ಇ-ಸಾಕ್ಷಿ, ಲಾಗಿನ್‌ ಐಡಿ ದುರ್ಬಳಕೆ; ಗುತ್ತಿಗೆದಾರರಲ್ಲದವರಿಗೆ ಅಕ್ರಮವಾಗಿ ಲಕ್ಷಾಂತರ ರು. ವರ್ಗಾವಣೆ

ಬೆಂಗಳೂರು; ರಸ್ತೆ, ಒಳಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಯನ್ನು ನಡೆಸಿದ ಗುತ್ತಿಗೆದಾರರ ಬದಲಾಗಿ ಖಾಸಗಿ ವ್ಯಕ್ತಿಗಳ ಖಾತೆಗೆ ಆರ್‍‌ಟಿಜಿಎಸ್‌ ಮೂಲಕ ಕೋಟ್ಯಂತರ ರುಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ.

 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಈ ಪ್ರಕರಣಗಳು ನಡೆದಿವೆ. ವಿಶೇಷವೆಂದರೇ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿರುವ ವರ್ಷದಲ್ಲೇ ಇ-ಸಾಕ್ಷಿ ತಂತ್ರಾಂಶ ಲಾಗಿನ್‌ ಐಡಿ ದುರ್ಬಳಕೆ ಮಾಡಿ ಕೋಟ್ಯಂತರ ರುಪಾಯಿ ಲೂಟಿ ಮಾಡಲಾಗಿದೆ.

 

ಕಾಮಗಾರಿಗಳಿಗೆ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದರೂ ಅದೇ ಗುತ್ತಿಗೆದಾರರು ಅನುದಾನ ಬಿಡುಗಡೆ ಮಾಡಬೇಕು ಎಂದು ಪದೇ ಪದೇ ಜಿಲ್ಲಾಧಿಕಾರಿಗಳಿಗೆ ಕೋರಿಕೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಯಾವ ಭಯವೂ ಇಲ್ಲದೇ ನೇರವಾಗಿ ಇ-ಸಾಕ್ಷಿ ತಂತ್ರಾಂಶ ಮತ್ತು ಅದರ ಲಾಗಿನ್‌ ಐಡಿ ದುರ್ಬಳಕೆ ಮಾಡಿಕೊಂಡು ಸರ್ಕಾರದ ಹಣಕ್ಕೇ ಕನ್ನ ಹಾಕುತ್ತಿದ್ದಾರೆ.

 

ಅನಧಿಕೃತವಾಗಿ ಹಣ ವರ್ಗಾವಣೆ ಮಾಡುವ ಉದ್ದೇಶದಿಂದಲೇ ಬೇರೆ ಯಾವುದೋ ಮೊಬೈಲ್‌ ಸಂಖ್ಯೆಯನ್ನು ನೀಡಿ ಸುಳ್ಳು ದಾಖಲೆಗಳನ್ನು ಅಪ್ಲೋಡ್‌ ಮಾಡಲಾಗುತ್ತಿದೆ. ಯೋಜನೆಗೆ ಸಂಬಂಧಿಸಿದ ಸರ್ಕಾರದ ಹಣವನ್ನು ವೈಯಕ್ತಿಕ ಖಾತೆಗೆ ಅನಧಿಕೃತವಾಗಿ ವರ್ಗಾವಣೆ ಮಾಡಿಕೊಳ್ಳಲಾಗುತ್ತಿದೆ. ಆದರೂ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ  ಅವರು ಈ ಬಗ್ಗೆ ಗಮನವನ್ನೇ ಹರಿಸಿಲ್ಲ ಎಂದು ತಿಳಿದು ಬಂದಿದೆ.

 

ಇದಕ್ಕೆ ಯಾದಗಿರಿಯ ಜಿಲ್ಲೆಯಲ್ಲಿರುವ ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ವಿಭಾಗದಲ್ಲಿ ಎಂಪಿ ಲ್ಯಾಡ್‌ ಅನುದಾನ ದುರ್ಬಳಕೆ ಆಗಿರುವುದೇ ಸ್ಪಷ್ಟ ನಿದರ್ಶನ. ಯಾದಗಿರಿ ಪ್ರಕರಣ ಕುರಿತು ಜಿಲ್ಲಾಧಿಕಾರಿ 2024ರ ಆಗಸ್ಟ್‌ 1ರಂದು 5 ಪುಟಗಳ ವರದಿಯನ್ನು ಯೋಜನಾ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2023-24 ಮತ್ತು 2024-25ನೇ ಸಾಲಿನಲ್ಲಿ ಯಾದಗಿರಿ ಜಿಲ್ಲಾಧಿಕಾರಿಗಳ ಕಾರ್ಯವ್ಯಾಪ್ತಿಯಲ್ಲಿ ಎಂಪಿ ಲ್ಯಾಡ್‌ ಅನುದಾನಕ್ಕೆ ಸಂಬಂಧಿಸಿದಂತೆ ಮೊದಲನೇ ಅಂತಿಮ ಕಂತಿನ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಸಂಬಂಧ ಇ-ಸಾಕ್ಷಿ ತಂತ್ರಾಂಶ (https;//mplads.sbi/) ಪರಿಶೀಲನೆ ಮಾಡಲಾಗಿತ್ತು.

 

 

ಈ ವೇಳೆಯಲ್ಲಿ ಅನುಷ್ಠಾನಾಧಿಕಾರಿಯು ಇಲಾಖೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ 2023-24ರ ಅರ್ಥಿಕ ವರ್ಷದಲ್ಲಿ 9 ಕಾಮಗಾರಿಗಳಿಗೆ ಮತ್ತು 2024-25ನೇ ಸಾಲಿನಲ್ಲಿ 93 ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಆಗಿತ್ತು. ಆದರೆ ಬ್ಯಾಂಕ್‌ ಅಕೌಂಟ್‌ ಲಾಕ್‌ ಆಗಿತ್ತು ಎಂಬುದು ಜಿಲ್ಲಾಧಿಕಾರಿ ವರದಿಯಿಂದ ಗೊತ್ತಾಗಿದೆ.

 

‘ಈಗಾಗಲೇ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದ್ದರೂ ಸಹ ಕೆಲವು ಕಾಮಗಾರಿ ಮಾಡಿದ ಗುತ್ತಿಗೆದಾರರು ಪದೇ ಪದೇ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಮೌಖಿಕವಾಗಿ ಕೋರಿದ್ದರು. ಹೀಗಾಗಿ ಕಾಮಗಾರಿಗಳ ಅನುದಾನ ಬಿಡುಗಡೆ ಮಾಡಿದ ಇ-ಸಾಕ್ಷಿ ತಂತ್ರಾಂಶ ಪರಿಶೀಲನೆ ಮಾಡಿದಾಗ ಕಾಮಗಾರಿಯನ್ನು ನಡೆಸಿದ ಗುತ್ತಿಗೆದಾರರ ಬದಲಾಗಿ ಬೇರೆಯವರ ಖಾತೆಗೆ ಜಮಾ ಮಾಡಿರುವುದು ಕಂಡುಬಂದಿರುತ್ತದೆ,’ ಎಂದು ಜಿಲ್ಲಾಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು 14 ಕಾಮಗಾರಿಗಳ ಪಟ್ಟಿಯನ್ನೂ ಒದಗಿಸಿದ್ದಾರೆ.

 

ಒಟ್ಟು 14 ಕಾಮಗಾರಿಗಳನ್ನು ನಡೆಸಿದ್ದ ಗುತ್ತಿಗೆದಾರರಿಗೆ ಒಟ್ಟು 64,74,00 ರು. ಪಾವತಿಸಬೇಕಿತ್ತು. ಆದರೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಬದಲಾಗಿ ಶಾಂತಯ್ಯ ಎಂಬುವರ ಖಾತೆಗೆ ಜಮಾ ಮಾಡಲಾಗಿತ್ತು.

 

ಈ ಎಲ್ಲಾ ಅನುದಾನಗಳನ್ನು ಯಾದಗಿರಿ ಜಿಲ್ಲೆಯ ಪಂಚಾಯತ್‌ರಾಜ್‌ ಇಂಜನಿಯರಿಂಗ್‌ ವಿಭಾಗದ ತಾಂತ್ರಿಕ ಸಹಾಯಕ ವಿನಯಕುಮಾರ್‍‌, ಲೆಕ್ಕ ಪರಿಶೋಧನಾಕಾರಿಯಾದ ಪುಷ್ಪವತಿ, ಕಾರ್ಯನಿರ್ವಾಹಕ ಇಂಜಿನಿಯರ್‍‌ ಪ್ರಕಾಶ್‌ ಅವರು ಇ-ಸಾಕ್ಷಿ ತಂತ್ರಾಂಶದಲ್ಲಿ ಅನುದಾನ ಬಿಡುಗಡೆಗೆ ಅನುಮೋದನೆ ನೀಡಿದ್ದರು. ಇವರೆಲ್ಲರಿಗೂ ನೋಟೀಸ್‌ ಜಾರಿ ಮಾಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಆಪಾದಿತ ಅಧಿಕಾರಿಗಳ ವಿರುದ್ಧ 2024ರ ಜುಲೈ 26ರಂದು ಎಫ್‌ಐಆರ್‍‌ ಕೂಡ ದಾಖಲಾಗಿತ್ತು. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಲಾಗಿನ್‌ ಐಡಿ ತಯಾರಿಸಲು ಇ-ಮೇಲ್‌ ಐಡಿ, ಮೊಬೈಲ್‌ ಸಂಖ್ಯೆಗಳನ್ನು ಬದಲಾಯಿಸಿ ಒಟಿಪಿ ಹಾಗೂ ತಂತ್ರಾಂಶದಲ್ಲಿ ಪ್ರತೀ ಹಂತದ ಬಳಕೆ ಬಗ್ಗೆ ಯಾವುದೇ ಮಾಹಿತಿಯನ್ನೂ ಲಭ್ಯವಾಗದಂತೆ ನೋಡಿಕೊಂಡಿದ್ದಾರೆ. ಬೇರೆ ಯಾವುದೋ ಮೊಬೈಲ್‌ ಸಂಖ್ಯೆಯನ್ನು ನೀಡಿ ಸುಳ್ಳು ದಾಖಲೆಗಳನ್ನು ಅಪ್ಲೋಡ್‌ ಮಾಡಿ ಯೋಜನೆಗೆ ಸಂಬಂಧಿಸಿದ ಸರ್ಕಾರದ ಹಣವನ್ನು ವೈಯಕ್ತಿಕ ಖಾತೆಗೆ ಅನಧಿಕೃತವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಇದು ಸರ್ಕಾರಕ್ಕೆ ಮತ್ತು ಇಲಾಖೆಗೆ ಮಾಡಿರುವ ಮೋಸ,’ ಎಂದು ಎಫ್‌ಐಆರ್‍‌ನಲ್ಲಿಯೂ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಜಿಲ್ಲಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ಶಾಂತಯ್ಯ ಸ್ವಾಮಿ ಎಂಬುವರು (ಖಾತೆ ಸಂಖ್ಯೆ 621879494453 ಐಎಫ್‌ಎಸ್‌ಸಿ ಕೋಡ್‌ SBIN0021630) ಶಾಂತಮ್ಮ ಎಂಬುವರ ಖಾತೆಗೆ 50,00,000 ರು.ಗಳನ್ನು ವರ್ಗಾವಣೆ ಮಾಡಿದ್ದರು. ಈ ಹಣದಲ್ಲಿ 6,16,175 ರು.ಗಳನ್ನು ವೈಯಕ್ತಿಕವಾಗಿ ಬಳಸಿಕೊಂಡಿದ್ದರು. ಬಾಕಿ ಉಳಿದ 43,83,825 ರು.ಗಳನ್ನು ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗದ ಖಾತೆಗೆ ವರ್ಗಾವಣೆ ಮಾಡಲು ಶಾಂತಮ್ಮ ಅವರು ಒಪ್ಪಿಕೊಂಡಿದ್ದರು ಎಂದು ಜಿಲ್ಲಾಧಿಕಾರಿಗಳ ವರದಿಯಲ್ಲಿ ವಿವರಿಸಲಾಗಿದೆ.

 

ಇ-ಸಾಕ್ಷಿ ತಂತ್ರಾಂಶ, ಲಾಗಿನ್‌ ಐಡಿ ದುರ್ಬಳಕೆ

 

ಎಂಪಿ ಲ್ಯಾಡ್‌ ಯೋಜನೆಯ ಕಾಮಗಾರಿಗಳ ಕ್ರಿಯಾ ಯೋಜನೆಯಿಂದ ಅನುದಾನ ಪಾವತಿವರೆಗೆ ಎಲ್ಲಾ ಹಂತದ ಮಾಹಿತಿಯನ್ನು ಸಾಫ್ಟ್‌ವೇರ್‍‌ನಲ್ಲಿ ಅಳವಡಿಸಲು ತಾಂತ್ರಿಕ ಸಹಾಯಕ, ಲೆಕ್ಕಾಧೀಕ್ಷಕ, ಎಕ್ಸಿಕ್ಯೂಟಿವ್‌ ಇಂಜಿನಿಯರ್‍‌ಗಳ ಲಾಗಿನ್‌ ಐಡಿ ಸೃಜಿಸಲಾಗಿರುತ್ತದೆ.

 

ಇ-ಸಾಕ್ಷಿ ಪೋರ್ಟಲ್‌ನಲ್ಲಿ ಎಲ್ಲಾ ವಿವರಗಳನ್ನು ಅಪ್ಲೋಡ್‌ ಮಾಡಬೇಕು. ವಿವರಗಳನ್ನು ಅಳವಡಿಸಿದ್ದರೇ ಕಾಮಗಾರಿಯ ಪ್ರತೀ ಹಂತದಲ್ಲೂ ಸಂಬಂಧಿಸಿದ ಅಧಿಕಾರಿಗಳಿಗೆ ಒಟಿಪಿ ಸ್ವೀಕೃತವಾಗಲಿದೆ. ಆದರೆ ಈ ಪ್ರಕರಣದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಯಾವುದೇ ಒಟಿಪಿ ಸ್ವೀಕೃತವಾಗಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts