ಪಾಲಿ, ಸಂಸ್ಕೃತ, ತತ್ವಶಾಸ್ತ್ರದ ಟ್ರಸ್ಟ್‌ಗೂ 19 ಎಕರೆ; ಗುತ್ತಿಗೆ ಆದೇಶ ಮಾರ್ಪಾಡಿಸಿ ಉಚಿತವಾಗಿ ಮಂಜೂರು

ಬೆಂಗಳೂರು;  ಸಿದ್ಧಾರ್ಥ ವಿಹಾರ್‍‌ನ ಟ್ರಸ್ಟ್‌ನ ಭಾಗವಾಗಿರುವ ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೂ 2016-17ರಲ್ಲೇ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಗುತ್ತಿಗೆ ಆಧಾರದ ಮೇಲೆ 19 ಎಕರೆ ಜಮೀನು ಮಂಜೂರಾಗಿತ್ತು. ನಂತರ   ಅಂದಾಜು 40 ಕೋಟಿ ರು ಬೆಲೆಬಾಳುವ ಇದೇ ಜಮೀನನ್ನು  ಉಚಿತವಾಗಿ ಮಂಜೂರು ಮಾಡಿ ಆದೇಶ ಹೊರಡಿಸಲಾಗಿತ್ತು  ಎಂಬ ದಾಖಲೆಗಳು ಇದೀಗ  ಮುನ್ನೆಲೆಗೆ ಬಂದಿವೆ.

 

ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕೆಎಐಡಿಬಿಯಿಂದ ಮಂಜೂರಾಗಿದ್ದ   5 ಎಕರೆ ವಿಸ್ತೀರ್ಣದ ಸಿ ಎ ನಿವೇಶನದ   ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.  ರಾಷ್ಟ್ರೋತ್ಥಾನ ಪರಿಷತ್‌ಗೆ ಶೈಕ್ಷಣಿಕ ಉದ್ದೇಶಗಳಿಗಾಗಿ ರಿಯಾಯಿತಿ ದರದಲ್ಲಿ ಜಮೀನುಗಳನ್ನು ನೀಡಿರುವ ಬಗ್ಗೆ ಪ್ರಸ್ತಾಪಿಸಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್‌ ಖರ್ಗೆ, ಎಂ ಬಿ ಪಾಟೀಲ್‌ ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದರು ಮತ್ತು ಸಿ ಎ ನಿವೇಶನ ಹಂಚಿಕೆಯನ್ನು  ಸಮರ್ಥಿಸಿಕೊಂಡಿದ್ದರು.

 

ಆದರೀಗ  ಸಿದ್ದಾರ್ಥ ವಿಹಾರ್‌ ಟ್ರಸ್ಟ್‌ನ ಭಾಗವಾಗಿರುವ  ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೂ ಶೈಕ್ಷಣಿಕ ಉದ್ದೇಶಕ್ಕಾಗಿಯೇ   ಉಚಿತವಾಗಿ 19 ಎಕರೆ  ಜಮೀನು  ಮಂಜೂರಾಗಿತ್ತು ಎಂಬ ದಾಖಲೆಗಳು ಬಹಿರಂಗಗೊಂಡಿವೆ. ಈ ಪ್ರಕರಣವೂ ಕಾಂಗ್ರೆಸ್‌ನ್ನು ಮತ್ತಷ್ಟು  ಮುಜುಗರದಲ್ಲಿ ಸಿಲುಕಿಸಿವೆ. ಅಲ್ಲದೇ ಈ   ಪ್ರಕರಣವು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರವೊಂದನ್ನು  ನೀಡಿದಂತಾಗಿದೆ.

 

ಕಲ್ಬುರ್ಗಿ ತಾಲೂಕಿನ ಕುಸನೂರು ಗ್ರಾಮದ ಸರ್ವೆ ನಂಬರ್‍‌ 88/1ರಲ್ಲಿ ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ ಆರಂಭದಲ್ಲಿ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರಾಗಿತ್ತು. ನಂತರ ಈ ಆದೇಶವನ್ನು ಮಾರ್ಪಾಡಿಸಲು ಟ್ರಸ್ಟ್‌  ಕೋರಿಕೆ ಸಲ್ಲಿಸಿತ್ತು.  ಈ ಕೋರಿಕೆಯನ್ನು   ಅಂದಿನ ಕಾಂಗ್ರೆಸ್‌  ಸರ್ಕಾರವು ಪುರಸ್ಕರಿಸಿತ್ತು.  ಗುತ್ತಿಗೆ ರೂಪದಲ್ಲಿ ಮಂಜೂರಾಗಿದ್ದ  ಜಮೀನನ್ನೇ  ‘ಉಚಿತ’ ಎಂದು ಮಾರ್ಪಡಿಸಿ ಆದೇಶವನ್ನೂ ಹೊರಡಿಸಿತ್ತು.  ಈ ಎರಡೂ ಪ್ರಕ್ರಿಯೆಗಳೂ ತರಾತುರಿಯಲ್ಲಿ ಪೂರ್ಣಗೊಂಡಿತ್ತು ಎಂಬುದು ತಿಳಿದು ಬಂದಿದೆ.

 

ಈ ಸಂಸ್ಥೆಗೆ ಉಚಿತವಾಗಿ ಜಮೀನು ಮಂಜೂರಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಟ್ರಸ್ಟ್‌ನ  ಟ್ರಸ್ಟಿಯೂ ಆಗಿದ್ದ ಪ್ರಿಯಾಂಕ್‌ ಖರ್ಗೆ ಅವರೂ ಇದೇ ಅವಧಿಯಲ್ಲಿ ಐಟಿ ಬಿಟಿ, ಪ್ರವಾಸೋದ್ಯಮ ಖಾತೆಯ  ಸಚಿವರೂ ಆಗಿದ್ದರು ಎಂಬುದು ವಿಶೇಷ.

 

ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಮತ್ತು ಮತ್ತಿತತರೆ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ಗೆ 2014ರಲ್ಲಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರಾದ ನಂತರ ಕಲ್ಬುರ್ಗಿ ಜಿಲ್ಲಾಧಿಕಾರಿಯು ಟ್ರಸ್ಟ್‌ನ ಕಾರ್ಯದರ್ಶಿಯೂ ಆಗಿರುವ ಹಾಲಿ ಸಂಸದ ರಾಧಾಕೃಷ್ಣ ಅವರಿಗೆ ಲೀಸ್‌ ಡೀಡ್‌ ಮಾಡಿಕೊಟ್ಟಿದ್ದರು. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಮೊದಲ ಆದೇಶದಲ್ಲೇನಿತ್ತು?

 

ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ 30 ವರ್ಷದ ಗುತ್ತಿಗೆ ಆಧಾರದ ಮೇಲೆ 16 ಎಕರೆ ಜಮೀನನ್ನು ಮಂಜೂರು ಮಾಡಿ 2014ರ ಮಾರ್ಚ್‌ 4ರಂದು ಮೊದಲ ಆದೇಶ ಹೊರಡಿಸಿತ್ತು.

 

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ ಜಮೀನು; ಅಧಿಕಾರ ದುರುಪಯೋಗ, ಹಿತಾಸಕ್ತಿ ಸಂಘರ್ಷ?

ಇದರ ಪ್ರಕಾರ ಕುಸನೂರು ಗ್ರಾಮದ ಸರ್ವೆ ನಂಬರ್‍‌ 88/1ರಲ್ಲಿ ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಅಂತರರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ 16.00 ಎಕರೆ ಜಮೀನನ್ನು 30 ವರ್ಷಗಳ ಅವಧಿಗೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ಗುತ್ತಿಗೆ ಮೊತ್ತ ನಿಗದಿಪಡಿಸಿತ್ತು. ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಗುತ್ತಿಗೆ ಮೊತ್ತವನ್ನು ಶೇ.10ಕ್ಕೆ ಹೆಚ್ಚಿಸುವ ಷರತ್ತಿಗೆ ಒಳಪಟ್ಟು ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿತ್ತು.

 

ಗುತ್ತಿಗೆ ಮಂಜೂರಾತಿ ಆದೇಶ ಹೊರಬಿದ್ದ ಎರಡೇ ವರ್ಷದಲ್ಲಿ ಅಂದರೇ 2016ರಲ್ಲಿ ಮತ್ತೊಂದು ಆದೇಶವನ್ನು ಹೊರಡಿಸಲಾಗಿತ್ತು. ಇದರ ಪ್ರಕಾರ ಸರ್ವೆ ನಂಬರ್‍‌ 88/1ರಲ್ಲಿ ಬಾಕಿ ಉಳಿದಿದ್ದ 3 ಎಕರೆ ಜಮೀನನ್ನೂ ಸಹ 2014ರ ಮಾರ್ಚ್‌ 4ರ ಆದೇಶದಲ್ಲಿ ವಿಧಿಸಿದ್ದ ಷರತ್ತುಗಳನ್ನೇ ಪ್ರಸ್ತಾಪಿತ ಜಮೀನಿಗೂ ವಿಧಿಸಿತ್ತು. ಈ ಸಂಸ್ಥೆಗೆ 30 ವರ್ಷಗಳ ಅವಧಿಗೆ ಗುತ್ಗಿಗೆ ಆಧಾರದ ಮೇಲೆ ಪೂರ್ವಾನುಮೋದನೆ ನೀಡಿತ್ತು ಎಂಬುದು ಆದೇಶದಿಂದ ಗೊತ್ತಾಗಿದೆ.

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ರಾಹುಲ್‌ಗಾಂಧಿ, ಸಿಎಂಗೆ 2 ತಿಂಗಳ ಹಿಂದೆಯೇ ಸಲ್ಲಿಕೆಯಾಗಿತ್ತು ದೂರು

ಇದಾದ ನಂತರ ಸಂಸ್ಥೆಯು 2016ರ ಮಾರ್ಚ್‌ಮತ್ತು ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿತ್ತು.

 

ಮನವಿಯಲ್ಲೇನಿತ್ತು?

 

‘ಪಾಲಿ ಭಾಷೆಗೆ ಸಂಬಂಧಪಟ್ಟಂತೆ ವಿಶೇಷ ಸಂಶೋಧನೆ ಮಾಡುವ ಸಲುವಾಗಿ ಪ್ರತಿನಿಧಿಸುವ ಸಂಸ್ಥೆಯಾಗಿದ್ದು ಶೈಕ್ಷಣಿಕ ಉದ್ದೇಶವಲ್ಲದೇ ಬೇರಾವುದೇ ಲಾಭದಾಯಕ ಚಟುವಟಿಕೆಗಳನನ್ನು ಕೈಗೊಳ್ಳುತ್ತಿಲ್ಲ. ಟ್ರಸ್ಟ್‌ ನ ಟ್ರಸ್ಟಿಗಳ ಪೈಕಿ ಮೂವರು ಕೇಂದ್ರ ಹಾಗೂ ಇಬ್ಬರು ರಾಜ್ಯ ಸರ್ಕಾರದ ಪ್ರತಿನಿಧಿಗಳಿದ್ದು, ಇನ್ನುಳಿದ ಮೂವರು ಟ್ರಸ್ಟ್‌ನ ಪ್ರತಿನಿಧಿಗಳಾಗಿದ್ದಾರೆ. ಸಂಸ್ಥೆಯ ಚಟುವಟಿಕೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕರಿಸುತ್ತಿವೆ. ಹೀಗಾಗಿ ದುಬಾರಿ ಗುತ್ತಿಗೆ ಮೊತ್ತವನ್ನು ಸಂಸ್ಥೆಯು ಭರಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಪ್ರಸ್ತಾಪಿತ ಜಮೀನನ್ನು 30 ವರ್ಷಗಳ ಗುತ್ತಿಗೆಗೆ ನೀಡುವ ಬದಲಾಗಿ ಉಚಿತವಾಗಿ ಮಂಜೂರು ಮಾಡಬೇಕು,’ ಎಂದು ಕೋರಿಕೆ ಸಲ್ಲಿಸಿತ್ತು.

ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ; ಹಿತಾಸಕ್ತಿ ಸಂಘರ್ಷದ ಕುರಿತು ಉಸಿರೆತ್ತದ ಕಾಂಗ್ರೆಸ್‌

ಈ ಕೋರಿಕೆಯನ್ನು ಅಂದಿನ ಕಾಂಗ್ರೆಸ್‌ ಸರ್ಕಾರವು ಪರಿಗಣಿಸಿತ್ತು. ಅದರಂತೆ 2017ರ ಮಾರ್ಚ್‌ 15ರಂದು ಆದೇಶ ಹೊರಡಿಸಿತ್ತು. ಇದರ ಪ್ರಕಾರ ಸರ್ವೆ ನಂಬರ್‍‌ 88/1ರಲ್ಲಿ ಕ್ರಮವಾಗಿ 16 ಎಕರೆ ಮತ್ತು 3 ಎಕರೆ ಸೇರಿ ಒಟ್ಟು 19 ಎಕರೆ ಜಮೀನನ್ನು ಪಾಲಿ ಮತ್ತು ಸಂಸ್ಕೃತ ಭಾಷೆಗಳ ಸಂಶೋಧನಾ ಕೇಂದ್ರ ಸ್ಥಾಪಿಸಲು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಿರುವುದನ್ನು ಮಾರ್ಪಡಿಸಿತ್ತು.

 

ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಅನ್ವಯ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿತ್ತು.

 

ಆಟೋಮೊಬೈಲ್‌ ವಲಯದಲ್ಲಿ ಹೂಡಿಕೆ; ಪೂರ್ವಾನುಭವ ದಾಖಲೆಯಿಲ್ಲ, ಪ್ರವರ್ತಕರ ವಿವರಗಳಿಲ್ಲ

ಅಲ್ಲದೇ  ನಿಯಮ 23ನ್ನು ಸಡಿಲಿಸಿ ಅಂತರಾಷ್ಟ್ರೀಯ ಪಾಲಿ, ಸಂಸ್ಕೃತ ಮತ್ತು ತುಲನಾತ್ಮಕ ತತ್ವಶಾಸ್ತ್ರದ ಟ್ರಸ್ಟ್‌ಗೆ ಉಚಿತವಾಗಿ ಮಂಜೂರು ಮಾಡಿ ಆದೇಶಿಸಿರುವುದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts