ಮಾರ್ಗಸೂಚಿ ಉಲ್ಲಂಘಿಸಿ ಬ್ಯಾಂಕ್‌ಗಳಲ್ಲಿ ಬಹುಕೋಟಿ ಹೂಡಿಕೆ, 172 ಕೋಟಿ ನಿಯಮಬಾಹಿರ ವೆಚ್ಚ

ಬೆಂಗಳೂರು; ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ರಚಿಸಿದ್ದ ಅವಧಿಯಲ್ಲಿಯೂ  ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ  ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕಾನಾಮಿಕ್ಸ್‌ ವಿಶ್ವವಿದ್ಯಾಲಯವು  ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದೆಯೇ ವಿವಿಧ ಬ್ಯಾಂಕ್‌ಗಳಲ್ಲಿ 1.00 ಕೋಟಿಗಿಂತ ಹೆಚ್ಚು ಮೊತ್ತದ 30 ಹೂಡಿಕೆಗಳನ್ನು ಮಾಡಿತ್ತು.

 

ಅಲ್ಲದೇ ನಿಶ್ಚಿತ ಠೇವಣಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರಗಳೇ ವಿಶ್ವವಿದ್ಯಾಲಯದಲ್ಲಿ  ಲಭ್ಯವಿಲ್ಲ. ಈ ಸಂಬಂಧ ಯಾವುದೇ ವಿವರಗಳನ್ನೂ ಲೆಕ್ಕ ಪರಿಶೋಧನೆಗೆ ಒದಗಿಸಿರಲಿಲ್ಲ. ಆಯವ್ಯಯದಲ್ಲಿ ಅವಕಾಶವಿಲ್ಲದಿದ್ದರೂ ಸಹ 172.27 ಕೋಟಿಯಷ್ಟು ಮೊತ್ತವನ್ನು ನಿಯಮಬಾಹಿರವಾಗಿ ವೆಚ್ಚವನ್ನು ಭರಿಸಿತ್ತು.

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಹಣಕಾಸಿನ ಅವ್ಯವಹಾವು ವಿಧಾನಮಂಡಲದಲ್ಲಿ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಸರ್ಕಾರದ ಅವಧಿಯಲ್ಲಿಯೂ ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕಾನಾಮಿಕ್ಸ್‌ ನಲ್ಲಿಯೂ ಹಣಕಾಸು ಅವ್ಯವಹಾರಗಳು ನಡೆದಿದ್ದವು ಎಂಬುದನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯು ಪತ್ತೆ ಹಚ್ಚಿದೆ.

 

ಈ ಅವಧಿಯಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದರೇ ಜಿ ಟಿ ದೇವೇಗೌಡ ಅವರು ಉನ್ನತ ಶಿಕ್ಷಣ ಇಲಾಖೆ ಸಚಿವರಾಗಿದ್ದರು.

 

2017-18ರಿಂದ 2019-20ನೇ ಸಾಲಿನ ಹಣಕಾಸಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ವರದಿಯನ್ನು 2024ರ ಜುಲೈ 19ರಂದು ವಿಧಾನಮಂಡಲಕ್ಕೆ ಮಂಡಿಸಿದೆ ಎಂದು ತಿಳಿದು ಬಂದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಾರ್ಗಸೂಚಿ ಪಾಲಿಸದೇ 30 ಹೂಡಿಕೆ

 

ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳು ಹಾಗೂ ಸ್ವಾಯತ್ತ ಸಂಸ್ಥೆಗಳು ತಮ್ಮಲ್ಲಿರುವ ಹೆಚ್ಚುವರಿ ನಿಧಿಯನ್ನು ಹೂಡಿಕೆ ಮಾಡುವಾಗ ಅಂದಿನ ಕಾಂಗ್ರೆಸ್‌ ಸರ್ಕಾರವು ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು 2018ರ ಆಗಸ್ಟ್‌ 27ರಂದು ಸುತ್ತೋಲೆ ಹೊರಡಿಸಿತ್ತು.

 

ಸುತ್ತೋಲೆ ಕ್ರಮ ಸಂಖ್ಯೆ 05ರ ಪ್ರಕಾರ ಸಂಸ್ಥೆಗಳು 1.00 ಕೋಟಿ ರು ಅಥವಾ ಅದಕ್ಕಿಂತ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡುವಾಗ ಇ-ಪ್ರೊಕ್ಯೂರ್‌ಮೆಂಟ್‌ ಪೋರ್ಟಲ್‌ ಮೂಲಕ ಸ್ಪರ್ಧಾತ್ಮಕ ದರ ಪಟ್ಟಿಗಳನ್ನು ಕರೆದು ಹೆಚ್ಚು ಬಡ್ಡಿ ಮೊತ್ತವನ್ನು ನಮೂದಿಸಿರುವ ಬ್ಯಾಂಕ್‌ಗಳ ವಿವರಗಳನ್ನು ಮಾರ್ಗಸೂಚಿಗಳ ಅನ್ವಯ ಪರಿಶೀಲಿಸಿ ನಂತರ ಹೂಡಿಕೆ ಮಾಡಬೇಕಿತ್ತು.

 

ಆದರೆ ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕಾನಾಮಿಕ್ಸ್‌ ಸಂಸ್ಥೆಯು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸದೇ 1 ಕೋಟಿಗೂ ಹೆಚ್ಚು ಮೊತ್ತದಷ್ಟು 30 ಹೂಡಿಕೆಗಳನ್ನು ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿತ್ತು ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ತಿಳಿದು ಬಂದಿದೆ.

 

48.12 ಲಕ್ಷಕ್ಕೆ ವಿವರಣೆಯೇ ಇಲ್ಲ

 

2019-20ನೇ ಸಾಲಿಗೆ ಸಂಬಂಧಿಸಿದಂತೆ ನಿಶ್ಚಿತ ಠೇವಣಿಗಳ ಮಾಸಿಕ ಬಡ್ಡಿ ವಿವರಗಳನ್ನು ಲೆಕ್ಕ ಪರಿಶೋಧನೆಯು ಪರಿಶೀಲಿಸಿದೆ. ಆದರೆ ಠೇವಣಿಗಳಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರಗಳನ್ನೇ ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಅದೇ ರೀತಿ ನಿಶ್ಚಿತ ಠೇವಣಿಗಳ ಬಡ್ಡಿಗೆ ಸಂಬಂಧಿಸಿದಂತೆ 48,12,640 ರು.ಗಳನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿದ್ದಾರೆ.

 

2019-20ನೇ ಸಾಲಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ನಮೂನೆ 26ಎಎಸ್‌ ಪ್ರಕಾರ   1,09,85,897 ರು.ಗಳ ಬಡ್ಡಿ ಜಮೆ ಮಾಡಲಾಗಿದೆ ಎಂದು ದಾಖಲಾಗಿದೆ. ಇದರಲ್ಲಿ 10,98,593 ರು.ಗಳ ತೆರಿಗೆ ಕಟಾವಣೆ ಮಾಡಲಾಗಿದೆ ಎಂದು ದಾಖಲಿಸಿತ್ತು.

 

ಆದರೆ ವಾರ್ಷಿಕ ಲೆಕ್ಕ ಪತ್ರಗಳಲ್ಲಿ 61,73,254 ರು. ಬಡ್ಡಿ ಹಾಗೂ ತೆರಿಗೆ ಕಟಾವಣೆ ,ಹಾಘೂ ನಿವ್ವಳ ಬಡ್ಡಿ ಮೊತ್ತ 50,74,664 ರು. ಎಂದೂ ದಾಖಲಿಸಲಾಗಿದೆ. ಆದರೆ ಇದರ ವ್ಯತ್ಯಾಸದ ಮೊತ್ತವಾಗಿರುವ 48,12,640 ರು.ಗಳಿಗೆ ಸಂಸ್ಥೆಯು ಯಾವುದೇ ವಿವರಣೆಯನ್ನೇ ಒದಗಿಸಿರಲಿಲ್ಲ. ಹೀಗಾಗಿ ಈ ಮೊತ್ತವನ್ನು ಲೆಕ್ಕ ಪರಿಶೋಧಕರು ಆಕ್ಷೇಪಣೆಯಲ್ಲಿರಿಸಿರುವುದು ಗೊತ್ತಾಗಿದೆ.

 

178 ಕೋಟಿ ನಿಯಮಬಾಹಿರ ವೆಚ್ಚ

 

ವಿಶ್ವವಿದ್ಯಾಲಯವು 2017-18ರಿಂದ 2019-20ನೇ ಸಾಲಿನ ಆಯವ್ಯಯವನ್ನು ಸಿದ್ಧಪಡಿಸಿರಲಿಲ್ಲ. ಹಾಗೂ ಸರ್ಕಾರದಿಂದ ಮಂಜೂರಾತಿಯನ್ನೂ ಪಡೆದಿರಲಿಲ್ಲ. ಅಲ್ಲದೇ ಅನುದಾನ ಬೇಡಿಕೆಗಾಗಿ ಸರ್ಕಾರಕ್ಕೆ ಬರೆದ ಪತ್ರಗಳನ್ನೇ ಆಯವ್ಯಯ ಅಂದಾಜು ಎಂದು ಲೆಕ್ಕ ಪರಿಶೋಧನೆಗೆ ಒದಗಿಸಿತ್ತು. ಆದರೆ ಈ ಮಾಹಿತಿಯನ್ನು ಲೆಕ್ಕಪರಿಶೋಧನೆಯಲ್ಲಿ ಆಯವ್ಯಯ ಅಂದಾಜು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.

 

2018-18ನೇ ಸಾಲಿನಲ್ಲಿ 1,71,71,701 ರು., 2018-19ನೇ ಸಾಲಿನಲ್ಲಿ 6,80,41,126 ರು ಮತ್ತು 2019-20ನೇ ಸಾಲಿನಲ್ಲಿ 172, 27,43,931 ರು. ವೆಚ್ಚ ಭರಿಸಿತ್ತು. ವಿಶ್ವವಿದ್ಯಾಲಯದ ಅಧಿನಿಯಮ 2018 ಕಲಂ 40(1)ರಿಂದ 40(4) ಅನ್ವಯ ಆಯವ್ಯಯ ಅಂದಾಜನ್ನು ತಯಾರಿಸದೇ ಹಾಗೂ ಸಕ್ಷಮ ಪ್ರಾಧಿಕಾರದ ಅನುಮೋದನೆಯನ್ನೇ ಪಡೆಯದೇ ಭರಿಸಿರುವ ವೆಚ್ಚವನ್ನು ನಿಯಮಬಾಹಿರ ವೆಚ್ಚವೆಂದು ಲೆಕ್ಕ ಪರಿಶೋಧಕರು ಪರಿಗಣಿಸಿರುವುದು ತಿಳಿದು ಬಂದಿದೆ.

 

6.41 ಕೋಟಿ ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರವೇ ಇಲ್ಲ

 

ಕಟ್ಟಡ ಕಾಮಗಾರಿಗಳಿಗಾಗಿ 2016-17ರಿಂದ 2019-20ನೇ ಸಾಲಿನವರೆಗೆ ಕಾಮಗಾರಿ ವೆಚ್ಚಗಳಿಗಾಗಿ ಒಟ್ಟು 148.48 ಕೋಟಿ ರು. ಅನುದಾನ ನಿಗದಿಯಾಗಿತ್ತು. ಈ ಪೈಕಿ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನಿಂದ 50.00 ಕೋಟಿ, ಡಾ ಬಿ ಆರ್‌ ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕಾನಾಮಿಕ್ಸ್‌ ವಿಶ್ವವಿದ್ಯಾಲಯದಿಂದ 58.27 ಕೋಟಿ ರು., ಒಟ್ಟಾರೆ 108.27 ಕೋಟಿ ರು. ಕರ್ನಾಟಕ ಗೃಹ ಮಂಡಳಿಗೆ ಬಿಡುಗಡೆಯಾಗಿತ್ತು.

 

ಈ ಪೈಕಿ ಕರ್ನಾಟಕ ಗೃಹ ಮಂಡಳಿಯು 101.86 ಕೋಟಿ ರು. ಬಳಕೆಪ್ರಮಾಣ ಪತ್ರ ಒದಗಿಸಿರುವ ಮಂಡಳಿಯು 6.41 ಕೋಟಿ ರು. ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರವನ್ನೇ ಲೆಕ್ಕ ಪರಿಶೋಧನೆಗೆ ಒದಗಿಸಿರಲಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts