ಅಂತ್ಯ ಸಂಸ್ಕಾರ ಸಹಾಯ ನಿಧಿ ಪುನರಾರಂಭಕ್ಕೆ ಸಿಗದ ಪುರಸ್ಕಾರ; ಬಿಜೆಪಿ ಹಾದಿ ತುಳಿದ ಕಾಂಗ್ರೆಸ್‌

ಬೆಂಗಳೂರು; ಹಿಂದಿನ ಬಿಜೆಪಿ ಸರಕಾರ ಸದ್ದಿಲ್ಲದೆ ಸ್ಥಗಿತಗೊಳಿಸಿದ್ದ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಮೃತಪಟ್ಟಾಗ ಅಂತ್ಯ ಸಂಸ್ಕಾರಕ್ಕೆ ನೀಡುವ ಸಹಾಯ ನಿಧಿ ಯೋಜನೆಯನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ ಮುಂದುವರೆಸದಿರಲು ತೀರ್ಮಾನಿಸಿದೆ.

 

ಪ್ರಸ್ತುತ ಅನುಷ್ಠಾನದಲ್ಲಿರುವ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯನ್ನು ಮುಂದಿರಿಸಿರುವ ಕಾಂಗ್ರೆಸ್‌ ಸರ್ಕಾರವು ಅಂತ್ಯ ಸಂಸ್ಕಾರ ಯೋಜನೆಯನ್ನು ಪುರಸ್ಕರಿಸದಿರಲು ನಿರ್ಧರಿಸಿದೆ.

 

ಶಾಸಕ ಪ್ರತಾಪಸಿಂಹ ನಾಯಕ್‌ ಅವರು ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವ ಕೃಷ್ಣಬೈರೇಗೌಡ ಅವರು ಅಂತ್ಯ ಸಂಸ್ಕಾರ ಯೋಜನೆಯನ್ನು ಪುನರಾರಂಭಿಸಲು ಆರ್ಥಿಕ ಇಲಾಖೆಯು ಪುರಸ್ಕರಿಸಿಲ್ಲ ಎಂಬ ಮಾಹಿತಿಯನ್ನು ಒದಗಿಸಿದ್ದಾರೆ.

 

ಅಂತ್ಯ ಸಂಸ್ಕಾರ ಯೋಜನೆಯನ್ನು ಬಿಜೆಪಿ ಸರ್ಕಾರವು ಸದ್ದಿಲ್ಲದೇ ಸ್ಥಗಿತಗೊಳಿಸಿದ್ದನ್ನು ವಿಧಾನ ಪರಿಷತ್ ಸದಸು ಮಂಜುನಾಥ ಭಂಡಾರಿ ಅವರು ಹಿಂದಿನ ಸರ್ಕಾರದಲ್ಲಿ ನಡೆದಿದ್ದ ಅಧಿವೇಶನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೀಗ ಕಾಂಗ್ರೆಸ್‌ ಸರ್ಕಾರವೇ ಅಧಿಕಾರದಲ್ಲಿದ್ದೂ ಅಂತ್ಯ ಸಂಸ್ಕಾರ ಯೋಜನೆಯನ್ನು ಮುಂದುವರೆಸದಿರಲು ತೀರ್ಮಾನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

‘ರಾಷ್ಟ್ರೀಯ ಕುಟುಂಬ ನೆರವು ಯೋಜನೆಯು ಪ್ರಸ್ತುತ ಅನುಷ್ಠಾನದಲ್ಲಿ ಇರುವುದರಿಂದ ಅಂತ್ಯ ಸಂಸ್ಕಾರ ಯೋಜನೆಯನ್ನು ಪುನರಾರಂಭಿಸಲು ಆರ್ಥಿಕ ಇಲಾಖೆಯು ಪುರಸ್ಕರಿಸಿರುವುದಿಲ್ಲ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಸಸದನದಕ್ಕೆ ಮಾಹಿತಿ ನೀಡಿದ್ದಾರೆ.

 

ಅಂತ್ಯ ಸಂಸ್ಕಾರ ಸಹಾಯ ನಿಧಿ ಯೋಜನೆಯು 2006ರಲ್ಲೇ ಆರಂಭಗೊಂಡಿತ್ತು. ಬಡತನ ರೇಖೆಗಿಂತ ಕೆಳಗಿನವರು ಮೃತಪಟ್ಟರೆ, ಅಂತಹವರ ಅಂತ್ಯಕ್ರಿಯೆಗೆ ಸರಕಾರವು ಐದು ಸಾವಿರ ರೂ ನೀಡುತ್ತಿತ್ತು. ಆದರೆ ಈ ಹಣ ಮೃತಪಟ್ಟವರ ತಿಥಿ ಮುಗಿದರೂ ಕೈ ಸೇರುತ್ತಿರಲಿಲ್ಲ. ಒಂದೆಡೆ ಈ ಬಗ್ಗೆ ವಿಳಂಬ ಧೋರಣೆ ಅನುಸರಿಸುತ್ತಿದ್ದರೆ, ಮತ್ತೊಂದೆಡೆ ಯೋಜನೆಯಡಿ ಅರ್ಜಿ ಸ್ವೀಕರಿಸುವುದನ್ನೇ ನಿಲ್ಲಿಸಲಾಗಿತ್ತು. ಇದರೊಂದಿಗೆ ಸದ್ದಿಲ್ಲದೆ ಯೋಜನೆ ಸ್ಥಗಿತಗೊಳಿಸುವ ಹುನ್ನಾರ ನಡೆದಿದೆ ಎಂದು ಮಂಜುನಾಥ ಭಂಡಾರಿ ಅವರು ಅಧಿವೇಶನದಲ್ಲಿಯೆ ಆರೋಪಿಸಿದ್ದರು.

 

ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮುಖ್ಯ ವ್ಯಕ್ತಿ ಮರಣ ಹೊಂದಿದಲ್ಲಿ ಆ ಕುಟುಂಬದ ನೆರವಿಗಾಗಿ 20,000 ರು. ಸಹಾಯ ಧನವನ್ನು ನೀಡಲಾಗುತ್ತಿದೆ. ಅಂತ್ಯ ಸಂಸ್ಕಾರ ಯೋಜನೆ ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಎರಡೂ ಸಮಾನಾಂತರ ಯೋಜನೆಗಳಾಗಿದ್ದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಸದಸ್ಯರ ಮರಣ ಸಂದರ್ಭದಲ್ಲಿ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ಒದಗಿಸಿದ್ದಾರೆ.

 

ಅಂತೆಯೇ ‘ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ ಆಇ/462/ವೆಚ್ಚ-7/2021 ದಿನಾಂಕ 17/07/2021 ರಲ್ಲಿ 2021022ನೇ ಸಾಲಿನಲ್ಲ ಈ ಯೋಜನೆಯಡಿ ಯಾವುದೇ ಅರ್ಜಿ ಸ್ವೀಕರಿಸದಿರಲು ಸೂಚಿಸಿದೆ. ಆಗಸ್ಟ್‌ 21ರ ಅಂತ್ಯಕ್ಕೆ ಸ್ವೀಕೃತವಾಗಿದ್ದ ಅರ್ಜಿಗಳಿಗೆ ಸೌಲಭ್ಯ ವಿತರಿಸಲು ಅಗತ್ಯವಿದ್ದ ಅನುದಾನ ಒದಗಿಸಿ ಅಂತ್ಯಸಂಸ್ಕಾರ ಯೋಜನೆಯನ್ನು ಮುಕ್ತಾಯಗೊಳಿಸಲು ತಿಳಿಸಿತ್ತು. ಅದರಂತೆ 2021ರ ಸೆ.1ರಿಂದ ಅನ್ವಯವಾಗುವಂತೆ ಅಂತ್ಯ ಸಂಸ್ಕಾರ ಯೋಜನೆಯನ್ನು ಮುಕ್ತಾಯಗೊಳಿಸಿದೆ. ,’ ಎಂಬ ಮಾಹಿತಿ ನೀಡಿದ್ದಾರೆ.

 

ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನಿರ್ದೇಶನಾಲಯ 14, ಆಗಸ್ಟ್ 2015 ರಂದು ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಅಸಹಾಯಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿರುವ ಹಿನ್ನೆಲೆಯಲ್ಲಿ ಈಗಾಗಲೇ ನೀಡಲಾಗುತ್ತಿದ್ದ 1 ಸಾವಿರ ರೂ.ಆರ್ಥಿಕ ಸಹಾಯ ಧನ ಮೊತ್ತವನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸಿತ್ತು.

 

ಈ ಯೋಜನೆಯಡಿ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಕುಟುಂಬದ ಯಾವುದೇ ಸದಸ್ಯರು ಮರಣ ಹೊಂದಿದಲ್ಲಿ ಅವರ ಅಂತ್ಯ ಕ್ರಿಯೆಗೆ 5 ಸಾವಿರ ರೂ.ಗಳನ್ನು ಮೃತರ ಅವಲಂಬಿತ ಸದಸ್ಯರಿಗೆ ಅಥವಾ ಅಂತ್ಯ ಸಂಸ್ಕಾರದ ಜವಾಬ್ದಾರಿ ಇರುವ ಸದಸ್ಯರಿಗೆ ನೀಡಲಾಗುತ್ತಿತ್ತು. ಈ ಯೋಜನೆ ಅನ್ವಯ ಸಾವಿನ ಕಾರಣ ತಿಳಿದುಕೊಳ್ಳುವ ಅವಶ್ಯಕತೆ ಇರಲಿಲ್ಲ.

SUPPORT THE FILE

Latest News

Related Posts