ರಾಜ್ಯ ಖಜಾನೆಗೆ ಸ್ವೀಕೃತವಾಗದ 1,494 ಕೋಟಿ; ಸಂಚಿತ ನಿಧಿಯಿಂದ ಹೊರಗಿರಿಸಿ ವ್ಯವಹರಿಸಿದೆಯೇ ಸರ್ಕಾರ?

ಬೆಂಗಳೂರು; ರಾಜ್ಯದ ತಾಲೂಕು ಪಂಚಾಯ್ತಿಗಳಲ್ಲಿ 2022-23ನೇ ಸಾಲಿನಲ್ಲಿ ಖರ್ಚಾಗದೇ ಉಳಿಕೆಯಾಗಿದ್ದ 1,494 ಕೋಟಿ ರು ಮೊತ್ತವು ರಾಜ್ಯ ಖಜಾನೆಯಲ್ಲಿ ಸ್ವೀಕೃತವಾಗಿಲ್ಲ. ಸಂಚಿತ ನಿಧಿಗೆ ಸೇರಬೇಕಿದ್ದ ಈ ಮೊತ್ತವನ್ನು Recovery of overpayment ಎಂದು ಹೊಸದಾಗಿ ವ್ಯಾಖ್ಯಾನಿಸಿದೆ. ಈ ಮೊತ್ತಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

 

ಸರ್ಕಾರವು ಈ ರೀತಿ  ಸಾವಿರಾರು ಕೋಟಿ ರುಪಾಯಿಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸಿರುವುದು ಸಂಚಿತ ನಿಧಿಯ ಕಳ್ಳತನ ಮಾಡಿದಷ್ಟೇ ಗಂಭೀರ ಅಪರಾಧಿಕ ಕೃತ್ಯ ಎಂಬ ಆರೋಪವೂ ಕೇಳಿ ಬಂದಿದೆ.

 

ವಾಲ್ಮೀಕಿ ಪರಿಶಿಷ್ಟ ಅಭಿವೃದ್ಧಿ ನಿಗಮದಲ್ಲಿದ್ದ ಕೋಟ್ಯಂತರ ರುಪಾಯಿ ಮೊತ್ತವು ಅನಧಿಕೃತ ಖಾತೆಗಳಿಗೆ ವರ್ಗಾವಣೆ ಆಗಿರುವ ಪ್ರಕರಣದ ಕುರಿತು ಪ್ರತಿಪಕ್ಷಗಳು ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿಬಿದ್ದಿವೆ. ಇದರ ಬೆನ್ನಲ್ಲೇ ಇದೀಗ 1,494 ಕೋಟಿ ರುಪಾಯಿ ರಾಜ್ಯ ಖಜಾನೆಯಲ್ಲಿ ಸ್ವೀಕೃತವಾಗಿಲ್ಲ ಎಂಬ ಮಾಹಿತಿಯು ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲಿದೆ.

 

ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ Fund II ನಲ್ಲಿ ಖರ್ಚಾಗದೇ ಉಳಿಕೆ ಇರುವ ಮೊತ್ತವು ಸಂಚಿತ ನಿಧಿಗೆ ಜಮೆಯಾಗಿದೆಯೇ ಇಲ್ಲವೇ ಎಂಬ ಕುರಿತು ಶಿವಮೊಗ್ಗ ಮೂಲದ ವಕೀಲ ಹಾಗೂ ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿ ಪ್ರಾಣೇಶ್‌ ಎ ಎನ್‌ ಎಂಬುವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಾನೂನು ಸೂಚನಾ ಪತ್ರ ನೀಡಿದ್ದರು. ಇದರ ಬೆನ್ನಲ್ಲೇ  ರಾಜ್ಯ ಖಜಾನೆ ಇಲಾಖೆಯು ನೀಡಿರುವ  ಮಾಹಿತಿಗೆ ಮಹತ್ವ ಬಂದಿದೆ.

 

ಪ್ರಾಣೇಶ್‌ ಅವರು ನೀಡಿದ್ದ ಕಾನೂನು ಸೂಚನಾ ಪತ್ರಗಳು ಮತ್ತು ರಾಜ್ಯ  ಖಜಾನೆ ಇಲಾಖೆಯು ನೀಡಿರುವ ಮಾಹಿತಿ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

2023ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಪರಿಷತ್‌ ಸದಸ್ಯ ಡಿ ಎಸ್‌ ಅರುಣ್‌ ಅವರು ಉಳಿಕೆಯಾಗಿರುವ ಅನುದಾನದ ಕುರಿತು  ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಆರ್ಥಿಕ ಇಲಾಖೆಯ ಕಡತ (ಸಂಖ್ಯೆ ಆಇ; 917 ವೆಚ್ಚ/ 6 2023)ವನ್ನು ಉಲ್ಲೇಖಿಸಿದ್ದ ಸಿದ್ದರಾಮಯ್ಯ ಅವರು ಉಳಿಕೆಯಾದ ಅನುದಾನವನ್ನು ರಾಜ್ಯದ ಸಂಚಿತ ನಿಧಿಗೆ ನಿಯಮಿತವಾಗಿ ಜಮೆ ಮಾಡಲಾಗುತ್ತಿದೆ ಎಂದು ಉತ್ತರಿಸಿದ್ದರು.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ನೀಡಿದ್ದ ಉತ್ತರದ ಪ್ರಕಾರ 2023ರ ಡಿಸೆಂಬರ್‍‌ 31ರ ಅಂತ್ಯಕ್ಕೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳ ನಿಧಿಗಳಲ್ಲಿ 1,953 ಕೋಟಿ ರು ಅನುದಾನ ವೆಚ್ಚವಾಗದೇ (Redumption in Expendiutre) ಉಳಿಕೆಯಾಗಿತ್ತು. ಈ ಪೈಕಿ ಜಿಲ್ಲಾ ಪಂಚಾಯತ್‌ಗಳಲ್ಲಿ 459 ಕೋಟಿ ರು., ತಾಲೂಕು ಪಂಚಾಯ್ತಿಗಳಲ್ಲಿ 1,494 ಕೋಟಿ ರು ಸೇರಿ ಒಟ್ಟಾರೆ 1,953 ಕೋಟಿ ರು ಉಳಿಕೆಯಾಗಿತ್ತು.

 

 

‘ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳ ನಿಧಿ II ಅಡಿಯಲ್ಲಿ ಉಳಿಕೆಯಾದ ಅನುದಾನವನ್ನು ರಾಜ್ಯದ ಸಂಚಿತ ನಿಧಿಗೆ ನಿಯಮಿತವಾಗಿ ಜಮೆ ಮಾಡಲಾಗುತ್ತಿದೆ. ಇದನ್ನು ಹೆಚ್ಚಿಗೆ ಪಾವತಿಯಾದ ಮೊತ್ತದ ವಸೂಲಿ ಎಂದು ಪರಿಗಣಿಸಲಾಗಿದೆ,’ ಎಂದು ಸಿದ್ದರಾಮಯ್ಯ ಅವರು ಉತ್ತರಿಸಿದ್ದರು.

 

 

ಆದರೆ ವಾಸ್ತವದಲ್ಲಿ ಈ ಹಣವು  ರಾಜ್ಯ ಖಜಾನೆ ಇಲಾಖೆಗೆ ಸ್ವೀಕೃತವಾಗಿಲ್ಲ.  ‘2022-23ನೇ ಹಣಕಾಸಿನ ಸಾಲಿನಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಗಳ Fund IIರ ಅಡಿ ಖರ್ಚಾಗದೇ ಉಳಿಕೆ ಇರುವ  1,494 ಕೋಟಿ ರು ಮೊತ್ತವು ಈ ಖಜಾನೆಯಲ್ಲಿ ಸ್ವೀಕೃತವಾಗಿರುವುದಿಲ್ಲ,’ ಎಂದು ರಾಜ್ಯ ಖಜಾನೆ ಇಲಾಖೆಯು  2024ರ ಏಪ್ರಿಲ್‌ 20ರಂದು ಪ್ರಾಣೇಶ್‌ ಅವರಿಗೆ ಒದಗಿಸಿರುವ ಪತ್ರದಲ್ಲಿ ಉತ್ತರಿಸಿದೆ.

 

 

ಬಳಕೆಯಾಗದ 1,494 ಕೋಟಿ ರುಪಾಯಿಗಳನ್ನು ಸಂಚಿತ ನಿಧಿಗೆ ಸೇರಿಸಬೇಕಿತ್ತು. ಆದರೆ ಸರ್ಕಾರವು ಈ ಹಣವನ್ನು ಎಲ್ಲಿ, ಹೇಗೆ ಬಳಕೆ ಮಾಡಿಕೊಂಡಿದೆ ಅಥವಾ ಮಾರ್ಗಪಲ್ಲಟ ಮಾಡಿದೆಯೇ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲವಾಗಿದೆ. ಹೀಗಾಗಿಯೇ ವಕೀಲ ಹಾಗೂ ಖಜಾನೆ ಇಲಾಖೆಯ ನಿವೃತ್ತ ಅಧಿಕಾರಿ ಪ್ರಾಣೇಶ್‌ ಅವರು ಸರ್ಕಾರಕ್ಕೆ ಹಲವು ಬಾರಿ ಕಾನೂನು ಸೂಚನಾ ಪತ್ರಗಳನ್ನು ಕಳಿಸಿದ್ದಾರೆ.

 

 

ಅಲ್ಲದೇ ಇದೇ ಸೂಚನಾ ಪತ್ರದಲ್ಲಿ ಸಂವಿಧಾನದ ವಿಧಿ 202 ಹಾಗೂ 206ರಲ್ಲಿನ ಅಂಶಗಳಿಗೆ ವಿರುದ್ಧವಾಗಿ ಬಳಕೆ ಮಾಡಿಕೊಂಡಿರುವ ಬಗ್ಗೆ ಪ್ರಾಣೇಶ್‌ ಅವರು ಹಲವು ರೀತಿಯಲ್ಲಿ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸೂಕ್ತ ಆಧಾರಗಳನ್ನೂ ಒದಗಿಸಿರುವುದು ಗೊತ್ತಾಗಿದೆ. ಆದರೆ ಸರ್ಕಾರವು ಯಾವುದೇ ಪ್ರತಿಕ್ರಿಯೆಗಳನ್ನೂ ನೀಡದಿರುವುದು ಪ್ರಾಣೇಶ್‌ ಅವರು ಎತ್ತಿರುವ ಅನುಮಾನಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.

 

‘ಕರ್ನಾಟಕ ಸರ್ಕಾರವು 2022-23ನೇ ಹಣಕಾಸಿನ ವರ್ಷದಲ್ಲಿ ರಾಜ್ಯ ಸಂಚಿತ ನಿಧಿಗೆ ಸೇರಬೇಕಾದ ಸಹಸ್ರಾರು ಕೋಟಿ ರುಪಾಯಿಗಳನ್ನು ( ಬಳಕೆಯಾಗದ ಅನುದಾನ ) ಸಂಚಿತ ನಿಧಿಗೆ ಸೇರಿಸದೇ ಸಂವಿಧಾನದ ವಿಧಿ 202 ಹಾಗೂ 206ರಲ್ಲಿ ಪ್ರದತ್ತವಾದ ಅಂಶಗಳಿಗೆ ವಿರುದ್ಧವಾಗಿ ಬಳಕೆ ಮಾಡಿಕೊಂಡಿದೆ,’ ಎಂದು ಪ್ರಾಣೇಶ್‌ ಅವರು ಬಲವಾಗಿ ಅನುಮಾನ ವ್ಯಕ್ತಪಡಿಸಿರುವುದು ಕಾನೂನು ಸೂಚನಾ ಪತ್ರದಿಂದ ತಿಳಿದು ಬಂದಿದೆ.

 

ಕರ್ನಾಟಕ ಖಜಾನೆ ಸಂಹಿತೆ 1963ರ ಸಂಪುಟ 2ರ ನಮೂನೆ 31ರಲ್ಲಿನ ಕ್ರೋಢೀಕೃತ ದಾಖಲೆಗೆ ತಾಳೆಯಾಗುವುದಿಲ್ಲ. ಅಂದರೆ ಬಳಕೆಯಾಗದ ಅನುದಾನ 1,494 ಕೋಟಿ ರುಪಾಯಿಗಳು ರಾಜ್ಯದ ಸಂಚಿತ ನಿಧಿಗೆ ಜಮೆ ಆಗಿಲ್ಲ ಎಂಬುದು ಸ್ಪಷ್ಟವಾಗಿರುತ್ತದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ರಿಟ್‌ ( 44655/2013)ರ ಆದೇಶ 28.02.2014ರ ನಂತರ ಸರ್ಕಾರವು 2016ರಲ್ಲೇ ಆದೇಶ ಹೊರಡಿಸಿತ್ತು. (ಆದೇಶ ಸಂಖ್ಯೆ FD 437.EXP-6/2016, ದಿನಾಂಕ 22.12.2016) ಇದರ ಪ್ರಕಾರ ಬಳಕೆಯಾಗದ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ನಿಧಿ 2ರ ಮೊತ್ತಗಳನ್ನು ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡುವ ಪ್ರಕ್ರಿಯೆ ತಿಳಿಸಲಾಗಿತ್ತು. ಇಂತಹ ಆದೇಶವಿದ್ದರೂ ಸಹ ಕರ್ನಾಟಕ ಸರ್ಕಾರವಾಗಲೀ ಅಥವಾ ಮಹಾಲೇಖಪಾಲರಾಗಲೀ ಈ ಆದೇಶವನ್ನು ಕ್ರಮಬದ್ದವಾಗಿ ಪಾಲನೆ ಮಾಡಿಲ್ಲ ಎಂದು ತಿಳಿದು ಬಂದಿದೆ.

 

 

‘Redumption in Expenditure ಯಾವತ್ತೂ ಸಹ ರಾಜ್ಯದ ರೆವಿನ್ಯೂ ಆಗಿರುವುದಿಲ್ಲ. ಇದು ಸಂಚಿತ ನಿಧಿಗೆ ಸೇರಬೇಕಾದ ಹಣ ಆಗಿರುತ್ತದೆ. ಆದರೆ ಸರ್ಕಾರವು ಇದೇ ಮೊತ್ತಗಳನ್ನು Recovery of overpayment ಎಂದು ಹೊಸದಾಗಿ ವ್ಯಾಖ್ಯಾನಿಸಿದೆ. ಈ ಮೊತ್ತಗಳನ್ನು ಸಂಚಿತ ನಿಧಿಯಿಂದ ಹೊರಗೆ ಇರಿಸಿ ವ್ಯವಹರಿಸುತ್ತಿದೆ. ಇದುಸಂವಿಧಾನ ಬಾಹಿರ ಕೃತ್ಯವಾಗಿರುತ್ತದೆ. ಇದು ಒಂದು ರೀತಿಯಲ್ಲಿ ನಿಧಿಯನ್ನು ಮಾರ್ಗಪಲ್ಲಟ ಮಾಡಿದಂತಾಗುತ್ತದೆ. ವಿಧಾನಮಂಡಲದ ಗಮನಕ್ಕೆ ತಾರದೇ ಸರ್ಕಾರವು ತಾನೇ ಹಣಕಾಸನ್ನು ಬಳಸಿದಂತಾಗಿರುತ್ತದೆ,’ ಎಂದು ಅನುಮಾನಿಸುತ್ತಾರೆ ಪ್ರಾಣೇಶ್‌.

 

ವಿಧಾನಮಂಡಲದ ಅನುಮೋದನೆ ಪಡೆದ ಹಣವನ್ನು ಒಂದು ವೇಳೆ ನಿಯಮಬಾಹಿರವಾಗಿ ಬಳಕೆ ಮಾಡಿದಲ್ಲಿ ಆ ಕೃತ್ಯವನ್ನು ಹಣಕಾಸಿನ ದುರುಪಯೋಗ ಎನ್ನಬಹುದು. ಆದರೆ ಈ ಪ್ರಕರಣದಲ್ಲಿ ವಿಧಾನಮಂಡಲದ ಅನುಮೋದನೆ ಪಡೆಯದೇ ಸಂಚಿತ ನಿಧಿಗೆ ಸೇರಬೇಕಾದ ಮೊತ್ತವನ್ನು ಜಮೆ ಮಾಡದೇ ಯಾವುದೇ ಉದ್ದೇಶಕ್ಕೆ ಬಳಕೆ ಮಾಡಿದರೂ ಸಹ ಅದು ಸಂಚಿತ ನಿಧಿಯ ಕಳ್ಳತನ ಮಾಡಿದಷ್ಟೇ ಗಂಭೀರ ಅಪರಾಧಿಕ ಕೃತ್ಯ ಎನಿಸುತ್ತದೆ ಎಂಬ ಆರೋಪವೂ ಕೇಳಿ ಬಂದಿದೆ.

 

‘ಒಂದು ಅಂದಾಜಿನ ಪ್ರಕಾರ ರಾಜ್ಯ ಸರ್ಕಾರವು ಸುಮಾರು 50ರಿಂದ 60 ಸಾವಿರ ಕೋಟಿ ರುಪಾಯಿಗಳಷ್ಟು ರಾಜ್ಯದ ಸಂಚಿತ ನಿಧಿಗೆ ಸೇರಬೇಕಾದ ಹಣವನ್ನು ಜಮೆ ಮಾಡದೇ ಸಂವಿಧಾನದ ವಿಧಿ 202 ಹಾಗೂ 206ಕ್ಕೆ ವಿರುದ್ಧವಾಗಿ ಬಳಕೆ ಮಾಡಿಕೊಂಡಿದೆ,’ ಎಂದು ಪ್ರಾಣೇಶ್‌ ಅವರು ನೀಡಿರುವ ಕಾನೂನು ಸೂಚನಾ ಪತ್ರದಲ್ಲಿ ಅನುಮಾನಿಸಿದ್ದಾರೆ.

 

ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಒಂದು ವೇಳೆ ಇದು ಸಂವಿಧಾನದ ವಿಧಿ 202 ಹಾಗೂ 206ಕ್ಕೆ ವಿರುದ್ಧವಾಗಿರುವುದು ರುಜುವಾತು ಆದಲ್ಲಿ ಇದಕ್ಕೆ ಕಾರಣರಾದ ಸಂಬಂಧಿತರಿಂದ ವಸೂಲಿ ಮಾಡಿ ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಬೇಕು. ಈ ಕಾರ್ಯ ಮಾಡದಿದ್ದಲ್ಲಿ ಮುಂದೊಂದು ದಿನ ಸರ್ಕಾರಿ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಅಥವಾ ಇತರೆ ಕಾರಣ ಹೇಳಿ ರಾಜ್ಯದ ಆಸ್ತಿ, ಸಂಪತ್ತು, ಹಣವನ್ನು ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿ ವಿತರಣೆ ಮಾಡಲು ಪೂರ್ವ ನಿದರ್ಶನವಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

‘ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಿ ಒಂದು ವೇಳೆ ಇದು ಸಂವಿಧಾನದ ವಿಧಿ 202 ಹಾಗೂ 206ಕ್ಕೆ ವಿರುದ್ಧವಾಗಿರುವುದು ರುಜುವಾತು ಆದಲ್ಲಿ ಇದಕ್ಕೆ ಕಾರಣರಾದ ಸಂಬಂಧಿತರಿಂದ ವಸೂಲಿ ಮಾಡಿ ರಾಜ್ಯದ ಸಂಚಿತ ನಿಧಿಗೆ ಜಮೆ ಮಾಡಬೇಕು,’ ಎಂದು ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts