ಎಂಟೆಕ್‌ ಕೋರ್ಸ್‌ಗಳಿಗೆ ಸಿಇಟಿ ರದ್ದುಗೊಳಿಸಲು ಪ್ರಸ್ತಾವ; ಭ್ರಷ್ಟಾಚಾರಕ್ಕೆ ದಾರಿಮಾಡಿಕೊಟ್ಟ ಕೆಇಎ

ಬೆಂಗಳೂರು; ಬಯೋ ಟೆಕ್ನಾಲಜಿ, ಸಿವಿಲ್‌ ಇಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಸೈನ್ಸ್‌ ಸೇರಿದಂತೆ ಒಟ್ಟು 10 ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರದ್ದುಗೊಳಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಸ್ತಾವನೆ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಸಾಮಾನ್ಯ ಪ್ರವೇಶ ಪರೀಕ್ಷೆ ಬದಲಿಗೆ ಸೆಮಿಸ್ಟರ್‌ಗಳಲ್ಲಿ ಗಳಿಸಿದ ಅಂಕಗಳನ್ನಾಧರಿಸಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು ಎಂದು ಪ್ರಸ್ತಾವಿಸುವ ಮೂಲಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿರುವುದು ಇದೀಗ ಬಹಿರಂಗವಾಗಿದೆ.

 

ಪ್ರವೇಶ ಪರೀಕ್ಷೆಗೆ ನೋಂದಣಿ ಕುಸಿತಗೊಂಡಿದೆ ಎಂಬ ಕಾರಣವನ್ನು ಮುಂದಿರಿಸಿರುವ ಕರ್ನಾಟಕ ಪ್ರವೇಶ ಪ್ರಾಧಿಕಾರವು ಪ್ರವೇಶ ಪರೀಕ್ಷೆಯನ್ನೇ ರದ್ದುಗೊಳಿಸಬೇಕು ಎಂದು ಸಲ್ಲಿಸಿರುವ ಪ್ರಸ್ತಾವನೆಯು ಶೈಕ್ಷಣಿಕ ಹಿತದೃಷ್ಟಿಯನ್ನೇ ಬದಿಗೊತ್ತಿದೆ.
ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಗಳು (ಕಡತ ಸಂಖ್ಯೆ; ED/498/TEC/2023 Computer number 1254637) ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪಾಲಿಮರ್‌ ಸೈನ್ಸ್‌, ಟೆಕ್ಸ್‌ಟೈಲ್‌ ಟೆಕ್ನಾಲಜಿ, ಕೆಮಿಕಲ್‌ ಇಂಜಿನಿಯರಿಂಗ್‌, ಪರಿಸರ ಇಂಜಿನಿಯರಿಂಗ್‌, ಬಯೋ ಟೆಕ್ನಾಲಜಿ, ವಾಸ್ತುಶಿಲ್ಪ, ಮೆಕ್ಯಾನಿಕಲ್‌ ಸೈನ್ಸ್‌, ಎಲೆಕ್ಟ್ರಿಕಲ್‌ ಸೈನ್ಸ್‌, ಕಂಪ್ಯೂಟರ್‌ ಸೈನ್ಸ್‌ ಇಂಜಿನಿಯರಿಂಗ್‌ ಮತ್ತು ಸಿವಿಲ್‌ ಇಂಜಿನಿಯರಿಂಗ್‌ಗೆ 2022-23ನೇ ಸಾಲಿನಲ್ಲಿ ಒಟ್ಟು 7,056 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 2023-24ರಲ್ಲಿ 6,427 ವಿದ್ಯಾರ್ಥಿಗಳು ನೋಂದಾಯಿಸಿದ್ದರು.

 

ಈ ಅಂಕಿ ಅಂಶದ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೇ ಒಂದೇ ವರ್ಷದಲ್ಲಿ 629 ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಈ ಅಂಶವನ್ನೇ ಮುಂದಿರಿಸಿಕೊಂಡಿರುವ ಕೆಇಎಯು ಪ್ರವೇಶ ಪರೀಕ್ಷೆ ಬದಲಿಗೆ ಸೆಮಿಸ್ಟರ್‌ನಲ್ಲಿ ಗಳಿಸಿರುವ ಅಂಕಗಳನ್ನಾಧರಿಸಿ ಪ್ರವೇಶ ಕಲ್ಪಿಸಬೇಕು ಎಂದು ಪ್ರತಿಪಾದಿಸಿರುವ ಕ್ರಮಕ್ಕೆ ಶಿಕ್ಷಣ ಇಲಾಖೆಯಲ್ಲಿಯೇ ಆಕ್ಷೇಪ ವ್ಯಕ್ತವಾಗಿವೆ.

 

ಎಂ ಟೆಕ್‌ ಪದವಿಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿ ಎಂ ಟೆಕ್‌ ಪದವಿ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅವರ ಸ್ನಾತಕ ಪದವಿಯ ಎಲ್ಲಾ ವರ್ಷಗಳ ಸೆಮಿಸ್ಟರ್‌ ಗಳ ಸರಾಸರಿ ಅಂಕಗಳ ಆಧಾರದ ಮೇಲೆ ಎಂ ಟೆಕ್‌ ಪದವಿಗೆ ಪ್ರವೇಶ ನೀಡುವುದು ಸೂಕ್ತ ಎಂದು ಪ್ರಾಧಿಕಾರವು ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ.

 

ಕೆಇಎ ಯು ತನ್ನ ಪ್ರಸ್ತಾವನೆಯಲ್ಲಿ 10 ವಿಷಯಗಳಿಗೆ ಪ್ರವೇಶ ಪರೀಕ್ಷೆ ಮಾಡುವುದರಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವುಂಟಾಗುತ್ತಿದೆ. ಅಲ್ಲದೇ ಮಾನವ ಸಂಪನ್ಮೂಲದ ಮೇಲೆ ಅನಾವಶ್ಯಕ ಕಾರ್ಯ ಒತ್ತಡ ಉಂಟಾಗುತ್ತಿದೆ. ಹೀಗಾಗಿ ಎಂ ಟೆಕ್‌ ಕೋರ್ಸ್‌ಗೆ ಪ್ರವೇಶ ಪರೀಕ್ಷೆ ರದ್ದುಪಡಿಸಬೇಕು ಎಂದು ಪ್ರಾಧಿಕಾರವು ತನ್ನ ಪ್ರಸ್ತಾವನೆಯಲ್ಲಿ ಹೇಳಿದೆ.

 

ಇದಕ್ಕೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು  ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಚಿವ ಡಾ ಎಂ ಸಿ ಸುಧಾಕರ್‌ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

‘ಕೆಇಎಯು ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಪ್ರಾಧಿಕಾರವಾಗಿದೆ. ಇದು ಸರ್ಕಾರದ ಒಂದು ಭಾಗವಾಗಿರುತ್ತದೆ. ಸರ್ಕಾರದ ಉದ್ದೇಶವು ಲಾಭ ಗಳಿಸುವ ಉದ್ದೇಶ ಆಗಬಾರದು. ಸರ್ಕಾರಕ್ಕೆ ಸೇವಾಭಾವನೆ ಇರಬೇಕಾಗುತ್ತದೆ. ಆದ್ದರಿಂದ ಎಂಟೆಕ್‌ ಕೋರ್ಸ್‌ಗಳಿಗೆ ಕೆಇಎಯಿಂದ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಸೀಟುಗಳನ್ನು ಭರ್ತಿ ಮಾಡುವ ಕ್ರಮವು ಸರಿ ಇರುತ್ತದೆ.

 

ಸೆಮಿಸ್ಟರ್‌ಗಳಲ್ಲಿ ಪಡೆಯುವ ಅಂಕಗಳ ಆಧಾರದ ಮೇಲೆ ಪ್ರವೇಶಾತಿ ನೀಡುವ ಕ್ರಮವ ಸರಿ ಇರುವುದಿಲ್ಲ. ಒಂದು ವೇಳೆ ಸೆಮಿಸ್ಟರ್‌ಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಪ್ರವೇಶಾತಿ ನೀಡಿದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಕೆಇಎ ಪ್ರಸ್ತಾವನೆಯನ್ನು ಕೈ ಬಿಡಬಹುದಾಗಿದೆ,’ ಎಂದು ಶಾಖಾಧಿಕಾರಿ ಶಾಂತಪ್ಪ ದನ್ನೇನವರ್‌ ಅವರು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಪ್ಪ ಎಸ್‌ ತುರಕನೂರು ಅವರೂ ಸಹ ಶಾಖಾಧಿಕಾರಿಯ ಅಭಿಪ್ರಾಯವನ್ನೇ ಎತ್ತಿ ಹಿಡಿದಿದ್ದಾರೆ.

 

‘ಎಂಟೆಕ್‌ ಕೋರ್ಸ್‌ಗಳಿಗೆ ಪ್ರವೇಶಾತಿಗೆ ಸಂಬಂಧಿಸಿದಂತೆ 2005ರಲ್ಲಿ ನಿಯಮವು ಜಾರಿಗೆ ಬಂದಿದೆ. ಇದರಿಂದಾಗಿ ಎಂಇ/ಎಂ ಟೆಕ್‌ ಸ್ನಾತಕೋತ್ತರ ಕೋರ್ಸ್‌ನ ಪ್ರವೇಶಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲು ಸಾಧ್ಯವಾಗಿರುತ್ತದೆ. ಅಲ್ಲದೇ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಪ್ರವೇಶಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೈಗೊಳ್ಳಲು 2024-25ನೇ ಸಾಲಿನಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ರದ್ದುಗೊಳಿಸದೆಯೇ ಹಾಲಿ ಚಾಲ್ತಿಯಲ್ಲಿರುವ ನಿಯಮಾವಳಿಗಳಂತೆ ಪ್ರವೇಶಾತಿ ಪ್ರಕ್ರಿಯೆ ಮುಂದುವರೆಸುವುದು ಸೂಕ್ತ,’ ಎಂದು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಎಲೆಕ್ಟ್ರಿಕಲ್‌ ಸೈನ್ಸ್‌ ಇಂಜಿನಿಯರಿಂಗ್‌, ಕಂಪ್ಯೂಟರ್‌ ಸೈನ್ಸ್‌ ಇಂಜಿನಿಯರಿಂಗ್‌, ಸಿವಿಲ್‌ ಇಂಜಿನಿಯರಿಂಗ್‌ ವಿಷಯಗಳನ್ನು ಹೊರತುಪಡಿಸಿದರೇ ಉಳಿದ 7 ವಿಷಯಗಳಿಗೆ ಸಾವಿರಕ್ಕಿಂತ ಕಡಿಮೆ ಅಭ್ಯರ್ಥಿಗಳು ಎಂ ಟೆಕ್‌ ಸಾಮಾನ್ಯ ಪ್ರವೇಶ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ ಹಲವು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಸೀಟ್‌ ದೊರೆತಿದ್ದರೂ ಎಂ ಟೆಕ್‌ ಕೋರ್ಸ್‌ಗೆ ದಾಖಲಾತಿಯನ್ನೇ ಪಡೆದಿಲ್ಲ ಎಂಬುದು ಕೆಇಎಯು ತನ್ನ ಪ್ರಸ್ತಾವನೆಯಲ್ಲಿ ಮಾಹಿತಿ ಒದಗಿಸಿದೆ.

 

‘ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಎಲ್ಲಾ 10 ಎಂ ಟೆಕ್‌ ವಿಷಯಗಳಿಗೆ ಸಂಬಂಧಿಸಿದಂತೆ ಪ್ರವೇಶ ಪರೀಕ್ಷೆಯನ್ನು ನಡೆಸುತ್ತಿರುವುದರಿಂದ ಆರ್ಥಿಕ ನಷ್ಟವುಂಟಾಗುತ್ತಿದೆ. ಅಲ್ಲದೇ ಪ್ರಾಧಿಕಾರದ ಮಾನವ ಸಂಪನ್ಮೂಲದ ಮೇಲೆ ಅನಾವಶ್ಯಕ ಕಾರ್ಯ ಒತ್ತಡ ಉಂಟಾಗುತ್ತದೆ. ಅಭ್ಯರ್ಥಿಗಳು ಸಹ ಎಂ ಟೆಕ್‌ ಕೋರ್ಸ್‌ಗಳಿಗೆ ದಾಖಲಾತಿ ಪಡೆದುಕೊಳ್ಳಲುಉ ಆಸಕ್ತಿ ತೋರಿಸುತ್ತಿಲ್ಲ,’ ಎಂದು ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಎಂಟೆಕ್‌ ಕೋರ್ಸ್‌ಗಳಿಗೆ ಅಭ್ಯರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ ಎಂಬ ಅಂಶವನ್ನು ಮುಂದಿರಿಸಿರುವ ಪ್ರಾಧಿಕಾರವು ಎಂಬಿಎ ಮತ್ತು ಎಂಸಿಎ ಪದವಿಗಳಿಗೆ ಮಾತ್ರ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕು. ಅದರಲ್ಲಿ ವಿದ್ಯಾರ್ಥಿಗಳು ಗಳಿಸುವ ರ್ಯಾಂಕ್‌ನ್ನು ಆಧರಿಸಿ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ನೀಡುವುದ್ನು ಮುಂಬರುವ ವರ್ಷಗಳಲ್ಲಿಯೂ ಮುಂದುವರೆಸಬೇಕು ಎಂದಿದೆ.

 

ಅದೇ ರೀತಿ ಎಂ ಟೆಕ್‌ ಪದವಿಯ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸಿ ಎಂ ಟೆಕ್‌ ಪದವಿ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅವರ ಸ್ನಾತಕ ಪದವಿಯ ಎಲ್ಲಾ ವರ್ಷಗಳ ಸೆಮಿಸ್ಟರ್‌ ಗಳ ಸರಾಸರಿ ಅಂಕಗಳ ಆಧಾರದ ಮೇಲೆ ಎಂ ಟೆಕ್‌ ಪದವಿಗೆ ಪ್ರವೇಶ ನೀಡುವುದು ಸೂಕ್ತ ಎಂದು ಪ್ರಾಧಿಕಾರವು ತನ್ನ ಪ್ರಸ್ತಾವನೆಯಲ್ಲಿ ವಿವರಿಸಿದೆ.

the fil favicon

SUPPORT THE FILE

Latest News

Related Posts