ಗ್ಯಾರಂಟಿ ಮೌಲ್ಯಮಾಪನ, ನಿರಂತರ ಸಂವಹನ ಸೇವೆ; ರೈಟ್‌ ಪೀಪಲ್‌ಗೆ 9.25 ಕೋಟಿ ವೆಚ್ಚಕ್ಕೆ 4(ಜಿ) ವಿನಾಯಿತಿ

ಬೆಂಗಳೂರು;  ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ, ನಿಗಾವಣೆ ಸೇವೆ ಪಡೆಯಲು ರಾಜ್ಯ ಕಾಂಗ್ರೆಸ್‌ ಸರ್ಕಾರವು  ಖಾಸಗಿ ವಲಯದ  ರೈಟ್‌ ಪೀಪಲ್‌ಗೆ 9.25 ಕೋಟಿ ರು. ವೆಚ್ಚ ಮಾಡುತ್ತಿದೆ. ಈ ಸೇವೆ ಪಡೆಯಲು ಸ್ಪರ್ಧಾತ್ಮಕ ಟೆಂಡರ್‌  ನಡೆಸದೆಯೇ ನೇರವಾಗಿ 4(ಜಿ) ವಿನಾಯಿತಿ ನೀಡಿರುವುದು ಬಹಿರಂಗವಾಗಿದೆ.

 

ಗ್ಯಾರಂಟಿ ಯೋಜನೆಗಳ ಸಮೀಕ್ಷೆ, ಅಧ್ಯಯನಕ್ಕಾಗಿ ಎಂ2ಎಂ ಮತ್ತು ಮುಂಬೈನ ಎಕ್ಸ್‌ ಕೆಡಿಆರ್‌ ಸಂಸ್ಥೆಗೆ 4(ಜಿ) ವಿನಾಯಿತಿ ಮೂಲಕ ಕೋಟಿ ರು ನೀಡಿದೆ.  ಇದೀಗ ಇವೇ ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಲು ಮೌಲ್ಯಮಾಪನ ಮತ್ತು ನಿರಂತರ ಸಂವಹನ ವ್ಯವಸ್ಥೆಗೆ ಸಂಬಂಧಿಸಿದ ಯೋಜನೆ ಹೆಸರಿನಲ್ಲೂ 9.25 ಕೋಟಿ ರು. ವೆಚ್ಚ  ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಈ ಕುರಿತು ಆರ್ಥಿಕ ಇಲಾಖೆಯು 2024ರ ಮಾರ್ಚ್‌ 11ರಂದು ಅಧಿಸೂಚನೆ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಮೂಲಕ ರೈಟ್‌ ಪೀಪಲ್‌ ನ ಸೇವೆ ಪಡೆಯಲಿದೆ. ಆದರೆ ಈ ರೈಟ್‌ ಪೀಪಲ್‌ ಕಂಪನಿಯೇ, ಸ್ವಯಂ ಸೇವಾ ಸಂಸ್ಥೆಯೇ, ಎಲ್‌ಎಲ್‌ಪಿ ಮಾದರಿಯೇ, ಸಹಕಾರ ಸಂಸ್ಥೆಯೇ ಎಂಬ ಬಗ್ಗೆ ಪ್ರಾಥಮಿಕ  ಮಾಹಿತಿಯೂ ಅಧಿಸೂಚನೆಯಲ್ಲಿ ಇಲ್ಲ.

 

ಕೇವಲ ರೈಟ್‌ ಪೀಪಲ್‌, ಬೆಂಗಳೂರು ಎಂದಷ್ಟೇ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಈ ಅಧಿಸೂಚನೆಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಧಿಸೂಚನೆಯಲ್ಲೇನಿದೆ?

 

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಮತ್ತು ನಿಗಾವಣೆಗಾಗಿ ಫಲಾನುಭವಿ ಕೇಂದ್ರೀತ ನೇಋ ಮತ್ತು ನಿರಂತರ ಸಂವಹನ ವ್ಯವಸ್ಥೆ ಸಂಬಂಧಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಲು ರೈಟ್‌ ಪೀಪಲ್‌ ಬೆಂಗಳೂರು ಸಂಸ್ಥೆಯ ಸೇವೆಯನ್ನು 9.25 ಕೋಟಿಗಳ ವೆಚ್ಚದಲ್ಲಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ವಿನಾಯಿತಿ ನೀಡಿದೆ ಎಂದು ಹೇಳಿದೆ.

 

ಐದು ಗ್ಯಾರಂಟಿ ಯೋಜನೆಗಳ ಕುರಿತಾಗಿ ನಡೆಯುತ್ತಿರುವ ಸಮೀಕ್ಷೆ ಕಾರ್ಯವನ್ನು ತ್ವರಿತಗತಿಯಲ್ಲಿ   ಪೂರ್ಣಗೊಳಿಸಬೇಕು ಎಂದು    ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು  ತೀವ್ರ  ಒತ್ತಡ ಹೇರಿದ್ದರು.  ಇದರ ಮಧ್ಯೆ ಅಭಿವೃದ್ಧಿ ಆಯುಕ್ತರು ಸಹ ಮುಂದಿನ ಮೂರು ದಿನದೊಳಗೇ ಸಮೀಕ್ಷೆಯನ್ನು ತ್ವರಿತಗೊಳಿಸಬೇಕು ಎಂದು ನಿರ್ದೇಶಿಸಿದ್ದರು.

 

 

 

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆಗೆ ರಾಜ್ಯ ಸರ್ಕಾರವು  12 ಕೋಟಿ ರು. ವೆಚ್ಚ ಮಾಡಲಿದೆ.

ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಗ್ಯಾರಂಟಿ ಸಮೀಕ್ಷೆಗೆ 12 ಕೋಟಿ; ದುಂದುವೆಚ್ಚಕ್ಕೆ ದಾರಿ

 

ಎಂ2ಎಂ ಮಾಧ್ಯಮ ಸಂಸ್ಥೆಗೆ ಸಮೀಕ್ಷೆ ನಡೆಸಲು 1 ಕೋಟಿ ರು, ಮುಂಬೈ ಮೂಲದ ಎಕ್ಸ್‌ ಕೆಡಿಆರ್‍‌ ಸಂಸ್ಥೆಗೆ ಅಧ್ಯಯನದ ಹೆಸರಿನಲ್ಲಿ 1.03 ಕೋಟಿ ರು.ಗಳನ್ನು ನೀಡಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ ಮುಂಗಡ ಹಣ ಪಡೆದು ಸಮೀಕ್ಷೆ ಕಾರ್ಯವನ್ನೂ ಕೈಗೆತ್ತಿಕೊಂಡಿದೆ. ಈ ಎರಡೂ ಖಾಸಗಿ ಸಂಸ್ಥೆಗಳು ಈಗಾಗಲೇ ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತಿರುವಾಗಲೇ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಿರುವ  ಸಮೀಕ್ಷೆಗೆ 12 ಕೋಟಿ ರು ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.

 

ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ ವರ್ಕ್‌ ಕಂಪನಿಗೆ  4(ಜಿ) ವಿನಾಯಿತಿ ನೀಡುವ ಮುನ್ನ ಆರ್ಥಿಕ ಇಲಾಖೆಯ ಅಧಿಕಾರಿಗಳು  ಆಡಳಿತಾತ್ಮಕ  ಪ್ರಕ್ರಿಯೆಗಳನ್ನೇ ನಡೆಸಿರಲಿಲ್ಲ.

ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)

 

2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು  ಚರ್ಚೆಗೆ ಗ್ರಾಸವಾಗಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ.  ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು. ಕೆಎಸ್‌ಆರ್‍‌ಟಿಸಿಯು 20 ಲಕ್ಷ ರು.ಗಳನ್ನು ನೀಡಿದ್ದರೂ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೇ ಒದಗಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

 

ಅಲ್ಲದೇ ಬೆಸ್ಕಾಂ ಕೂಡ  ಸಮಗ್ರ ಕಡತವನ್ನೇ ಮುಚ್ಚಿಟ್ಟಿತ್ತು.

 

ಕೋಟಿ ರು. ವೆಚ್ಚದ ಸಮೀಕ್ಷೆ; ಎಂ2ಎಂ ಕಂಪನಿಗೆ ನೀಡಿರುವ ಆದೇಶದ ಸಮಗ್ರ ಕಡತವನ್ನೇ ಮುಚ್ಚಿಟ್ಟ ಬೆಸ್ಕಾಂ

 

 

ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಹ ಎಂ2ಎಂ ಕಂಪನಿಯೊಂದಿಗೆ ಎಂಒಯು ಸೇರಿ ಹಲವು ದಾಖಲೆಗಳೇ ಲಭ್ಯವಿಲ್ಲ ಎಂದು ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿತ್ತು.

 

 

ಸಮೀಕ್ಷೆಗೆ ಕೋಟಿ ರು.; ಎಂಒಯು ಸೇರಿ ಹಲವು ವಿವರಗಳೇ ಲಭ್ಯವಿಲ್ಲವೆಂದ ಆಹಾರ ಇಲಾಖೆ

 

ಇದರ ನಡುವೆಯೇ ಸರ್ಕಾರವು ಗ್ಯಾರಂಟಿಗಳನ್ನು ಅಧ್ಯಯನ ನಡೆಸಲು ಮುಂಬೈ ಮೂಲದ ಸಂಸ್ಥೆಗೆ 1.03 ಕೋಟಿ ರು. ವೆಚ್ಚ ಮಾಡಲು 4(ಜಿ) ವಿನಾಯಿತಿ ನೀಡಿತ್ತು.

 

ಗ್ಯಾರಂಟಿ ಸಮೀಕ್ಷೆ, ಅನುಷ್ಠಾನ ಸಮಿತಿ ರಚನೆ ಬೆನ್ನಲ್ಲೇ ಈಗ ಅಧ್ಯಯನ; ಮುಂಬೈ ಸಂಸ್ಥೆಗೆ 1.03 ಕೋಟಿ ರು ನೀಡಿಕೆ

ಗ್ಯಾರಂಟಿ ಯೋಜನೆಗಳನ್ನು  ಏಕಕಾಲಕ್ಕೆ ಐದಾರು ಸಮಿತಿಗಳು ಸಮೀಕ್ಷೆ ನಡೆಸುತ್ತಿರುವುದು ಮತ್ತು ಇದಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.

the fil favicon

SUPPORT THE FILE

Latest News

Related Posts