ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸೋಮಣ್ಣ ಅವರು ಮಹಿಳೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳು ಇಲ್ಲ ಎಂದು ಚಾಮರಾಜನಗರ ಜಿಲ್ಲೆಯ ಉಪ ವಿಭಾಗದ ಡಿವೈಎಸ್ಪಿ ಅವರು ನೀಡಿದ್ದ ವರದಿಯನ್ನೇ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಎತ್ತಿ ಹಿಡಿದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ವಸತಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಕೆಂಪಮ್ಮ ಎಂಬುವರಿಗೆ ಅಂದು ಸಚಿವರಾಗಿದ್ದ ವಿ ಸೋಮಣ್ಣ ಅವರು ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು.
ಈ ಪ್ರಕರಣವನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದ ಪ್ರತಿಪಕ್ಷ ಕಾಂಗ್ರೆಸ್, ವಿ ಸೋಮಣ್ಣ ಅವರ ರಾಜೀನಾಮೆಗೆ ಆಗ್ರಹಿಸಿತ್ತು. ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ, ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್‌ನ ಮಹಿಳಾ ವಿಭಾಗ ಸೇರಿದಂತೆ ಹಲವು ಸಂಘಟನೆಗಳು ದೂರು ಸಲ್ಲಿಸಿದ್ದವು.
ವಿಶೇಷವೆಂದರೇ ಕಾಂಗ್ರೆಸ್ ಅಧಿಕಾರದಲ್ಲಿರುವಾಗಲೇ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ ಶಾಮ ಭಟ್ ಅವರು ಚಾಮರಾಜನಗರ ಉಪ ವಿಭಾಗದ ಡಿವೈಎಸ್ಪಿ ನೀಡಿದ್ದ ವರದಿಯನ್ನೇ ಎತ್ತಿ ಹಿಡಿದಿದ್ದಾರೆ.
ಈ ಸಂಬಂಧ 2024ರ ಏಪ್ರಿಲ್ 29ರಂದು ಟಿ ಶಾಮ ಭಟ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿ ಮತ್ತು ಡಿವೈಎಸ್ಪಿ ನೀಡಿರುವ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ದೂರಿನ ಕುರಿತು ವಿಚಾರಣೆ ನಡೆಸಿದ್ದ ಚಾಮರಾಜನಗರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರಕರಣದಲ್ಲಿ ಪೂರಕ ಆಧಾರಗಳಿಲ್ಲ ಎಂದು ವರದಿ ಸಲ್ಲಿಸಿದ್ದರು. ಆದರೆ ಈ ವರದಿಯನ್ನು ಬೆಂಗಳೂರು ಮೂಲದ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಿದ್ದರು.
ಈ ಪ್ರಕರಣದ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಶಿಫಾರಸ್ಸು ಮಾಡಿತ್ತು. ಆದರೀಗ ಈ ಪ್ರಕರಣದ ಕುರಿತು ವಿಚಾರಣೆ ನಡೆಸಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ ಶಾಮ್ ಭಟ್ ಅವರು ಚಾಮರಾಜನಗರ ಜಿಲ್ಲೆಯ ಉಪ ವಿಭಾಗದ ಡಿವೈಎಸ್ಪಿ ಅವರು ನೀಡಿದ್ದ ವರದಿಯನ್ನೇ ಎತ್ತಿ ಹಿಡಿದಿರುವುದು ಚರ್ಚೆಗೆ ಗ್ರಾಸವಾಗಿದೆ.
ಆಯೋಗದ ಆದೇಶದಲ್ಲೇನಿದೆ?
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಹಂಗಳ ಗ್ರಾಮದ ಘಟನೆ ಕುರಿತು ಹಲವು ಸಂಘಟನೆಗಳು ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಬಂದೋಬಸ್ತ್‌ನಲ್ಲಿದ್ದ ಅಧಿಕಾರಿಗಳನ್ನು ಒಳಗೊಂಡಂತೆ ನೊಂದ ಮಹಿಳೆಯರನ್ನು ಸಹ ವಿಚಾರಣೆ ಮಾಡಲಾಗಿದ್ದು ವಿಚಾರಣೆ ಸಂದರ್ಭದಲ್ಲಿ ಸಚಿವರು ನೊಂದ ಮಹಿಳೆಯಾದ ಕೆಂಪಮ್ಮ ಅವರಿಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿರುವ ಕುರಿತು ಯಾವುದೇ ಪೂರಕ ಆಧಾರಗಳು ಕಂಡುಬಂದಿರುವುದಿಲ್ಲ.
ಈ ಬಗ್ಗೆ ಸ್ವತಃ ಕೆಂಪಮ್ಮ ಅವರೇ ವಿಚಾರಣೆ ಸಂದರ್ಭದಲ್ಲಿ ಹೇಳಿಕೆ ನೀಡಿರುವುದರಿಂದ ಹಾಗೂ ಕಪಾಳ ಮೋಕ್ಷ ಮಾಡಿರುವಂತೆ ದೂರು ನೀಡಲು ಕೆಲವು ಸಂಘಟನೆಗಳು ಕೆಂಪಮ್ಮ ಅವರಿಗೆ ಕುಮ್ಮಕ್ಕು ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದ ಮೇರೆಗೆ ಗುಂಡ್ಲುಪೇಟೆ ಠಾಣೆಯಲ್ಲಿ ಕಲಂ 506ರಂತೆ ಮೊಕದ್ದಮೆ (ಸಂಖ್ಯೆ;301/2023) ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು.
ಈ ವರದಿಯ ಪ್ರತಿಯನ್ನು ದೂರುದಾರ ಅಭಿಪ್ರಾಯಕ್ಕಾಗಿ ಕಳಿಸಲಾಗಿತ್ತು. ದೂರುದಾರರು ಇ ಮೇಲ್ ಮುಖಾಂತರ ಹೆಚ್ಚಿನ ಕಾಲಾವಕಾಶ ನೀಡಲು ಕೋರಿದ್ದು ಸಾಕಷ್ಟು ಕಾಲಾವಕಾಶ ನೀಡಿದರೂ ಸಹ ಇದುವರೆಗೂ ದೂರುದಾರರು ಯಾವುದೇ ಅಭಿಪ್ರಾಯ ಸಲ್ಲಿಸಿರುವುದಿಲ್ಲ.
ದೂರು ಹಾಗೂ ವರದಿಯನ್ನು ಪರಿಶೀಲಿಸಲಾಗಿ ದೂರುದಾರರು ಅರ್ಜಿಯಲ್ಲಿ ಮಾಡಿರುವ ಆರೋಪಕ್ಕೆ ಯಾವುದೇ ಪೂರಕ ದಾಖಲಾತಿಗಳನ್ನು ಒದಗಿಸದೇ ವರದಿಯ ಮೇಲೆ ಅಭಿಪ್ರಾಯ ಸಲ್ಲಿಸದೇ ಇರುವುದರಿಂದ ವರದಿ ಅನ್ವಯ ಪ್ರಕರಣವನ್ನು ಮುಕ್ತಾಯ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ ಶಾಮ ಭಟ್ ಅವರು 2024ರ ಏಪ್ರಿಲ್27ರಂದು ಹೊರಡಿಸಿರುವ ಆದೇಶದಲ್ಲಿ ವಿವರಿಸಿದ್ದಾರೆ.
ಏನಿದು ಘಟನೆ?
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ವಸತಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ವಸತಿ ದೊರೆಯದ ಮಹಿಳೆಯೊಬ್ಬರು ಜೋರಾಗಿ ಮಾತನಾಡುತ್ತಾ ಸಚಿವರ ಬಳಿ ಬಂದಾಗ ಸೋಮಣ್ಣ ಅವರು ಆಕೆಯ ಕಪಾಳಕ್ಕೆ ಹೊಡೆದಿದ್ದರು ಎನ್ನಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸಚಿವ ವಿ. ಸೋಮಣ್ಣ, ನಿವೇಶನಕ್ಕಾಗಿ ನಾಲ್ಕೂವರೆ ಸಾವಿರ ರೂ.ಗಳನ್ನು ನಾನು ಮದ್ಯವರ್ತಿಯೊಬ್ಬರಿಗೆ ನೀಡಿದ್ದೇನೆ ಎಂದು ಮಹಿಳೆ ಅಲವತ್ತುಕೊಂಡಿದ್ದರು. ಆಗ ನಾನೇ ಅವರಿಗೆ ಅವರು ಕಳೆದುಕೊಂಡಿದ್ದ ಹಣ ನೀಡಿದ್ದೆ. ನಾನು ಎಲ್ಲಾ ಹೆಣ್ಣುಮಕ್ಕಳನ್ನು ಸೋದರಿಯರಂತೆ ಗೌರವ ಭಾವನೆಯಿಂದ ನೋಡುತ್ತೇನೆ. ಆದರೆ, ಇಲ್ಲಿ ಅವರು ಪದೇ ಪದೇ ಕಾಲಿಗೆ ಬೀಳುವುದು ಮಾಡಿದರು. ಆಗ, ಅವರನ್ನು ತಡೆಯುವ ಭರದಲ್ಲಿ ಜೋರಾಗಿ ಕೈ ತಾಗಿದೆ,ಬದಲಾಗಿ ಅದು ಹೊಡೆದದ್ದಲ್ಲ ಎಂದಿದ್ದರು.
ಈ ಪ್ರಕರಣ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಮಹಿಳೆಯ ಕೆನ್ನೆಗೆ ಹೊಡೆದ ವಿ. ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ಅಮಾನತು ಮಾಡಿ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದ್ದರು. ಈ ಕುರಿತಾಗಿ ಟ್ವೀಟ್ ಮಾಡಿದ್ದ ಅವರು ಸಚಿವ ವಿ ಸೋಮಣ್ಣ ಚಾಮರಾಜನಗರದಲ್ಲಿ ಸಹಾಯ ಯಾಚಿಸಿ ಬಂದ ಮಹಿಳೆಯ ಕೆನ್ನೆಗೆ ಹೊಡೆದಿದ್ದು ಬಿಜೆಪಿಯ ನಡವಳಿಕೆಯನ್ನು ತೋರಿಸುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ. ಕೆಂಪು ಕೋಟೆಯಲ್ಲಿ ನಿಂತು ಮಹಿಳೆಯರಿಗೆ ಗೌರವ ನೀಡಬೇಕೆಂದು ಭಾಷಣ ಮಾಡುತ್ತಾರೆ. ಹಾಗಾದರೆ ಇದೇನಾ ಬಿಜೆಪಿ ಮಹಿಳೆಯರಿಗೆ ಕೊಡುತ್ತಿರುವ ಗೌರವ ಹಾಗಾದರೆ? ಇದೇನಾ ಬಿಜೆಪಿ ಮಹಿಳೆಯರಿಗೆ ಕೊಡುತ್ತಿರುವ ಸುರಕ್ಷತೆ? ಎಂದು ಪ್ರಶ್ನಿಸಿದ್ದರು.
ಸಚಿವರಿಂದ ಹಲ್ಲೆಗೊಳಗಾದ ಮಹಿಳೆಗೆ ನ್ಯಾಯ ಬೇಕು. ಈ ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗಬೇಕೆ ಹೊರತು ಬಿಜೆಪಿಯ ಸಮರ್ಥನೆಯಲ್ಲ, ಸಚಿವ ಸೋಮಣ್ಣ ಅವರನ್ನು ಪ್ರಧಾನಿ ಮೋದಿಯವರು ಸಚಿವ ಸ್ಥಾನದಿಂದ ಅಮಾನತು ಮಾಡಬೇಕು. ಈ ಘಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೊಣೆ ಹೋರಬೇಕು. ಇವತ್ತೆ ಸಚಿವ ಸೋಮಣ್ಣ ಅವರನ್ನು ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದ್ದನ್ನು ಸ್ಮರಿಸಬಹುದು.