ಬೆಂಗಳೂರು; ರಾಜ್ಯದಲ್ಲಿ 2023-24ನೇ ಸಾಲಿಗೆ ಭೂ ಕಂದಾಯ, ನೀರಿನ ಕರ, ದಂಡ ಮತ್ತು ಇತರೆ ಕಂದಾಯಗಳ ರೂಪದಲ್ಲಿ ಬೇಡಿಕೆ ಪ್ರಕಾರ 1,514.05 ಕೋಟಿ ರು ವಸೂಲು ಮಾಡಬೇಕಿದ್ದ ಕಂದಾಯ ಇಲಾಖೆಯು ತನ್ನ ಗುರಿಯನ್ನು ಮುಟ್ಟುವಲ್ಲಿ ವಿಫಲವಾಗಿದೆ. ಒಟ್ಟು ಬೇಡಿಕೆ ಪೈಕಿ ಕೇವಲ 29.76 ಕೋಟಿ ರು ಮಾತ್ರ ವಸೂಲು ಮಾಡಿದೆ. ವಸೂಲಾತಿಗೆ ಇನ್ನೂ 1,484.29 ಕೋಟಿ ರು ಬಾಕಿ ಇರಿಸಿಕೊಂಡಿದೆ.
ಭೂ ಕಂದಾಯ ಹಾಗೂ ಇತರೆ ಕರ, ದಂಡಗಳ ವಸೂಲಾತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸಿದ್ಧಪಡಿಸಿರುವ ವಾರ್ಷಿಕ ವರದಿಯಲ್ಲಿ ಈ ವಿವರಗಳಿವೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರೇರಾ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ರಾಜ್ಯದ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಲ್ಲಿ 423.51 ಕೋಟಿ ರು.ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇರುವುದರ ಬೆನ್ನಲ್ಲೇ ಇದೀಗ ಕಂದಾಯ ಇಲಾಖೆಯ ವ್ಯಾಪ್ತಿಯೊಂದರಲ್ಲೇ 1,484.29 ಕೋಟಿ ರು ವಸೂಲಾತಿಗೆ ಬಾಕಿ ಇರುವ ವಿಚಾರವು ಮುನ್ನೆಲೆಗೆ ಬಂದಿದೆ.
2023-24ನೇ ಸಾಲಿನಲ್ಲಿ ಭೂ ಕಂದಾಯಕ್ಕೆ ಸಂಬಂಧಿಸಿಂತೆ ನಾಲ್ಕು ವಿಭಾಗಗಳಿಂದ 36.96 ಕೋಟಿ ರು ಬೇಡಿಕೆ ಇತ್ತು. ಈ ಪೈಕಿ 14.57 ಕೋಟಿ ರು ವಸೂಲಾಗಿದೆ. ಇನ್ನೂ 22.38 ಕೋಟಿ ರು ಬಾಕಿ ಇದೆ. ಒಟ್ಟಾರೆ ಶೇ.39.44ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದು ವರದಿಯಿಂದ ಗೊತ್ತಾಗಿದೆ.
ಬೆಂಗಳೂರು ವಿಭಾಗದಲ್ಲಿ 4.84 ಕೋಟಿ ರು. ಬೇಡಿಕೆ ಇತ್ತು. ಈ ಪೈಕಿ 1.82 ಕೋಟಿ ಮಾತ್ರ ವಸೂಲಾಗಿದೆ. ಬಾಕಿ 3.02 ಕೋಟಿ ರು ಇದೆ. ಮೈಸೂರು ವಿಭಾಗದಲ್ಲಿ 12.68 ಕೋಟಿ ರು ಬೇಡಿಕೆ ಪೈಕಿ 11.81 ಕೋಟಿ ರು ವಸೂಲಾಗಿದೆ. 84.32 ಲಕ್ಷ ರು ಬಾಕಿ ಇದೆ. ಬೆಳಗಾವಿ ವಿಭಾಗದಲ್ಲಿ 3.31 ಕೋಟಿ ರು ಬೇಡಿಕೆ ಪೈಕಿ 24.17 ಲಕ್ಷ ರು ವಸೂಲಾಗಿದೆ. ಬಾಕಿ 3.07 ಕೋಟಿ ರು.ಇದೆ. ಕಲ್ಬುರ್ಗಿ ವಿಭಾಗದಲ್ಲಿ 16.11 ಕೋಟಿ ರು ಬೇಡಿಕೆ ಪೈಕಿ 67.37 ಲಕ್ಷ ರು ವಸೂಲಾಗಿದೆ. 15.44 ಕೋಟಿ ರು ಬಾಕಿ ಇರುವುದು ತಿಳಿದು ಬಂದಿದೆ.
ನೀರಿನ ಕರ ಮತ್ತು ದಂಡ ವಸೂಲಾತಿ ಸಂಬಂಧ 2023-24ನೇ ಸಾಲಿಗೆ ಒಟ್ಟಾರೆ 865.20 ಕೋಟಿ ರು ಬೇಡಿಕೆ ಅಂದಾಜಿಸಿತ್ತು. ನಾಲ್ಕು ವಿಭಾಗಗಳಿಂದ ಕೇವಲ 8.14 ಕೋಟಿ ರು ವಸೂಲಾಗಿದೆ. ವಸೂಲಾತಿಗೆ 85.70 ಕೋಟಿ ರು ಬಾಕಿ ಇದೆ.
ಬೆಂಗಳೂರು ವಿಭಾಗದಲ್ಲಿ 63.33 ಕೋಟಿ ರು ಬೇಡಿಕೆ ಪೈಕಿ ಕೇವಲ 26.65 ಲಕ್ಷ ವಸೂಲಾಗಿದೆ. ವಸೂಲಾತಿಗೆ 63.06 ಕೋಟಿ ರು ಬಾಕಿ ಇದೆ. ಮೈಸೂರು ವಿಭಾಗದಲ್ಲಿ 37.71 ಕೋಟಿ ರು ಬೇಡಿಕೆ ಪೈಕಿ 4.25 ಕೋಟಿ ವಸೂಲಾಗಿದ್ದು 37.28 ಕೋಟಿ ರು ಬಾಕಿ ಇದೆ. ಬೆಳಗಾವಿ ವಿಭಾಗದಲ್ಲಿ 13.16 ಕೋಟಿ ರು ಬೇಡಿಕೆ ಪೈಕಿ ಕೇವಲ 2.07 ಲಕ್ಷ ರು ವಸೂಲಾಗಿದ್ದು ಇನ್ನೂ 13.14 ಕೋಟಿ ರು ಬಾಕಿ ಇದೆ. ಕಲ್ಬುರ್ಗಿ ವಿಭಾಗದಲ್ಲಿ 411.56 ಕೋಟಿ ರು ಬೇಡಿಕೆ ಪೈಕಿ ಕೇವಲ 3.60 ಕೋಟಿ ಮಾತ್ರ ವಸೂಲಾಗಿದ್ದು 407.95 ಕೋಟಿ ರು ವಸೂಲಾತಿಗೆ ಬಾಕಿ ಇರುವುದು ಗೊತ್ತಾಗಿದೆ.
ಇತರೆ ಬಾಕಿ ರೂಪದಲ್ಲಿಯೂ 2023-24ನೇ ಸಾಲಿನಲ್ಲಿ 611.9 ಕೋಟಿ ರು ಬೇಡಿಕೆ ಇತ್ತು. ಈ ಪೈಕಿ ಕೇವಲ 7.05 ಕೋಟಿ ಮಾತ್ರ ವಸೂಲಾಗಿದೆ. ವಸೂಲಾತಿಗೆ 604.85 ಕೋಟಿ ರು ಬಾಕಿ ಇದೆ. ಬೆಂಗಳೂರು ವಿಭಾಗದಲ್ಲಿ 88.97 ಕೋಟಿ ರು ಬೇಡಿಕೆ ಪೈಕಿ 3.13 ಕೋಟಿ ವಸೂಲಾಗಿದೆ ಇದೆ. ವಸೂಲಾತಿಗೆ 85.84 ಕೋಟಿ ರು ಬಾಕಿ ಇದೆ.
ಮೈಸೂರು ವಿಭಾಗದಲ್ಲಿ 120.21 ಕೋಟಿ ರು ಬೇಡಿಕೆ ಪೈಕಿ 64.20 ಲಕ್ಷ ರು ಮಾತ್ರ ವಸೂಲಾಗಿದೆ. 119.57 ಕೋಟಿ ರು ಬಾಕಿ ಇದೆ. ಬೆಳಗಾವಿ ವಿಭಾಗದಲ್ಲಿ 106.38 ಕೋಟಿ ರು ಬೇಡಿಕೆ ಪೈಕಿ 2.57 ಕೋಟಿ ವಸೂಲಾಗಿದ್ದು ಇನ್ನೂ 103.80 ಕೋಟಿ ರು ವಸೂಲಾತಿಗೆ ಬಾಕಿ ಇದೆ. ಕಲ್ಬುರ್ಗಿ ವಿಭಾಗದಲ್ಲಿ 296.33 ಕೋಟಿ ರು ಬೇಡಿಕೆ ಪೈಕಿ ಕೇವಲ 70.31 ಲಕ್ಷ ರು ಮಾತ್ರ ವಸೂಲಾಗಿದೆ. ಈ ಕುರಿತು ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ದಂಡ ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲು ಮಾಡುವ ವಿಷಯವನ್ನು ಸಕಾಲ ವ್ಯಾಪ್ತಿಗೊಳಪಡಿಸುವ ಸಂಬಂಧ ರೇರಾ ಪ್ರಾಧಿಕಾರ 2023ರ ಸೆ.26ರಂದು ನಡೆಸಿದ್ದ ಸಭೆಯಲ್ಲಿ 423.51 ಕೋಟಿ ರು ಪ್ರಮಾಣದಲ್ಲಿ ಭೂ ಕಂದಾಯ ಬಾಕಿ ಇರುವ ವಿಚಾರವು ಚರ್ಚೆಗೆ ಬಂದಿತ್ತು.
ರೇರಾ ಕಾಯ್ದೆ ಅಡಿಯಲ್ಲಿ ವಿಧಿಸಲಾಗುವ ದಂಡ, ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂದು ವಸೂಲು ಮಾಡುವ ಪ್ರಕ್ರಿಯೆಗೆ ತಗುಲುವ ವೆಚ್ಚಗಳನ್ನು ಭರಿಸಲು ಮತ್ತು ವಸೂಲಾತಿ ಶುಲ್ಕಗಳನ್ನು ವಿಧಿಸಲು ರೇರಾ ನಿಯಮಗಳಲ್ಲಿ ಸೂಕ್ತ ತಿದ್ದುಪಡಿ ತರುವ ಬಗ್ಗೆ ಕ್ರಮ ವಹಿಸಲು ವಸತಿ ಇಲಾಖೆಗೆ ಸೂಚಿಸಿತ್ತು.
ಭೂ ಕಂದಾಯ ಬಾಕಿ ಉಳಿಸಿಕೊಂಡಿರುವ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ 415.73 ಕೋಟಿ ರು. ಬಾಕಿ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 73.46 ಲಕ್ಷ ರು., ಮೈಸೂರು ಜಿಲ್ಲೆಯಲ್ಲಿ 2.33 ಕೋಟಿ ರು., ಧಾರವಾಡದಲ್ಲಿ 27.33 ಲಕ್ಷ ರು., ಬೆಳಗಾವಿಯಲ್ಲಿ 69.29 ಲಕ್ಷ ರು., ದಕ್ಷಿಣ ಕನ್ನಡದಲ್ಲಿ 3.20 ಕೋಟಿ ರು., ಉಡುಪಿಯಲ್ಲಿ 53.26 ಲಕ್ಷ ರು. ಭೂ ಕಂದಾಯ ವಸೂಲಾತಿಗೆ ಬಾಕಿ ಇತ್ತು.
423.51 ಕೋಟಿ ಭೂ ಕಂದಾಯ ಬಾಕಿ; ವಸೂಲಾತಿ ಶುಲ್ಕ ನಿಗದಿಗೆ ಕಂದಾಯ ಇಲಾಖೆಗೆ ವಸತಿ ಇಲಾಖೆ ಪತ್ರ
‘ರೇರಾ ಕಾಯ್ದೆಯು ಕೇಂದ್ರ ಸರ್ಕಾರದ ಕಾಯ್ದೆಯಾಗಿದೆ. ಇದನ್ನು ಸಂಬಂಧಪಟ್ಟ ತಹಶೀಲ್ದಾರ್‍ಗಳೇ ರೇರಾ ಕಾಯ್ದೆಯಡಿ ವಿಧಿಸುವ ದಂಡದ ಮೊತ್ತವನ್ನು ಭೂ ಕಂದಾಯ ಎಂದು ವಸೂಲು ಮಾಡಬೇಕಾಗುತ್ತದೆ. ಆದರೆ ತಹಶೀಲ್ದಾರ್‍ರು ಅರೆ ನ್ಯಾಯಿಕ ಪ್ರಾಧಿಕಾರವಾಗಿದ್ದು ರೇರಾ ಕಾಯ್ದೆಯಡಿ ವಿಧಿಸುವ ದಂಡದ ಮೊತ್ತವನ್ನು ಭೂ ಕಂದಾಯ ಎಂದು ವಸೂಲು ಮಾಡುವಲ್ಲಿ ಹಲವಾರು ಕಾನೂನಾತ್ಮಕ ತೊಡಕುಗಳೀವೆ,’ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚರ್ಚಿಸಿದ್ದರು.