ಬೆಂಗಳೂರು; ಭೂ ಮಾಲೀಕರಿಗೆ ಪರ್ಯಾಯ ಜಮೀನು ಮಂಜೂರು ಮಾಡದೇ ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದ ಮಧ್ಯವರ್ತಿಯೊಬ್ಬರಿಗೆ ಸುಮಾರು 30 ಕೋಟಿ ಬೆಲೆಬಾಳುವ ನಿವೇಶನಗಳನ್ನು ಮಂಜೂರು ಮಾಡಿರುವ ಪ್ರಕರಣವನ್ನು ಮೂಡಾದ ತಾಂತ್ರಿಕ ಸಮಿತಿಯು ಬಯಲು ಮಾಡಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿರುವ ಬಡಾವಣೆಗಳಲ್ಲಿ 50;50ರ ಅನುಪಾತದಲ್ಲಿ ಹಂಚಿಕೆ ಮಾಡಿರುವ ನಿವೇಶನಗಳ ಹಗರಣದ ಉರುಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುತ್ತಿಕೊಂಡಿರುವ ಬೆನ್ನಲ್ಲೇ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದ ಮಧ್ಯವರ್ತಿಯೊಬ್ಬರಿಗೆ 30 ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಮಂಜೂರು ಮಾಡಿರುವುದು ಮೂಡಾದ ಮತ್ತೊಂದು ಮುಖವನ್ನು ತೆರೆದಿಟ್ಟಂತಾಗಿದೆ.
ಮೂಡಾದಲ್ಲಿ ನಡೆದಿರುವ ವಿವಿಧ ರೀತಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಿತಿಯು ನೀಡಿರುವ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪ್ರಕರಣದ ಹಿನ್ನೆಲೆ
ಮೈಸೂರು ತಾಲೂಕು ಕಸಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂರ್ 81ರ ಜಮೀನಿಗೆ ಪರ್ಯಾಯ ಜಮೀನನ್ನು ಭೂ ಮಾಲೀಕರಿಗೆ ಮಂಜೂರು ಮಾಡಿರಲಿಲ್ಲ. ಬದಲಿಗೆ ಮಧ್ಯವರ್ತಿ ಮಹೇಂದ್ರ ಎಂಬುವರು ಕೃಷಿ ಜಮೀನು ಎಂದು ಅಕ್ರಮವಾಗಿ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡಿದ್ದರು. ಇವರಿಗೆ 30 ಕೋಟಿ ಬೆಲೆ ಬಾಳುವ ನಿವೇಶನ (ಬದಲಿ ಜಾಗ) ವನ್ನು 50;50ರ ಅನುಪಾತದಲ್ಲಿ ಮಂಜೂರು ಮಾಡಲಾಗಿದೆ ಎಂದು ಹಾಲನಹಳ್ಳಿಯ ಪುಟ್ಟಸ್ವಾಮಿ ಎಂಬುವರು ದೂರು ದಾಖಲಿಸಿದ್ದರು.
ಅಲ್ಲದೇ ಪ್ರಾಧಿಕಾರದ ಆಯುಕ್ತರು ನಿಯಮ 16(1)ರ ಅವಕಾಶಗಳ ಉಲ್ಲಂಘಿಸಿ ಬದಲಿ ನಿವೇಶನವನ್ನು ಮಂಜೂರು ಮಾಡುವ ಬಗ್ಗೆ ಕ್ರಮವಹಿಸಿದ್ದರು. ನಿಯಮ 16(1)ರಂತೆ ಒಮ್ಮೆ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳನ್ನು ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗದ ಸಂದರ್ಭಗಳಲ್ಲಿ ಮಾತ್ರ ಬದಲಿ ನಿವೇಶನ ಮಂಜೂರು ಮಾಡಲು ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಪ್ರಾಧಿಕಾರದ ಆಯುಕ್ತರು ಮತ್ತು ಅಧಿಕಾರಿ, ಸಿಬ್ಬಂದಿಗಳು ನಿಯಮಗಳನ್ನು ಉಲ್ಲಂಘಿಸಿ ಕ್ರಮವಹಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.
ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ
ತಾರ ಎಂಬುವರು ಇದೇ ಸರ್ವೆ ನಂಬರ್ 81ರ 1 ಎಕರೆ 21 ಗುಂಟೆ ಜಮೀನಿಗೆ ಬದಲಿ ಜಾಗವನ್ನು ನೀಡುವ ಬಗ್ಗೆ 2020ರ ನವೆಂಬರ್ 10ರಂದು ಅರ್ಜಿ ಸಲ್ಲಿಸಿದ್ದರು. ತದನಂತರ ವಿ ವೆಂಕಟೇಶ್ ಎಂಬುವರು ಇದೇ ಜಮೀನನ್ನು 2021ರ ಮಾರ್ಚ್ 1ರಂದು ಕ್ರಯದ ಮೂಲಕ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡು 2021ರ ಏಪ್ರಿಲ್ 4ರಂದು ಬದಲಿ ಜಾಗವನ್ನು ನೀಡಲು ಕೋರಿದ್ದರು.
ನಿಯಮ ಮೀರಿ 250 ಕೋಟಿ ನಿಶ್ಚಿತ ಠೇವಣಿ; ಮೂಡಾ ಅಕ್ರಮ ಪತ್ತೆ ಹಚ್ಚಿದ ತಾಂತ್ರಿಕ ಸಮಿತಿ
ಕಡತದ ಟಿಪ್ಪಣಿಯ ಕಂಡಿಕೆ (20)ರಿಂದ 22ರವರೆಗೆ ವೆಂಕಟೇಶ್ ಅವರ ಮನವಿಯಂತೆ ಈ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳದೇ ಇರುವುದರಿಂದ ಈಗಾಗಲೇ ಬಡಾವಣೆ ನಿರ್ಮಿಸಿರುವುದರಿಂದ ಸರ್ಕಾರದ ಆದೇಶ (ಸಂಖ್ಯೆ UDD 08 55P 2014 2015ರ ಫೆ.11) ದಂತೆ ಬದಲಿ ಜಾಗ ನೀಡುವ ಬಗ್ಗೆ ಅಧಿಕಾರಿಗಳು ಪ್ರಾಧಿಕಾರದ ಸಭೆಗೆ ಮಂಡಿಸಲು ಟಿಪ್ಪಣಿ ಸಿದ್ಧಪಡಿಸಿದ್ದರು. ಈ ಸಂಬಂಧ ಪ್ರಾಧಿಕಾರದ ಆಯುಕ್ತರು ಕಂಡಿಕೆ 23ರಲ್ಲಿ ಆದೇಶ ಹೊರಡಿಸಿದ್ದರು.
‘ಬದಲಿ ಜಾಗ ನೀಡಲು ಪ್ರಾಧಿಕಾರವು ಉಪಯೋಗಿಸಿಕೊಳ್ಳಲಾಗಿರುವ ಜಾಗದ ಪರಿತ್ಯಜನವನ್ನು ಭೂ ಮಾಲೀಕರಿಂದ ಪಡೆದು 16607 ಚ ಅಡಿ ವಿಸ್ತೀರ್ಣದ ಬದಲಿ ಜಾಗ ನೀಡುವ ಬಗ್ಗೆ ಅಧಿಕೃತ ಜ್ಞಾಪನ ಪತ್ರದೊಂದಿಗೆ ಮಂಡಿಸಿ,’ ಎಂದು ಆಯುಕ್ತರು ಆದೇಶಿಸಿದ್ದರು.
848 ನಿವೇಶನ ಬಿಡುಗಡೆ; ಮೂಡಾದಿಂದ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಅತಿಕ್ರಮಣ
ಆಯುಕ್ತರ ಈ ಆದೇಶದಂತೆ 2021ರ ಜೂನ್ 17ರಂದು ಪರಿತ್ಯಜನ ಪತ್ರವನ್ನು ನೋಂದಣಿ ಮಾಡಿಸಲಾಗಿತ್ತು. ಪ್ರಶ್ನಿತ ಜಮೀನನ್ನು ಭೂ ಸ್ವಾಧೀನಪಡಿಸದೇ ಪ್ರಾಧಿಕಾರವು ಬಡಾವಣೆಗೆ ಉಪಯೋಗಿಸಿಕೊಂಡಿದ್ದು ಪ್ರಸ್ತುತ ಭೂ ಸ್ವಾಧೀನ ಕಾಯ್ದೆಯಂತೆ ಪ್ರೋತ್ಸಾಹಕ ನಿವೇಶನಗಳನ್ನು ನೀಡುವ ಬಗ್ಗೆ ಪ್ರಾಧಿಕಾರವು ನಿರ್ಣಯ ಕೈಗೊಂಡಿದೆ ಎಂದು ಆದೇಶದಲ್ಲಿ ವಿವರಿಸಲಾಗಿತ್ತು.
2020ರ ನವೆಂಬರ್ 6 ಮತ್ತು 2020ರ ನವೆಂಬರ್ 20ರಂತೆ ಪ್ರಸ್ತಾವಿತ ಜಮೀನುಗಳನ್ನು ಈಗಾಗಲೇ ಪರಿತ್ಯಜನ ಪತ್ರದ ಮೂಲಕ ಪ್ರಾಧಿಕಾರಕ್ಕೆ ನೋಂದಾವಣೆ ಮಾಡಿಕೊಂಡಿದೆ. ಇದಾದ ನಂತರ ಅಧಿಕೃತ ಜ್ಞಾಪನ (ಸಂಖ್ಯೆ; ಎಲ್ ಎ ಕ್ಯೂ (3) ಸಿಆರ್ 64/2020-21) 2021ರ ಜೂನ್ 17ರಂದು ಸರ್ಕಾರದ ಆದೇಶ ಸಂಖ್ಯೆ (UDD 08 55P 2014 2015ರ ಫೆ.11ರ ಅನ್ವಯ ಶೇ.50;50 ಅನುಪಾತದಲ್ಲಿ ಭೂ ಮಾಲೀಕರಿಗೆ 16607 ಚ ಅಡಿ ಅಳತೆ ನಿವೇಶನವನ್ನು ಪರಿಹಾರಾತ್ಮಕವಾಗಿ ಮಂಜೂರು ಮಾಡಿ 2021ರ ಜೂನ್ 18ರಂದು ಆದೇಶ ಹೊರಡಿಸಲಾಗಿತ್ತು ಎಂಬುದು ತಾಂತ್ರಿಕ ಸಮಿತಿ ವರದಿಯಿಂದ ತಿಳಿದು ಬಂದಿದೆ.
ಇದೇ ಆದೇಶದಂತೆ ಎಲ್ ಪಿ -95ರಿಂದ 98/ಎಲ್ ಎಲ್ 11/ಎ ರ ಮಂಜೂರಾತಿ ಪತ್ರಗಳಲ್ಲಿ ಬೋಗಾದಿ 1ನೇ ಹಂತದ ಬಡಾವಣೆಯಲ್ಲಿನ ನಿ ಸಂ 396/2, 396/4, 396/5, 396/8 ಒಟ್ಟು 4 ನಿವೇಶನಗಳನ್ನು ಶೇ.50;50ರ ಅನುಪಾತದಲ್ಲಿ ದರ ರಹಿತವಾಗಿ 2021ರ ಆಗಸ್ಟ್ 2ರಂದು ಮಂಜೂರು ಮಾಡಿರುವುದು ಕಂಡು ಬಂದಿರುತ್ತದೆ ಎಂದು ತಾಂತ್ರಿಕ ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
ಅಲ್ಲದೇ ಕಂಡಿಕೆ (45)ರಲ್ಲಿ ನಿಡಲಾದ ಸೂಚನೆಯನ್ನು ಭಾಗಶಃ ಮಾರ್ಪಡಿಸಲಾಗಿತ್ತು. ತಾಂತ್ರಿಕ ಶಾಖೆಯ ವರದಿಯನ್ವಯ ಕಂಡಿಕೆ (69)ರಲ್ಲಿ ನಿ. ಸಂ 900ಕ್ಕೆ ಬದಲಾಗಿ ಜೆಪಿ ನಗರ 1ನೇ ಹಂತ, ಇ-ಬ್ಲಾಕ್‌ನಲ್ಲಿ ನಿ ಸಂ 540/2 ಮತ್ತು 540/3 ಗಳನ್ನು ಹಂಚಿಕೆ ಮಾಡಲು ಸೂಚಿಸಲಾಗಿತ್ತು.
ಹೆಚ್ಚುವರಿ ವಿಸ್ತೀರ್ಣಕ್ಕೆ ಇತ್ತೀಚಿನ ಹಂಚಿಕೆ ದರವನ್ನು ಪಾವತಿಸಿಕೊಂಡು ಕ್ರಮ ಕೈಗೊಳ್ಳಿ ಎಂದು ಆಯುಕ್ತರು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಎಲ್ ಪಿ 285 ಮತ್ತು 86ರ ವಿ ;04 ರ ಮಂಜೂರಾತಿ ಪತ್ರದಲ್ಲಿ ಜಮೀನು ಕಳೆದುಕೊಂಡವರಿಗೆ ನೀಡಿದ ಪ್ರೋತ್ಸಾಹದಾಯಕ ನಿವೇಶನ ಮಂಜೂರಾತಿ ಪತ್ರವೆಂದು ನಮೂದಿಸಿ 02 ನಿವೇಶನಗಳನ್ನು ಮಂಜೂರು ಮಾಡಿರುವುದನ್ನು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿರುವುದು ಗೊತ್ತಾಗಿದೆ.
ತಾಂತ್ರಿಕ ಸಮಿತಿಯ ಅಭಿಪ್ರಾಯ
ಪ್ರಾಧಿಕಾರದ ಆಯುಕ್ತರು ಬದಲಿ ನಿವೇಶನವನ್ನು ಮಂಜೂರು ಮಾಡುವ ಬಗ್ಗೆ ಕ್ರಮವಹಿಸಿರುವುದು ನಿಯಮ 16(1)ರ ಅವಕಾಶಗಳ ಉಲ್ಲಂಘನೆಯಾಗಿದೆ. ಈ ನಿಯಮದಂತೆ ಒಮ್ಮೆ ಪ್ರಾಧಿಕಾರದಿಮದ ಹಂಚಿಕೆಯಾದ ನಿವೇಶನಗಳನ್ನು ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗದ ಸಂದರ್ಭಗಳಲ್ಲಿ ಮಾತ್ರ ಬದಲಿ ನಿವೇಶನ ಮಂಜೂರು ಮಾಡಲು ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಪ್ರಾಧಿಕಾರದ ಆಯುಕ್ತರು ಮತ್ತು ಅಧಿಕಾರಿ, ಸಿಬ್ಬಂದಿಗಳು ನಿಯಮಗಳನ್ನು ಉಲ್ಲಂಘಿಸಿ ಕ್ರಮವಹಿಸಿರುವುದು ಕಂಡು ಬಂದಿರುತ್ತದೆ ಎಂದು ಸಮಿತಿಯು ವರದಿಯಲ್ಲಿ ಅಭಿಪ್ರಾಯಿಸಿದೆ.
ಅಲ್ಲದೇ 2009ರ ಆಗಸ್ಟ್ 1ರಂದೇ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿತ್ತು. ಈ ನಿಯಮಗಳ ಅನ್ವಯ ನಗರಾಭಿವೃದ್ಧಿ ಪ್ರಾಧಿಕಾರಗಳು ಪರಿಹಾರದ ಬದಲಿಗೆ ಅಥವಾ ಭೂ ಮಾಲೀಕನೊಂದಿಗೆ ಪರಸ್ಪರ ಸಹಮತಿಯೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ನಿವೇಶನಗಳನ್ನು ಪ್ರಾಧಿಕಾರವು ಆ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸುವ ಸದರಿ ಬಡಾವಣೆಯಲ್ಲಿಯೇ ನಿಯಮ 3(ಇ) ರಂತೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ.
ಹಾಗೆಯೇ ಈ ಹಿಂದೆ ಇದ್ದ ಅನುಪಾತವನ್ನು ಬದಲಿಸಿ ನಿಯಮ (3)ರ (ಬಿ)ರಲ್ಲಿ ಶೇ. 40ರ ಬದಲಾಗಿ ಶೇ.50ನ್ನು ಅಳವಡಿಸಿ ತಿದ್ದುಪಡಿಯಾಗಿದ್ದು ಸದರಿ ಅಧಿಸೂಚನೆಯನ್ನು ಉಲ್ಲೇಖಿಸಿ ಪ್ರಾಧಿಕಾರವು ಶೇ,50;50 ಬದಲಿ ನಿವೇಶನ ಮಂಜೂರಾತಿ ಎಂದು ಟಿಪ್ಪಣಿ ಮತ್ತು ಆದೇಶಗಳಲ್ಲಿ ಉಲ್ಲೇಖಿಸಿ ಕ್ರಮವಹಿಸಿರುವುದು ಕಂಡು ಬಂದಿದೆ.
‘ಆದರೆ ಪ್ರಶ್ನಿತ ಪ್ರಕರಣವನ್ನು ಗಮನಿಸಲಾಗಿ ಈ ನಿಯಮಗಳು ಜಾರಿಗೆ ಬರುವ ಪೂರ್ವದಲ್ಲಿಯೇ ಜಮೀನುಗಳನ್ನು ಭೂ ಸ್ವಾಧೀನ ಕಾಯ್ದೆ 1894ರಡಿ ಭೂಸ್ವಾಧೀನಪಡಿಸಿಕೊಂಡು/ ಭೂ ಸ್ವಾಧೀನಪಡಿಸಿಕೊಳ್ಳದೇ ಅನುಷ್ಠಾನಗೊಳಿಸಿದ ವಸತಿ ಬಡಾವಣೆಗಳಿಗೆ ಅನ್ವಯಿಸಿ ಬದಲಿ ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಂಡಿರುವುದು ಕಂಡು ಬಂದಿರುತ್ತದೆ,’ ಎಂದು ವರದಿಯಲ್ಲಿ ಹೇಳಿದೆ.
ಪ್ರಶ್ನಿತ ಜಮೀನಿಗೆ ಸಂಬಂಧಿಸಿದಂತೆ 2020ರ ನವೆಂಬರ್ 6 ಮತ್ತು ನವೆಂಬರ್ 20ರಂದು ಸಭೆ ನಡೆದಿತ್ತು. ಈ ಸಭೆಯ ವಿಷಯ ಸಂಖ್ಯೆ 5ರಲ್ಲಿ ಕೈಗೊಳ್ಳಲಾದ ನಿರ್ಣಯದ ಅಂಶ 1 ಮತ್ತು 2ರ ವಿವರಗಳನ್ನು ಕೂಲಂಕುಷವಾಗಿ ಪರಿಶೀಲಿಸಿಲ್ಲ. ಪ್ರಾಧಿಕಾರದ ಸಭೆ ಗಮನಕ್ಕೆ ತರದೇ ಆಯುಕ್ತರು ತಮ್ಮ ಹಂತದಲ್ಲಿಯೇ ನೇರವಾಗಿ ತೀರ್ಮಾನ ಕೈಗೊಂಡು ನಿವೇಶನ ಹಂಚಿಕೆ ಮಾಡಿರುವುದು ನಿಯಮಬಾಹಿರವಾಗಿರುತ್ತದೆ ಎಂದೂ ತಾಂತ್ರಿಕ ಸಮಿತಿಯು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಪ್ರಾಧಿಕಾರದ ಅಧಿಕಾರಿಗಳು 04 ನಿವೇಶನಗಳ ಮಂಜೂರಾತಿ ಪತ್ರದಲ್ಲಿ ಜಮೀನು ಕಳೆದುಕೊಂಡವರಿಗೆ ನೀಡಿದ ಪ್ರೋತ್ಸಾಹದಾಯಕ ನಿವೇಶನ ಮಂಜೂರಾತಿ ಪತ್ರ ಎಂದು ನಮೂದಿಸಿದ್ದಾರೆ. ಅಲ್ಲದೇ ಮಂಜೂರಾತಿ ಪತ್ರಗಳಲ್ಲಿ ನಿಯಮಗಳನ್ನು ಉಲ್ಲೇಖಿಸದೇ ತದ್ವಿರುದ್ಧವಾಗಿ ಕ್ರಮವಹಿಸಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಹಾಗೂ ನಿವೇಶನ ಹಂಚಿಕೆ ನಿಯಮಗಳನ್ನು ಪಾಲಿಸದೇ ತಮ್ಮ ಹಂತದಲ್ಲಿಯೇ ನಿಯಮಬಾಹಿರವಾಗಿ ಕ್ರಮವಹಿಸಿರುವುನ್ನು ತಾಂತ್ರಿಕ ಸಮಿತಿಯು ಪತ್ತೆ ಹಚ್ಚಿದೆ.
ಪ್ರಶ್ನಿತ ಜಮೀನು ದೇವನೂರು 2ನೇ ಹಂತದ ಬಡಾವಣೆಯಲ್ಲಿ ಒಳಗೊಂಡಿದೆ. ಇದನ್ನು 1991ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೋಗಾದಿ 1ನೇ ಹಂತದ ಬಡಾವಣೆಯನ್ನು 1981-82ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದರಿ ಬಡಾವಣೆಯಲ್ಲಿನ ನಿವೇಶನ ಸಂಖ್ಯೆ 396/2, 396/4, 396/5, 396/8 ಒಟ್ಟು 4 ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ (ನಿವೇಶನಗಳ ಹಂಚಿಕೆ )ನಿಯಮ 16ರ ಷರತ್ತು ಸಂಖ್ಯೆ (4)ನ್ನು ಉಲ್ಲಂಘಿಸಿ ಬದಲಿ ನಿವೇಶನವನ್ನು ಹಂಚಿಕೆ ಮಾಡಿರುವುದು ನಿಯಮಬಾಹಿರವಾಗಿರುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.