ಜೀವ ಬೆದರಿಕೆ, ಗೂಂಡಾ ವರ್ತನೆ ಆರೋಪ; ತರಳಬಾಳು ಶ್ರೀ ವಿರುದ್ಧ ಠಾಣೆಯಲ್ಲಿ ದೂರು

ಬೆಂಗಳೂರು; ಸಭೆ ಸಮಾರಂಭಗಳಲ್ಲಿ ಮತ್ತು ಸಾರ್ವಜನಿಕವಾಗಿ ಏರು ದನಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ಶಾಂತಿ ಸುವ್ಯವಸ್ಥೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ವಿರುದ್ಧ ಆರೋಪಿಸಿರುವ ಲಿಂಗರಾಜು ಎಂಬುವರು ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಎಲ್‌ ಕೆ ಲಿಂಗರಾಜ ಎಂಬುವರು ಸಲ್ಲಿಸಿದ್ದ ದೂರನ್ನು ಚನ್ನಗಿರಿ ಪೊಲೀಸ್‌ ಠಾಣಾಧಿಕಾರಿಗಳು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ. ದೂರಿನ ಪ್ರತಿ ಮತ್ತು ಠಾಣಾಧಿಕಾರಿಗಳು ನೀಡಿರುವ ಹಿಂಬರಹದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮಠದ ಆಸ್ತಿ, ವ್ಯವಹಾರ, ಹಣಕಾಸಿನ ಆಡಳಿತ ಕುರಿತು ಈಗಾಗಲೇ ಚಿತ್ರದುರ್ಗ ಜಿಲ್ಲೆಯ ನ್ಯಾಯಾಲಯದಲ್ಲಿ ದಾವೆಯ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಚನ್ನಗಿರಿ ಪೊಲೀಸ್‌ ಠಾಣೆಯಲ್ಲಿ 2024ರ ಏಪ್ರಿಲ್‌ 11ರಂದು  ಸಲ್ಲಿಸಿರುವ ದೂರು ಮುನ್ನೆಲೆಗೆ ಬಂದಿದೆ.

 

ದೂರಿನಲ್ಲೇನಿದೆ?

 

ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಮಾಜದಲ್ಲಿ ಶಾಂತಿ ಕದಡಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ. ಸಮಾಜದ ಮುಖಂಡರು, ಸಾರ್ವಜನಿಕರ ಸಮಕ್ಷಮದಲ್ಲಿ ಮಟ್ಟ ಹಾಕಬೇಕು ಎಂದು ಗೂಂಡಾ ವರ್ತನೆ ರೀತಿಯಲ್ಲಿ ಏರು ಧ್ವನಿಯಲ್ಲಿ ಪ್ರಚೋದನಾಕಾರಿಯಾಗಿ ಭಾಷಣ ಮಾಡುತ್ತಾರೆ. ಅಲ್ಲದೇ ಬೆದರಿಕೆ, ಜೀವ ಬೆದರಿಕೆ ಶಬ್ದ ಬಳಸಿ ಮುಗ್ಧ ಭಕ್ತರು, ಸಾರ್ವಜನಿಕರ ಮನಸ್ಸು, ಶಾಂತಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುತ್ತಾರೆ ಎಂದು ಲಿಂಗರಾಜ ಎಂಬುವರು ವಿವರಿಸಿರುವುದು ದೂರಿನಿಂದ ಗೊತ್ತಾಗಿದೆ.

 

ಮಠದ ಆಡಳಿತ, ಆಸ್ತಿ, ವ್ಯವಹಾರ, ವಹಿವಾಟು, ಹಣಕಾಸಿನ ವ್ಯವಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಲೋಪ-ದೋಷಗಳು ಮತ್ತು ವೈಯಕ್ತಿಕ ವ್ಯವಹಾರಗಳಿಗೆ ಮಠದ ಹಣ ಆಸ್ತಿಗಳನ್ನು ಬಳಕೆ ಮಾಡುತ್ತಿರುವ ಸಂಬಂಧ ಇವರ ವಿರುದ್ಧ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದಲ್ಲಿ  ದಾವೆ ಹೂಡಲಾಗಿದೆ.

 

ಬೃಹನ್ಮಠದ ವಿರುದ್ಧ ದಾಖಲಾದ ದೂರು, ಲಿಂಗೈಕ್ಯ ಗುರುಗಳ ಹಾಕಿಕೊಟ್ಟ ಭದ್ರ ಬುನಾದಿ, ಮಠದ ಘನತೆ, ಗೌರವ , ಸಾದರ ಜನಾಂಗಕ್ಕೆ ಇದ್ದ ಘನತೆ ಮತ್ತು ಗೌರವ ಮಣ್ಣು ಪಾಲಾಗುತ್ತಿದೆ. ಇದನ್ನು ನೋಡಿ ಮನಸ್ಸಿಗೆ ನೋವುಂಟಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 

‘ಪರಿಹಾರಗಳ ಬಗ್ಗೆ ಚರ್ಚೆಗೆ ಪ್ರಯತ್ನಿಸಲು ಹೋದಾಗ ಪೀಠಾಧಿಪತಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಭಕ್ತರಿಗೆ ದರ್ಪ ತೋರುವುದು, ಕಣ್ಣು ಬೀರುವುದು, ಬೆತ್ತ ಬೀಸುವುದು ಕೆಲವು ವ್ಯಕ್ತಿಗಳಿಂದ ಪ್ರಶ್ನೆ ಮಾಡಿದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸುವುದು ಮತ್ತು ಕೆಲವು ಯುವಕರ ಗುಂಪುಗಳಿಂದ ಹಲ್ಲೆ ಮಾಡಿಸುವುದು, ಪ್ರಶ್ನೆ ಮಾಡುವ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಈ ರೀತಿ ಮಾಡುತ್ತಾ ಬಂದಿರುತ್ತಾರೆ,’ ಎಂದು ವಿವರಿಸಿರುವುದು ದೂರಿನಿಂದ ಗೊತ್ತಾಗಿದೆ.

 

ಮಠದ ಪರಮ ಭಕ್ತರಾದ ಶಿವಕುಮಾರ್‌ ಕುರ್ಕಿ, ಎಸ್‌ ಟಿ ಶಾಂತ ಗಂಗಾಧರ್‌, ಟಿ ಎಂ ಶಿವಮೂರ್ತಿಯ್ಯ ಹಿರೇಮಗಳಗೇರಿ, ವಿಶ್ವೇಶ್ವರಯ್ಯ ಹೆಮ್ಮನಬೇತೂರು, ರವಿಕುಮಾರ್‌ ಸಾಣೆಹಳ್ಳಿ, ರಾಜು ಸಾಣೇಹಳ್ಳಿ, ಸಾ ಚ ಮಂಜು, ಸಿದ್ದೇಶ ತೂಲಹಳ್ಳಿ ಮತ್ತು ಹಲವು ಮುಗ್ಧ ಭಕ್ತರ ಮೇಲೆ ಪೊಲೀಸ್‌ ಠಾಣೆ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಲಾಗಿದೆ. ಇಂದಿನ ಗುರುಗಳು ಅಧಿಕಾರ ಪ್ರಭಾವವನ್ನು ಬೀರಿ ಭಕ್ತರನ್ನು ದಿನೇ ದಿನೇ ಕಾನೂನಿನ ಸಂಕೋಲೆಗಳಿಗೆ ಸಿಲುಕಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

2024 ರ ಮಾರ್ಚ್‌ 23ರಂದು ಚನ್ನಗಿರಿ ತಾಲೂಕು ದುರ್ವಿಗೇರಿ ಗ್ರಾಮದಲ್ಲಿ ನಡೆದಿದ್ದ ಸಭೆಯಲ್ಲಿ ಭಕ್ತರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಯೋಗ್ಯರು, ಮುಠ್ಠಾಳರು ನಮ್ಮ ಸಮಾಜದಲ್ಲಿ ಇಂಥವರು ಇರಬಾರದು ಎಂದು ಭಕ್ತರಿಗೆ ಗೂಂಡಾ ವರ್ತನೆ ರೀತಿಯಲ್ಲಿ ಮಾತನಾಡಿದ್ದಾರೆ. ನೆರೆದಿದ್ದ ಸಮಾಜದ ಮುಖಂಡರ ಸಾರ್ವಜನಿಕರ ಸಮಕ್ಷಮದಲ್ಲಿ ಅವರಿಗೆ ಮಟ್ಟ ಹಾಕಬೇಕೆಂದು ಏರು ಧ್ವನಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ದೂರಿದ್ದಾರೆ.

 

‘ಇದೇ ಸಭೆಯಲ್ಲಿ ನಾನು ಭಾಗಿಯಾಗಿದ್ದೆ. ವಾಟ್ಸಾಪ್‌ ಗ್ರೂಪ್‌ನ ಸದಸ್ಯನಾಗಿರುವ ನನಗೆ ಒಂದು ಕಡೆ ಭಯ ಒಂದು ಕಡೆ ನೋವು, ಆತಂಕ. ನೆರೆದಿದ್ದ ಸಾರ್ವಜನಿಕರು ನನ್ನನ್ನು ಹೊಡೆದರು ಎಂಬ ಹೆದರಿಕೆಯಿಂದ ಅಲ್ಲಿಂದ ತೆರಳಿದೆ,’ ಎಂದು ಅಂದಿನ ಘಟನೆಯನ್ನು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಮಠದ ಭಕ್ತನಾದ ಸಂತೋಷ್‌ ಇವರ ವಿರುದ್ಧ ಭಾಷಣ ಮಾಡಿದ ವಿಚಾರವನ್ನು ತಿರುಚಿ ಭಕ್ತರ ವಿರುದ್ಧ ಮಠದ ಕಾರ್ಯದರ್ಶಿ ಮುಖೇನ ದೂರು ದಾಖಲಿಸಿರುತ್ತಾರೆ. ದಿನಂ ಪ್ರತಿ ನಾಲ್ಕು ಐದು ಗ್ರಾಮಗಳಲ್ಲಿ ಸಮಾರಂಭಗಳನ್ನು ಆಯೋಜನೆ ಮಾಡುತ್ತಿದ್ದಾರೆ. ತನ್ನ ಪರ ಮಾತನಾಡುವ ಮತ್ತು ಕೆಲಸ ಮಾಡುವ ವ್ಯಕ್ತಿಗಳ ಗುಂಪುಗಳನ್ನು ಕಟ್ಟಿಕೊಂಡು ಪ್ರತಿ ಗ್ರಾಮಗಳಲ್ಲಿ ಈ ರೀತಿ ಭಕ್ತರ ವಿರುದ್ಧ ಸಾರ್ವಜನಿಕವಾಗಿ ಪ್ರಚೋದನಕಾರಿ ಬೆದರಿಕೆ ಜೀವ ಬೆದರಿಕೆ ಶಬ್ದ ಬಳಸುತ್ತಿದ್ದಾರೆ. ಮುಗ್ಧ ಭಕ್ತರ ಮತ್ತು ಸಾರ್ವಜನಿಕರ ಮನಸ್ಸು ಶಾಂತಿಯನ್ನು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುತ್ತಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

ಸಹೋದರ ಮಠಾಧಿಪತಿಗಳ ಮತ್ತು ವಟುಗಳೊಂದಿಗೆ ಸರಿಯಾಗಿ ಮಠದಲ್ಲಿ ವರ್ತನೆ ಮಾಡುತ್ತಿಲ್ಲ. ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ದಿನೇ ದಿನೇ ಪ್ರತಿ ಗ್ರಾಮ ತಾಲೂಕು ಮಟ್ಟದ ಭಕ್ತರ ಸಮಾಜದ ವಿರುದ್ಧ ಪ್ರಚೋದನಾಕಾರಿ ಕ್ರಾಂತಿಕಾರಿ ಭಾಷಣ ಮಾಡುತ್ತಿದ್ದಾರೆ. ಸುಳ್ಳು ಪ್ರಕರಣಗಳನ್ನು ದಾಖಲಿಸಲು ತಮ್ಮ ಪ್ರಭಾವ ಬಳಸಿಕೊಂಡು ಪ್ರಚೋದಿಸುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

 

‘ಸಮಾಜದಲ್ಲಿ ಶಾಂತಿ ಕದಡಿ ಅಶಾಂತಿ ವಾತಾವರಣ ಸೃಷ್ಟಿಸುತ್ತಿರುವ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅವರು ಆಯೋಜನೆ ಮಾಡುವ ನೆಪ ಮಾತ್ರ ಸಮಾರಂಭಗಳ ಮೇಲೆ ಹದ್ದಿನ ಕಣ್ಣಿಟ್ಟು ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಬೇಕು,’ ಎಂದು ದೂರುದಾರ ಲಿಂಗರಾಜು ಅವರು ಕೋರಿರುವುದು ತಿಳಿದು ಬಂದಿದೆ.

 

ದೂರನ್ನು ಚನ್ನಗಿರಿ ಪೊಲೀಸ್‌ ಠಾಣಾಧಿಕಾರಿಗಳು ಸ್ವೀಕರಿಸಿ ಹಿಂಬರಹ ನೀಡಿದ್ದಾರೆ.

 

ಶಿವಮೂರ್ತಿ ಶಿವಚಾರ್ಯರ ವಿರುದ್ಧ 2021ರಲ್ಲಿ ಸಲ್ಲಿಸಿದ್ದ ಅಸಲು ದಾವೆಯನ್ನು ವಿಚಾರಣೆಗೆ ಅರ್ಹ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಅಂಗೀಕರಿಸಿತ್ತು.

 

ತರಳಬಾಳು ಮಠದ ಪೀಠಾಧಿಪತಿ ವಿರುದ್ಧದ ಅಸಲು ದಾವೆ; ವಿಚಾರಣೆಗೆ ನ್ಯಾಯಾಲಯ ಅಂಗೀಕಾರ

 

2022ರ ಏಪ್ರಿಲ್‌ನಲ್ಲಿಯೂ ತರಳಬಾಳು ಪೀಠಾಧಿಪತಿ ಶಿವಮೂರ್ತಿ ಶಿವಚಾರ್ಯರ ವಿರುದ್ಧ ಶಿಲ್ಪ ಎಂಬುವರು ಡಿಸಿಪಿಗೆ ದೂರು ಸಲ್ಲಿಸಿದ್ದರು.

 

ತರಳಬಾಳು ಜಗದ್ಗುರು, ಇತರರಿಂದ ಜೀವ ಭಯದ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮಹಿಳೆ

 

ಬೆಂಗಳೂರಿನ ಆರ್‌ಟಿ ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ದೂರು ನೀಡಲಾಗಿತ್ತು.

 

ತರಳಬಾಳು ಕೇಂದ್ರದಲ್ಲಿ ಅಕ್ರಮ ಕಟ್ಟಡ; ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಈ ದೂರನ್ನಾಧರಿಸಿ ಬಿಬಿಎಂಪಿ ಮುಖ್ಯ ಇಂಜಿನಿಯರ್‌ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts