ಗ್ಯಾರಂಟಿ ಪ್ರಚಾರ; ಅನುದಾನ ಕೊರತೆಯಿದ್ದರೂ ರೈಟ್‌ ಪೀಪಲ್‌ನ 9.25 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಒಪ್ಪಿಗೆ

ಬೆಂಗಳೂರು;  ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ, ನಿರಂತರ ಮೇಲ್ವಿಚಾರಣೆ, ಫಲಾನುಭವಿ ಕೇಂದ್ರಿತ ನೇರ ಮತ್ತು ನಿರಂತರ ಸಂವಹನಕ್ಕೆ ರೈಟ್‌ ಪೀಪಲ್‌ ನೀಡಿದ್ದ ಹಣಕಾಸಿನ ಪ್ರಸ್ತಾವನೆಯನ್ನೇ ರಾಜ್ಯ ಕಾಂಗ್ರೆಸ್‌ ಸರ್ಕಾರವು  ಯಥಾವತ್ತಾಗಿ ಒಪ್ಪಿಕೊಂಡಿರುವುದು ಇದೀಗ ಮುನ್ನೆಲೆಗೆ ಬಂದಿದೆ.

 

ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯು ನೀಡಿದ್ದ ಪ್ರಸ್ತಾವನೆಯನ್ನು ಯಥಾವತ್ತಾಗಿ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ ರೈಟ್‌ ಪೀಪಲ್‌ ಹೆಸರಿನ ಸಂಸ್ಥೆಯು ನೀಡಿದ್ದ 9.25 ಕೋಟಿ ರು. ಅಂದಾಜು ವೆಚ್ಚದ ಪ್ರಸ್ತಾವನೆಯನ್ನೂ ಆರ್ಥಿಕ ಇಲಾಖೆಯೂ ಯಥಾವತ್ತಾಗಿ ಒಪ್ಪಿಕೊಂಡಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ  ಅನುಮೋದಿಸಿದ್ದಾರೆ.

 

ವಿಶೇಷವೆಂದರೇ  9.25 ಕೋಟಿ ರುಗಳನ್ನು ಒದಗಿಸಲು ಸರ್ಕಾರದ ಬಳಿ ಅನುದಾನವೇ ಇರಲಿಲ್ಲ. ಅನುದಾನ ಕೊರತೆ ಇದ್ದರೂ ರೈಟ್‌ ಪೀಪಲ್‌ ಸಲ್ಲಿಸಿದ್ದ ಪ್ರಸ್ತಾವನೆಯನ್ನು  ಒಪ್ಪಿಕೊಂಡಿರುವ ಸರ್ಕಾರವು ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ. ಈ ಸಂಬಂಧ ‘ದಿ ಫೈಲ್‌’ ,  ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಗ್ಯಾರಂಟಿ ಯೋಜನೆ ಕುರಿತಾಗಿ ಮೌಲ್ಯಮಾಪನ, ನಿರಂತರ ನಿಗಾವಣೆ ಸೇರಿದಂತೆ ಮತ್ತಿತರೆ ಸೇವೆಗಳನ್ನು ಪಡೆಯಲು ಸ್ಪರ್ಧಾತ್ಮಕ ಟೆಂಡರ್‌ ಆಹ್ವಾನಿಸಲು ಸಾಕಷ್ಟು  ಅವಕಾಶಗಳಿದ್ದವು. ಅಲ್ಲದೇ ಈ ಕುರಿತು ನುರಿತ ಮತ್ತು ಅನುಭವವುಳ್ಳ ಕಂಪನಿ, ಸಂಸ್ಥೆಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆಯ (ಇಒಐ) ಅರ್ಜಿ ಆಹ್ವಾನಿಸಬಹುದಿತ್ತು. ಅಂದಾಜು ವೆಚ್ಚವನ್ನು ದರ ಸಂಧಾನದ ಮೂಲಕ ನಿಗದಿಪಡಿಸಬಹುದಿತ್ತು. ಆದರೆ ಸರ್ಕಾರವು ಈ ಯಾವ ಪ್ರಕ್ರಿಯೆಗಳನ್ನೂ ನಡೆಸಿಲ್ಲ. ಬದಲಿಗೆ ರೈಟ್‌ ಪೀಪಲ್‌ಗೆ ನೇರವಾಗಿ  4(ಜಿ) ವಿನಾಯಿತಿ ನೀಡಿದೆ.

 

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ, ನಿರಂತರ ಮೇಲ್ವಿಚಾರಣೆ, ಫಲಾನುಭವಿ ಕೇಂದ್ರಿತ ನೇರ ಮತ್ತು ನಿರಂತರ ಸಂವಹನ ವ್ಯವಸ್ಥೆಗೆ ಸಂಬಂಧಿಸಿದ ಯೋಜನೆ ಕುರಿತು ಸರ್ಕಾರವು ಯಾವುದೇ ಪ್ರಸ್ತಾವನೆ ಆಹ್ವಾನಿಸದಿದ್ದರೂ ರೈಟ್‌ ಪೀಪಲ್‌ ಸರ್ಕಾರಕ್ಕೆ ನೇರವಾಗಿ ಹಣಕಾಸನ್ನೂ ಒಳಗೊಂಡಂತೆ ಪ್ರಸ್ತಾವ ಸಲ್ಲಿಸಿತ್ತು.

 

ಇದನ್ನಾಧರಿಸಿ ವಾರ್ತಾ ಇಲಾಖೆಯ ಆಯುಕ್ತರು 4(ಜಿ) ವಿನಾಯಿತಿ ಕೋರಿದ್ದರು.

 

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕನ್ನಡ, ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವಾಲಯವೂ ಮರು ಮಾತಿಲ್ಲದೇ ಮಂಜೂರಾತಿ ನೀಡಿದೆ.  ಟೆಂಡರ್‌ ಆಹ್ವಾನಿಸುವ ಕುರಿತು ವಾರ್ತಾ ಮತ್ತು ಆರ್ಥಿಕ ಇಲಾಖೆಯು ತುಟಿ ಬಿಚ್ಚಿಲ್ಲ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಈ ಪ್ರಸ್ತಾವನೆಗೆ ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಹಣಕಾಸು ಪ್ರಸ್ತಾವನೆಯಲ್ಲೇನಿದೆ?

 

ವಿಷಯ ಅಧ್ಯಯನ ತಂಡದಲ್ಲಿ  5 ಸದಸ್ಯರಿಗೆ ಒಟ್ಟಾರೆ 10.00 ಲಕ್ಷ, ಸುದ್ದಿ ಸಂಗ್ರಹಣಾ ತಂಡದಲ್ಲಿನ 10 ಸದಸ್ಯರಿಗೆ 10.00 ಲಕ್ಷ, ಬರಹಗಾರರ ತಂಡದಲ್ಲಿ 10 ಸದಸ್ಯರಿಗೆ 15.00 ಲಕ್ಷ, ಸಂವಹನ ತಂಡದಲ್ಲಿನ 10 ಸದಸ್ಯರಿಗೆ 15.00 ಲಕ್ಷ, ಛಾಯಾಗ್ರಹಣ ತಂಡದ 10 ಸದಸ್ಯರಿಗೆ 30.00 ಲಕ್ಷ, ವಿನ್ಯಾಸ ತಂಡದಲ್ಲಿನ 15 ಸದಸ್ಯರಿಗೆ 20 ಲಕ್ಷ, ಸಲಕರಣೆಗಳ ಬಾಡಿಗೆಗೆ 50.00 ಲಕ್ಷ, ಸಹಾಯಕರ ತಂಡದಲ್ಲಿನ 30 ಸದಸ್ಯರಿಗೆ 50.00 ಲಕ್ಷ, ತಳ ಮಟ್ಟದ ಅನುಷ್ಠಾನ ತಂಡದಲ್ಲಿನ 5 ಸದಸ್ಯರಿಗೆ 20.00 ಲಕ್ಷ, ಸಂಸ್ಥೆಗೆ 11.25 ಲಕ್ಷ ರು ಸಂಭಾವನೆ ಸೇರಿ ತಿಂಗಳಿಗೆ 2,31,25,000.00 ರು. ನಂತೆ ನಾಲ್ಕು ತಿಂಗಳಿಗೆ 9.25 ಕೋಟಿ ರು ಅಂದಾಜು ವೆಚ್ಚದ ಹಣಕಾಸು ಪ್ರಸ್ತಾವನೆಯನ್ನು 2024ರ ಜನವರಿ 29ರಂದು  ಸಲ್ಲಿಸಿರುವುದು ಗೊತ್ತಾಗಿದೆ.

 

ವಾರ್ತಾ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಗೆ 2 ತಿಂಗಳಿನೊಳಗೇ ಆರ್ಥಿಕ ಇಲಾಖೆಯೂ ಸಹ 4(ಜಿ) ವಿನಾಯಿತಿ ನೀಡಿ 2024ರ ಮಾರ್ಚ್‌ 11ರಂದು ಅಧಿಸೂಚನೆಯನ್ನೂ ಹೊರಡಿಸಿರುವುದು ತಿಳಿದು ಬಂದಿದೆ.

 

ಆರ್ಥಿಕ ಇಲಾಖೆಯು 2024ರ ಮಾರ್ಚ್‌ 11ರಂದು ಹೊರಡಿಸಿದ್ದ  ಅಧಿಸೂಚನೆಯಲ್ಲಿ   ರೈಟ್‌ ಪೀಪಲ್‌ ಕಂಪನಿಯೇ, ಸ್ವಯಂ ಸೇವಾ ಸಂಸ್ಥೆಯೇ, ಎಲ್‌ಎಲ್‌ಪಿ ಮಾದರಿಯೇ, ಸಹಕಾರ ಸಂಸ್ಥೆಯೇ ಎಂಬ ಬಗ್ಗೆ ಪ್ರಾಥಮಿಕ  ಮಾಹಿತಿಯನ್ನೂ ಉಲ್ಲೇಖಿಸಿಲ್ಲ.

 

ರೈಟ್‌ ಪೀಪಲ್‌ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಪ್ರಶಾಂತಕುಮಾರ ಬಿ ಎಂಬುವರು ಸಹಿ ಮಾಡಿದ್ದಾರೆ. ಜಿಎಸ್‌ಟಿ ದಾಖಲೆಗಳ ಪ್ರಕಾರ ರೈಟ್‌ ಪೀಪಲ್‌ ಪ್ರೊಪ್ರೈಟರ್‌ಶಿಪ್‌ ಸಂಸ್ಥೆಯಾಗಿದೆ. ದಾಖಲೆಗಳಲ್ಲಿ ಲತಾ ಪ್ರಶಾಂತಕುಮಾರ ಎಂಬುವರ ಹೆಸರಿದೆ.

 

ಬೆಂಗಳೂರಿನ ಕೆಂಗೇರಿಯ ಮೈಲಸಂದ್ರದ ಮೂಕಾಂಬಿಕ ಲೇಔಟ್‌ನ ಮೊದಲನೇ ಅಡ್ಡ ರಸ್ತೆಯಲ್ಲಿ ನಂ 44ರ ವಿಳಾಸವನ್ನು ಪ್ರಸ್ತಾವನೆಯಲ್ಲಿ ನಮೂದಿಸಿದೆ.

 

ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆ ಪ್ರಕಾರ ರೈಟ್‌ ಪೀಪಲ್‌ ಸಂಸ್ಥೆಯು ಹದಿಮೂರು ವರ್ಷಗಳಿಂದ ಬರವಣಿಗೆ, ವಿನ್ಯಾಸ, ರೀಸರ್ಚ್‌, ಸಮೀಕ್ಷೆಗಳ ಕೆಲಸದಲ್ಲಿ ತೊಡಗಿದೆ. ಆದರೆ ಯಾವ ರೀತಿಯ ಬರವಣಿಗೆ, ವಿನ್ಯಾಸ, ಯಾವ ಕಾರ್ಯಗಳಲ್ಲಿ ರೀಸರ್ಚ್‌, ಯಾವ ಬಗೆಯ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದೆ ಎಂಬ ಕನಿಷ್ಟ ಮಾಹಿತಿಗಳೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿಲ್ಲ. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಆರ್ಥಿಕ ಇಲಾಖೆಯೂ ಈ ಅಂಶಗಳ ಬಗ್ಗೆ ಚಕಾರವೆತ್ತಿಲ್ಲ.

 

ಈ ಕುರಿತು  ‘ದಿ ಫೈಲ್‌’ ಮಾಹಿತಿ ಕೋರಿ ರೈಟ್‌ ಪೀಪಲ್‌ ಸಂಸ್ಥೆಗೆ ಪ್ರಶ್ನಾವಳಿಯನ್ನು ಇ-ಮೈಲ್‌ ಮೂಲಕ 2024ರ ಏಪ್ರಿಲ್‌ 6ರಂದು  ರವಾನಿಸಿತ್ತು.

 

1. ರೈಟ್ ಪೀಪಲ್ ಕಳೆದ 13  ವರ್ಷಗಳಲ್ಲಿ ರೈಟ್ ಪೀಪಲ್ ಸಂಸ್ಥೆಯು ನಿರ್ವಹಿಸಿರುವ ಅಥವಾ ಅನುಷ್ಠಾನಗೊಳಿಸಿರುವ ಮತ್ತು ಕಾರ್ಯಗತಗೊಳಿಸಿರುವ ಪ್ರಮುಖ ಕೆಲಸಗಳು ಯಾವುವು?

2. ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಸರ್ಕಾರದ ಆದೇಶ ಸಂಖ್ಯೆ ಕೆಸಿಐ – ಪಿಐಪಿ/97/2024 ಬೆಂಗಳೂರು, ದಿನಾಂಕ: 13/3/2024 ರ ಅನ್ವಯ ರೈಟ್ ಪೀಪಲ್‌ಗೆ ನೀಡಲಾದ ಕಾರ್ಯಾದೇಶದಂತೆ ಈ ಯೋಜನೆಯಲ್ಲಿ ಎಷ್ಟು ಜನ ಕಾರ್ಯನಿರ್ವಹಿಸುತ್ತಿದ್ದಾರೆ? ಇದರ ವಿವರ ನೀಡುವುದು.

3. ರೈಟ್ ಪೀಪಲ್ ಸಂಸ್ಥೆಯ ಕೇಂದ್ರ ಕಚೇರಿ, ಶಾಖಾ ಕಚೇರಿಗಳ ವಿವರ ಹಾಗೂ ವಿಳಾಸಗಳನ್ನು ನೀಡುವುದು.
4. ರೈಟ್ ಪೀಪಲ್ ಸಂಸ್ಥೆಯು ಸರ್ಕಾರದ ಈ ಕಾರ್ಯಾದೇಶದ ಅನುಷ್ಠಾನದ ಜವಾಬ್ದಾರಿ ಹೊರುವಷ್ಟು ಹಣಕಾಸಿನ ಸಂಪನ್ಮೂಲ ಹಾಗೂ ಸಾಮರ್ಥ್ಯವನ್ನು ಹೊಂದಿದೆಯೇ?
5. ರೈಟ್ ಪೀಪಲ್ ಸಂಸ್ಥೆಯ ಡಿಜಿಟಲ್ ಪ್ರೆಸೆನ್ಸ್ ಕುರಿತಂತೆ (ವೆಬ್‌ಸೈಟ್, ನ್ಯೂಸ್ ಪೋರ್ಟಲ್, ಆರ್ಕೈವ್ಸ್ ಇತ್ಯಾದಿ) ಬಗ್ಗೆ ಡಿಜಿಟಲ್ ವೇದಿಕೆ ಹೊಂದಿದೆಯೇ? ಇದ್ದರೆ ಅದರ ಕುರಿತು ವಿವರಗಳನ್ನು ನೀಡಲು ಕೋರಿದೆ.
6. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಮಾಡಲು ರೈಟ್ ಮೀಡಿಯಾ ಸಂಸ್ಥೆಯು ಅಳವಡಿಸಿಕೊಂಡಿರುವ ಮಾನದಂಡಗಳು ಯಾವುವು?
7. ಗ್ಯಾರಂಟಿ ಯೋಜನೆಗಳ ನಿರಂತರ ನಿಗಾವಣೆಗಾಗಿ ಫಲಾನುಭವಿ ಕೇಂದ್ರಿತ ನೇರ ಮತ್ತು ನಿರಂತರ ಸಂವಹನ ವ್ಯವಸ್ಥೆಗಾಗಿ ಅಳವಡಿಸಿಕೊಂಡಿರುವ ವಿಧಾನಗಳು ಯಾವುವು?
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರೈಟ್‌ ಪೀಪಲ್ ಸಂಸ್ಥೆಯ ಪ್ರಶಾಂತ ಕುಮಾರ್‌ ಎಂಬುವರು  ‘ದಿ ಫೈಲ್‌’ ಕೋರಿರುವ ಮಾಹಿತಿ ಕುರಿತು  ‘ನಮ್ಮ ಕಾನೂನು ತಂಡ ನಿಮ್ಮ ಉತ್ತರವನ್ನು ಪರಿಶೀಲಿಸುತ್ತಿದೆ. ಆದಷ್ಟು ಬೇಗ ನಿಮಗೆ ಪ್ರತಿಕ್ರಿಯೆ ನೀಡಲು ಪ್ರಯತ್ನಿಸುತ್ತೇವೆ,’ ಎಂದು 2024ರ ಏಪ್ರಿಲ್‌ 10ರಂದು ಇ-ಮೈಲ್‌ ಮೂಲಕ ಪ್ರತಿಕ್ರಿಯೆ ನೀಡಿದೆ.  ಆದರೆ ವರದಿ ಪ್ರಕಟವಾಗುವ ಈ ದಿನದವರೆಗೂ ಯಾವುದೇ ಮಾಹಿತಿಯನ್ನೂ ರೈಟ್‌ ಪೀಪಲ್‌ ಸಂಸ್ಥೆಯು ನೀಡಿಲ್ಲ.

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆಗೆ ರಾಜ್ಯ ಸರ್ಕಾರವು  12 ಕೋಟಿ ರು. ವೆಚ್ಚ ಮಾಡಿದೆ.

 

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಗ್ಯಾರಂಟಿ ಸಮೀಕ್ಷೆಗೆ 12 ಕೋಟಿ; ದುಂದುವೆಚ್ಚಕ್ಕೆ ದಾರಿ

 

ಎಂ2ಎಂ ಮಾಧ್ಯಮ ಸಂಸ್ಥೆಗೆ ಸಮೀಕ್ಷೆ ನಡೆಸಲು 1 ಕೋಟಿ ರು, ಮುಂಬೈ ಮೂಲದ ಎಕ್ಸ್‌ ಕೆಡಿಆರ್‍‌ ಸಂಸ್ಥೆಗೆ ಅಧ್ಯಯನದ ಹೆಸರಿನಲ್ಲಿ 1.03 ಕೋಟಿ ರು.ಗಳನ್ನು ನೀಡಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ ಮುಂಗಡ ಹಣ ಪಡೆದು ಸಮೀಕ್ಷೆ ಕಾರ್ಯವನ್ನೂ ಕೈಗೆತ್ತಿಕೊಂಡಿದೆ.

 

ಈ ಎರಡೂ ಖಾಸಗಿ ಸಂಸ್ಥೆಗಳು ಈಗಾಗಲೇ ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತಿರುವಾಗಲೇ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಿರುವ  ಸಮೀಕ್ಷೆಗೆ 12 ಕೋಟಿ ರು ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.

 

ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ ವರ್ಕ್‌ ಕಂಪನಿಗೆ  4(ಜಿ) ವಿನಾಯಿತಿ ನೀಡುವ ಮುನ್ನ ಆರ್ಥಿಕ ಇಲಾಖೆಯ ಅಧಿಕಾರಿಗಳು  ಆಡಳಿತಾತ್ಮಕ  ಪ್ರಕ್ರಿಯೆಗಳನ್ನೇ ನಡೆಸಿರಲಿಲ್ಲ.

ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)

 

2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು  ಚರ್ಚೆಗೆ ಗ್ರಾಸವಾಗಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ.  ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು. ಕೆಎಸ್‌ಆರ್‍‌ಟಿಸಿಯು 20 ಲಕ್ಷ ರು.ಗಳನ್ನು ನೀಡಿದ್ದರೂ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೇ ಒದಗಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

 

ಅಲ್ಲದೇ ಬೆಸ್ಕಾಂ ಕೂಡ  ಸಮಗ್ರ ಕಡತವನ್ನೇ ಮುಚ್ಚಿಟ್ಟಿತ್ತು.

 

ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ

 

 

ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಹ ಎಂ2ಎಂ ಕಂಪನಿಯೊಂದಿಗೆ ಎಂಒಯು ಸೇರಿ ಹಲವು ದಾಖಲೆಗಳೇ ಲಭ್ಯವಿಲ್ಲ ಎಂದು ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿತ್ತು.

 

 

ಸಮೀಕ್ಷೆಗೆ ಕೋಟಿ ರು.; ಎಂಒಯು ಸೇರಿ ಹಲವು ವಿವರಗಳೇ ಲಭ್ಯವಿಲ್ಲವೆಂದ ಆಹಾರ ಇಲಾಖೆ

 

ಇದರ ನಡುವೆಯೇ ಸರ್ಕಾರವು ಗ್ಯಾರಂಟಿಗಳನ್ನು ಅಧ್ಯಯನ ನಡೆಸಲು ಮುಂಬೈ ಮೂಲದ ಸಂಸ್ಥೆಗೆ 1.03 ಕೋಟಿ ರು. ವೆಚ್ಚ ಮಾಡಲು 4(ಜಿ) ವಿನಾಯಿತಿ ನೀಡಿತ್ತು.

 

ಗ್ಯಾರಂಟಿ ಸಮೀಕ್ಷೆ, ಅನುಷ್ಠಾನ ಸಮಿತಿ ರಚನೆ ಬೆನ್ನಲ್ಲೇ ಈಗ ಅಧ್ಯಯನ; ಮುಂಬೈ ಸಂಸ್ಥೆಗೆ 1.03 ಕೋಟಿ ರು ನೀಡಿಕೆ

ಗ್ಯಾರಂಟಿ ಯೋಜನೆಗಳನ್ನು  ಏಕಕಾಲಕ್ಕೆ ಐದಾರು ಸಮಿತಿಗಳು ಸಮೀಕ್ಷೆ ನಡೆಸುತ್ತಿರುವುದು ಮತ್ತು ಇದಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

SUPPORT THE FILE

Latest News

Related Posts