11 ಇಲಾಖೆಗಳು ಮತ್ತು 9 ನಿಗಮಗಳಲ್ಲಿ 42.88 ಕೋಟಿ ರು. ದುರುಪಯೋಗ; ಸಿಎಜಿ ವರದಿ

ಬೆಂಗಳೂರು; ಹಿಂದಿನ ಸರ್ಕಾರಗಳ ಅವಧಿಯಲ್ಲಿ  11 ಇಲಾಖೆಗಳು ಮತ್ತು 9 ನಿಗಮಗಳಲ್ಲಿ ಒಟ್ಟಾರೆ 42.88 ಕೋಟಿ ರು. ದುರುಪಯೋಗ, ನಿಷ್ಟ ಮತ್ತು ಕಳ್ಳತನ ಮಾದರಿ ಪ್ರಕರಣಗಳು ನಡೆದಿದ್ದವು ಎಂದು ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

 

2023ನೇ ಮಾರ್ಚ್‌ ಅಂತ್ಯಕ್ಕೆ  ಸಂಬಂಧಿಸಿದಂತೆ ವಿಧಾನಮಂಡಲಕ್ಕೆ  ಮಂಡನೆಯಾಗಿರುವ   ಸಿಎಜಿ ವರದಿಯಲ್ಲಿ 2022-23ನೇ ಸಾಲಿನ ಅಂತ್ಯಕ್ಕೆ   ಸರ್ಕಾರದ ಇಲಾಖೆಗಳು ಮತ್ತು ವಿವಿಧ ನಿಗಮಗಳಲ್ಲಿ  ಹಣ ದುರುಪಯೋಗ, ನಷ್ಟ ಮತ್ತು ಕಳ್ಳತನ ಇತ್ಯಾದಿಗಳ ಪ್ರಕರಣಗಳಿದ್ದ ಕುರಿತು ವಿವರಿಸಿದೆ.

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ ಹಣ ದುರುಪಯೋಗ ಪ್ರಕರಣದ ಕುರಿತು ವಿಧಾನಮಂಡಲದಲ್ಲಿ ಕೋಲಾಹಲ ಎಬ್ಬಿಸಿರುವ ನಡುವೆಯೇ ಸಿಎಜಿ ಮಂಡಿಸಿರುವ ವರದಿಯೂ ಮುನ್ನೆಲೆಗೆ ಬಂದಿದೆ.

 

2022-23ರ ಅಂತ್ಯಕ್ಕೆ 42.88 ಕೋಟಿ ರು. ಮೊತ್ತದ ಸರ್ಕಾರಿ ಹಣದ ದುರುಪಯೋಗ, ನಷ್ಟ,  ಕಳ್ಳತನ ಇತ್ಯಾದಿಗಳಿಗೆ ಸಂಬಂಧಿಸಿದಂತೆ 61 ಪ್ರಕರಣಗಳಿದ್ದವು.

 

ಈ ಎಲ್ಲಾ ಪ್ರಕರಣಗಳು ಕಳೆದ 20 ವರ್ಷಗಳಲ್ಲಿ ನಡೆದಿದ್ದವು. ಮತ್ತು 61 ಪ್ರಕರಣಗಳ ಪೈಕಿ 19 ಪ್ರಕರಣಗಳಲ್ಲಿ ಮಾತ್ರ ಇಲಾಖೆ ವಿಚಾರಣೆ ಆರಂಭವಾಗಿತ್ತು. ಕೇವಲ 3 ಪ್ರಕರಣಗಳಲ್ಲಿ ಮಾತ್ರ ಹಣ ವಸೂಲಿ ಆಗಿತ್ತು  ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳಲ್ಲಿ 4 ಪ್ರಕರಣಗಳಿದ್ದವು. 6.43 ಕೋಟಿ ರು ದುರುಪಯೋಗವಾಗಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ 5.25 ಕೋಟಿ ರು., ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 1.98 ಲಕ್ಷ ರು., ಅರಣ್ಯ ಇಲಾಖೆಯಲ್ಲಿ 0.74 ಲಕ್ಷ, ಗೃಹ ಇಲಾಖೆಯಲ್ಲಿ 1.29 ಕೋಟಿ, ಕಾನೂನು ಇಲಾಖೆಯಲ್ಲಿ 2.27 ಕೋಟಿ ರು., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1.60 ಲಕ್ಷ  ರು ದುರುಪಯೋಗವಾಗಿತ್ತು ಎಂಬುದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

 

 

 

ಸಮಾಜ ಕಲ್ಯಾಣ ಇಲಾಖೆಯಲ್ಲಿ 9.48 ಲಕ್ಷ, ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿಗಳು 11.80 ಕೋಟಿ ರು., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ 1.04 ಲಕ್ಷ, ಕರ್ನಾಟಕ ಸಾಬೂನು ಮತ್ತು ಮಾರ್ಜಕದಲ್ಲಿ  4.99 ಕೋಟಿ ರು., ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದಲ್ಲಿ 23.26 ಲಕ್ಷ ರು., ಕರ್ನಾಟಕ ರಾಜ್ಯ ತೆಂಗಿನ ನಾರು ಅಭಿವೃದ್ಧಿ ನಿಗಮದಲ್ಲಿ 30.32 ಲಕ್ಷ ರು., ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯಲ್ಲಿ 1.81 ಕೋಟಿ ರು., ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿಯಲ್ಲಿ 99.30 ಲಕ್ಷ ರು., ದುರುಪಯೋಗವಾಗಿದೆ ಎಂದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿಯಲ್ಲಿ 2.61 ಕೋಟಿ , ಹುಬ್ಬಳ್ಳಿ ವಿದ್ಯುತ್‌ ಸರಬರಾಜು ನಿಗಮದಲ್ಲಿ 91.58 ಲಕ್ಷ ರು., ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದಲ್ಲಿ 3.69 ಕೋಟಿ ರು., ಪುರಾತತ್ವ ಸಂಗ್ರಹಾಲಯಗಳಲ್ಲಿ 3.38 ಲಕ್ಷ , ನಗರಾಭಿವೃದ್ಧಿ ಇಲಾಖೆಯಲ್ಲಿ 2.02 ಲಕ್ಷ, ಮೀನುಗಾರಿಕೆಯಲ್ಲಿ 6.25 ಲಕ್ಷ ರು. ಸೇರಿ ಒಟ್ಟು 42.88 ಕೋಟಿ ರು. ದುರುಪಯೋಗವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ಬಹು ಕೋಟಿ ಹಗರಣವನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡಿರುವ ಪ್ರತಿಪಕ್ಷಗಳು, ಉಭಯ ಸದನಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿರುವ ಹೊತ್ತಿನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಡೀ ಸರ್ಕಾರವೇ ಈ ಹಗರಣವನ್ನು ನೇರವಾಗಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ತಲೆಗೆ ಕಟ್ಟಿರುವುದನ್ನು ಸ್ಮರಿಸಬಹುದು.

ವಾಲ್ಮೀಕಿ ಅಭಿವೃದ್ದಿ ನಿಗಮದ 89 ಕೋಟಿ ಹಗರಣ; ಯೂನಿಯನ್‌ ಬ್ಯಾಂಕ್‌ನ ತಲೆಗೆ ಕಟ್ಟಿದ ಸರ್ಕಾರ

ಎಂ ಜಿ ರಸ್ತೆಯ ಶಾಖೆಯ ಮುಖ್ಯ ವ್ಯವಸ್ಥಾಪಕರಾದ ಸುಚಿಸ್ಮಿತಾ ರೌಲ್‌ ಅವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯ ಇ-ಮೇಲ್‌ ಐಡಿ ಮತ್ತು ಸಹಿ ಮಾಡಿದವರ ಮೊಬೈಲ್‌ ಸಂಖ್ಯೆಯನ್ನು ಮಾರ್ಪಾಡು ಮಾಡಲು ಕೋರಿಕೆ ಸ್ವೀಕರಿಸುವಾಗ ಸಹಿ ಮಾಡಿದವರ ಸಹಿಗಳ ನೈಜತೆ ಪರಿಶೀಲಿಸಲು ವಿಫಲರಾಗಿದ್ದಾರೆ ಎಂದು ಹೇಳಲಾಗಿತ್ತು.

ಸಿದ್ದರಾಮಯ್ಯ ಅವಧಿಯೂ ಸೇರಿ ಅಭಿವೃದ್ದಿ ನಿಗಮಗಳಲ್ಲಿ 400 ಕೋಟಿಗೂ ಅಧಿಕ ಅಕ್ರಮ

ಇ-ಮೇಲ್‌ ಐಡಿಯನ್ನು mdkmvstdcl@gmail.com ಎಂದು ಬದಲಾಯಿಸಲು ಮತ್ತು ಮೊಬೈಲ್‌ ಸಂಖ್ಯೆಯನ್ನು 6026137043ಗೆ ಬದಲಾಯಿಸುವಂತೆ ಕೋರಿಕೆ ಸ್ವೀಕರಿಸಲಾಗಿತ್ತು. ಆದರೆ ಇದನ್ನು ವೆಬ್‌ಸೈಟ್‌ ಅಥವಾ ನಿಗಮದ ಕಚೇರಿಗೆ ವೈಯಕ್ತಿಕ ಭೇಟಿ ಮೂಲಕ ವಿವರಗಳನ್ನು ಪರಿಶೀಲಿಸಿಲ್ಲ. ಚೆಕ್‌ ಬುಕ್‌ಗಳ ವಿತರಣೆಗಾಗಿ ಕೋರಿಕೆ ಸಲ್ಲಿಸಿದಾಗ ಸಹಿ ಮಾಡಿದವರನ್ನೂ ಗುರುತಿಸಲು ವಿಫಲರಾಗಿರುತ್ತಾರೆ ಎಂದು ಸಾರಾಂಶದಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿತ್ತು.

 

 

2024ರ ಮಾರ್ಚ್‌ 4ರಂದು ಚೆಕ್ ಪುಸ್ತಕವನ್ನು ಹಸ್ತಾಂತರಿಸುವಾಗ ತಮ್ಮ ಸಂವಹನದಲ್ಲಿ ಶಿವಕುಮಾರ್‍‌ ಅವರ ಗುರುತನ್ನು ಪರಿಶೀಲಿಸಲು ವಿಫಲರಾಗಿದ್ದಾರೆ. ಇದಲ್ಲದೇ ಅದೇ ಗ್ರಾಹಕರಿಗೆ ಸ್ಥಿರ ಠೇವಣಿ ವಿರುದ್ಧ 45.00 ಕೊಟಿ ರು ಒಒಡಿ ಮಿತಿಯನ್ನು ಮಂಜೂರು ಮಾಡುವಾಗ ಅವರು ಹೇಳಿದ ನಿಗಮದ ಆರ್ಟಿಕಲ್‌ ಆಫ್‌ ಅಸೋಸಿಯೇಷನ್‌ ಮತ್ತು ಮೆಮೊರಂಡಮ್‌ ಆಫ್‌ ಅಸೋಸಿಯೇಷನ್‌ ಪಡೆಯಲು ವಿಫಲರಾಗಿದ್ದಾರೆ ಎಂದು ಸಾರಾಂಶದಲ್ಲಿ ಪ್ರಸ್ತಾಪಿಸಿತ್ತು.

ಮಾರ್ಗಸೂಚಿ ಉಲ್ಲಂಘಿಸಿ ಬ್ಯಾಂಕ್‌ಗಳಲ್ಲಿ ಬಹುಕೋಟಿ ಹೂಡಿಕೆ, 172 ಕೋಟಿ ನಿಯಮಬಾಹಿರ ವೆಚ್ಚ

ಸ್ಥಿರ ಠೇವಣಿ ವಿರುದ್ಧ ಒಒಡಿ ಸೌಲಭ್ಯ ಪಡೆಯಲು ನಿಗಮವು ಸಕ್ಷಮ ಪ್ರಾಧಿಕಾರವಾಗಿದೆ. ಆಕೆಯ ಉಪಸ್ಥಿತಿಯಲ್ಲಿ ಅಧಿಕೃತ ಸಹಿದಾರರ ಸಹಿ ಪಡೆಯಲು ಅವರು ವಿಫಲರಾಗಿರುತ್ತಾರೆ. ಠೇವಣಿಗಳ ವಿರುದ್ಧ ಒಒಡಿ ಮಂಜೂರಾತಿಗೆ ಯಾವುದೇ ಕೋರಿಕೆ ಸಲ್ಲಿಸಿಲ್ಲ ಎಂದು ನಿರಾಕರಿಸಿದ್ದರು. ಆಕೆಯ ಮೇಲಿನ ಸಂಪೂರ್ಣ ನಿರ್ಲಕ್ಷ್ಯದ ಕೃತ್ಯಗಳಿಂದಾಗಿ ನಿಗಮದ ಖಾತೆಯಿಂದ ಒಟ್ಟು 89.63 ಕೋಟಿಯನ್ನು ಮೋಸದಿಂದ ವರ್ಗಾಯಿಸಲಾದ ಹಣವನ್ನು ಐಟಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳಿಗೆ ವರ್ಗಾಯಿಸಲಾಗಿದೆ ಎಂದು ಸಾರಾಂಶದಲ್ಲಿ ವಿವರಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts