ಅನುಮತಿ ಇಲ್ಲದೇ ನೇಮಕಾತಿಗೆ ಮುಂದಾದ ವಿಧಾನ ಪರಿಷತ್‌; ಅಧಿಸೂಚನೆ ಹಿಂಪಡೆಯಲು ನಿರ್ದೇಶನ, ಮುಖಭಂಗ?

ಬೆಂಗಳೂರು; ಖಾಲಿ ಇದ್ದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಸಹಮತಿ ಇಲ್ಲದೆಯೇ ವಿಧಾನ ಪರಿಷತ್‌ ಸಚಿವಾಲಯವು ಅಧಿಸೂಚನೆ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.

 

ನೇಮಕಾತಿ ಸಂಬಂಧ ಅನುಮತಿ ಕೋರಿದ್ದ ಪ್ರಸ್ತಾವನೆಯು ಆರ್ಥಿಕ ಇಲಾಖೆಯ ಪರಿಶೀಲನೆ ಹಂತದಲ್ಲಿರುವಾಗಲೇ ವಿಧಾನ ಪರಿಷತ್‌ ಸಚಿವಾಲಯವು ಅಧಿಸೂಚನೆ ಹೊರಡಿಸಿತ್ತು. ಹೀಗಾಗಿ ಅಧಿಸೂಚನೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯು ವಿಧಾನ ಪರಿಷತ್‌ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.

 

ಆರ್ಥಿಕ ಇಲಾಖೆ ಹೊರಡಿಸಿರುವ ನಿರ್ದೇಶನವು ವಿಧಾನ ಪರಿಷತ್‌ ಸಚಿವಾಲಯದೊಂದಿಗೆ ಸಂಘರ್ಷಕ್ಕೆ ದಾರಿಮಾಡಿಕೊಟ್ಟಂತಾಗಿದೆ. ಅಲ್ಲದೇ ವಿಧಾನ ಪರಿಷತ್‌ ಸಚಿವಾಲಯಕ್ಕೆ ಮುಖಭಂಗವಾದಂತಾಗಿದೆ.

 

ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ನೇರ ನೇಮಕಾತಿ ಅಡಿ ಭರ್ತಿ ಮಾಡಲು ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದರು. ಚರ್ಚೆಯ ನಂತರ ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳಿಸಿತ್ತು. ಈ ಕುರಿತು ಆರ್ಥಿಕ ಇಲಾಖೆಯು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಪ್ರಸ್ತಾವನೆ ಕುರಿತು ಪರಿಶೀಲನೆ ನಡೆಸುತ್ತಿದೆ. ಆದರೂ ವಿಧಾನಪರಿಷತ್‌ ಸಚಿವಾಲಯವು ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ವಿಧಾನಪರಿಷತ್ತಿನ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು 2024ರ ಮಾರ್ಚ್‌ 4 ಮತ್ತು 12ರಂದು ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ ವಾಹನ ಚಾಲಕರು, ಸೀನಿಯರ್‍‌ ಪ್ರೋಗ್ರಾಮರ್‍‌ ಸೇರಿದಂತೆ ಇನ್ನಿತರೆ ಸಹಾಯಕ ಹುದ್ದೆಗಳಿದ್ದವು.

 

 

ಆರ್ಥಿಕ ಇಲಾಖೆಯ ನಿರ್ದೇಶನದಲ್ಲೇನಿದೆ?

 

ವಿಧಾನ ಪರಿಷತ್‌ನ ಸಚಿವಾಲಯವು ಖಾಲಿ ಇರುವ ಉಳಿಕೆ ಮೂಲ ವೃಂದ ಮತ್ತುಕಲ್ಯಾಣ ಕರ್ನಾಟಕ ವೃಂದದಲ್ಲಿನ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿತ್ತು.

 

ಈ ಅಧಿಸೂಚನೆಗಳಲ್ಲಿ ನಮೂದಿಸಿರುವ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆಯ ಅನುಮತಿ ಕೋರಿತ್ತು. ಪ್ರಸ್ತಾವನೆಯು ಇನ್ನು ಆರ್ಥಿಕ ಇಲಾಖೆಯಲ್ಲಿ ಪರಿಶೀಲನೆಯಲ್ಲಿದ್ದು ಈ ಹುದ್ದೆಗಳನ್ನು ನೇಋ ನೇಮಕಾತಿ ಮೂಲಕ ಭರ್ತಿ ಮಾಡಲು ಇದುವರೆವಿಗೂ ಸಹಮತಿಸಿರುವುದಿಲ್ಲ.

 

ಆದರೂ ತಮ್ಮ ಸಚಿವಾಲಯದಿಂದ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಗಳನ್ನು ಹೊರಡಿಸಲಾಗಿರುತ್ತದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆಯಲ್ಲಿ ವಾಹನ ಚಾಲಕರು ಹಾಗೂ ಗ್ರೂಪ್‌ ಡಿ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳು ಹಾಗೂ ಇನ್ನೂ ಮುಂದೆ ಖಾಲಿಯಾಗುವ ಹುದ್ದೆಗಳನ್ನು ಬಾಹ್ಯ ಮೂಲಗಳ ಮುಖಾಂತರ ಪೂರೈಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಇದನ್ನು ಎಲ್ಲಾ ಆಡಳಿತ ಇಲಾಖೆಗಳು ಪಾಲಿಸುತ್ತಿವೆ.

 

2024ರ ಮಾರ್ಚ್‌ 4 ಮತ್ತು 12ರಂದು ತಮ್ಮ ಸಚಿವಾಲಯದಿಂದ ಹೊರಡಿಸಿರುವ ಅಧಿಸೂಚನೆಗಳನ್ನು ಪೂರ್ವ ನಿದರ್ಶನವೆಂದು ಪರಿಗಣಿಸಿ ಎಲ್ಲಾ ಆಡಳಿತ ಇಲಾಖೆಗಳು ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಕ್ರಮ ವಹಿಸುವ ಸಾಧ್ಯತೆಗಳಿರುತ್ತವೆ ಎಂದು ಆರ್ಥಿಕ ಇಲಾಖೆಯು ತನ್ನ ಪತ್ರದಲ್ಲಿ ಹೇಳಿದೆ.

 

Transaction of Business Rules 1977 ರ ಪ್ರಕಾರ ಯಾಔಉದೇ ಹುದ್ದೆಗಳನ್ನು ಭರ್ತಿ ಮಾಡಬೇಕಾದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಕಡ್ಡಾಯವಾಗಿರುತ್ತದೆ. ಈ ಅಂಶಗಳ ಹಿನ್ನೆಲೆಯ್ಲಲಿ ತಮ್ಮ ಸಚಿವಾಲಯದಿಂದ ಹೊರಡಿಸಿರುವ ಮೇಲ್ಕಂಡ ಎರಡೂ ಅಧಿಸೂಚನೆಗಳನ್ನೂ ಕೂಡಲೇ ಹಿಂಪಡೆಯಬೇಕು ಎಂದು ಆರ್ಥಿಕ ಇಲಾಖೆಯು ನಿರ್ದೇಶಿಸಿದೆ. ಈ ಪತ್ರಕ್ಕೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌ ಅವರು ಅನುಮೋದಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts