ಬೆಂಗಳೂರು; 2022-23ನೇ ಹಣಕಾಸಿನ ವರ್ಷದಲ್ಲಿ ತಾಲೂಕು ಪಂಚಾಯ್ತಿಗಳಲ್ಲಿ ಖರ್ಚಾಗದೇ ಉಳಿದಿರುವ 1,494 ಕೋಟಿ ರು ಗಳನ್ನು ಸಂವಿಧಾನದ ವಿಧಿಗೆ ವಿರುದ್ಧವಾಗಿ ಬಳಕೆ ಮಾಡಿಕೊಂಡಿದೆಯೇ ಎಂಬ ಕುರಿತು ಕೇಳಿದ್ದ ಪ್ರಶ್ನೆಗಳಿಗೆ ಆರ್ಥಿಕ ಇಲಾಖೆಯು 30 ದಿವಸಗಳಾದರೂ ಉತ್ತರ ನೀಡಿಲ್ಲ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಉತ್ತರ ನೀಡಿದ್ದ ಕಡತವನ್ನೇ ತೆರೆದಿಲ್ಲ ಎಂದು ಆರ್ಥಿಕ ಇಲಾಖೆಯು ಆರ್‍ಟಿಐ ಅರ್ಜಿಗೆ ಹಿಂಬರಹ ನೀಡಿತ್ತು. ಇದರ ಬೆನ್ನಲ್ಲೇ 30 ದಿನಗಳಾದರೂ ಸಹ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಮತ್ತು ಜಂಟಿ ಕಾರ್ಯದರ್ಶಿ ನಿತೀಶ್ ಅವರೂ ಸಹ ಯಾವುದೇ ಉತ್ತರವನ್ನೂ ನೀಡಿಲ್ಲ.
2022-23ನೇ ಹಣಕಾಸಿನ ಸಾಲಿನಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳ Fund 22ರಡಿ ಖರ್ಚಾಗದೇ ಉಳಿಕೆ ಇರುವ 1,494 ಕೋಟಿ ಮೊತ್ತವು ಖಜಾನೆಯಲ್ಲಿ ಸ್ವೀಕೃತವಾಗಿದೆಯೇ ಅಥವಾ ಇಲ್ಲವೇ ಎಂಬ ಕುರಿತು ‘ದಿ ಫೈಲ್’ ಪ್ರತಿಕ್ರಿಯೆ/ಉತ್ತರ ಬಯಸಿ 2024ರ ಮೇ 21ರಂದೇ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಎಲ್ ಕೆ ಅತೀಕ್ ಅವರಿಗೆ ಈ-ಮೈಲ್‌ನಲ್ಲಿ ಪ್ರಶ್ನಾವಳಿ ಪಟ್ಟಿಯನ್ನು ಕಳಿಸಿತ್ತು.
ದಿ ಫೈಲ್ ಕೇಳಿದ್ದ ಪ್ರಶ್ನೆಗಳಿವು
ಈ ಪ್ರಶ್ನಾವಳಿ ತಲುಪಿ 30 ದಿವಸಗಳಾದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆಯಾಗಲೀ, ಉತ್ತರವನ್ನಾಗಲೀ ಆರ್ಥಿಕ ಇಲಾಖೆಯು ಒದಗಿಸಿಲ್ಲ. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪ್ರತ್ಯೇಕವಾಗಿ ಈ ಮೇಲ್ ಮಾಡಲಾಗಿತ್ತು. ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಯು ಈ ಮೇಲ್‌ನ್ನು ಬಹು ದಿನಗಳವರೆಗೆ ತನ್ನ ಬಳಿಯೇ ಇಟ್ಟುಕೊಂಡಿತ್ತು. ನಂತರ ಅದನ್ನು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ರವಾನಿಸಿತ್ತು.
ಇಲ್ಲಿಯೂ ಸಹ ಈ ಮೇಲ್‌ನ್ನು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಯು ಈಗಲೂ ತನ್ನ ಬಳಿಯೇ ಇಟ್ಟುಕೊಂಡಿದೆ. ಈ ಬಗ್ಗೆ ‘ದಿ ಫೈಲ್’ ಪ್ರತಿನಿಧಿ ಪ್ರಶ್ನಿಸಿದ ನಂತರ ಈ ಮೈಲ್‌ನಲ್ಲಿ ಕೇಳಿದ್ದ ಪ್ರಶ್ನಾವಳಿ ಪಟ್ಟಿಯನ್ನು ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ನಿತೀಶ್ ಕೆ ಅವರಿಗೆ (ಕಂಪ್ಯೂಟರ್ ನಂಬರ್; 7887643) ವರ್ಗಾಯಿಸಿದೆ. ನಿತೀಶ್ ಅವರನ್ನೂ ಸಹ ‘ದಿ ಫೈಲ್’ ಪ್ರತಿನಿಧಿ ಸಂಪರ್ಕಿಸಿದ್ದರು.
ಅದಕ್ಕವರು ‘ನೋಡುತ್ತೇನೆ,’ ಎಂದಷ್ಟೇ ಪ್ರತಿಕ್ರಿಯಿಸಿದರು. ಇದಾದ ನಂತರವೂ ಯಾವುದೇ ಉತ್ತರ ಇದುವರೆಗೂ ನೀಡಿಲ್ಲ. ಸರ್ಕಾರದ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ರಾಜ್ಯದ ತಾಲೂಕು ಪಂಚಾಯ್ತಿಗಳಲ್ಲಿ 2022-23ನೇ ಸಾಲಿನಲ್ಲಿ ಖರ್ಚಾಗದೇ ಉಳಿಕೆಯಾಗಿದ್ದ 1,494 ಕೋಟಿ ರು ಮೊತ್ತವು ರಾಜ್ಯ ಖಜಾನೆಯಲ್ಲಿ ಸ್ವೀಕೃತವಾಗಿಲ್ಲ. ಸಂಚಿತ ನಿಧಿಗೆ ಸೇರಬೇಕಿದ್ದ ಈ ಮೊತ್ತವನ್ನು Recovery of overpayment ಎಂದು ಹೊಸದಾಗಿ ವ್ಯಾಖ್ಯಾನಿಸಿದೆ.
ಈ ಮೊತ್ತಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸಿದೆಯೇ ಎಂಬ ಅನುಮಾನವೂ ಇದೆ. ಸರ್ಕಾರವು ಈ ರೀತಿ ಸಾವಿರಾರು ಕೋಟಿ ರುಪಾಯಿಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸಿರುವುದು ಸಂಚಿತ ನಿಧಿಯ ಕಳ್ಳತನ ಮಾಡಿದಷ್ಟೇ ಗಂಭೀರ ಅಪರಾಧಿಕ ಕೃತ್ಯ ಎಂಬ ಆರೋಪವೂ ಕೇಳಿ ಬಂದಿದೆ.
ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಲ್ಲಿದ್ದ ಕೋಟ್ಯಂತರ ರುಪಾಯಿ ಮೊತ್ತವು ಅನಧಿಕೃತ ಖಾತೆಗಳಿಗೆ ವರ್ಗಾವಣೆ ಆಗಿರುವ ಪ್ರಕರಣದ ಕುರಿತು ಪ್ರತಿಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿವೆ. ಇದರ ಬೆನ್ನಲ್ಲೇ ಇದೀಗ 1,494 ಕೋಟಿ ರುಪಾಯಿ ರಾಜ್ಯ ಖಜಾನೆಯಲ್ಲಿ ಸ್ವೀಕೃತವಾಗಿಲ್ಲ ಎಂಬ ಮಾಹಿತಿಯು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.
ರಾಜ್ಯ ಖಜಾನೆಗೆ ಸ್ವೀಕೃತವಾಗದ 1,494 ಕೋಟಿ; ಸಂಚಿತ ನಿಧಿಯಿಂದ ಹೊರಗಿರಿಸಿ ವ್ಯವಹರಿಸಿದೆಯೇ ಸರ್ಕಾರ?
ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ Fund II ನಲ್ಲಿ ಖರ್ಚಾಗದೇ ಉಳಿಕೆ ಇರುವ ಮೊತ್ತವು ಸಂಚಿತ ನಿಧಿಗೆ ಜಮೆಯಾಗಿದೆಯೇ ಇಲ್ಲವೇ ಎಂಬ ಕುರಿತು ಶಿವಮೊಗ್ಗ ಮೂಲದ ವಕೀಲ ಹಾಗೂ ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿ ಪ್ರಾಣೇಶ್ ಎ ಎನ್ ಎಂಬುವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಾನೂನು ಸೂಚನಾ ಪತ್ರ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಖಜಾನೆ ಇಲಾಖೆಯು ನೀಡಿರುವ ಮಾಹಿತಿಗೆ ಮಹತ್ವ ಬಂದಿತ್ತು
1,494 ಕೋಟಿ ರು ಜಮೆ; ಸಿಎಂ ಸಹಿಯೊಂದಿಗೆ ಉತ್ತರಿಸಿದ್ದ ಕಡತ ತೆರೆದಿಲ್ಲವೆಂದು ಸುಳ್ಳು ಹೇಳಿದ ಸರ್ಕಾರ
‘Redumption in Expenditure ಯಾವತ್ತೂ ಸಹ ರಾಜ್ಯದ ರೆವಿನ್ಯೂ ಆಗಿರುವುದಿಲ್ಲ. ಇದು ಸಂಚಿತ ನಿಧಿಗೆ ಸೇರಬೇಕಾದ ಹಣ ಆಗಿರುತ್ತದೆ. ಆದರೆ ಸರ್ಕಾರವು ಇದೇ ಮೊತ್ತಗಳನ್ನು Recovery of overpayment ಎಂದು ಹೊಸದಾಗಿ ವ್ಯಾಖ್ಯಾನಿಸಿದೆ. ಈ ಮೊತ್ತಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸುತ್ತಿದೆ. ಇದುಸಂವಿಧಾನ ಬಾಹಿರ ಕೃತ್ಯವಾಗಿರುತ್ತದೆ. ಇದು ಒಂದು ರೀತಿಯಲ್ಲಿ ನಿಧಿಯನ್ನು ಮಾರ್ಗಪಲ್ಲಟ ಮಾಡಿದಂತಾಗುತ್ತದೆ. ವಿಧಾನಮಂಡಲದ ಗಮನಕ್ಕೆ ತಾರದೇ ಸರ್ಕಾರವು ತಾನೇ ಹಣಕಾಸನ್ನು ಬಳಸಿದಂತಾಗಿರುತ್ತದೆ,’ ಎಂದು ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿ ಹಾಗೂ ವಕೀಲ ಪ್ರಾಣೇಶ್ ಅವರು ಅನುಮಾನಿಸಿದ್ದನ್ನು ಸ್ಮರಿಸಬಹುದು.