ಬೆಂಗಳೂರು; ಹಿಂದುಳಿದ ವರ್ಗಗಳ ಚಾಂಪಿಯನ್ ಎಂಬ ಖ್ಯಾತಿ ಪಡೆದಿರುವ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ವರ್ಷದಲ್ಲೇ ಹಿಂದುಳಿದ ವರ್ಗಗಳಿಗೆ ಸೇರಿದ 39,332 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶವೇ ದೊರೆತಿರಲಿಲ್ಲ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಮಂಡಲದಲ್ಲಿ ಚರ್ಚಿಸಬಹುದಾದ ವಿಷಯಗಳ ಕುರಿತು ಪೂರ್ವಭಾವಿ ಸಭೆಗೆ ಇಲಾಖೆಯು ಒದಗಿಸಿರುವ ಪೂರಕ ಟಿಪ್ಪಣಿಯಲ್ಲಿ ಈ ಮಾಹಿತಿ ಇದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ಇಲಾಖೆ ವ್ಯಾಪ್ತಿಯ ಆಯೋಗ ಮತ್ತು ನಿಗಮಗಳಿಗೆ ಒದಗಿಸಿರುವ ಅನುದಾನ, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯಗಳು, ಆಹಾರ ಸರಬರಾಜು ವ್ಯವಸ್ಥೆಯಲ್ಲಿ ಸರಳೀಕೃತ, ಹೊಸ ವಿದ್ಯಾರ್ಥಿ ನಿಲಯಗಳ ಮಂಜೂರಾತಿ, ಬೇಡಿಕೆ, ಪ್ರವೇಶ, ವಿದ್ಯಾರ್ಥಿ ವೇತನ, ಕಟ್ಟಡ ನಿರ್ಮಾಣ, ವಿವಿಧ ಸಮುದಾಯಗಳ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಇಲಾಖೆಯು ಒದಗಿಸಿರುವ ಮಾಹಿತಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಇಲಾಖೆಯಲ್ಲಿ ಲಭ್ಯವಿರುವ 150 ವಿದ್ಯಾರ್ಥಿ ನಿಲಯಗಳನ್ನು ಹಂಚಿಕೆ ಮಾಡಿದ್ದರೂ ಸಹ ರಾಜ್ಯದ ಶಾಸಕರುಗಳು ಸಹ ವಿದ್ಯಾರ್ಥಿ ನಿಲಯಗಳ ಮಂಜೂರಾತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸುತ್ತಿದ್ದಾರೆ. ಇದು 2024-25ನೇ ಸಾಲಿನ ಆಯವ್ಯಯದಲ್ಲಿ (ಕಂಡಿಕೆ 178(1)ರಲ್ಲಿ 100 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ 150 ವಿದ್ಯಾರ್ಥಿ ನಿಲಯಗಳ ಸಂಖ್ಯೆಯ ಗಡಿಯನ್ನು ದಾಟಿದೆ. ಶಾಸಕರು ಮುಂದಿರಿಸಿರುವ ಈ ಬೇಡಿಕೆಯನ್ನು ಈಡೇರಿಸಲು ಇಲಾಖೆಯು ಹರಸಾಹಸ ಪಡುತ್ತಿದೆ.
‘ಲಭ್ಯವಿರುವ 150 ವಿದ್ಯಾರ್ಥಿ ನಿಲಯಗಳನ್ನು ಜಿಲ್ಲಾವಾರು,ವಿದ್ಯಾಸಂಸ್ಥೆಗಳ ಸಂಖ್ಯೆಗಳ ಆಧಾರದ ಮೇಲೆ ಹಂಚಿಕೆ ಮಾಡಿದ್ದರೂ ಸಹ ಹಲವು ವಿಧಾನಸಭೆ ಕ್ಷೇತ್ರಗಳಿಗೆ ವಿದ್ಯಾರ್ಥಿ ನಿಲಯಗಳ ಮಂಜೂರು ಮಾಡಲು ಕೋರಿಕೆಗಳು ಸಲ್ಲಿಕೆಯಾಗಿವೆ,’ ಎಂಬ ಅಂಶವು ಮಾಹಿತಿಯಿಂದ ಗೊತ್ತಾಗಿದೆ.
2023-24ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ 39,332 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರೆತಿರಲಿಲ್ಲ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಈ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಊಟ ಮತ್ತು ವಸತಿ ಯೋಜನೆಯಡಿ ನೀಡಿದ್ದ 80.00 ಕೋಟಿ ರು ಅನುದಾನ ಬಳಸಿ ಸಹಾಯಧನ ವಿತರಿಸಲಾಗಿದೆ. ಇದೇ ಕಾರ್ಯಕ್ರಮಕ್ಕೆ 2024-25ನೇ ಸಾಲಿಗೆ 100.00 ಕೋಟಿ ರು. ಅನುದಾನ ಒದಗಿಸಿದೆ ಎಂದು ಇಲಾಖೆಯು ಮಾಹಿತಿ ಒದಗಿಸಿರುವುದು ತಿಳಿದು ಬಂದಿದೆ.
2023-24ನೇ ಸಾಲಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿಯಲ್ಲಿ ಒಟ್ಟಾರೆ 61.91 ಕೋಟಿ ರು ಅನುದಾನ ಬಿಡುಗಡೆಯಾಗಿದೆ. ಈ ಅನುದಾನ ಬಳಸಿಕೊಂಡು 1,54,305 ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪಾವತಿಸಿದೆ. 2024-25ನೇ ಸಾಲಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಕುರಿತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಅದೇ ರೀತಿ ಕೇಂದ್ರ ಸರ್ಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಒಟ್ಟಾರೆ 257.35 ಕೋಟಿ ರು ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನ ಬಳಸಿಕೊಂಡು 2,93,777 ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಪಾವತಿಸಿದೆ. ಪ್ರಸಕ್ತ ಸಾಲಿಗೆ ಅನುದಾನ ಬಿಡುಗಡೆ ಕೋರಿ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ತಿಳಿದು ಬಂದಿದೆ.
ಹಾಗೆಯೇ 2023-24ನೇ ಸಾಲಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಕಾರ್ಯಕ್ರಮದಡಿ 400 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಈ ಅನುದಾನವನ್ನು ಬಳಸಿಕೊಂಡು 2020-21, 2021-22 ಮತ್ತು 2022-23ನೇ ಆರ್ಥಿಕ ವರ್ಷದಲ್ಲಿ ಬಾಕಿ ಇದ್ದ 3,49,743 ಅರ್ಹ ವಿದ್ಯಾರ್ಥಿಗಳಿಗೆ ಪಾವತಿ ಮಾಡಲು 312.22 ಕೋಟಿ ರು. ವಿನಿಯೋಗಿಸಿದೆ.
ಉಳಿಕೆ ಅನುದಾನದಲ್ಲಿ 2023-24ನೇ ಸಾಲಿನ 1,42,418 ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ಮರು ಪಾವತಿ ಮಂಜೂರಾಗಿದೆ. ಈ ಕಾರ್ಯಕ್ರಮದಡಿಯಲ್ಲಿ 2020-21, 2021-22, 2022-23 ಮತ್ತು 2023-24ನೇ ಸಾಲಿನಲ್ಲಿ ಒಟ್ಟು 4,90,372 ವಿದ್ಯಾರ್ಥಿಗಳು ಶುಲ್ಕ ಮರುಪಾವತಿ ಪಡೆಯಲು ಅರ್ಹರಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲು 263.59 ಕೋಟಿ ರು ಅನುದಾನದ ಅವಶ್ಯಕತೆ ಇದೆ. ಈ ಕುರಿತೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಇಲಾಖೆಯು ಒದಗಿಸಿರುವ ಮಾಹಿತಿಯಿಂದ ಗೊತ್ತಾಗಿದೆ.
ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿಗೆ 200 ಕೋಟಿ ರು ಅನುದಾನ ಒದಗಿಸಲಾಗಿದೆ. ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ಕಾಮಗಾರಿಯ ಘಟಕ ವೆಚ್ಚದ ರೂಪದಲ್ಲಿ 400.00 ಲಕ್ಷ ರು. ಅನುದಾನ ಘೋಷಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಪಾಲುದಾರಿಕೆಯೊಂದಿಗೆ ಒಟ್ಟು 82 ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಮುಂದುವರೆಇದೆ. ಆರ್‍ಐಡಿಎಫ್ ಟ್ರಾಂಚ್ 30 ಕಾರ್ಯಕ್ರಮದಡಿ 15 ಹೊಸ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಕೈಗೊಳ್ಳಲು ಸರ್ಕಾರವು ಕ್ರಮವಹಿಸಿರುವುದು ತಿಳಿದು ಬಂದಿದೆ.