ಬೆಂಗಳೂರು; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮುರುಗೇಶ್ ಆರ್ ನಿರಾಣಿ, ಶಶಿಕಲಾ ಜೊಲ್ಲೆ, ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದ ಯಾವುದೇ ಕಡತವೂ ಕಚೇರಿಯಲ್ಲಿಲ್ಲ ಎಂದು ಕೇವಲ ಒಂಬತ್ತೇ ಒಂಬತ್ತು ದಿನದಲ್ಲಿ ಆರ್‍ಟಿಐ ಅಡಿಯಲ್ಲಿ ಟಿ ಜೆ ಅಬ್ರಾಹಂ ಅವರಿಗೆ ಮಾಹಿತಿ ಒದಗಿಸಿದ್ದ ರಾಜ್ಯಪಾಲರ ಕಚೇರಿಯು ಇದೀಗ ಇದೇ ಮಾಹಿತಿ ಕೋರಿ ಮತ್ತೊಬ್ಬ ಸಾಮಾಜಿಕ ಹೋರಾಟಗಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಇಲ್ಲಿಯವರೆಗೆ ಎಚ್ ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಬಿ ಎಸ್ ಯಡಿಯೂರಪ್ಪ, ಮುರುಗೇಶ್ ನಿರಾಣಿ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ವಿಷಯದಲ್ಲಿ ರಾಜ್ಯಪಾಲರ ಮುಂದೆ ವಿಚಾರಣೆಗೆ ಅನುಮತಿ ಕೋರಿ ರಾಜ್ಯದ ಸಕ್ಷಮ ಪ್ರಾಧಿಕಾರ, ದೂರುದಾರರು, ನಾಗರೀಕರು, ಲೋಕಾಯುಕ್ತರು, ಸಿಐಡಿ, ಸಿಬಿಐ ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಸಲ್ಲಿಸಿದ ಅರ್ಜಿಯ ಪ್ರತಿಗಳನ್ನು ನೀಡುವುದು ಮತ್ತು ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ ಪಪತ್ರದ ಪ್ರತಿಯನ್ನು ನೀಡಬೇಕು ಎಂದು ಹೆಚ್ ಎಂ ವೆಂಕಟೇಶ್ ಅವರು ಕೋರಿದ್ದರು.
ಆದರೆ ರಾಜ್ಯಪಾಲರ ಕಚೇರಿಯು 8(1) (ಹೆಚ್) ಅನ್ವಯ ಈ ಅರ್ಜಿಯನ್ನು ನಿರಾಕರಿಸಿದೆ. ಈ ವಿಚಾರದಲ್ಲಿ ರಾಜ್ಯಪಾಲರ ಇಬ್ಬಂದಿ ನೀತಿ ಅನುಸರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ರಾಜಭವನ ನೀಡಿದ ಉತ್ತರದಲ್ಲೇನಿದೆ?
ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 8(1) (ಹೆಚ್) ಅನ್ವಯ ತನಿಖಾ ಕ್ರಮಕ್ಕೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂತಹ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ಇರುತ್ತದೆ. ಆದ್ದರಿಂದ ತಾವು ಕೋರಿರುವ ಮಾಹಿತಿಯು ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 2(ಎಫ್) ಅನ್ವಯ ಮಾಹಿತಿ ಪರಿಭಾಷೆಯ ವ್ಯಾಪ್ತಿಗೆ ಒಳಪಡುವುದಿಲ್ಲವಾದ್ದಂರಿದ ನ ಇಮ್ಮ ಮನವಿಯನ್ನು ಪರಿಗಣಿಸಲು ಸಾಧ್ಯವಿರುವುದಿಲ್ಲ ಎಂದು ತಿರಸ್ಕರಿಸಿದೆ.
ವಿವಿಧ ಸಕ್ಷಮ ಪ್ರಾಧಿಕಾರಗಳು ವಿಚಾರಣೆಗೆ ಅನುಮತಿ ಕೋರಿರುವ ಪ್ರಸ್ತಾವನೆಗಳ ಬಾಕಿ ಇರುವ ಕುರಿತಂತೆ ರಾಜ್ಯಪಾಲರ ಕಚೇರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೇ ಅಬ್ರಾಹಂ ಅವರು ಅರ್ಜಿ ಸಲ್ಲಿಸಿದ್ದ 9 ದಿನದೊಳಗೇ ರಾಜಭವನ ಕಚೇರಿಯು ಮಾಹಿತಿ ಒದಗಿಸಿತ್ತು.
ಹೆಚ್ ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿರುವ ಯಾವ ಕಡತವೂ ರಾಜ್ಯಪಾಲರ ಕಚೇರಿಯಲ್ಲಿ ಇಲ್ಲ ಎಂದು ಮಾಹಿತಿ ನೀಡಿತ್ತು.
ಅಬ್ರಾಹಂ ಅವರಿಗೆ ರಾಜಭವನ ಕಚೇರಿ ನೀಡಿದ್ದ ಮಾಹಿತಿಯಲ್ಲೇನಿತ್ತು?
ಮುರುಗೇಶ್ ನಿರಾಣಿ ಅವರ ವಿರುದ್ಧ ತನಿಖೆಗೆ ಸಂಬಂಧಿಸಿದಂತೆ ರಾಜಭವನ ಕಚೇರಿಯು 2024ರ ಫೆ.26ರಂದು ಸ್ವೀಕೃತವಾಗಿದೆ. ಮತ್ತು ಇದನ್ನು 2024ರ ಮಾರ್ಚ್ 26ರಂದು ಸಕ್ಷಮ ಪ್ರಾಧಿಕಾರಕ್ಕೆ ಕಡತವನ್ನು ಹಿಂದಿರುಗಿಸಿದೆ. ಇದೇ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆ (ಡಬ್ಲ್ಯೂ ಪಿ 22356/2024) ನಡೆಯುತ್ತಿದೆ. 2024ರ ಆಗಸ್ಟ್ 19ರಂದು ವಿಚಾರಣೆ ನಡೆದಿದೆ. ಹೀಗಾಗಿ ಈ ಸಂಬಂಧಿತ ಕಡತವು ರಾಜ್ಯಪಾಲರ ಕಚೇರಿಯಲ್ಲಿಲ್ಲ ಎಂದು ಉತ್ತರ ನೀಡಿತ್ತು.
ಹೆಚ್‌ಡಿಕೆ ಸೇರಿ ಮತ್ತಿತರ ವಿರುದ್ಧ ವಿಚಾರಣೆ ಪ್ರಕರಣ; ಕಡತ ಲಭ್ಯವಿಲ್ಲವೆಂದ ರಾಜಭವನ, ಸುಳ್ಳು ಹೇಳಿತೇ ಕಾಂಗ್ರೆಸ್?
ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಕಚೇರಿಯಲ್ಲಿ ಕಡತವನ್ನು 2023ರ ನವೆಂಬರ್ 21ರಂದು ಸ್ವೀಕೃತವಾಗಿದ್ದ ಕಡತವನ್ನು ಸಕ್ಷಮ ಪ್ರಾಧಿಕಾರಕ್ಕೆ 2024ರ ಜುಲೈ 29ಕ್ಕೆ ಹಿಂದಿರುಗಿಸಲಾಗಿದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ( ಸಂಖ್ಯೆ 22356/2024) ಸಲ್ಲಿಕೆಯಾಗಿದೆ. ಹೀಗಾಗಿ ಈ ಪ್ರಕರಣವು ರಾಜ್ಯಪಾಲರ ಕಚೇರಿಯಲ್ಲಿ ಪೆಂಡಿಂಗ್ ಇರುವುದಿಲ್ಲ ಮತ್ತು ಈ ಸಂಬಂಧಿತ ಕಡತವೂ ರಾಜಭವನದ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಮಾಹಿತಿ ನೀಡಿತ್ತು.
ಜನಾರ್ದನ ರೆಡ್ಡಿ ಅವರ ಪ್ರಕರಣದಲ್ಲಿಯೂ 2024ರ ಮೇ 13ರಂದು ಕಡತವನ್ನು ರಾಜಭವನ ಕಚೇರಿಯು ಸ್ವೀಕರಿಸಿತ್ತು. ಈ ಕಡತವನ್ನು ಸಕ್ಷಮ ಪ್ರಾಧಿಕಾರದ ಕೋರಿಕೆ ಮೇರೆಗೆ 2024ರ ಜೂನ್ 27ರಂದು ಹಿಂದಿರುಗಿಸಲಾಗಿದೆ. ಮತ್ತು ರಿಟ್ ಅರ್ಜಿ (22356/2024)ಯು ಹೈಕೋರ್ಟ್‌ನಲ್ಲಿ 2024ರ ಆಗಸ್ಟ್ 19ರಂದು ಪ್ರಸ್ತುತಪಡಿಸಲಾಗಿದೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದ ಕಡತವು ರಾಜಭವನ ಕಚೇರಿಯಲ್ಲಿಲ್ಲ ಎಂದು ಉತ್ತರಿಸಿತ್ತು.
1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 218ರ ಅಡಿಯಲ್ಲಿ ಸಿಎಂ ವಿರುದ್ಧ ಮೂವರು ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿರುವ ದೂರುಗಳಲ್ಲಿ ಉಲ್ಲೇಖಿಸಿರುವ ಅಪರಾಧ ಕುರಿತ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಆಗಸ್ಟ್ 16ರಂದು ಅನುಮತಿ ನೀಡಿದ್ದನ್ನು ಸ್ಮರಿಸಬಹುದು.