ಸಿಎಂ ಪತ್ನಿಗೆ ಬದಲಿ ನಿವೇಶನ; ತಹಶೀಲ್ದಾರ್‍‌ ವರದಿಯಲ್ಲಿ ಉಲ್ಲೇಖವಾಗದ ಉದ್ಯಾನ, ರಸ್ತೆ ವಿವರ

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೂಡಾ ಹಂಚಿಕೆ ಮಾಡಿರುವ ಬದಲಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ದಾಖಲೆ, ಪುರಾವೆಗಳು ಮುನ್ನೆಲೆಗೆ ಬಂದಿವೆ.  ಭೂ ಸ್ವಾಧೀನದಿಂದ ಕೈಬಿಟ್ಟಿರುವ ಮೂಲ ಜಮೀನಿಗೆ ಸಂಬಂಧಿಸಿದಂತೆ  ಸ್ನೇಹಮಯಿಕೃಷ್ಣ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ದಾಖಲೆಗಳನ್ನು  ಬಹಿರಂಗಪಡಿಸಿದ್ದಾರೆ.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿನ ವಿವರ  ಮತ್ತು ತಹಶೀಲ್ದಾರ್‍‌ ಅವರು ನೀಡಿರುವ ವರದಿಗಳಲ್ಲೇ ವ್ಯತ್ಯಾಸಗಳು ಕಂಡು ಬಂದಿವೆ. ಈ ಕುರಿತು ವರದಿ ಮತ್ತು ದಾಖಲೆಗಳನ್ನು ಹಂಚಿಕೊಂಡಿರುವ ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವ ಹೇಗೆ ಕೆಲಸ ಮಾಡಿದೆ ಎಂಬುದನ್ನೂ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.

 

ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ಮತ್ತಿತರರ ವಿರುದ್ಧ ಎನ್‌ ಆರ್‍‌ ರಮೇಶ್‌ ಅವರು ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವ ಬೆನ್ನಲ್ಲೇ ಕೃಷ್ಣ ಅವರು ಬಹಿರಂಗಪಡಿಸಿರುವ  ಮತ್ತಷ್ಟು ಸಾಕ್ಷ್ಯ, ಪುರಾವೆಗಳು ಮುನ್ನೆಲೆಗೆ ಬಂದಿವೆ.

 

ಕೃಷ್ಣ ಬರೆದಿರುವುದಲ್ಲೇನಿದೆ?

 

ವಾರ್ತಾ ಇಲಾಖೆಯಿಂದ ನೀಡಿರುವ ಮಾಹಿತಿ ಪ್ರಕಾರ 1998ರ ಮೇ 18ರಂದು ಭೂ ಸ್ವಾಧೀನದಿಂದ ಕೈಬಿಡಲಾಗಿದೆ. ಅಧಿಸೂಚನೆಯಿಂದ ರದ್ದುಪಡಿಸುವ ಪೂರ್ವದಲ್ಲಿ ಉದ್ಯಾನ, ರಸ್ತೆ, ನಿವೇಶನಗಳನ್ನು ರಚನೆ ಮಾಡಲಾಗಿದೆ.

 

 

2005ರ ಮಾರ್ಚ್‌ 5ರಂದು ತಹಶೀಲ್ದಾರ್‍‌ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅವರು ನೀಡಿರುವ ವರದಿಯಲ್ಲಿ ರಸ್ತೆ, ಉದ್ಯಾನ, ನಿವೇಶನದ ಉಲ್ಲೇಖ ಇರುವುದಿಲ್ಲ ಎಂದು ವಿವರಿಸಿದ್ದಾರೆ.

 

‘ವಾರ್ತಾ ಇಲಾಖೆಯ ಪ್ರಕಾರ ಜಮೀನಿನಲ್ಲಿ ಉದ್ಯಾನ, ರಸ್ತೆ, ನಿವೇಶನಗಳು ಇವೆ. ತಹಶೀಲ್ದಾರ್‍‌ ವರದಿಯಲ್ಲಿ ರಸ್ತೆ, ಉದ್ಯಾನ, ನಿವೇಶನಗಳು ಇಲ್ಲ. ರಸ್ತೆ, ಉದ್ಯಾನ, ನಿವೇಶನಗಳು ಕಳೆದು ಹೋಗಿರುವ ಬಗ್ಗೆ ತನಿಖೆ ಮಾಡಲು ಯಾರನ್ನು ನೇಮಿಸಬೇಕು ಎಂದು ನನ್ನ ವಿರುದ್ಧ ದೂರು ನೀಡಿರುವ ಕಾಂಗ್ರೆಸ್‌ ಮುಖಂಡರು ಉತ್ತರ ನೀಡಬೇಕಲ್ಲವೇ,’ ಎಂದೂ ಪ್ರಶ್ನಿಸಿದ್ದಾರೆ.

 

ಕರಾರು ಪತ್ರದ ಬಗ್ಗೆಯೂ ಅನುಮಾನ

 

ಇದೇ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಮಯಿ ಕೃಷ್ಣ ಅವರು ಕರಾರು ಪತ್ರ ಸೇರಿದಂತೆ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. 2005ರ ಜುಲೈ 15 ರ ಜಿಲ್ಲಾಧಿಕಾರಿಗಳ ಆದೇಶದ ಮೊದಲ ಪುಟದ ಕೊನೆಯ ಪ್ಯಾರಾದಲ್ಲಿ ಕರಾರು ಪತ್ರವನ್ನು ಹಾಜರು ಪಡಿಸಿರುತ್ತಾರೆ ಎಂಬ ಉಲ್ಲೇಖವಿದೆ.

 

ಆದರೆ ಛಾಪಾ ಕಾಗದವನ್ನು 2005ರ ಜುಲೈ 22ರಂದು ಖರೀದಿ ಮಾಡಿದ್ದಾರೆ. ಅಲ್ಲದೇ ಇದಕ್ಕೆ ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಾಕ್ಷಿದಾರರು ಸಹಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ಗೊತ್ತಾಗಿದೆ.

 

 

ಛಾಪಾ ಕಾಗದ ಖರೀದಿಸುವ ಮತ್ತು ಕರಾರು ಪತ್ರ ತಯಾರಿಸುವ ಏಳು ದಿನಗಳ ಮೊದಲೇ ಮಾಡಿರುವ ಆದೇಶದಲ್ಲಿ ಕರಾರು ಪತ್ರ ಹಾಜರುಪಡಿಸಿರುತ್ತಾರೆ ಎಂದು ಉಲ್ಲೇಖಿಸಲು ಹೇಗೆ ಸಾಧ್ಯ ಎಂದು ಸ್ನೇಹಮಯಿ ಕೃಷ್ಣ ಅವರು ಪ್ರಶ್ನಿಸಿದ್ದಾರೆ.

 

ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕ್ರಯಪತ್ರ ನೋಂದಣಿ ಮಾಡಿಕೊಟ್ಟಿರುವ ಜೆ ದೇವರಾಜು ಅವರಿಗೆ ಸಂಬಂಧಿಸಿದ ವಂಶವೃಕ್ಷವನ್ನೂ ಸಾಕ್ಷ್ಯದ ರೂಪದಲ್ಲಿ ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

‘ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿರವರಿಗೆ ಕ್ರಯಪತ್ರ. ನೊಂದಣಿ ಮಾಡಿಕೊಟ್ಟಿರುವ ಜೆ.ದೇವರಾಜುರವರಿಗೆ ಸಂಬಂಧಿಸಿದ ವಂಶವೃಕ್ಷ ಗಮನಿಸಿ. ನಿಂಗ @ ಜವರ ಸತ್ತ ಇಪ್ಪತೈದು ವರ್ಷಗಳ ನಂತರ, ಅವರ ಹೆಂಡತಿ ನಿಧನರಾಗಿದ್ದಾರೆ ಎಂಬಂತೆ ನಮೂದಿಸಿರುವುದು ತಿಳಿದುಬರುತ್ತದೆ.

 

ನಿಂಗನ ಸಂಬಂಧಿಕರು ನಿಂಗನ ಫೋಟೊ ಎಂದು ನೀಡಿರುವ ಫೋಟೊ ಗಮನಿಸಿ. ಹೆಂಡತಿಯ ಶವದ ಪಕ್ಕ ನಿಂಗ @ ಜವರ ನಿಂತಿರುವುದು ಕಂಡು ಬರುತ್ತದೆ.

 

ಇಂತಹ ಅನುಮಾನಸ್ಪದ ವಿಚಾರಗಳು ತಿಳಿದು ಬಂದಾಗ, ಯಾವುದು ಸತ್ಯ, ಯಾವುದು ಸುಳ್ಳು ಎಂದು ತಿಳಿದುಕೊಳ್ಳಲು ತನಿಖೆ ನಡೆಸುವಂತೆ ದೂರು ನೀಡುವುದು,  ಈ ಬಗ್ಗೆ ಮಾಧ್ಯಮಗಳ ಮುಂದೆ ಒತ್ತಾಯ ಮಾಡುವುದು, ಯಾವ ನಿಯಮದ ಪ್ರಕಾರ ಅಪರಾಧ ಕೃತ್ಯ ಎಂಬುದನ್ನು ತಿಳಿದವರು, ತಿಳಿಸುವರೆ ಎಂದು ಪ್ರಶ್ನಿಸಿದ್ದಾರೆ.

the fil favicon

SUPPORT THE FILE

Latest News

Related Posts