ಬೆಂಗಳೂರು; ತಾಂತ್ರಿಕ ಶಿಕ್ಷಣ ಇಲಾಖೆಯಡಿಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಸಂಗ್ರಹವಾಗುವ ವಿದ್ಯಾರ್ಥಿ ಶುಲ್ಕವೂ ಸೇರಿದಂತೆ ಇನ್ನಿತರೆ ಮೂಲಗಳ ಶುಲ್ಕಗಳ ಹಣವು ಸರ್ಕಾರಕ್ಕೆ ಜಮೆಯಾಗುತ್ತಿಲ್ಲ.
ವಿದ್ಯಾರ್ಥಿಗಳ ಶುಲ್ಕ ಹೆಸರಿನಲ್ಲಿ ಸಂಗ್ರಹವಾಗುತ್ತಿರುವ ಲಕ್ಷಾಂತರ ರುಪಾಯಿಗಳನ್ನು ಪಾಲಿಟೆಕ್ನಿಕ್‌ಗಳ ನಗದು ಶಾಖೆಯ ಗುಮಾಸ್ತರುಗಳೇ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಆದರೂ ಉನ್ನತ ಶಿಕ್ಷಣ ಇಲಾಖೆಯು ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿನ ಹಣಕಾಸಿನ ದುರ್ಬಳಕೆ ಕುರಿತು ಚಕಾರ ಎತ್ತಿಲ್ಲ.
ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಹೆಸರಿನಲ್ಲಿರುವ ಒಟ್ಟಾರೆ 16 ಖಾತೆಗಳಲ್ಲಿದ್ದ ಲಕ್ಷಾಂತರ ರುಪಾಯಿ ಹೆಚ್ಚು ಹಣವು ಕಾಲೇಜಿನ ಪ್ರಥಮದರ್ಜೆ ಗುಮಾಸ್ತರ ವೈಯಕ್ತಿಕ ಖಾತೆಗೆ ವರ್ಗಾವಣೆಯಾಗಿತ್ತು. ಈ ಪ್ರಕರಣ ಕಣ್ಣೆದುರಿಗೆ ಇದ್ದರೂ ಸಹ ಉನ್ನತ ಶಿಕ್ಷಣ ಇಲಾಖೆಯಡಿಯಲ್ಲೇ ಇರುವ ಪಾಲಿಟೆಕ್ನಿಕ್‌ಗಳಲ್ಲಿನ ಸರ್ಕಾರಿ ಹಣಕ್ಕೇ ಕನ್ನ ಬಿದ್ದಿದೆ. ಆದರೂ ಸಚಿವ ಡಾ ಎಂ ಸಿ ಸುಧಾಕರ್, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಲೀ, ಜಂಟಿ ನಿರ್ದೇಶಕರಾಗಲೀ ಯಾರೊಬ್ಬರೂ ಗಂಭೀರವಾಗಿ ತೆಗೆದುಕೊಂಡಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯ ಕೆಜಿಎಫ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ವೊಂದರಲ್ಲೇ ಅಂದಾಜು 25 ಲಕ್ಷ ರು.ಗಳನ್ನು ಅಲ್ಲಿನ ಪ್ರಾಂಶುಪಾಲರು ಮತ್ತು ನಗದು ಗುಮಾಸ್ತರು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ. ಈ ಸಂಬಂಧ 2024ರ ಜನವರಿ 21ರಂದು ರಮೇಶ್ ರೆಡ್ಡಿ ಎಂಬುವರು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೆಜಿಎಫ್‌ನಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಪ್ರತಿ ವಿದ್ಯಾರ್ಥಿಗಳಿಂದ ಡಿಪ್ಲೋಮಾ ಪ್ರವೇಶಕ್ಕಾಗಿ ತಲಾ 4,500 ರು.ಗಳನ್ನು ಸಂಗ್ರಹಿಸಲಾಗಿದೆ. ಈ ಹಣವನ್ನು ಮರು ದಿನವೇ ಸರ್ಕಾರ ಅಥವಾ ಖಜಾನೆಗೆ ಕಟ್ಟಬೇಕು. ಆದರೆ ಈ ಹಣವು ಖಜಾನೆಗೆ ಜಮೆ ಆಗಿಲ್ಲ. ವಿದ್ಯಾರ್ಥಿಗಳಿಂದ ಪಡೆಯಲಾದ ಪ್ರವೇಶಾತಿ ಶುಲ್ಕವನ್ನು ಅಲ್ಲಿನ ಪ್ರಾಂಶುಪಾಲ ಡೆರಿಕ್ ಅಲೆಗ್ಸಾಂಡರ್ ಮತ್ತು ಈ ಹಿಂದೆ ನಗದು ಗುಮಾಸ್ತರಾಗಿ ಕಾರ್ಯನಿರ್ವಹಿಸಿದ್ದ ಜಯಪ್ರಕಾಶ್ ಎಂಬುವರು ಸರ್ಕಾರಕ್ಕೆ ಕಟ್ಟಿಲ್ಲ ಎಂದು ರಮೇಶ್ ರೆಡ್ಡಿ ಎಂಬುವರು ದೂರಿನಲ್ಲಿ ವಿವರಿಸಿದ್ದಾರೆ.
ಸುಮಾರು 25 ಲಕ್ಷ ರು.ಗಳನ್ನು ಸರ್ಕಾರಕ್ಕೆ ಕಟ್ಟದೇ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿರುವ ರಮೇಶ್ ರೆಡ್ಡಿ ಎಂಬುವರು ಈ ವಿಚಾರವು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಜಂಟಿ ನಿರ್ದೇಶಕರಿಗೆ ಗೊತ್ತಿದ್ದರೂ ಸಹ ಯಾವುದೇ ಕ್ರಮಕೈಗೊಂಡಿಲ್ಲ. ನಿರ್ದೇಶನಾಲಯದ ಕೆಲವು ಅಧಿಕಾರಿಗಳು ಪ್ರಾಂಶುಪಾಲರಾದ ಡೆರಿಕ್ ಅಲೆಗ್ಸಾಂಡರ್ ಅವರ ಸ್ನೇಹಿತರು. ಹೀಗಾಗಿ ಯಾವುದೇ ಕ್ರಮವಹಿಸಿಲ್ಲ ಎಂದು ದೂರಿನಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಯುವರಾಜ ಕಾಲೇಜಿನ ಪ್ರಥಮದರ್ಜೆ ಗುಮಾಸ್ತ ಜೆ ಶಿವಕುಮಾರ್ ಅವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರ ಬೆನ್ನಲ್ಲೇ ಇದೇ ಶಿವಕುಮಾರ್ ಅವರ ವಿರುದ್ಧವೂ ಹಣಕಾಸು ದುರುಪಯೋಗದ ಆಪಾದನೆಯೂ ಕೇಳಿ ಬಂದಿತ್ತು. ಈ ಕುರಿತು ಪ್ರಾಂಶುಪಾಲರಾಗಿದ್ದ ದೇವರಾಜೇಗೌಡ ಅವರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಬರೆದಿದ್ದರು. ಕಾಲೇಜಿನ ಪ್ರಾಂಶುಪಾಲರ ಹೆಸರಿನಲ್ಲಿದ್ದ ಖಾತೆಗಳ ಸಂಖ್ಯೆ, ಈ ಖಾತೆಗಳಲ್ಲಿದ್ದ ವಿದ್ಯಾರ್ಥಿ ಶುಲ್ಕವೂ ಸೇರಿದಂತೆ ಇನ್ನಿತರೆ ಲೆಕ್ಕ ಶೀರ್ಷಿಕೆಯಲ್ಲಿದ್ದ ಹಣ ವರ್ಗಾವಣೆ ಆಗಿರುವ ಕುರಿತಾದ ದಾಖಲೆಗಳ ಸಮೇತ ಹಣಕಾಸು ದುರುಪಯೋಗದ ಕುರಿತು ಪತ್ರದಲ್ಲಿ ವಿವರಿಸಿದ್ದರು.
ಲೆಕ್ಕತಪಾಸಣೆ, ಲೆಕ್ಕ ಪರಿಶೋಧನೆ ನಡೆಯಬಾರದು ಎಂಬ ದುರುದ್ದೇಶದಿಂದ ಜೆ ಶಿವಕುಮಾರ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೂ ದೇವರಾಜೇಗೌಡ ಅವರು ಪತ್ರದಲ್ಲಿ ಆರೋಪಿಸಿದ್ದರು.
ಯುವರಾಜ ಕಾಲೇಜಿನ ಹೆಸರಿನಲ್ಲಿದ್ದ ಎಫ್ ಅಂಡ್ ಆರ್, ವಿದ್ಯಾರ್ಥಿ ವೇತನ, ಜಿ ಆರ್ ಎ ಸೇರಿದಂತೆ ಮತ್ತಿತರ ಶೀರ್ಷಿಕೆಗಳಲ್ಲಿದ್ದ ಖಾತೆಗಳಿಂದ ಶಿವಕುಮಾರ್ ಅವರು ತಮ್ಮ ವೈಯಕ್ತಿಕ ಖಾತೆಗೆ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಖುದ್ದು ಪ್ರಾಂಶುಪಾಲ ದೇವರಾಜೇಗೌಡ ಅವರು ತಮ್ಮ ಪತ್ರದಲ್ಲಿಆಪಾದಿಸಿದ್ದರು.
ಲೆಕ್ಕ ಪರಿಶೋಧನೆಗೆ ಅಸಹಕಾರ
ಮೈಸೂರು ಯುವರಾಜ ಕಾಲೇಜಿನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಪತ್ರಗಳನ್ನು ಪರಿಶೀಲಿಸಲು ನೀಡುವಂತೆ ಲೆಕ್ಕಪರಿಶೋಧಕರು ಕೋರಿದ್ದರು. 2023ರ ಡಿಸೆಂಬರ್ 14ರಂದು ಕಚೇರಿಯ ಎಲ್ಲಾ ಕಾರ್ಯನಿರ್ವಾಹಕರುಗಳೀಗೆ ಒಳಗೊಂಡಂತೆ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ಕಡತಗಳನ್ನು ನೀಡಬೇಕು ಎಂದು ಕಚೇರಿ ಸೂಚನಾ ಪತ್ರ ಹೊರಡಿಸಲಾಗಿತ್ತು. ಆದರೆ ಶಿವಕುಮಾರ್ ಸೇರಿದಂತೆ ಹಲವರು ಲೆಕ್ಕ ಪರಿಶೋಧನೆಗೆ ಯಾವುದೇ ದಾಖಲೆಗಳನ್ನು ನೀಡದೇ ಅಸಹಕಾರ ತೋರಿದ್ದರು ಎನ್ನಲಾಗಿತ್ತು.
ವಿದ್ಯಾರ್ಥಿ ಶುಲ್ಕವೂ ಸೇರಿ ಲಕ್ಷಾಂತರ ರುಪಾಯಿ ವೈಯಕ್ತಿಕ ಖಾತೆಗೆ ಜಮೆ; ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು
‘ಈ ಸಂದರ್ಭದಲ್ಲಿ ಕಾಲೇಜಿನ ಪ್ರಥಮದರ್ಜೆ ಗುಮಾಸ್ತ ಜೆ ಶಿವಕುಮಾರ್ ಅವರು ರಜೆ ಮೇಲಿದ್ದರು. ಇವರು ರಜೆ ಮುಂದುವರೆಸಿದ್ದರು. ಹೀಗಾಗಿ ಲೆಕ್ಕ ಪರಿಶೋಧನಾ ತಪಾಸಣೆಗೆ ದಾಖಲೆ ನೀಡಬೇಕು ಎಂದು 2023ರ ಡಿಸೆಂಬರ್ 19ರಂದು ಮೆಮೋ ನೀಡಲಾಗಿತ್ತು. ನಂತರ ಜೆ ಶಶಿಕುಮಾರ್ ಅವರು ಸೇರಿದಂತೆ ಕಚೇರಿಯ ಯಾವುದೇ ಕಾರ್ಯನಿರ್ವಾಹಕರು ದಾಖಲೆಗಳನ್ನು ಒದಗಿಸುತ್ತಿಲ್ಲ ಎಂದು ಲೆಕ್ಕ ಪರಿಶೋಧಕರು ಮೌಖಿಕವಾಗಿ ತಿಳಿಸಿದ್ದರು. ಹೀಗಾಗಿ ಮತ್ತೊಮ್ಮೆ ಎಲ್ಲಾ ದಾಖಲೆಗಳು ಮತ್ತು ಕಡತಗಳನ್ನು ಲೆಕ್ಕ ಪರಿಶೋಧಕರಿಗೆ ನೀಡಬೇಕು ಎಂದು ಕಚೇರಿಯಿಂದ ಎಲ್ಲಾ ಕಾರ್ಯನಿರ್ವಾಹಕರುಗಳಿಗೆ 2023ರ ಡಿಸೆಂಬರ್ 30ರಂದು ಎಲ್ಲಾ ಸೂಚನೆ ನೀಡಲಾಗಿತ್ತು,’ ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದರು.
ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ
ಕಾಲೇಜಿನ ಜಿ ಆರ್ ವಿ (ಖಾತೆ ಸಂಖ್ಯೆ; 64078604199), ಪಿಎಸ್‌ಎಫ್‌ಎಸ್ (ಖಾತೆ ಸಂಖ್ಯೆ; 64078606129), ಮತ್ತು ಸಿಎಸ್‌ಎಫ್ (ಖಾತೆ ಸಂಖ್ಯೆ; 54007592102) ಒಟ್ಟು ಮೂರು ಖಾತೆಗಳಿಗೆ ಸಂಬಂಧಿಸಿದ ಖಾತೆ ವಿವರಗಳ ಪರಿಶೀಲಿಸಿದಾಗ ನೇರವಾಗಿ ಶಶಿಕುಮಾರ್ ಅವರಿಗೆ ಧನಾದೇಶದ ಮೂಲಕ ಹಣ ಜಮಾ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
‘ಕ್ರಮ ಸಂಖ್ಯೆ 1ರಿಂದ 09ರವರೆಗೆ ಧನಾದೇಶಗಳನ್ನು ಜೆ ಶಶಿಕುಮಾರ್ ಅವರ ಎಸ್ ಬಿ ಖಾತೆ ಸಂಖ್ಯೆ 64006325541 (ಮೈಸೂರು ವಿವಿ ಆವರಣದಲ್ಲಿರುವ ಶಾಖೆ) ಗೆ 4,46,841 ರು. ಕಾಲೇಜಿನ ವಿವಿಧ ಖಾತೆಗಳಿಂದ ಹಣವು ಜಮೆ ಆಗಿದೆ. ಆದರೆ ಈ ಧನಾದೇಶದ ಹಣವು ಇವರ ಖಾತೆಗೆ ಏಕೆ ಜಮಾಗೊಂಡಿದೆ ಎಂಬುದಕ್ಕೆ ಯಾವುದೇ ಮಾಹಿತಿಯೂ ಇರುವುದಿಲ್ಲ. ಇನ್ನೂ ಹೆಚ್ಚಿನ ವಿವರಣೆಗಾಗಿ ಲೆಕ್ಕ ತಪಾಸಣೆ ನಡೆಸಬೇಕು,’ ಎಂದು ದೇವರಾಜೇಗೌಡ ಅವರು ತಮ್ಮ ಪತ್ರದಲ್ಲಿ ಕೋರಿದ್ದರು.
ಇದಲ್ಲದೇ ವಿದ್ಯಾರ್ಥಿಗಳ ಶುಲ್ಕಗಳನ್ನು ತಮ್ಮ ತಮ್ಮ ಮೊಬೈಲ್‌ಗಳಿಂದ ಜಿ-ಪೇ ಮತ್ತು ಪೇಟಿಎಂ ಮೂಲಕ ಜೆ ಶಶಿಕುಮಾರ್ ಅವರ ವೈಯಕ್ತಿಕ ಖಾತೆಗೆ 2021ರ ಫೆ.12ರಿಂದ 2023ರ ಸೆ.14ಸರವರೆಗೆ ಒಟ್ಟಾರೆ 7,76,654 ರು. ಜಮಾ ಆಗಿದೆ. ಕಾಲೇಜಿನ ವಿವಿಧ ಖಾತೆಗಳಿಂದ ವೈಯಕ್ತಿಕ ಖಾತೆಗೆ ಒಟ್ಟಾರೆ 45.50 ಲಕ್ಷ ರು. ಜಮಾ ಆಗಿದೆ ಎಂದೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 2022ರ ಜನವರಿ 221ರಂದು 42,200 ಮತ್ತು 2022ರ ಫೆ.22ರಂದು 39,600 ರು. ಜಮಾ ಆಗಿತ್ತು. ಅಲ್ಲದೇ 2021ರ ಡಿಸೆಂಬರ್ 221ರಂದು ಜೆ ಶಿವಕುಮಾರ್ ಅವರ ವೈಯಕ್ತಿಕ ಖಾತೆಗೆ 45,437 ರು. ವರ್ಗಾವಣೆ ಆಗಿತ್ತು.
2022ರ ಏಪ್ರಿಲ್ 18ರಂದು 77,050 ರು. ವೈಯಕ್ತಿಕ ಖಾತೆಗೆ ಜಮಾ ಆಗಿತ್ತು. 2022ರ ಮೇ 13 ಮತ್ತು ಜುಲೈ 1 ರಂದು ತಲಾ 37,600 ರು. ವರ್ಗಾವಣೆ ಆಗಿತ್ತು ಎಂಬುದು ಬ್ಯಾಂಕ್‌ನ ದಾಖಲೆಗಳಿಂದ ಗೊತ್ತಾಗಿದೆ. ಜೆ ಶಿವಕುಮಾರ್ ಅವರು ನಗದು ಗುಮಾಸ್ತರಾಗಿದ್ದ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆಯಲ್ಲಿ ಮೂಲ ರಸೀತಿ, ಮೂಲ ಹುಂಡಿಗಳು, ಮತ್ತು ಕಡತಗಳನ್ನು ಲೆಕ್ಕ ಪರಿಶೋಧನೆಗೆ ನೀಡಿದರೆ ಸಿಕ್ಕಿ ಬೀಳುವ ಭಯ ಮತ್ತು ಇದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಹೀಗಾಗಿಯೇ ಯಾವುದೇ ಪುರಾವೆಗಳಿಲ್ಲದೇ ಮೂಲ ರಸೀತಿ, ಹುಂಡಿಗಳು ಮತ್ತು ಕಡತಗಳನ್ನು ಪ್ರಾಂಶುಪಾಲರ ಬಳಿ ನೀಡಿರುತ್ತೇನೆ ಎಂದು ಪ್ರಾಂಶುಪಾಲರ ವಿರುದ್ಧವೇ ಇಲ್ಲಸಲ್ಲದ ಆರೋಪಿಸಿದ್ದರು.
ಕಳಂಕಿತರಿಗೆ ಮನ್ನಣೆ; ಪ.ಜಾತಿ ವಿಶೇಷ ಕೋಶಕ್ಕೆ, ಹಣ ದುರುಪಯೋಗ ಆರೋಪಿ ಅಧಿಕಾರಿಯ ನಿಯೋಜನೆ
‘ಒಂದು ಪಕ್ಷ ಅಷ್ಟು ಹುಂಡಿಗಳ ಮೂಲ ಹುಂಡಿಗಳನ್ನು ನನಗೆ ನೀಡಿದ್ದರೇ ಪ್ರತ್ಯೇಕ ವಿವರ ಪಟ್ಟಿ ತಯಾರಿಸಿ, ನನ್ನಿಂದ ಸ್ವೀಕೃತಿ ಸಹಿತ ಪಡೆಯಬಹುದಾಗಿತ್ತು. ಈ ಕೆಲಸವನ್ನೂ ಸಹ ಮಾಡಿಲ್ಲ. ಹಿಂದಿನ ಪ್ರಾಂಶುಪಾಲರಿಗೆ ನನಗೂ ವೈಮನಸ್ಸು ಇದೆಯೆಂದು ಡೆತ್ ನೋಟ್‌ನಲ್ಲಿ ಆರೋಪ ಮಾಡಿದ್ದಾರೆ. ಇವರಿಗೆ ಈ ವಿಚಾರ ತಿಳಿದಿದ್ದರೂ ಸಹ ನನಗೆ ಕಡತ, ರಸೀದಿ ಪುಸ್ತಕಗಳನ್ನು ನೀಡಿದ್ದಲ್ಲಿ ನನ್ನಿಂದ ಏಕೆ ಸ್ವೀಕೃತಿ ಪಡೆದಿಲ್ಲ. ಇವರು ನನ್ನ ಮೇಲೆ ನಿರಾಧಾರ ಆರೋಪ ಮಾಡಿರುತ್ತಾರೆ,’ ಎಂದು ಪ್ರಾಂಶುಪಾಲ ದೇವರಾಜೇಗೌಡ ಅವರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.