ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಂಟಿ ಕಾರ್ಯದರ್ಶಿ ಬಿ ಶಿವಸ್ವಾಮಿ (ಕೆಎಎಸ್) ಅವರು ‘ಕಾಡು ಕುರುಬ’ ಎಂದು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಪದನ್ನೋತಿ ಪಡೆದಿದ್ದಾರೆ ಎಂದು ಆರೋಪಿಸಿ ದೂರು ಸಲ್ಲಿಕೆಯಾಗಿತ್ತು. ಈ ದೂರರ್ಜಿ ಆಧರಿಸಿ ವಿಚಾರಣೆ ನಡೆಸಿದ್ದ ಜಾತಿ ಪರಿಶೀಲನಾ ಸಮಿತಿ ಸಭೆಯು ಒಂದೇ ವರ್ಷದ ಅವಧಿಯಲ್ಲಿ ಶಿವಸ್ವಾಮಿ ಅವರಿಗೆ ಕ್ಲೀನ್ ಚಿಟ್ ನೀಡಿರುವುದು ಇದೀಗ ಬಹಿರಂಗವಾಗಿದೆ.
ವಿಶೇಷವೆಂದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೂರು ದಾಖಲಾಗಿತ್ತು. ಕಳೆದ ಒಂದು ವರ್ಷದಿಂದಲೂ ಮೈಸೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ದೂರಿನ ಕುರಿತು ವಿಚಾರಣೆ ನಡೆಸಿದ್ದರು. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೂರ್ನಾಲ್ಕು ತಿಂಗಳೊಳಗೆ ಕ್ಲೀನ್ ಚಿಟ್ ದೊರೆತಿದೆ. ಒಂದು ವರ್ಷದಿಂದಲೂ ಕುಂಟುತ್ತಾ ಸಾಗಿದ್ದ ವಿಚಾರಣೆಯು ತ್ವರಿತಗತಿಯಲ್ಲಿ ಪೂರ್ಣಗೊಂಡಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಿವಸ್ವಾಮಿ ಅವರ ಶಾಲಾ ದಾಖಲಾತಿಯೊಂದರಲ್ಲಿ ಕಾಡು ಕುರುಬ, ಇನ್ನು ಕೆಲವು ದಾಖಲಾತಿಗಳಲ್ಲಿ ಎಸ್ ಟಿ , ಕುರುಬ, ಹಿಂದುಳಿದ ವರ್ಗ, ಬಿ ಗ್ರೂಪ್ ಎಂದು ನಮೂದಿಸಿರುವುದರ ಕುರಿತು ಬೆಂಗಳೂರಿನ ಯಲಹಂಕದ ರಾಮಕೃಷ್ಣಪ್ಪ ಎಂಬುವರು ಸಂಶಯಗಳನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧ ಸಿಎಜಿಗೆ ದೂರು ಸಹ ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಒಂದು ವರ್ಷದಿಂದಲೂ ವಿಚಾರಣೆ ನಡೆಸಿದ್ದ ಮೈಸೂರು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು, ಶಿವಸ್ವಾಮಿ ಅವರು ‘ಕುರುಬ’ ಜಾತಿಗೆ ಸೇರಿದವರು ಎಂದು ನಿರ್ಣಯಿಸಿದೆ.
ಆದರೆ ಶಿವಸ್ವಾಮಿ ಅವರು 5ನೇ ತರಗತಿಯಿಂದ 7ನೇ ತರಗತಿವರೆಗಿನ ವ್ಯಾಸಂಗದ ಅವಧಿಯಲ್ಲಿ ಶಾಲೆ ಪ್ರವೇಶ ದಾಖಲೆ ಪುಸ್ತಕ ಮತ್ತು ವರ್ಗಾವಣೆ ಪತ್ರದಲ್ಲಿ ಕಾಡು ಕುರುಬ ಎಂದು ನಮೂದಾಗಿದೆ ಎಂದಷ್ಟೇ ಮೈಸೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಾತಿ ಪರಿಶೀಲನಾ ಸಮಿತಿ ಸಭೆಯು ಉಲ್ಲೇಖಿಸಿದೆ. ಈ ಬಗ್ಗೆ ಯಾವ ವಿವರಣೆಯನ್ನೂ ನೀಡದಿರುವುದು ಪರಿಶೀಲನಾ ಸಮಿತಿ ಸಭೆಯ ನಡವಳಿಯಲ್ಲಿ ಕಂಡು ಬಂದಿಲ್ಲ.
ಈ ಕುರಿತು ‘ದಿ ಫೈಲ್’ ಗೆ ಪ್ರತಿಕ್ರಿಯೆ ನೀಡಿರುವ ಶಿವಸ್ವಾಮಿ ಅವರು ‘ಶಾಲಾ ದಾಖಲಾತಿಯಲ್ಲಿ ಕಾಡು ಕುರುಬ ಎಂದು ಹೇಗೆ ನಮೂದಿಸಲಾಗಿದೆ ಎಂಬುದು ನನ್ನ ಅರಿವಿಗೆ ಬಂದಿಲ್ಲ. ಇದನ್ನು ಸರ್ಕಾರಿ ಸೇವೆ ಸೇರಿದಂತೆ ಬೇರೆಲ್ಲೂ ಬಳಸಿಕೊಂಡಿಲ್ಲ,’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಬಿ ಶಿವಸ್ವಾಮಿ ಅವರ ಜಾತಿಗೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸಿದ್ದ ದಲಿತ ರಕ್ಷಣಾ ವೇದಿಕೆಯ ಎನ್ ರಾಮಕೃಷ್ಣಪ್ಪ ಎಂಬುವರು ಸಿಎಜಿ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ 2022ರ ಆಗಸ್ಟ್ 17ರಂದು ದಾಖಲೆ ಸಹಿತ ದೂರು ಸಲ್ಲಿಸಿದ್ದರು.
ಕಾಡು ಕುರುಬ, ಎಸ್‌ಟಿ, ಹಿಂದುಳಿದ ವರ್ಗ, ಬಿ ಗ್ರೂಪ್ ಎಂದು ಶಾಲಾ ದಾಖಲೆಗಳಲ್ಲಿ ನಮೂದಾಗಿದೆ. ಹೀಗಾಗಿ ಶಿವಸ್ವಾಮಿ ಅವರದ್ದು ಯಾವ ಜಾತಿ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ರಾಮಕೃಷ್ಣಪ್ಪ ಅವರು ದೂರಿನಲ್ಲಿ ಕೋರಿದ್ದರು.ಈ ದೂರನ್ನು ಸಿಎಜಿಯು 2022ರ ಆಗಸ್ಟ್ 23ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರವಾನಿಸಿತ್ತು ಎಂಬುದು ಗೊತ್ತಾಗಿದೆ.
ದೂರಿನಲ್ಲೇನಿದೆ?
ಕೆಎಎಸ್ ಅಧಿಕಾರಿ ಬಿ ಶಿವಸ್ವಾಮಿ ಅವರು ಕುರುಬ ಸಮುದಾಯದವರಾಗಿದ್ದಾರೆ. ಆದರೆ ಸರ್ಕಾರಕ್ಕೆ ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿದ ಕಾಡು ಕುರುಬ ಜಾತಿಯ ನಕಲಿ ಪ್ರಮಾಣ ಪತ್ರವನ್ನು ನೀಡಿ 2006ರಿಂದ ಇಲ್ಲಿಯವರೆಗೆ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ರಾಮಕೃಷ್ಣಪ್ಪ ಅವರು ದೂರಿನಲ್ಲಿ ಆಪಾದಿಸಿದ್ದರು.
ನಕಲಿ ಜಾತಿ ಪ್ರಮಾಣ ಪತ್ರವನ್ನು ನೀಡಿ ವಿವಿಧ ಪದನ್ನೋತಿಗಳನ್ನು ಪಡೆದಿದ್ದಾರೆ. ಸರ್ಕಾರದ ಅಧಿಕಾರವನ್ನೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವುದು ದೂರಿನಿಂದ ಗೊತ್ತಾಗಿದೆ.
ದಾಖಲೆಗಳಲ್ಲೇನಿದೆ?
ಶಿವಸ್ವಾಮಿ ಅವರ ವಿರುದ್ಧ ದೂರು ನೀಡಿರುವ ರಾಮಕೃಷ್ಣಪ್ಪ ಅವರು ಮೈಸೂರು ತಾಲೂಕಿನ ಗೋಪಾಲಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಮಹಾರಾಣಿ ಪಿಯುಸಿ ಕಾಲೇಜು, ಎಸ್‌ಎಸ್‌ಎಲ್‌ಸಿಯಿಂದ ಪಿಯುಸಿಗೆ ತೆಗೆದುಕೊಂಡ ವರ್ಗಾವಣೆ ಪತ್ರ, ಪ್ರತಿಜ್ಞಾ ವಿಧಿ ಪ್ರಮಾಣ ಪತ್ರಗಳ ದಾಖಲೆಗಳನ್ನು ಒದಗಿಸಿರುವುದು ತಿಳಿದು ಬಂದಿದೆ.
ಗೋಪಾಲಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನೀಡಿರುವ ದಾಖಲೆ ಪ್ರಕಾರ ಬಿ ಶಿವಸ್ವಾಮಿ ಅವರು ಕಾಡು ಕುರುಬ (ಎಸ್‌ಟಿ) ಎಂದು ಜಾತಿ ಎಂದು ನಮೂದಿಸಲಾಗಿದೆ.
ಮೈಸೂರಿನಲ್ಲಿರುವ ಸರ್ಕಾರಿ ಮಹಾರಾಣಿ ಪಿಯುಸಿ ಕಾಲೇಜಿಗೆ ಪಿಯುಸಿಗೆ ಸೇರುವ ಸಂದರ್ಭದಲ್ಲಿ ‘ಬಿ’ ಗ್ರೂಪ್ ಮತ್ತು ಕುರುಬ (ಬಿ) ಎಂದು ನಮೂದಿಸಲಾಗಿದೆ.
ಎಸ್‌ಎಸ್‌ಎಲ್‌ಸಿಯಿಂದ ಪಿಯುಸಿಗೆ ತೆಗೆದುಕೊಂಡ ವರ್ಗಾವಣೆ ಪತ್ರದಲ್ಲಿ ಕಾಲಂ 9ರಲ್ಲಿ ಎಸ್‌ಟಿ ಎಂದು ನಮೂದಿಸಿದೆ. ಇದೇ ವರ್ಗಾವಣೆ ಪತ್ರದ ಕಾಲಂ 12ರಲ್ಲಿ ಬಿಸಿಎಂ ವತಿಯಿಂದ ಸ್ಕಾಲರ್ ಶಿಪ್ ಪಡೆಯಲಾಗಿದೆ ಎಂದು ದಾಖಲಿಸಿರುವುದು ಗೊತ್ತಾಗಿದೆ.
ಅದೇ ರೀತಿ ನಮೂನೆ 3ರಲ್ಲಿನ ಪ್ರಮಾಣೀಕೃತ ಘೋಷಣೆ ಪತ್ರದಲ್ಲಿ ಒಬಿಸಿ ಬಿ ಗ್ರೂಪ್ ಎಂದು ನಮೂದಿಸಿದೆ. ಹಾಗೆಯೇ 1993ರ ಜೂನ್ 11ರಂದು ಮೈಸೂರು ತಾಲೂಕು ತಹಶೀಲ್ದಾರ್ ಸಮ್ಮುಖದಲ್ಲಿ ಹಿಂದುಳಿದ ವರ್ಗ ಎಂದು ಪ್ರತಿಜ್ಞಾ ವಿಧಿಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.
‘ಈ ಎಲ್ಲಾ ದಾಖಲೆಗಳು ಶಿವಸ್ವಾಮಿ ಅವರಿಗೆ ಸಂಬಂಧಿಸಿದ್ದಾಗಿದೆ. ಆದರೆ ಇವುಗಳು ಒಂದಕ್ಕೊಂದು ತಾಳೆ ಇರುವುದಿಲ್ಲ. ಆದ್ದರಿಂದ ಶಿವಸ್ವಾಮಿ ಅವರ ಶಾಲಾ ದಾಖಲಾತಿಗಳ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ದಾಖಲೆಗಾಗಿ ಕೇಳಿದ್ದೆವು. ಆದರೆ ಇಲಾಖೆಯವರು ಸಮರ್ಪಕ ಮಾಹಿತಿ ನೀಡಿಲ್ಲ,’ ಎಂದು ಸಿಎಜಿಗೆ ನೀಡಿರುವ ದೂರಿನಲ್ಲಿ ತಿಳಿಸಿರುವುದು ಗೊತ್ತಾಗಿದೆ
ಹಾಗೆಯೇ ರಾಮಕೃಷ್ಣಪ್ಪ ಅವರು ಶಿವಸ್ವಾಮಿ ಅವರಿಗೆ ಸಂಬಂಧಿಸಿದ ಸೇವಾ ಪುಸ್ತಕದಲ್ಲಿರುವ ದಾಖಲೆಗಳ ಪ್ರತಿಗಳನ್ನು ಕೋರಿ 2022ರ ಏಪ್ರಿಲ್ 28ರಂದು ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಸೇವೆಗಳು-2) ಸರ್ಕಾರದ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ಪ್ರಧಾನ ಮಹಾಲೇಖಪಾಲರ ಕಚೇರಿಗೆ ರವಾನಿಸಿದ್ದರು ಎಂಬುದು ಗೊತ್ತಾಗಿದೆ.
ರಾಮಕೃಷ್ಣಪ್ಪ ಅವರು ಇದೇ ದೂರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿಗೂ 2022ರ ಆಗಸ್ಟ್ 17ರಂದು ದೂರು ದಾಖಲಿಸಿದ್ದರು.
ಈ ದೂರನ್ನಾಧರಿಸಿ 2017ರ ಏಪ್ರಿಲ್ 15ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಂತೆ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಎಡಿಜಿಪಿ ಅವರು 2022ರ ನವೆಂಬರ್ 23ರಂದು ಮೈಸೂರು ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದಿದ್ದರು ಎಂಬುದು ತಿಳಿದು ಬಂದಿದೆ.
ಇದೇ ವಿಷಯದ ಕುರಿತು ಸಮಾಜ ಕಲ್ಯಾಣ ಇಲಾಖೆಯ ಮೈಸೂರು ಜಿಲ್ಲೆಯ ಜಂಟಿ ನಿರ್ದೇಶಕರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 2023ರ ಜೂನ್ 30 ಮತ್ತು ಜುಲೈ 19ರಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಸಭೆ ನಡೆದಿತ್ತು. ಆದರೆ ಈ ಎರಡೂ ಸಭೆಗಳಿಗೆ ದೂರುದಾರ ರಾಮಕೃಷ್ಣಪ್ಪ ಅವರು ಹಾಜರಾಗಿರಲಿಲ್ಲ ಎಂದು ತಿಳಿದು ಬಂದಿದೆ. 2023ರ ಜುಲೈ 28ರಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಸಭೆ ನಡೆದಿತ್ತು.
ಮೈಸೂರು ಜಿಲ್ಲಾಧಿಕಾರಿಯಿಂದ ಕ್ಲೀನ್ ಚಿಟ್
ಬಿ ಶಿವಸ್ವಾಮಿ ಅವರ ಜಾತಿಯ ಕುರಿತು ಸಲ್ಲಿಕೆಯಾಗಿದ್ದ ದೂರಿನ ಕುರಿತು ಸಮಾಜ ಕಲ್ಯಾಣ ಇಲಾಖೆಯ ಮೈಸೂರು ಜಿಲ್ಲಾ ಜಂಟಿ ನಿರ್ದೇಶಕರು ಪರಿಶೀಲನೆ ನಡೆಸಿ 2023ರ ಆಗಸ್ಟ್ 30ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದಾರೆ.
‘ಬಿ ಶಿವಸ್ವಾಮಿ ಅವರ ಜಾತಿ ಬಗ್ಗೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು ಜಿಲ್ಲಾಧಿಕಾರಿಗಳಿಂದ ಸರ್ಕಾರಕ್ಕೆ ಈಗಾಗಲೇ ವರದಿ ಸಲ್ಲಿಸಿರುವಂತೆ ಸದರಿಯವರು ಕಾಡು ಕುರುಬ ಜಾತಿ ಪ್ರಮಾಣ ಪತ್ರವನ್ನು ಪಡೆದಿರುವುದಿಲ್ಲ. ಆದ್ದರಿಂದ ಇವರು ಕುರುಬ ಜಾತಿಗೆ ಸೇರಿರುತ್ತಾರೆ ಎಂಬುದಾಗಿ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಗಿದೆ,’ ಎಂದು ವರದಿ ಸಲ್ಲಿಸಿರುವುದು ಗೊತ್ತಾಗಿದೆ.
ಜಿಲ್ಲಾಧಿಕಾರಿ ವರದಿಯಲ್ಲೇನಿದೆ?
ಬಿ ಶಿವಸ್ವಾಮಿ ಅವರು 1ನೇ ತರಗತಿಯಿಂದ 7ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಗೋಪಾಲಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರವೇಶ ದಾಖಲೆ ಪುಸ್ತಕದಲ್ಲಿ ಕಾಡು ಕುರುಬ ಎಂದು ನಮೂದಾಗಿರುತ್ತದೆ. ಇದೇ ಶಾಲೆಯಲ್ಲಿರುವ ವರ್ಗಾವಣೆ ಪತ್ರದಲ್ಲಿಯೂ ಇವರ ಜಾತಿ ಕಾಡು ಕುರುಬ ಎಂದು ನಮೂದಾಗಿರುತ್ತದೆ.
ಜಯಪುರದ ರಾಘವೇಂದ್ರ ವಿದ್ಯಾಪೀಠ ಪ್ರೌಢಶಾಲೆಯ ಪ್ರವೇಶ ದಾಖಲೆ ಪುಸ್ತಕದಲ್ಲಿ ಇವರ ಜಾತಿ ಕುರುಬ ಎಂದು ನಮೂದಾಗಿರುತ್ತದೆ. ಹಿಂದುಳಿದ ವರ್ಗಗಳ ಕುರುಬ ಜಾತಿಯ ಪ್ರವರ್ಗ 2 ಮೀಸಲಾತಿ ಅಡಿಯಲ್ಲಿ ಅಬಕಾರಿ ಉಪ ನಿರೀಕ್ಷಕರ ಹುದ್ದೆ, ಪ್ರೌಢಶಾಲೆ ಸಹ ಶಿಕ್ಷಕರ ಹುದ್ದೆ, ತಹಶೀಲ್ದಾರ್ ಹುದ್ದೆಳಿಗೆ ಆಯ್ಕೆಯಾಗಿದ್ದು ಇವರಿಗೆ ಕುರುಬ ಜಾತಿಯ ಪ್ರವರ್ಗ 2 ಎ ಎಂದು ಸಿಂಧುತ್ವ ಪ್ರಮಾಣ ಪತ್ರ ನೀಡಲಾಗಿರುತ್ತದೆ ಎಂದು ವರದಿಯಲ್ಲಿ ವಿವರಿಸಿದೆ.
‘ಇವರ ಗ್ರಾಮದಲ್ಲಿ ಕುರುಬ ಜನಾಂಗದವರು ವಾಸವಾಗಿರುತ್ತಾರೆ. ಈ ಗ್ರಾಮದ ಜನರೊಂದಿಗೆ ಚರ್ಚಿಸಲಾಗಿ ಗ್ರಾಮದಲ್ಲಿ ಕುರುಬ ಜನಾಂಗದವರು ಇರುತ್ತಾರೆ. ಬಿ ಶಿವಸ್ವಾಮಿ ಮತ್ತು ಅವರ ಕುಟುಂಬದವರು ಕುರುಬ ಜಾತಿಗೆ ಸೇರಿರುತ್ತಾರೆ. ಈ ಗ್ರಾಮದಲ್ಲಿ ಕಾಡು ಕುರುಬ ಜಾತಿಯವರು ಇರುವುದಿಲ್ಲ. ಮೈಸೂರು ತಾಲೂಕಿನಲ್ಲಿ ಕಾಡು ಕುರುಬ ರಂಗಕ್ಕೆ ಸೇರಿದವರು ಇರುವುದಿಲ್ಲ. ಹೀಗಾಗಿ ಸರ್ಕಾರದ ಆದೇಶದ ಪ್ರಕರ ಕಾಡು ಕುರುಬ ಜಾತಿಯ ಪ್ರಮಾಣ ಪತ್ರವನ್ನು ನೀಡಲು ಅವಕಾಶವಿರುವುದಿಲ್ಲ. ದೂರುದಾರರು ದೂರಿರುವಂತೆ ಬಿ ಶಿವಸ್ವಾಮಿ ಅವರು ಕಾಡು ಕುರುಬ ಜಾತಿ ಪ್ರಮಾಣ ಪತ್ರವನ್ನು ಪಡೆದಿರುವುದಿಲ್ಲ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.
‘ಇದೊಂದು ದುರುದ್ದೇಶಪೂರಿತವಾದ ದೂರು. ನನಗೆ ಮಾನಸಿಕ ಹಿಂಸೆ ನೀಡುವ ಉದ್ದೇಶದಿಂದಲೇ ದೂರನ್ನು ಸಲ್ಲಿಸಲಾಗಿದೆ. ಈ ದೂರಿನಲ್ಲಿ ಯಾವುದೇ ಹುರುಳಿಲ್ಲ. ಜಿಲ್ಲಾಧಿಕಾರಿ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಸಭೆಯ ವಿಚಾರಣೆಯಲ್ಲಿಯೂ ಇದು ಸಾಬೀತಾಗಿದೆ. ಸುಳ್ಳು ದೂರು ನೀಡಿ ಮಾನಸಿಕ ಹಿಂಸೆ ನೀಡಿರುವ ದೂರುದಾರನ ವಿರುದ್ಧವೂ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ,’ ಎಂದು ಬಿ ಶಿವಸ್ವಾಮಿ ಅವರು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದು ನೈಜ ಹಕ್ಕುದಾರರಿಗೆ ಮೋಸ ಮಾಡಿರುವ ಮತ್ತು ಈಗಲೂ ಮಾಡುತ್ತಿರುವ ಕೆಟ್ಟ ಪರಂಪರೆಯೇ ರಾಜ್ಯದಲ್ಲಿ ಇದೆ. ಗಂಭೀರ ಆರೋಪಗಳನ್ನು ಹೊತ್ತಿರುವ ಅನೇಕರು ರಾಜಕಾರಣದಲ್ಲಿ ಮತ್ತು ಸರ್ಕಾರದಲ್ಲಿ ಪ್ರಭಾವಿಗಳಾಗಿರುವ ಕಾರಣ ತನಿಖೆ ಅಥವಾ ವಿಚಾರಣೆ ಎನ್ನುವುದನ್ನು ನಗೆನಾಟಕದ (Farce) ಮಟ್ಟಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರವಿಕೃಷ್ಣಾರೆಡ್ಡಿ.
‘ಶಿವಸ್ವಾಮಿ ಎನ್ನುವ ಹಿರಿಯ ಸರ್ಕಾರಿ ಅಧಿಕಾರಿ ವಿರುದ್ಧ ಕೇಳಿ ಬಂದಿರುವ ಆರೋಪವನ್ನೂ ನಾವು ಇದೇ ಹಿನ್ನೆಲೆಯಲ್ಲಿ ಗಮನಿಸಬೇಕು. ಕೇವಲ ಇವರೊಬ್ಬರ ಮೇಲೆ ಮಾತ್ರವಲ್ಲ, ಇಂತಹ ಆರೋಪಗಳಿರುವ ನೂರಾರು ಅಧಿಕಾರಿಗಳು ಸರ್ಕಾರಿ ನೌಕರಿಯಲ್ಲಿ ಇರುವುದರಿಂದ ಸರ್ಕಾರವು ಒಂದು ಸ್ವತಂತ್ರ ಆಯೋಗವನ್ನು ರಚಿಸಿ ಇಂತಹ ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ಆ ಆಯೋಗಕ್ಕೆ ಒಪ್ಪಿಸಿ, ಕಾಲಮಿತಿಯಲ್ಲಿ ಇಂತಹ ಎಲ್ಲಾ ಪ್ರಕರಣಗಳ ಸತ್ಯಾಸತ್ಯತೆಯನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕು,’ ಎಂದು ರವಿಕೃಷ್ಣಾರೆಡ್ಡಿ ಅವರು ಅಭಿಪ್ರಾಯಿಸಿದ್ದಾರೆ.