ಬೆಂಗಳೂರು; ಯಾವುದೇ ಇಲಾಖೆ, ಸಂಸ್ಥೆಗೆ ಉಚಿತವಾಗಿ ಸಿ ಎ ನಿವೇಶನವನ್ನು ಮಂಜೂರು ಮಾಡಲು ಅವಕಾಶವಿರದಿದ್ದರೂ ಕೋಲಾರ ಜಿಲ್ಲೆಯ ಕುರುಬರ ಸಂಘಕ್ಕೆ ಸಿ ಎ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಸಲ್ಲಿಸಿದೆ.
ಉಚಿತವಾಗಿ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರದಿದ್ದರೂ ಸಹ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಮಂಡಿಸಿ ಎಂದು ಆದೇಶಿಸಿರುವುದು ಬಹಿರಂಗವಾಗಿದೆ.
ಕಲ್ಬುರ್ಗಿಯ ಸರ್ಕಾರಿ ಮಹಾವಿದ್ಯಾಲಯದ 3 ಎಕರೆ 7 ಗುಂಟೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ಕಲ್ಬುರ್ಗಿ ಶಾಖೆಗೆ ಮಂಜೂರು ಮಾಡಲು ಸರ್ಕಾರದ ತೀರ್ಮಾನ ಹೊರಬಿದ್ದಿರುವ ಬೆನ್ನಲ್ಲೇ ಇದೀಗ ಕೋಲಾರ ಜಿಲ್ಲೆಯ ಕುರುಬರ ಸಂಘಕ್ಕೂ ಸಿಎ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡುವ ಪ್ರಸ್ತಾವನೆಯು ಚರ್ಚೆಗೆ ಗ್ರಾಸವಾಗಿದೆ.
ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವನೆ (ನಇ 225 ಬೆಂರೂಪ್ರಾ 2023) ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವಿಶೇಷವೆಂದರೇ ನಗರಾಭಿವೃದ್ಧಿ ಇಲಾಖೆಯ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ವಿರೋಧ ವ್ಯಕ್ತಪಡಿಸಿದೆ. ಉಚಿತವಾಗಿ ನಿವೇಶನ ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವುಂಟಾಗುತ್ತದೆ ಎಂದು ಸ್ಪಷ್ಟ ಅಭಿಪ್ರಾಯ ನೀಡಿದ್ದರೂ ಸಹ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವುದು ಗೊತ್ತಾಗಿದೆ.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯ ನವಿಏಶನವನ್ನು ಕೋಲಾರ ಕುರುಬರ ಸಂಘದ ಉದ್ದೇಶಿತ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಉಚಿತವಾಗಿ ಮಂಜೂರು ಮಾಡಲು ಕುರುಬರ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಜಿಲ್ಲಾಧಿಕಾರಿಯು ಸೂಕ್ತ ಕ್ರಮಕ್ಕಾಗಿ ಸೂಚಿಸಿದ್ದರು.
ಆದರೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನವಿಏಶನಗಳ ಹಂಚಿಕೆ) ನಿಯಮ 1991ರ ನಿಯಮ 7(1)(2) ಮತ್ತು (3)ರ ಅನ್ವಯ ಸಂಘ ಸಂಸ್ಥೆಗಳಿಗೆ ನಾಗರೀಕ ಸೌಲಭ್ಯ ನಿವೇಶನಗಳನ್ನು ಮಂಜೂರು ಮಾಡಲು ಕೆಲವು ಮಾನದಂಡಗಳಿವೆ. ಆದರೆ ಯಾವುದೇ ಇಲಾಖೆ, ಸಂಸ್ಥೆಗೆ ಉಚಿತವಾಗಿ ನಿವೇಶನ ಮಂಜೂರು ಮಾಡಲು ಅವಕಾಶ ಕಲ್ಪಿಸಿರುವುದಿಲ್ಲ.
ಹಾಗಾಗಿ ಜಿಲ್ಲಾಧಿಕಾರಿಯ ಸೂಚನೆಯಂತೆ ಈ ಸಂಸ್ಥೆಗೆ ಉಚಿತವಾಗಿ ನಾಗರೀಕ ಸೌಲಭ್ಯ ನಿವೇಶನ ಮಂಜೂರು ಮಾಡುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸರ್ಕಾರದ ಮೆಟ್ಟಿಲೇರಿದ್ದರು ಎಂಬುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಸಚಿವರ ಒತ್ತಡಕ್ಕೆ ಮಣಿದ ಕಾರ್ಯದರ್ಶಿ ?
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991ರ ನಿಯಮ 8(1)ರಲ್ಲಿ ನಾಗರಿಕ ಸೌಲಭ್ಯ ನಿವೇಶನಗಳ ಗುತ್ತಿಗೆ ಹಣವನ್ನು ನಿಗದಿಪಡಿಸಲು ಅವಕಾಶ ಕಲ್ಪಿಸಿದೆ. ಪ್ರಸ್ತಾಪಿತ ನಿವೇಶನಕ್ಕೆ ದರವನ್ನೂ ನಿಗದಿಪಡಿಸಿದೆ ಆದರೆ ಪ್ರಸ್ತಾಪಿತ ನಿವೇಶನವನ್ನು ಉಚಿತವಾಗಿ ನೀಡಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ಆದರೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಈ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿ ಎಂದು ಆದೇಶಿಸಲು ಒತ್ತಡ ಹೇರಿದ್ದರು. ಹೀಗಾಗಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿರುವುದು ಗೊತ್ತಾಗಿದೆ.
ಪ್ರಾಧಿಕಾರಕ್ಕೆ ನಷ್ಟವೆಂದ ಆರ್ಥಿಕ ಇಲಾಖೆ
ಕೋಲಾರ ಕುರುಬರ ಸಂಘದ ಉದ್ದೇಶಿತ ವಿದ್ಯಾರ್ಥಿ ನಿಲಯಕ್ಕೆ ಉಚಿತವಾಗಿ ಸಿ ಎ ನಿವೇಶನವನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆಯು ತಕರಾರು ಎತ್ತಿದೆ. ‘ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಪ್ರಾಧಿಕಾರದ ವತಿಯಿಂದ ಯಾವುದೇ ಅನುದಾನ ನೀಡಿರುವುದಿಲ್ಲ. ಪ್ರಾಧಿಕಾರಗಳು ಸ್ವ-ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಿಕೊಂಡು ಕಾರ್ಯನಿರ್ವಹಿಸುತ್ತವೆ.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನಾಗರೀಕ ನಿವೇಶನವನ್ನು ಕುರುಬ ಸಮುದಾಯದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಉಚಿತವಾಗಿ ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗುತ್ತದೆ,’ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯ ನೀಡಿದೆ.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಆದರೂ ಸಚಿವ ಬೈರತಿ ಸುರೇಶ್ ಅವರು ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲು ಅನುಮೋದಿಸಿದರುವುದು ತಿಳಿದು ಬಂದಿದೆ.
ಎರಡು ಆಯ್ಕೆ ನೀಡಿದ ಇಲಾಖೆ
ಕೋಲಾರ ಜಿಲ್ಲಾ ಕುರುಬರ ಸಂಘದ ಉದ್ದೇಶಿತ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನಾಗರಿಕ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಲು ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ) ನಿಯಮಗಳು 1991ರ ಅನ್ವಯ ಅವಕಾಶವಿರುವುದಿಲ್ಲ. ಹೀಗಾಗಿ ಪ್ರಸ್ತಾವನೆ ತಿರಸ್ಕರಿಸಬೇಕು ಎಂದು ಮೊದಲ ಆಯ್ಕೆ ನೀಡಿರುವುದು ಗೊತ್ತಾಗಿದೆ.
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಲಭ್ಯ ನಿವೇಶನವನ್ನು ಕುರುಬ ಸಮುದಾಯದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಜಿಲ್ಲಾ ಕುರುಬರ ಸಂಘಕ್ಕೆ ಉಚಿತವಾಗಿ ಮಂಜೂರು ಮಾಡಲು ಸೂಕ್ತ ನಿರ್ಣಯ ಕೈಗೊಳ್ಳಬಹುದು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ದೀಪ ಚೋಳನ್ ಅವರು ಎರಡು ಆಯ್ಕೆ ನೀಡಿರುವುದು ತಿಳಿದು ಬಂದಿದೆ.