ಬೆಂಗಳೂರು; ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ದಿ ಮಂಡಳಿಯು ಇರಿಸಿದ್ದ 12 ಕೋಟಿ ರು.ಗಳನ್ನು ವಾಪಸ್ ಪಡೆಯುವಲ್ಲಿ ಸರ್ಕಾರವು ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ.
ಸರ್ಕಾರವು ಇದೀಗ ಬೇರೆ ದಾರಿಯಿಲ್ಲದೇ ಈ ಬ್ಯಾಂಕ್‌ಗಳಲ್ಲಿ ವಿವಿಧ ನಿಗಮಗಳು, ಮಂಡಳಿಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳು ಇರಿಸಿರುವ ಕೋಟ್ಯಂತರ ರುಪಾಯಿ ನಿಶ್ಚಿತ ಠೇವಣಿಗಳನ್ನು ತಕ್ಷಣವೇ ಹಿಂದಕ್ಕೆ ಪಡೆಯಲು ನಿರ್ದೇಶಿಸಿದೆ.
ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್ ಅವರು 2024ರ ಆಗಸ್ಟ್ 12ರಂದು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು, ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆಗಳನ್ನು ಮುಕ್ತಾಯಗೊಳಿಸಬೇಕು. ಮತ್ತು ಠೇವಣಿಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯಬೇಕು. ಹಾಗೂ ಇನ್ನು ಮುಂದೆ ಈ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಠೇವಣಿಗಳ ಹೂಡಿಕೆಗಳನ್ನು ಮಾಡಬಾರದು,’ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ.
ಸುತ್ತೋಲೆಯಲ್ಲೇನಿದೆ?
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯು ಬೆಂಗಳುರಿನ ರಾಜಾಜಿನಗರದದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಒಂದು ವರ್ಷ ಅವಧಿಯ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಲು 2011ರ ಸೆ.14ರಲ್ಲಿ ಚೆಕ್ ಮೂಲಕ 25 ಕೋಟಿ ರು.ಗಳನ್ನು ಪಾವತಿಸಿತ್ತು. ಇದಕ್ಕೆ ಪ್ರತಿಯಾಗಿ ಇದೇ ಬ್ಯಾಂಕ್‌ನ ಮತ್ತೊಂದು ಶಾಖೆಯಾದ ಸೇಲಂನಲ್ಲಿರುವ ಶಂಕ್ರೀ ಬ್ಯಾಂಕ್ ನಿಂದ 12 ಕೋಟಿ ರು.ಗಳ ಒಂದು ನಿಶ್ಚಿತ ಠೇವಣಿಯ ರಸೀತಿಯನ್ನು ಮತ್ತು 13 ಕೋಟಿ ರು.ಗಳ ಇನ್ನೊಂದು ರಸೀತಿಯನ್ನು ನೀಡಿದ್ದರು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಅವಧಿ ಮುಕ್ತಾಯವಾದ ನಂತರ 13 ಕೋಟಿ ರು.ಗಳ ಠೇವಣಿ ನಗದೀಕರಣವಾಯಿತು. ಆದರೆ ಎರಡನೇ ಠೇವಣಿ ಖಾತೆಗೆ ಸಂಬಂಧಪಟ್ಟಂತೆ ಬ್ಯಾಂಕ್ ಅಧಿಕಾರಿಗಳಿಂದ ನಡೆದಿದೆ ಎನ್ನಲಾದ ವಂಚನೆ ಪ್ರಕರಣದ ಕಾರಣದಿಂದಾಗಿ ಈ ಹಣವನ್ನು ಬ್ಯಾಂಕ್ ಇದುವರೆಗೂ ಪಾವತಿಸಿಲ್ಲ. ಈ ವಿಷಯದ ಬಗ್ಗೆ ಬ್ಯಾಂಕ್ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ಮತ್ತು ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಈ ಪ್ರಕರಣವು ನ್ಯಾಯಾಲಯಗಳಲ್ಲಿ 10 ವರ್ಷಗಳಿಂದಲೂ ವಿಚಾರಣೆ ಹಂತದಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.
ಇದೇ ರೀತಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಬೆಂಗಳೂರಿನ ಅವಿನ್ಯೂ ರಸ್ತೆಯಲ್ಲಿರುವ ಆಗಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಲ್ಲಿ 2013ರಲ್ಲಿ 10 ಕೋಟಿ ರು.ಗಳನ್ನು ನಿಶ್ಚಿತ ಠೇವಣಿಯಲ್ಲಿ ಹೂಡಿದ್ದರು.
ಅವಧಿ ಮುಕ್ತಾಯವಾಗುವುದಕ್ಕಿಂತ ಮೊದಲೇ ಬ್ಯಾಂಕ್ ಅಧಿಕಾರಿಗಳಿಂದ ಠೇವಣಿಗೆ ಸಂಬಂಧಪಟ್ಟ ಹಣವನ್ನು ನಕಲಿ ದಾಖಲೆಗಳ ಆಧಾರದ ಮೇಲೆ ಒಂದು ಖಾಸಗಿ ಕಂಪನಿಯ ಸಾಲಕ್ಕೆ ಹೊಂದಾಣಿಕೆ ಮಾಡಲಾಗಿತ್ತು. ಈ ವಂಚನೆಯ ಪ್ರಕರಣದಲ್ಲೂ ಬ್ಯಾಂಕ್‌ನವರ ಜೊತೆ ಪತ್ರ ವ್ಯವಹಾರ ಮತ್ತು ಸಭೆಗಳನ್ನು ನಡೆಸಿದರೂ ಸಹಾ ಹಣವನ್ನು ಮರು ಪಾವತಿಸಲು ಬ್ಯಾಂಕ್‌ನವರು ಒಪ್ಪಲಿಲ್ಲ. ಈ ಪ್ರಕರಣವೂ ಸಹ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಈ ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ಮಹಾಲೆಕ್ಕಪರಿಶೋಧಕರ ವರದಿಯಲ್ಲಿ ತೀವ್ರವಾದ ಆಕ್ಷೆಪಗಳು ಸೇರ್ಪಡೆಯಾಗಿದ್ದವು. ಈ ವಿಷಯಕ್ಕೆ ಸಂಬಂಧಪಟ್ಟ ಲೆಕ್ಕ ಪರಿಶೋಧನಾ ವರದಿಗಳ ಕಂಡಿಕೆಗಳ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಅನೇಕ ಬಾರಿ ಚರ್ಚಿಸಲಾಗಿತ್ತು.
ಈ ಎರಡೂ ಬ್ಯಾಂಕ್‌ಗಳ ಎಲ್ಲಾ ಶಾಖೆಗಳಲ್ಲೂ ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ಮತ್ತಿತರ ಸಂಸ್ಥೆಗಳು ಮಾಡಿರುವ ಎಲ್ಲಾ ರೀತಿಯ ಠೇವಣಿಗಳನ್ನು, ಹೂಡಿಕೆಗಳನ್ನು ಹಿಂದಕ್ಕೆ ಪಡೆಯಬೇಕು. ಹಾಗೂ ಇನ್ನು ಮುಂದೆ ಸದರಿ ಬ್ಯಾಂಕ್‌ಗಳಲ್ಲಿ ಯಾವುದೇ ರೀತಿಯ ಠೇವಣಿಗಳನ್ನು, ಹೂಡಿಕೆಗಳನ್ನು ನಿರ್ಬಂಧಿಸುವಂತೆ ಸಮಿತಿಯ ಸಭಾ ನಡವಳಿಗಳಲ್ಲಿ ದಾಖಲಿಸಲಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.