ಕ್ಯೂ ಆರ್‍‌ ಕೋಡ್‌ ಬಳಸಿ ಲಕ್ಷಾಂತರ ರು ದುರುಪಯೋಗ; ಪ್ರವಾಸೋದ್ಯಮ ನಿಗಮದಲ್ಲಿ ಹೈಟೆಕ್‌ ವಂಚನೆ

ಬೆಂಗಳೂರು; ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧೀನದಲ್ಲಿರುವ ಮಯೂರ ಬಾಲ ಭವನದ ಖಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ ಲಕ್ಷಾಂತರ ರುಪಾಯಿ ದುರುಪಯೋಗಪಡಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲೇ ನಿಗಮದ ಸಿಬ್ಬಂದಿಯು ಆರ್ಥಿಕ ದುರ್ವವ್ಯವಹಾರ ನಡೆಸಿರುವುದು  ಬ್ಯಾಂಕ್‌ ಖಾತೆಯ ಪರಿಶೀಲನೆಯಿಂದ ಪತ್ತೆಯಾಗಿದೆ.

 

ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ ಕೋಟ್ಯಂತರ ರುಪಾಯಿಗಳನ್ನು ಖಾಸಗಿ ಬ್ಯಾಂಕ್‌ನಲ್ಲಿರಿಸಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿರುವ ಪ್ರಕರಣವು ಇನ್ನೂ ಹಸಿಹಸಿಯಾಗಿರುವಾಗಲೇ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದಲ್ಲಿ ಹಣ ದುರುಪಯೋಗ ಆಗಿರುವುದು ಮುನ್ನೆಲೆಗೆ ಬಂದಿದೆ.

 

ಬಾಲ ಭವನದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ನಾಗಭೂಷಣ್‌ ಎಂಬುವರೂ ಸೇರಿದಂತೆ ಒಟ್ಟು 4 ಮಂದಿಯೂ ಸಹ ನಿಗಮದ ಹಣದ ವ್ಯವಹಾರವನ್ನು ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ವೈಯಕ್ತಿಕ ಬ್ಯಾಂಕ್‌ ಖಾತೆಯ ಪರಿಶೀಲನೆಯಿಂದ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಸಿಬ್ಬಂದಿಗಳ ಕ್ರಿಮಿನಲ್‌ ಕೇಸ್‌ ಮತ್ತು ಎಫ್ಐಆರ್‍‌ ದಾಖಲಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು 2024ರ ಜೂನ್‌ 18ರಂದು ಕಛೇರಿ ಆದೇಶ ಹೊರಡಿಸಿದ್ದಾರೆ.

 

ಈ ಪ್ರಕರಣಗಳು  ಸಚಿವ ಹೆಚ್‌ ಕೆ ಪಾಟೀಲ್‌ ಅವರ ಗಮನಕ್ಕೆ ಬಂದ ಕೂಡಲೇ ಈ ಬಗ್ಗೆ  ಆಂತರಿಕ ತನಿಖೆ ನಡೆಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದರು. ಈ ಸಂಬಂಧ ಬ್ಯಾಂಕ್‌ ಖಾತೆಗಳ ಪರಿಶೀಲನೆ ನಡೆದಿತ್ತು. ಹೀಗಾಗಿ  ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯನ್ನು ಅಮಾನತು ಮತ್ತು ವಜಾಗೊಳಿಸಲಾಗಿದೆ. ಸಚಿವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

 

ಅಮಾನತು ಮತ್ತು ವಜಾಗೊಂಡಿರುವ ಸಿಬ್ಬಂದಿಯು ಹಣ ದುರುಪಯೋಗ ಪಡಿಸಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಇವರನ್ನು ಗುತ್ತಿಗೆ ಸೇವೆಯಿಂದ ವಜಾಗೊಳಿಸಿ 2024ರ ಜೂನ್‌ 18 ಮತ್ತು 19ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.

 

ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹೊರಡಿಸಿರುವ ಅಧಿಕೃತ ಜ್ಞಾಪನ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪ್ರಕರಣ 1

 

ಮಯೂರ ಬಾಲ ಭವನದಲ್ಲಿ ಗುತ್ತಿಗೆ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ರಾಮಚಂದ್ರ ಕೆ ಎಂಬುವರು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ ವೈಯಕ್ತಿಕ ಖಾತೆಗೆ 31,917 ರು.ಗಳನ್ನು ಯುಪಿಐ ಮುಖಾಂತರ ಪಡೆದಿದ್ದಾರೆ. ಇದು ಬ್ಯಾಂಕ್‌ ಸ್ಟೇಟ್‌ಮೆಂಟ್‌ನಿಂದ ತಿಳಿದು ಬಂದಿದೆ. ರಾಮಚಂದ್ರ ಅವರು 2024ರ ಏಪ್ರಿಲ್‌ 2ರಿಂದ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದರು.

 

 

ಪ್ರಕರಣ 2

 

ಬಾಲ ಭವನದ ಸಹಾಯಕ ಉಗ್ರಾಣಿಕ ಕೆ ವೆಂಕಟೇಶ್‌ ಎಂಬುವರು ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ 48,642 ರು.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. 2023ರ ಮೇ 14ರಿಂದ 21ರವರೆಗೆ ಹಣ ದುರುಪಯೋಗಪಡಿಸಿಕೊಂಡಿದ್ದಾರೆ.

 

‘ನಿಗಮದ ಒಬ್ಬ ಜವಾಬ್ದಾರಿಯುತ ನೌಕರರಾಗಿದ್ದು ತಾವು ನಿರ್ವಹಿಸಬೇಕಾದ ಕಾರ್ಯವಿಧಾನವನ್ನು ಅನುಸರಿಸದೇ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡು ಆರ್ಥಿಕ ನಷ್ಟವನ್ನುಂಟು ಮಾಡಲಾಗಿದೆ. ಮತ್ತು ತಮ್ಮ ಕರ್ತವ್ಯದಲ್ಲಿ ದುರುದ್ದೇಶ ಹಾಗೂ ಬೇಜವಾಬ್ದಾರಿ ತೋರಿರುತ್ತೀರಿ. ಇಲಾಖೆ ವಿಚಾರಣೆ ಕಾಯ್ದಿರಿಸಿ ನಿಗಮದ ಸೇವೆಯಿಂದ ಅಮಾನತುಗೊಳಿಸಲಾಗಿದೆ,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

 

ಪ್ರಕರಣ 3

 

ನಿಗಮದಲ್ಲಿ ಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್‌ ವಾಜಿದ್‌ ನಿಗಮದ ಕ್ಯೂ ಆರ್‍‌ ಕೋಡ್‌ ಬಳಸದೇ ವೈಯುಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ 2,66, 215 ರು.ಗಳನ್ನು ಯುಪಿಐ ಮುಖಾಂತರ ಹಣ ದುರುಪಯೋಗಪಡಿಸಿಕೊಂಡಿರುವುದನ್ನು ಬ್ಯಾಂಕ್‌ ಖಾತೆಯ ಸ್ಟೇಟ್‌ಮೆಂಟ್‌ನಿಂದ ತಿಳಿದು ಬಂದಿದೆ. ಹಣ ದುರುಪಯೋಗ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಇವರನ್ನೂ ಸಹ ವಜಾಗೊಳಿಸಿರುವುದು ಗೊತ್ತಾಗಿದೆ.

 

 

ಪ್ರಕರಣ 4

 

ನಿಗಮದ ಖಾಯಂ ನೌಕರರಾದ ಕೋದಂಡರಾಮಯ್ಯ ಎಂಬುವರು ಸಹ 2023ರ ನವೆಂಬರ್‍‌ 24ರಿಂದ 2024ರ ಮೇ 23ರವರೆಗೆ 3,920 ರ.ಗಳನ್ನು ವೈಯಕ್ತಿಕ ಕ್ಯೂ ಆರ್‍‌ ಕೋಡ್‌ ಬಳಸಿ ದುರುಪಯೋಗಪಡಿಸಿಕೊಂಡಿದ್ದಾರೆ. ಇವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

 

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಕದ್ದುಮುಚ್ಚಿ ನಡೆಸುತ್ತಿದ್ದ ಈ ದುರ್ವವ್ಯವಹಾರವು ಕೇವಲ ಲಕ್ಷಾಂತರ ರುಪಾಯಿಗಳಿಗಷ್ಟೇ ಸೀಮಿತವಾಗಿಲ್ಲ. ಈ ಪ್ರಕರಣವನ್ನೂ ಸರಿಯಾಗಿ ತನಿಖೆ ನಡೆಸಿದರೇ ಇನ್ನಷ್ಟು ಪ್ರಕರಣಗಳು ಬಯಲಾಗಲಿವೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

SUPPORT THE FILE

Latest News

Related Posts