ಪಿಡಿಒಗಳ ಜೇಷ್ಠತಾ ಪಟ್ಟಿ; ಮಾರ್ಗಸೂಚಿಗಳನ್ನೇ ತಿರುಚಿದ ಅಧಿಕಾರಿಶಾಹಿ, ಚಕಾರ ಎತ್ತದ ಸಚಿವ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ವೃಂದದ ಜೇಷ್ಠತಾ ಪಟ್ಟಿ ತಯಾರಿಸಿರುವ ಮಾರ್ಗಸೂಚಿಗಳು ಲೋಪಗಳಿಂದ ಕೂಡಿದೆ. ಅಲ್ಲದೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾರಿಗೆ ಬಂದ ನಂತರ ಹೊರಡಿಸಿರುವ ಮಾರ್ಗಸೂಚಿಗಳು ವ್ಯತಿರಿಕ್ತವಾಗಿವೆ.

 

ಅದೇ ರೀತಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ರದ್ದುಪಡಿಸಿದ್ದ ಕಾರ್ಯಕಾರಿ ಆದೇಶವನ್ನು ಮಾರ್ಗಸೂಚಿಯಲ್ಲಿ ಸೇರಿಸುವ ಮೂಲಕ ಕಾನೂನುಬಾಹಿರವಾಗಿ ವರ್ತಿಸಿದೆ. ನೇರ ನೇಮಕಾತಿ ಮತ್ತು ಬಡ್ತಿ ಮೂಲಕ ರಿಕ್ತ ಸ್ಥಾನಗಳನ್ನು ವರ್ಗೀಕರಿಸಿ ನಿರ್ಧರಿಸಲು ಸೂಚಿಸಿದ ಕಂಡಿಕೆಯನ್ನು ನೇರ ನೇಮಕಾತಿ ಆದೇಶದ ಹೊರಡಿಸಿದ ದಿನಾಂಕದವರೆಗೆ ಎಂದು ತಿರುಚಲಾಗಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.

 

ಈಗಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಉಪ ಕಾರ್ಯದರ್ಶಿಗಳೂ ಸೇರಿದಂತೆ ಹಲವರು ಮುಖ್ಯ ಕಾರ್ಯದರ್ಶಿ, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.

 

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿರುವ ಆಕ್ಷೇಪಣೆಗಳ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

3,750 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿಗೆ ಅನ್ವಯಿಸಬೇಕು ಎಂದು 2009ರ ಜುಲೈ 7ರಲ್ಲಿ ಹೊರಡಿಸಿರುವ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಈ ನಿಯಮಗಳಲ್ಲಿ ಎಲ್ಲಿಯೂ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ನಮೂದಾಗಿಲ್ಲ.

 

ಅಲ್ಲದೇ ಇವೇ ನಿಯಮಗಳಲ್ಲಿ 3,750 ಹುದ್ದೆಗಳನ್ನು ಯಾವ ಆಧಾರದ ಮೇಲೆ ನೇರ ನೇಮಕಾತಿಗೆ ವರ್ಗೀಕರಿಸಲಾಗಿದೆ ಎಂಬುದಕ್ಕೆ ಯಾವ ಆದೇಶಗಳೂ ಇಲ್ಲ ಎಂಬುದು ಆಕ್ಷೇಪಣೆಗಳ ಪಟ್ಟಿಯಿಂದ ತಿಳಿದು ಬಂದಿದೆ.

 

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶವಿಲ್ಲದೇ ನೇಮಕಾತಿ ಹೊಂದಿದವರನ್ನು ನಿಯಮಬಾಹಿರವಾಗಿ ಕರಡು ಜೇಷ್ಠತಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಾನೂನು ಮತ್ತು ನಿಯಮಗಳಿಗೆ ವಿರುದ್ಧವಾಗಿದ್ದರೂ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಈ ಬಗ್ಗೆ ಇದುವರೆಗೂ ಚಕಾರ ಎತ್ತದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

 

‘ನಿಯಮಬಾಹಿರವಾಗಿ ಜೇಷ್ಠತೆಯಲ್ಲಿ ಪರಿಗಣಿಸುವುದು ಹಾಗೂ ನೇಮಕಾತಿ ವಿಧಾನವಿಲ್ಲದೇ ಸ್ಪಷ್ಟ ಖಾಲಿ ಹುದ್ದೆಗಳಲ್ಲಿದ ಹುದ್ದೆಗಳ ನೇಮಕಾತಿಗೆ ಅವಕಾಶವಿಲ್ಲ. ಹೀಗಾಗಿ ಯಾವುದೇ ಜೇಷ್ಠತೆ ಪಡೆಯಲು ಅರ್ಹರಿರುವುದಿಲ್ಲ. ಅಲ್ಲದೇ ಕರ್ನಾಟಕ ಸರ್ಕಾರದ ಜೇಷ್ಠತೆ ನಿಯಮಗಳು 1957 ಹಾಗೂ V.B ಬದಾಮಿ ತೀರ್ಪಿನಂತೆ, ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹಾಗೂ ಸರ್ಕಾರದ ನಿಯಮಾವಳಿಗಳಂತೆ ಯಾವುದೇ ಮಾನ್ಯತೆ ಇಲ್ಲ,’ ಎಂದು ಆಕ್ಷೇಪಣೆಗಳಲ್ಲಿ ವಿವರಿಸಲಾಗಿದೆ.

 

ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಯಾದ ದಿನಾಂಕದಿಂದ ಮೊದಲ ನೇರ ನೇಮಕಾತಿಯ ಮೂಲಕ ನೇಮಕಾತಿ ಹೊಂದಿದ ದಿನಾಂಕದವರೆಗೆ ಮೊದಲನೇ ಹಂತವನ್ನು ಹಾಗೂ ಉಳಿದ ಹಂತಗಳನ್ನು ನಿಯಮಗಳ ಪ್ರಕಾರ ರಚಿಸಬೇಕು. ಇದರಂತೆ 2010ರ ಮಾರ್ಚ್‌ 4ರ ವೃಂದ ಮತ್ತು ನೇಮಕಾತಿ ನಿಯಮಗಳು ಜಾರಿಯಾದ ದಿನಾಂಕದಿಂದ ಮೊದಲ ನೇರ ನೇಮಕಾತಿಯಿಂದ ನೇಮಕಾತಿವರೆಗೆ ಅಂದರೆ 2013ರ ಡಿಸೆಂಬರ್‌ 19ರವರೆಗೆ ಇರಬೇಕು.

 

ಎರಡನೇ ಹಂತದಲ್ಲಿ 2013ರ ಡಿಸೆಂಬರ್‌ 20ರ ಮೊದಲ ನೇರ ನೇಮಕಾತಿ ದಿನಾಂಕದಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ದಿನಾಂಕದವರೆಗೆ ಅಂದರೆ 2014ರ ಜನವರಿ 29ರವರೆಗೆ ಇರಬೇಕು.

 

ಮೂರನೇ ಹಂತದಲ್ಲಿ 2014ರ ಜನವರಿ 30ರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ದಿನಾಂಕದಿಂದ ಮೊದಲ ನೇರ ನೇಮಕಾತಿಯಿಂದ ನೇಮಕಾತಿಯವರೆಗೆ ಅಂದರೆ 2017ರ ಮಾರ್ಚ್‌ 30ರವರೆಗೆ ಇರಬೇಕು. ನಾಲ್ಕನೇ ಹಂತದಲ್ಲಿ 2017ರಿಂದ ಮಾರ್ಚ್‌ 31ರಿಂದ ಎಂದು ಇರಬೇಕು ಎಂದು ಆಕ್ಷೇಪಣೆಯಲ್ಲಿ ಪ್ರತಿಪಾದಿಸಿರುವುದು ಗೊತ್ತಾಗಿದೆ.

 

‘2023ರ ಸೆ.12ರಂದು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಆಂಗ್ಲ ಭಾಷೆಯಲ್ಲಿ ಹೊರಡಿಸಿರುವ ಅಧಿಕೃತ ಜ್ಞಾಪನದಂತೆ ಹೊರಡಿಸದೇ ವ್ಯತಿರಿಕ್ತವಾಗಿ ಹೊರಡಿಸಲಾಗಿದೆ. ಹೀಗಾಗಿ 1976ರ ಜುಲೈ 5ರಲ್ಲಿ ಕನ್ನಡದಲ್ಲಿ ಭಾಷಾಂತರಗೊಳಿಸಿದ ಅಧಿಕೃತ ಜ್ಙಾಪನ ಪ್ರತಿ ಒದಗಿಸಬೇಕು,’ ಎಂದು  ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಡಿಪಿಎಆರ್‍‌ ಪ್ರಧಾನ ಕಾರ್ಯದರ್ಶಿಗೆ  2024ರ ಮಾರ್ಚ್‌ 14ರಂದು ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

 

ಪಂಚಾಯ್ತಿ ವಿಸ್ತರಣಾಧಿಕಾರಿಗಳ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೃಂದದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮ 43 ರ ಅನ್ವಯ ವಿಲೀನಗೊಳಿಸಲಾಗಿದೆ. ಈ ಸಂಬಂಧ 2009ರ ಅಕ್ಟೋಬರ್‌ 9ರಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ರದ್ದುಗೊಳಿಸಿತ್ತು.

 

 

ಕೆಎಸ್‌ಎಟಿಯ ಆದೇಶದ ಪ್ರಕಾರ ಕಾರ್ಯಕಾರಿ ಆದೇಶವೂ ರದ್ದಾಗಿದೆ. ರದ್ದಾದ ಕಾರ್ಯಕಾರಿ ಆದೇಶವನ್ನೂ ಮಾರ್ಗಸೂಚಿಯಲ್ಲಿ ನಮೂದಿಸಿದೆ. ಇದು ಕಾನೂನುಬಾಹಿರ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.

 

ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಮತ್ತು ಸ್ಥಳೀಯ ಸರ್ಕಾರ ಶಾಖೆ) ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ (ವಿಶೇಷ)(ನೇಮಕಾತಿ) ನಿಯಮಗಳು 2009ರ್ಲಿ ರಚಿಸಿದೆ. ಇದರ ಪ್ರಕಾರ 3,750 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿಗೆ ಅನ್ವಯಿಸಬೇಕು ಎಂದು ರಚಿಸಲಾಗಿತ್ತು. ಆದರೆ ಈ ನಿಯಮವು ಕೇವಲ ನೇಮಕಾತಿ ನಿಯಮವಾಗಿದೆ. ಇದು ರಾಜ್ಯ ಸಿವಿಲ್‌ ಸೇವೆಗಳಲ್ಲಿನ ನೇಮಕಾತಿ ನಿಯಮಗಳಂತೆ ನಿಯಮ ರಚಿಸಲಾಗಿದೆ ಎಂದೂ ಆಕ್ಷೇಪಣೆಯಲ್ಲಿ ಹೇಳಲಾಗಿದೆ.

 

‘ಈ ನಿಯಮದ ಪ್ರಕಾರ 2008ರ ಮಾರ್ಚ್‌ 31ರಲ್ಲಿ ಮಂಜೂರಾದ ಹುದ್ದೆಗಳನ್ನು 1996ರ ಆಗಸ್ಟ್‌ 1ರಂತೆ ಕಾರ್ಯಕಾರಿ ಆದೇಶ ಅಥವಾ ಕೆಸಿಎಸ್‌ ಕಾಯ್ದೆ3 1978ರಂತೆ ವೃಂದ ಮತ್ತು ನೇಮಕಾತಿಗಳನ್ನು ರಚಿಸುವ ಮೂಲಕ ವರ್ಗೀಕರಿಸಿ ನೇರ ನೇಮಕಾತಿಗೆ ನಿಗದಿಪಡಿಸಿದ ಕೋಟಾದದಲ್ಲಿ ಅಳವಡಿಸಿ ನೇಮಕಾತಿಗೆ ಅವಕಾಶ ಕಲ್ಪಿಸಿದಾಗ ಮಾತ್ರ ಈ ನಿಯಮಗಳಂತೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ,’ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.

 

ಆದರೆ 3,750 ಹುದ್ದೆಗಳನ್ನು ಯಾವ ಆಧಾರದ ಮೇಲೆ ನೇರ ನೇಮಕಾತಿಗೆ ವರ್ಗೀಕರಿಸಲಾಗಿದೆ ಎಂಬುದಕ್ಕೆ ಯಾವುದೇ ಆದೇಶಗಳೇ ಇಲ್ಲ.ಹೀಗಾಗಿ ನಿಯಮಾವಳಿಗಳು ಲೋಪಗಳಿಂದ ಕೂಡಿವೆ ಎಂದು ತಿಳಿದು ಬಂದಿದೆ.

 

2008ರ ಮಾರ್ಚ್‌ 31ರ ಆದೇಶದ ಪ್ರಕಾರ 2009ರ ಜುಲೈ 7ರಂದು 3,752 ಹುದ್ದೆಗಳು ಲಭ್ಯವಾಗಿದ್ದವು. ಕಾರ್ಯಕಾರಿ ಆದೇಶದದಂತೆ 2,514 ನೇರ ನೇಮಕಾತಿ ಹಾಗೂ 1,238 ಹುದ್ದೆಗಳನ್ನು ಬಡ್ತಿ ಮೂಲಕ ತುಂಬಬೇಕು. ಆದರೆ ಕರ್ನಾಟಕ ಆಡಳಿ ನ್ಯಾಯಮಂಡಳಿಯು 2009ರ ಅಕ್ಟೋಬರ್‌ 9ರಂದು ಕಾರ್ಯಕಾರಿ ಆದೇಶವನ್ನು ರದ್ದುಗೊಳಿಸಿತ್ತು. ಹೀಗಾಗಿ ನೇರ ನೇಮಕಾತಿ ಅಥವಾ ಬಡ್ತಿ ಮೂಲಕ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶವಿಲ್ಲ ಎಂದು ಗೊತ್ತಾಗಿದೆ.

 

ಅದೇ ರೀತಿ 2010ರ ಮಾರ್ಚ್‌ 10ರಂದು ಪ್ರಕಟಿಸಿದ್ದ 2,500 ಹುದ್ದೆಗಳಿಗೆ (ನೇರ ನೇಮಕಾತಿ) ಜಿಲ್ಲಾವಾರು ಅಭ್ಯರ್ಥಿಗಳ ಪಟ್ಟಿಗೆ ಕರ್ನಾಟಕ ಸರ್ಕಾರದ ನಿಯಮಾವಳಿಗಳಂತೆ ಯಾವುದೇ ಮಾನ್ಯತೆ ಇಲ್ಲ. ಈ ನೇಮಕಾತಿಯು 2010ರ ಮಾರ್ಚ್‌ 3ರಂತೆ ಎಲ್ಲೂ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ನಮೂದಿಸಿಲ್ಲ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts