ಬೆಂಗಳೂರು; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಮುರುಗೇಶ್ ಆರ್ ನಿರಾಣಿ, ಶಶಿಕಲಾ ಜೊಲ್ಲೆ, ಶಾಸಕ ಜನಾರ್ದನ ರೆಡ್ಡಿ ಅವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದ ಯಾವುದೇ ಕಡತವೂ ರಾಜ್ಯಪಾಲರ ಕಚೇರಿಯಲ್ಲಿಲ್ಲ ಎಂಬ ಸಂಗತಿ ಇದೀಗ ಬಹಿರಂಗವಾಗಿದೆ.
ಬಿಜೆಪಿ, ಜೆಡಿಎಸ್ ನಾಯಕರ ಮೇಲಿನ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್ ಮುಖಂಡರು ವಿಕಾಸಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನ ಚಲೋ ನಡೆಸಿದ ಬೆನ್ನಲ್ಲೇ ರಾಜಭವನವು ನೀಡಿರುವ ಲಿಖಿತ ಮಾಹಿತಿಯು ಮುನ್ನೆಲೆಗೆ ಬಂದಿದೆ.
ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಟಿ ಜೆ ಅಬ್ರಾಹಂ ಅವರು, ವಿವಿಧ ಸಕ್ಷಮ ಪ್ರಾಧಿಕಾರಗಳು ವಿಚಾರಣೆಗೆ ಅನುಮತಿ ಕೋರಿರುವ ಪ್ರಸ್ತಾವನೆಗಳ ಬಾಕಿ ಇರುವ ಕುರಿತಂತೆ ರಾಜ್ಯಪಾಲರ ಕಚೇರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೇ ಅಬ್ರಾಹಂ ಅವರು ಅರ್ಜಿ ಸಲ್ಲಿಸಿದ್ದ 9 ದಿನದೊಳಗೇ ರಾಜಭವನ ಕಚೇರಿಯು ಮಾಹಿತಿ ಒದಗಿಸಿದೆ. ರಾಜಭವನ ಕಚೇರಿಯು ನೀಡಿರುವ ಉತ್ತರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ನೀಡಿದ್ದು ಅಕ್ಷಮ್ಯ ಮತ್ತು ಪಕ್ಷಪಾತದಿಂದ ಕೂಡಿದೆ. ಹೆಚ್ ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಅವರ ವಿರುದ್ಧವೂ ವಿಚಾರಣೆ ನಡೆಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯಪಾಲರು ಈ ಯಾವ ಪ್ರಸ್ತಾವನೆಗಳಿಗೆ ಅನುಮತಿ ನೀಡದೇ ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾತ್ರ ವಿಚಾರಣೆಗೆ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ ಎಂದ ಕಾಂಗ್ರೆಸ್ ಪ್ರಚಾರ ನಡೆಸಿತ್ತು.
ಆದರೀಗ ರಾಜಭವನ ಕಚೇರಿಯೇ ಈ ಕುರಿತು ಆರ್‍ಟಿಐ ಅಡಿಯಲ್ಲಿ ಉತ್ತರ ಒದಗಿಸಿದೆ. ಈ ಉತ್ತರದ ಪ್ರಕಾರ ಹೆಚ್ ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿರುವ ಯಾವ ಕಡತವೂ ರಾಜ್ಯಪಾಲರ ಕಚೇರಿಯಲ್ಲಿ ಇಲ್ಲ ಎಂದು ನೀಡಿರುವ ಮಾಹಿತಿಯು, ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಇಡೀ ಸಚಿವ ಸಂಪುಟವೇ ಸುಳ್ಳು ಹೇಳಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ರಾಜಭವನ ಕಚೇರಿ ನೀಡಿರುವ ಮಾಹಿತಿಯಲ್ಲೇನಿದೆ?
ಮುರುಗೇಶ್ ನಿರಾಣಿ ಅವರ ವಿರುದ್ಧ ತನಿಖೆಗೆ ಸಂಬಂಧಿಸಿದಂತೆ ರಾಜಭವನ ಕಚೇರಿಯು 2024ರ ಫೆ.26ರಂದು ಸ್ವೀಕೃತವಾಗಿದೆ. ಮತ್ತು ಇದನ್ನು 2024ರ ಮಾರ್ಚ್ 26ರಂದು ಸಕ್ಷಮ ಪ್ರಾಧಿಕಾರಕ್ಕೆ ಕಡತವನ್ನು ಹಿಂದಿರುಗಿಸಿದೆ. ಇದೇ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆ (ಡಬ್ಲ್ಯೂ ಪಿ 22356/2024) ನಡೆಯುತ್ತಿದೆ. 2024ರ ಆಗಸ್ಟ್ 19ರಂದು ವಿಚಾರಣೆ ನಡೆದಿದೆ. ಹೀಗಾಗಿ ಈ ಸಂಬಂಧಿತ ಕಡತವು ರಾಜ್ಯಪಾಲರ ಕಚೇರಿಯಲ್ಲಿಲ್ಲ ಎಂದು ಉತ್ತರ ಒದಗಿಸಿರುವುದು ಗೊತ್ತಾಗಿದೆ.
ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಕಚೇರಿಯಲ್ಲಿ ಕಡತವನ್ನು 2023ರ ನವೆಂಬರ್ 21ರಂದು ಸ್ವೀಕೃತವಾಗಿದ್ದ ಕಡತವನ್ನು ಸಕ್ಷಮ ಪ್ರಾಧಿಕಾರಕ್ಕೆ 2024ರ ಜುಲೈ 29ಕ್ಕೆ ಹಿಂದಿರುಗಿಸಲಾಗಿದೆ. ಈ ಸಂಬಂಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ( ಸಂಖ್ಯೆ 22356/2024) ಸಲ್ಲಿಕೆಯಾಗಿದೆ. ಹೀಗಾಗಿ ಈ ಪ್ರಕರಣವು ರಾಜ್ಯಪಾಲರ ಕಚೇರಿಯಲ್ಲಿ ಪೆಂಡಿಂಗ್ ಇರುವುದಿಲ್ಲ ಮತ್ತು ಈ ಸಂಬಂಧಿತ ಕಡತವೂ ರಾಜಭವನದ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಮಾಹಿತಿ ನೀಡಿರುವುದು ತಿಳಿದು ಬಂದಿದೆ.
ಜನಾರ್ದನ ರೆಡ್ಡಿ ಅವರ ಪ್ರಕರಣದಲ್ಲಿಯೂ 2024ರ ಮೇ 13ರಂದು ಕಡತವನ್ನು ರಾಜಭವನ ಕಚೇರಿಯು ಸ್ವೀಕರಿಸಿತ್ತು. ಈ ಕಡತವನ್ನು ಸಕ್ಷಮ ಪ್ರಾಧಿಕಾರದ ಕೋರಿಕೆ ಮೇರೆಗೆ 2024ರ ಜೂನ್ 27ರಂದು ಹಿಂದಿರುಗಿಸಲಾಗಿದೆ. ಮತ್ತು ರಿಟ್ ಅರ್ಜಿ (22356/2024)ಯು ಹೈಕೋರ್ಟ್‌ನಲ್ಲಿ 2024ರ ಆಗಸ್ಟ್ 19ರಂದು ಪ್ರಸ್ತುತಪಡಿಸಲಾಗಿದೆ. ಹೀಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದ ಕಡತವು ರಾಜಭವನ ಕಚೇರಿಯಲ್ಲಿಲ್ಲ ಎಂದು ಉತ್ತರ ನೀಡಿರುವುದು ಗೊತ್ತಾಗಿದೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಹಾಗೂ ಶಶಿಕಲಾ ಜೊಲ್ಲೆಯವರ ಮೇಲಿನ ಪ್ರಕರಣದಲ್ಲೂ ಪ್ರಾಸಿಕ್ಯೂಷನ್ ಅನುಮತಿಗಾಗಿ ಆಗ್ರಹಿಸಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಿತ್ತು. ಈ ಕುರಿತು ಮುಖ್ಯಮಂತ್ರಿ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿಯೂ ಪ್ರಕಟಿಸಿತ್ತು.
ಚಾರ್ಜ್ ಶೀಟ್ ಸಲ್ಲಿಕೆಯಾದರೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ ಪ್ರಕರಣಗಳ ವಿರುದ್ಧ ತನಿಖೆಗೆ ಅನುಮತಿ ಕೊಟ್ಟಿಲ್ಲ. ಕೂಡಲೇ ಈ ಪ್ರಕರಣಗಳ ಬಗ್ಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಆಗ್ರಹಿಸಿದರು. ಬಳಿಕ ಕಾಲ್ನಡಿಗೆ ಮೂಲಕ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು.
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಂದರ್ಭದಲ್ಲಿ ಗೆಹ್ಲೋಟ್ ತಮ್ಮ ವಿರುದ್ಧ ತಾರತಮ್ಯ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ತನಿಖೆಯಾಗಿದೆ. ಆದ್ದರಿಂದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಸಂವಿಧಾನದ ಪ್ರಕಾರ ಅನುಮತಿ ನೀಡಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅನೇಕ ಒತ್ತಡವಿದ್ದರೂ ರಾಜ್ಯಪಾಲರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದರು.
1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಸೆಕ್ಷನ್ 218ರ ಅಡಿಯಲ್ಲಿ ಸಿಎಂ ವಿರುದ್ಧ ಮೂವರು ಸಾಮಾಜಿಕ ಕಾರ್ಯಕರ್ತರು ಸಲ್ಲಿಸಿರುವ ದೂರುಗಳಲ್ಲಿ ಉಲ್ಲೇಖಿಸಿರುವ ಅಪರಾಧ ಕುರಿತ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಆಗಸ್ಟ್ 16ರಂದು ಅನುಮತಿ ನೀಡಿದ್ದನ್ನು ಸ್ಮರಿಸಬಹುದು.