗಿರುವಲ್ಲಿ ಉಲ್ಲೇಖಿತ ಭ್ರಷ್ಟಾಚಾರ ಪ್ರಕರಣವನ್ನು ನೇರವಾಗಿ ಸಿಬಿಐ ಸಂಸ್ಥೆಗೆ ತನಿಖೆಗಾಗಿ ವಹಿಸುವುದಕ್ಕಾಗಲೀ ಸಿಬಿಐ ಸಂಸ್ಥೆಯಿಂದ ತನಿಖೆಗೆ ಒಳಪಡಿಸಲು ಮೇಲ್ನೋಟಕ್ಕೆ ಸಾಕಷ್ಟು ಕಾರಣಗಳಿವೆಯೇ ಎಂಬುದನ್ನು ಪರಿಶೀಲಿಸುವುದು ಸೂಕ್ತವೆನಿಸಿದೆ.

 

ಆದ್ದರಿಂದ ಉಲ್ಲೇಖಿತ ಭ್ರಷ್ಟಾಚಾರದ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಮೊದಲ ಹಂತದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಲಯದ ಓರ್ವ ನಿವೃತ್ತ ನ್ಯಾಯಮೂರ್ತಿ ಅಥವಾ ನಿವೃತ್ತ ಓರ್ವ ಹಿರಿಯ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಂದ ಪ್ರಾಥಮಿಕ ತನಿಖೆ ನಡೆಸಿ ಅವರು ನೀಡಬಹುದಾದ ವರದಿ ಆಧರಿಸಿ ನಂತರ ಅವಶ್ಯವೆನಿಸಿದ್ದಲ್ಲಿ ಸೂಕ್ತ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ನಡೆಸುವುದು ಸೂಕ್ತವೆನಿಸಿದೆ ಎಂದು ಅಂದು ಮುಖ್ಯಮಂತ್ರಿಯಾಗಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರು ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಅಕ್ರಮ ಸಿಬಿಐ ತನಿಖೆಗೆ ಒಳಪಡಿಸಿ, ಅಪೆಕ್ಸ್‌ ಬ್ಯಾಂಕ್‌ ಹಗರಣ ಮರೆತಿತೇ?

ಹೀಗಾಗಿ ಅಂದಿನ ಮುಖ್ಯಮಂತ್ರಿ ಮಾಡಿರುವ ಆದೇಶವನ್ನು (ಖಂಡಿಕೆ (89)ರಲ್ಲಿ ಹಿಂಪಡೆದಿತ್ತು. ಉಲ್ಲೇಖಿತ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ಓರ್ವ ನಿವೃತ್ತ ನ್ಯಾಯಮೂರ್ತಿ ಅಥವಾ ಓರ್ವ ಹಿರಿಯ ಜಿಲ್ಲಾ ನ್ಯಾಯಾಧೀಶರಿಗೆ ವಹಿಸಬೇಕು. ಮತ್ತು ತನಿಖೆ ನಂತರ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿಯಾಗಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts