ಫಾರಂ-1 ನೋಂದಣಿಗೆ 50,000 ರು ಲಂಚಕ್ಕೆ ಬೇಡಿಕೆ; ಸಬ್‌ ರಿಜಿಸ್ಟ್ರಾರ್‍‌ ಕಚೇರಿಯಲ್ಲಿ ಲಂಚಾವತಾರ

ಬೆಂಗಳೂರು; ಬೆಳಗಾವಿ ಉತ್ತರ ಸಬ್‌ ರಿಜಿಸ್ಟ್ರಾರ್‍‌ ಕಚೇರಿಯಲ್ಲಿ  ದಾಖಲೆಗಳನ್ನು ನೋಂದಣಿ  ಮಾಡಿಸಲು ದೊಡ್ಡ ಮೊತ್ತಕ್ಕೆ ಬೇಡಿಕೆ ಇರಿಸಲಾಗುತ್ತಿದೆ. ಅದರಲ್ಲೂ ಫಾರಂ-1ನ್ನು ನೋಂದಣಿ ಮಾಡಿಸಲು 50,000 ರು.ಗಳಿಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.

 

ಈ ಸಂಬಂಧ ಬೆಳಗಾವಿ ವಕೀಲ ಬಾಲಗೌಡ ಬಸಗೌಡ ಪಾಟೀಲ್‌ ಎಂಬುವರು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರೊಂದನ್ನು ಸಲ್ಲಿಸಿದ್ದಾರೆ. 2024ರ ಮೇ 14ರಂದು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಾರುಕಟ್ಟೆ ಮೌಲ್ಯಕ್ಕನುಗುಣವಾಗಿ ನೋಂದಣಿ ಮತ್ತು  ಮುದ್ರಾಂಕ ಶುಲ್ಕಗಳನ್ನು ಆಕರಿಸದೇ  ಅಪಮೌಲ್ಯಗೊಳಿಸುತ್ತಿರುವ  ಪ್ರಕರಣಗಳು ಮತ್ತು  ಸಬ್‌ ರಿಜಿಸ್ಟ್ರಾರ್‍‌ಗಳ ಕಚೇರಿಗಳಲ್ಲಿನ ಅಧಿಕಾರಿ, ಸಿಬ್ಬಂದಿಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದೆ ಎಂಬ ಆಪಾದನೆಗಳು ಕೇಳಿ ಬರುತ್ತಿರುವ ನಡುವೆಯೇ ಬೆಳಗಾವಿ ಉತ್ತರ ಸಬ್‌ ರಿಜಿಸ್ಟ್ರಾರ್‍‌ ಕಚೇರಿಯಲ್ಲಿ ದಾಖಲೆಗಳ ನೋಂದಣಿಗೆ  ಅಧಿಕಾರಿ, ನೌಕರರು ದೊಡ್ಡ ಮೊತ್ತಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ದೂರು ಮುನ್ನೆಲೆಗೆ ಬಂದಿದೆ.

 

ಅಲ್ಲದೇ ಸಬ್‌ ರಿಜಿಸ್ಟ್ರಾರ್‍‌ ಕಚೇರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ದಿಢೀರ್‍‌ ತಪಾಸಣೆ ಮಾಡುತ್ತಿದ್ದರೂ ಸಹ ಲಂಚ, ಹಣಕ್ಕೆ ಬೇಡಿಕೆ ಇರಿಸುತ್ತಿರುವ ಪ್ರಕರಣಗಳು ಪುನರಾವರ್ತನೆ ಆಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

 

ದೂರಿನಲ್ಲೇನಿದೆ?

 

ಬೆಳಗಾವಿ ಉತ್ತರ ಸಬ್‌ ರಿಜಿಸ್ಟ್ರಾರ್‍‌ ಕಚೇರಿಯ ಪ್ರಥಮದರ್ಜೆ ಸಹಾಯಕ ಶಿವಕುಮಾರ್‍‌ ಎಂಬುವರು ಸಾರ್ವಜನಿಕವಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ. ಮತ್ತು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

 

‘ಸಬ್‌ ರಿಜಿಸ್ಟ್ರಾರ್‍‌ ಕಚೇರಿಗೆ ದಾಖಲೆಗಳ ನೋಂದಣಿಗೆ  ಬರುವವರಲ್ಲಿನ  ಅಮಾಯಕತೆ  ಮತ್ತು ಮುಗ್ದತೆಯನ್ನು  ಶಿವಕುಮಾರ್‍‌ ಎಂಬಾತ ಬಳಸಿಕೊಳ್ಳುತ್ತಿದ್ದಾನೆ.  ನೇರವಾಗಿ ವ್ಯವಹಾರ ಕುದುರಿಸುತ್ತಿರುವ ಶಿವಕುಮಾರ್‍‌ ಎಂಬಾತ ಬ್ಲಾಕ್‌ಮೇಲ್‌ ಕೂಡ ಮಾಡುತ್ತಿದ್ದಾನೆ. ಶೈಕ್ಷಣಿಕ ಸಾಲಕ್ಕೆ ಸಂಬಂಧಿಸಿದಂತೆ ಠೇವಣಿಯ ಟೈಟಲ್‌ ಡೀಡ್‌ ಮಾಡಿಸುವಲ್ಲಿ (NO.BEL-1-1523-2024-25 DATED 04/05/2024) ನೋಂದಣಿ ಶುಲ್ಕವೆಂದು 200 ರು ಮತ್ತು ಅಫಡವಿಟ್‌ಗೆಂದು 100 ರುಗ.ಳನ್ನು ಅನಗತ್ಯವಾಗಿ ಪಡೆಯುತ್ತಿದ್ದಾನೆ. ನೋಂದಣಿ ಕಾಯ್ದೆ ಪ್ರಕಾರ ಟೈಟಲ್ ಡೀಡ್‌ ಠೇವಣಿ ಮಾಡಿಸಲು ಇಂತಹ ಯಾವುದೇ ಶುಲ್ಕಗಳಿಗೆ ಅವಕಾಶವಿಲ್ಲ,’ ಎಂದು ದೂರುದಾರ ವಕೀಲ ಬಾಲಗೌಡ ಬಸಗೌಡ ಪಾಟೀಲ್‌ ಎಂಬುವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ದಾಖಲೆಗಳ ನೋಂದಣಿಗಾಗಿ ಶಿವಕುಮಾರ್‍‌ ಆರಂಭದಲ್ಲೇ 5,000 ರು.ಗಳಿಗೆ ಬೇಡಿಕೆ ಇರಿಸುತ್ತಿದ್ದಾರೆ. ಮಾರಾಟ ಪತ್ರದಲ್ಲಿ ಮೌಲ್ಯವನ್ನು ಕಡಿಮೆಗೊಳಿಸುವುದು, ನಿಗದಿಪಡಿಸಿರುವ  ನೋಂದಣಿ ಶುಲ್ಕವನ್ನು ಮೀರಿ ಸಂಗ್ರಹಿಸಲು ತಮಗೆ ಅಧಿಕಾರ ಇದೆ ಎಂದು ಹೇಳಿಕೊಳ್ಳುತ್ತಾರೆ. ಅಲ್ಲದೇ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಿನ ಶುಲ್ಕವನ್ನು ವಸೂಲು ಮಾಡುತ್ತಿದ್ದಾರೆ. ನೋಂದಣಿ ಶುಲ್ಕದಲ್ಲಿ ಪಾಲುದಾರಿಕೆ ಪಡೆಯುತ್ತಿದ್ದಾರೆ ಎಂದೂ ವಿವರಿಸಿರುವುದು ದೂರಿನಿಂದ ಗೊತ್ತಾಗಿದೆ.

 

‘ಹೀಗಾಗಿ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಮ್ಮ ಗಮನಕ್ಕೆ ತರಲಾಗುತ್ತಿದೆ. ಕಚೇರಿಯ ಪ್ರಥಮದರ್ಜೆ ಗುಮಾಸ್ತರು ಕಾನೂನುಬಾಹಿರ ಮತ್ತು ತಪ್ಪು ಮಾಹಿತಿ ನೀಡುವುದು, ದಾಖಲೆಗಳ ನೋಂದಣಿಗೆ ಬ್ಲಾಕ್‌ಮೇಲ್‌ ಮಾಡುತ್ತಿರುವ ಸಂಗತಿಯನ್ನು ತಮ್ಮ ಗಮನಕ್ಕೆ ತರಲಾಗುತ್ತಿದೆ,’ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ವಿಶೇಷವಾಗಿ ಫಾರಂ ನಂ-1 (Un-assessed Corporation Extract)ನ್ನು ನೋಂದಣಿ ಮಾಡಲು 50,000 ರು.ಗೆ ಬೇಡಿಕೆ ಇರಿಸುತ್ತಿದ್ದಾರೆ. ಇದಕ್ಕೆ ಸಹಕರಿಸದೇ ಇದ್ದರೆ ಈ ದಾಖಲೆಯನ್ನು ನೋಂದಣಿ ಮಾಡಲು ವಿಳಂಬ ಮಾಡುತ್ತಿದ್ದಾರೆ. ನಂತರ ಮಾರಾಟದಾರರಿಗೆ  ಬ್ಲಾಕ್‌ಮೇಲ್‌ ಮಾಡುವುದು ಸಹ ನಡೆದಿದೆ ಎಂದೂ ದೂರಿನಲ್ಲಿ ಹೇಳಿರುವುದು ಗೊತ್ತಾಗಿದೆ.

 

‘ಬೆಳಗಾವಿಯ ಸಬ್‌ ರಿಜಿಸ್ಟ್ರಾರ್‍‌ ಕಚೇರಿಯು ಜನಸ್ನೇಹಿಯನ್ನಾಗಿಸಬೇಕು. ಅಧಿಕಾರಿ, ಸಿಬ್ಬಂದಿಗಳ ವರ್ತನೆಯಿಂದಾಗಿ ನಾಗರೀಕರಿಗೆ ತೊಂದರೆಯಾಗುತ್ತಿದೆ ವಿಶೇಷವಾಗಿ ಸೇಲ್‌ ಡೀಡ್‌ ಸೇರಿದಂತೆ ಮತ್ತಿತರೆ ದಾಖಲೆಗಳ ನೋಂದಣಿಗಾಗಿ ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಇಡಲಾಗುತ್ತಿರುವುದನ್ನು ತಪ್ಪಿಸಬೇಕು. ಅಲ್ಲದೇ ವಾಸ್ತವಿಕವಾಗಿ ಸರ್ಕಾರಕ್ಕೆ ಬರಬೇಕಿದ್ದ ನೋಂದಣಿ ಶುಲ್ಕದ ಸಂಗ್ರಹಣೆಯಲ್ಲಿಯೂ ಕಡಿತ ಮಾಡಲಾಗುತ್ತಿದೆ. ಈ ಎಲ್ಲವನ್ನೂ ಗಮನಿಸಿ ಸಂಬಂಧಿಸಿದ ನೌಕರನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು,’ ಎಂದು ವಕೀಲ ಬಾಲಗೌಡ ಬಸಗೌಡ ಪಾಟೀಲ್‌ ಅವರು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts