ನಕಲಿ ದಾಖಲೆ ಸೃಷ್ಟಿ, ಒಳಸಂಚು; ಕಾಂಗ್ರೆಸ್‌ ಮಾಜಿ ಶಾಸಕ ಎಂ ಕೆ ಸೋಮಶೇಖರ್‍‌ ವಿರುದ್ಧ ಎಫ್‌ಐಆರ್‍‌

ಬೆಂಗಳೂರು; ನಕಲಿ ದಾಖಲೆ ಸೃಷ್ಟಿ ಮತ್ತು ಒಳಸಂಚು ರೂಪಿಸಿ 9.21 ಎಕರೆಯಲ್ಲಿ ಕಾನೂನುಬಾಹಿರವಾಗಿ ಲೇ ಔಟ್‌ ನಿರ್ಮಾಣ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಮಾಜಿ ಶಾಸಕ ಎಂ ಕೆ ಸೋಮಶೇಖರ್‍‌, ಇವರ ಪತ್ನಿ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ಎಫ್‌ಐಆರ್‍‌ ದಾಖಲಾಗಿದೆ.

 

 

ನಕಲಿ ದಾಖಲೆಗಳ ಆಧಾರದ ಮೇಲೆ ಬಡಾವಣೆ ನಕ್ಷೆಗೆ ಮಂಜೂರಾತಿ ಪಡೆದುಕೊಂಡಿರುವ ಪ್ರಕರಣದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕ ಎಂ ಕೆ ಸೋಮಶೇಖರ್‍‌ ಮತ್ತು ಅವರ ಪತ್ನಿ ಸೇರಿದಂತೆ ಒಟ್ಟು 6 ಮಂದಿ ವಿರುದ್ಧ ತನಿಖೆ ನಡೆಸಲು ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯವು ಹೊರಡಿಸಿದ್ದ ಆದೇಶದ ಬೆನ್ನಲ್ಲೇ ನಜರಬಾದ್‌ ಪೊಲೀಸ್ ಠಾಣೆಯಲ್ಲಿ ಫೆ.14ರಂದು ಎಫ್‌ಐಆರ್‍‌ ದಾಖಲಾಗಿದೆ.

 

 

ಮೈಸೂರು ತಾಲೂಕಿನ ಜಯಪುರ ಹೋಬಳಿಯ ಉದ್ಬೂರು ಗ್ರಾಮದ ಸರ್ವೆ ನಂಬರ್‍‌ 315 ರಲ್ಲಿ 4 ಎಕರೆ 32 ಗುಂಟೆ ಮತ್ತು ಸರ್ವೆ ನಂಬರ್‍‌ 317ರಲ್ಲಿ 4 ಎಕರೆ 29 ಎಕರೆ ಸೇರಿ ಒಟ್ಟು 9 ಎಕರೆ 21 ಗುಂಟೆಯಲ್ಲಿ ಲೇಔಟ್‌ ನಿರ್ಮಾಣ ಮಾಡಲಾಗಿತ್ತು.

 

ಮಾಜಿ ಶಾಸಕ ಎಂ ಕೆ ಸೋಮಶೇಖರ್‍‌, ಇವರ ಪತ್ನಿ ಎಲ್‌ ಕುಸುಮಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೆಲವು ಅಧಿಕಾರಿಗಳು, ಉದ್ಬೂರು ಗ್ರಾಮ ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು, ಭೂ ಮಾಪಕರು ಇನ್ನಿತರರು ಒಳಸಂಚು ರೂಪಿಸಿ ಕಾನೂನುಬಾಹಿರವಾಗಿ ಲೇಔಟ್‌ ನಿರ್ಮಾಣ ಮಾಡಿದ್ದಾರೆ ಎಂದು ಆದೀಶ್‌ ಸಾಗರ್‍‌ ಅವರು ಮೈಸೂರಿನ ನಜರಬಾದ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

 

‘ಅಕ್ರಮವಾಗಿ ಹಣ ಸಂಪಾದಿಸಲು ಕಾನೂನುಬಾಹಿರವಾಗಿ ಲೇಔಟ್‌ ನಿರ್ಮಾಣ ಮಾಡಲು ಮಾಲೀಕರೊಂದಿಗೆ ಈ ಎಲ್ಲಾ ಅಧಿಕಾರಿಗಳು ಶಾಮೀಲಾಗಿದ್ದಾರೆ. ಅಪರಾಧಿಕ ಒಳಸಂಚು ರೂಪಿಸಿ ಜನರಿಗೆ ಮೋಸ, ವಂಚನೆ ಮಾಡಿ ಅಕ್ರಮವಾಗಿ ಹಣ ಕಬಳಿಸುವ ದುರುದ್ದೇಶ ಹೊಂದಿದ್ದಾರೆ. ಲೇಔಟ್‌ ನಿರ್ಮಾಣ ಮಾಡಲು ನಕಲು ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಮತ್ತು ಸರ್ಕಾರದ ದಸ್ತಾವೇಜುಗಳನ್ನು ಖೊಟ್ಟಿಯಾಗಿ ಸೃಷ್ಟಿಸಿ ನಕಲಿ ಲೇಔಟ್‌ ನಕ್ಷೆ  ಹಾಗೂ ಸ್ಕೆಚ್‌ಗಳನ್ನು ತಯಾರಿಸಿ ಕೋಟ್ಯಂತರ ರುಪಾಯಿಗಳನ್ನು ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ,’ ಎಂದು ದೂರಿನಲ್ಲಿ ವಿವರಿಸಿದ್ದರು.

 

ಆದರೆ ಈ ದೂರನ್ನಾಧರಿಸಿ ನಜರಬಾದ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‍‌ ದಾಖಲಾಗಿರಲಿಲ್ಲ. ಹೀಗಾಗಿ ರಿಯಲ್‌ ಎಸ್ಟೇಟ್‌ ಮತ್ತು ಪ್ರಮಾಣೀಕೃತ ರೇರಾ ಪ್ರತಿನಿಧಿ ಆದೀಶ್‌ ಸಾಗರ್‍‌ ಅವರು ಮಾಜಿ ಶಾಸಕ ಎಂ ಕೆ ಸೋಮಶೇಖರ್‍‌, ಎಲ್‌ ಕುಸುಮಾ, ಸರ್ವೆಯರ್‍‌ ಮಾದೇಗೌಡ, ಮೇಲ್ವಿಚಾರಕ ರಮೇಶ್‌, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ನಿವೃತ್ತ ಅಧಿಕಾರಿ ಮಹಾಂತಪ್ಪ ಅವರ ವಿರುದ್ಧ ಆದೀಶ್‌ ಸಾಗರ್‍‌ ಅವರು ಸಿಆರ್‍‌ಪಿಸಿಯ ಸೆಕ್ಷನ್‌ 156(3) ಅಡಿಯಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.  ಆದೀಶ್‌ ಸಾಗರ್‍‌ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು 2024ರ ಫೆ.8ರಂದು ಈ ಆದೇಶ ಹೊರಡಿಸಿದ್ದರು. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣ ದಾಖಲಿಸಿಕೊಂಡು 60 ದಿನದೊಳಗೇ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ನೀಡಬೇಕು ಎಂದು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆ ಪೊಲೀಸರಿಗೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.

 

 

 

 

 

ನ್ಯಾಯಾಲಯದ ಆದೇಶ ಹೊರಬಿದ್ದ ಕೆಲವೇ ದಿನಗಳಲ್ಲಿ ನಜರಾಬಾದ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‍‌ ದಾಖಲಾಗಿದೆ.

 

ಮಾಜಿ ಶಾಸಕ ಎಂ ಕೆ ಸೋಮಶೇಖರ್‍‌ ಸೇರಿ ಒಟ್ಟು 6 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

 

 

ಮೊದಲನೇ ಆರೋಪಿ ಎಂ ಕೆ ಸೋಮಶೇಖರ್‍‌ ಸೇರಿದಂತೆ 6 ಮಂದಿ ಆರೋಪಿಗಳು ಸಿಆರ್‍‌ಪಿಸಿ ಸೆಕ್ಷನ್‌ 200 ಅಡಿಯಲ್ಲಿ ಕಲಂ 406, 425, 427, 465, 471, 409 ಮತ್ತು 420 ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ. ಇವರ ವಿರುದ್ಧ ಸಿಆರ್‍‌ಪಿಸಿ ಸೆಕ್ಷನ್‌ 156 (3) ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಖಾಸಗಿ ದೂರಿನಲ್ಲಿ ಕೋರಿದ್ದರು.

 

‘ಆರೋಪಿ ಎಂ ಕೆ ಸೋಮಶೇಖರ್‍‌ ಅವರು ಸಾರ್ವಜನಿಕ ಸೇವಕರಾಗಿದ್ದ ಅವಧಿಯಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಬಡಾವಣೆ ನಕ್ಷೆಗೆ ಮಂಜೂರಾತಿ ದೊರೆತಿತ್ತು. ಸಾಮಾನ್ಯ ಜನರನ್ನು ವಂಚಿಸುವ ಮೂಲಕ ವಿವಿಧ ಸ್ವರೂಪದ ಕ್ರಿಮಿನಲ್‌ ಕಾಯ್ದೆಗಳಡಿಯಲ್ಲಿ ಅಪರಾಧ ಎಸಗಿದ್ದಾರೆ,’ ಎಂದು ದೂರಿನಲ್ಲಿ ಆದೀಶ್‌ ಸಾಗರ್‍‌ ಅವರು ವಿವರಿಸಿದ್ದರು.

 

ಪ್ರಕರಣದ ವಿವರ

 

ಮೈಸೂರು ತಾಲೂಕಿನ ಉದ್ಬೂರು ಗ್ರಾಮದ ಸರ್ವೆ ನಂಬರ್‍‌ 315 ಮತ್ತು 317ರಲ್ಲಿ 9.21 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಬಡಾವಣೆ ನಕ್ಷೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮಂಜೂರಾತಿ ನೀಡಿತ್ತು. ಈ ವೇಳೆಯಲ್ಲಿ ಮೊದಲ ಆರೋಪಿ ಎಂ ಕೆ ಸೋಮಶೇಖರ್‍‌ ಮತ್ತು ಎರಡನೇ ಆರೋಪಿಯಾಗಿರುವ ಸೋಮಶೇಖರ್‍‌ ಅವರ ಪತ್ನಿ ಈ ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿದ್ದರು ಎಂದು ದೂರುದಾರ ಆದೀಶ್‌ ಸಾಗರ್‍‌ ಅವರು ಖಾಸಗಿ ದೂರಿನಲ್ಲಿ  ಆರೋಪಿಸಿದ್ದರು.

 

ಈ ಪ್ರಕರಣದಲ್ಲಿ ಸರ್ವೆಯರ್‍‌ ಸೇರಿದಂತೆ ಮೂಡಾದ ಹಲವು ಅಧಿಕಾರಿಗಳು ಶಾಮೀಲಾಗಿದ್ದರು. ನಕಲಿ ದಾಖಲೆಗಳು ಇದ್ದರೂ ಸಹ ಬಡಾವಣೆ ನಕ್ಷೆಗೆ ಮೂಡಾವು ಮಂಜೂರಾತಿ ನೀಡಿತ್ತು. ಈ ಬಡಾವಣೆಯಲ್ಲಿ ರಚಿತವಾದ ನಿವೇಶನಗಳ ಪೈಕಿ ಶೇ.40 ನಿವೇಶನಗಳನ್ನು ಮೂಡಾವು ಬಿಡುಗಡೆ ಮಾಡಿತ್ತು. ಸೇಲ್‌ ಡೀಡ್‌ ಪ್ರಕಾರ ಬಡಾವಣೆಗೆ ಯಾವುದೇ ಕಡೆಯಿಂದಲೂ ರಸ್ತೆ ಸಂಪರ್ಕ ಇರಲಿಲ್ಲ.

 

ಅದೇ ರೀತಿ ಬಡಾವಣೆಯ ಪಶ್ಚಿಮ ಭಾಗದಿಂದ ಸಂಪರ್ಕಿಸುವ ರಸ್ತೆ ಇದೆ ಎಂದು ಸರ್ಕಾರಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿತ್ತು. ಇದನ್ನು ಕ್ರಮಬದ್ಧವಾಗಿ ಮೂಡಾವು ಪರಿಶೀಲನೆ ಮಾಡಿರಲಿಲ್ಲ ಮತ್ತು ಸ್ಥಳವನ್ನೂ ಭೌತಿಕವಾಗಿ ತಪಾಸಣೆ ನಡೆಸಿರಲಿಲ್ಲ ಎಂದು ಆದೀಶ್‌ ಸಾಗರ್‍‌ ಅವರು ದೂರಿನಲ್ಲಿ ಆಪಾದಿಸಿದ್ದರು.

 

ಉದ್ಬೂರು ಗ್ರಾಮ ಪಂಚಾಯ್ತಿಯು ಸಹ ರಸ್ತೆ ದೃಢೀಕರಣ ಪತ್ರ ನೀಡಿತ್ತು. ಈ ರಸ್ತೆಯನ್ನು ಹಲವು ವರ್ಷಗಳಿಂದಲೂ ಪಂಚಾಯ್ತಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ ಎಂದು ದೃಢೀಕರಣ ಪತ್ರದಲ್ಲಿ ಹೇಳಿತ್ತು.
ಮೊದಲ ಆರೋಪಿ ಎಂ ಕೆ ಸೋಮಶೇಖರ್‍‌ ಅವರು 2021ರ ಜುಲೈ 15ರಂದು ಶಿವ ಗ್ಯಾಸ್‌ ಸರ್ವಿಸ್‌ ಹೆಸರಿನಲ್ಲಿ 6,74,700 ರು.ಗಳನ್ನು ಬಡಾವಣೆ ನಕ್ಷೆ ಅನುಮೋದನೆಗಾಗಿ ಮೂಡಾಕ್ಕೆ ಪಾವತಿಸಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಎಂ ಕೆ ಸೋಮಶೇಖರ್‍‌ ಅವರು ಮುಖ್ಯ ಫಲಾನುಭವಿಯಾಗಿದ್ದರು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆದೀಶ್‌ ಸಾಗರ್‍‌ ದೂರಿನಲ್ಲಿ ವಿವರಿಸಿದ್ದರು.

 

ಈ ಸಂಬಂಧ ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಗೆ 2023ರ ಡಿಸೆಂಬರ್‍‌ 21ರಂದು ದೂರು ಸಲ್ಲಿಸಿದ್ದರೂ ಸಹ ಠಾಣಾಧಿಕಾರಿಗಳು ಎಫ್‌ಐಆರ್‍‌ ಸೇರಿದಂತೆ ಯಾವುದೇ ಕ್ರಮ ವಹಿಸಿರಲಿಲ್ಲ. ಹೀಗಾಗಿ ಆದೀಶ್‌ ಸಾಗರ್‍‌ ಅವರು ಚುನಾಯಿತ ಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದರು.

 

ಪ್ರಿಯಾಂಕ ಶ್ರೀವಾಸ್ತವ್‌ ಅವರ ಪ್ರಕರಣವನ್ನು ದೂರಿನಲ್ಲಿ ಉಲ್ಲೇಖಿಸಿದ್ದ ಆದೀಶ್‌ ಸಾಗರ್‍‌ ಅವರು ಆಪಾದಿತರ ವಿರುದ್ಧ ತಕ್ಷಣವೇ ಎಫ್‌ಐಆರ್‍‌ ದಾಖಲಿಸಲು ಕೋರಿದ್ದರು. ಇದನ್ನು ಮಾನ್ಯ ಮಾಡಿರುವ ನ್ಯಾಯಾಲಯವು ದೂರಿನ ಕುರಿತಾಗಿ ಎಫ್‌ಐಆರ್‍‌ ದಾಖಲಿಸಿಕೊಂಡು 60 ದಿನದೊಳಗೆ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿದೆ.

SUPPORT THE FILE

Latest News

Related Posts