ಬೆಂಗಳೂರು; ಮೈಸೂರು ಮಿನರಲ್ಸ್ ಲಿಮಿಟೆಡ್‌ನಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 642.32 ಕೋಟಿ ರು. ನಷ್ಟಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಕಳೆದ 14 ವರ್ಷಗಳಿಂದ ಒಂದೇ ಒಂದು ಕ್ರಮ ಜರುಗಿಸಿಲ್ಲ.
ಅಷ್ಟೇ ಏಕೆ ಈ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ನಡೆಸಬೇಕೇ ಬೇಡವೇ ಎಂಬ ಕುರಿತು ಕಳೆದ 14 ವರ್ಷಗಳಿಂದಲೂ ಚರ್ಚೆಯಲ್ಲಿಯೇ ಕಾಲಹರಣ ಮಾಡಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿದ್ದ ವರದಿ ಮತ್ತು ನಿರ್ದೇಶನಗಳನ್ವಯ ಆರ್ಥಿಕ ನಷ್ಟವನ್ನು ವಸೂಲು ಮಾಡಲು ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ.
ಮತ್ತೊಂದು ವಿಶೇಷವೆಂದರೇ ಆರ್ಥಿಕ ನಷ್ಟಕ್ಕೆ ಅಧಿಕಾರಿಗಳು ಜವಾಬ್ದಾರರಾಗಿಲ್ಲ ಎಂದು ಶಿಫಾರಸ್ಸು ಮಾಡಲಾಗಿದೆಯಾದರೂ ಆಗಿರುವ ನಷ್ಟಕ್ಕೆ ಹೊಣೆಗಾರರು ಯಾರು ಎಂಬುದನ್ನೂ ನಿರ್ದಿಷ್ಟವಾಗಿ ಹೇಳಿಲ್ಲ.
ಈ ಕುರಿತು ಸಿಬ್ಬಂದಿ ಮತ್ತು ಮತ್ತು ಆಡಳಿತ ಸುಧಾರಣೆ ಇಲಾಖೆಯು 2023ರ ನವೆಂಬರ್ 4ರಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಹಾಕಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಅಕ್ರಮ ಗಣಿಗಾರಿಕೆಯಿಂದ ಬೊಕ್ಕಸಕ್ಕೆ 16 ಸಾವಿರ ಕೋಟಿ ರೂ. ನಷ್ಟವಾಗಿದೆ. ಲೋಕಾಯುಕ್ತ ವರದಿ ಅನ್ವಯ ಎಲ್ಲ ಅಧಿಕಾರಿಗಳಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಅನ್ವಯ ಕ್ರಮ ಜರುಗಿಸಲಾಗುವುದು. ಇದರಲ್ಲಿ ಯಾವುದೇ ಮುಲಾಜು ನೋಡುವುದಿಲ್ಲ,’ ಎಂದು ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಗುಡುಗಿದ್ದರು. ಆದರೆ ಅವರ ಅವಧಿ ಮತ್ತು ಆ ನಂತರ ಬಂದ ಸರ್ಕಾರಗಳೂ ಯಾವುದೇ ಕ್ರಮ ಜರುಗಿಸಿಲ್ಲ.
642.32 ಕೋಟಿ ರು. ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅರು 2008ರ ಡಿಸೆಂಬರ್ 18ರಂದು ನೀಡಿದ್ದ ವರದಿಯಲ್ಲಿ ಐಎಎಸ್ ಅಧಿಕಾರಿ ಉಮೇಶ್, ಮಹೇಂದ್ರ ಜೈನ್, ಐ ಆರ್ ಪೆರುಮಾಳ್, ಜಿ ವಿ ಕೊಂಗವಾಡ, ಕೆ ಎಸ್ ಮಂಜುನಾಥ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಪ್ರಕರಣದಲ್ಲಿ ಈ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಲೋಕಾಯುಕ್ತ ವರದಿಯಲ್ಲಿ ವಿಸ್ತೃತವಾಗಿ ವಿವರಿಸಲಾಗಿತ್ತು.
ಈ ಕುರಿತು ಕ್ರಮ ಕೈಗೊಳ್ಳಬೇಕಿದ್ದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಕಳೆದ 14 ವರ್ಷಗಳಿಂದ ಚರ್ಚೆಯಲ್ಲಿಯೇ ಕಾಲಹರಣ ನಡೆಸಿದೆ. ಇದನ್ನು ಹೊರತುಪಡಿಸಿದರೇ ಅಧಿಕಾರಿಗಳ ವಿರುದ್ಧ ಒಂದೇ ಒಂದು ಕ್ರಮವನ್ನೂ ತೆಗೆದುಕೊಂಡಿಲ್ಲ ಎಂಬ ಮಾಹಿತಿಯು ಪತ್ರದಿಂದ ತಿಳಿದು ಬಂದಿದೆ.
ಡಿಪಿಎಆರ್ ಪತ್ರದಲ್ಲೇನಿದೆ?
ಕಳೆದ 14 ವರ್ಷಗಳಿಂದ ಇಲಾಖೆ ವಿಚಾರಣೆಯನ್ನು ಪ್ರಾರಂಭಿಸುವ ಕುರಿತು ಮಾತ್ರ ಚರ್ಚೆಯಾಗಿರುತ್ತದೆ ಹೊರತು ಲೋಕಾಯುಕ್ತರ ನಿರ್ದೇಶನಗಳನ್ವಯ ಆರ್ಥಿಕ ನಷ್ಟವನ್ನು ವಸೂಲಾತಿ ಮಾಡುವ ಕುರಿತು ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ಅದೇ ರೀತಿ ‘ಪ್ರಕರಣವನ್ನು ಸಂಬಂಧಪಟ್ಟ ಅಧಿಕಾರಿಗಳು ಆರ್ಥಿಕ ನಷ್ಟಕ್ಕೆ ಜವಾಬ್ದಾರರಾಗಿಲ್ಲವೆಂದು ಶಿಫಾರಸ್ಸು ಮಾಡಿರುವುದಾದರೇ ಆಗಿರುವ ನಷ್ಟಕ್ಕೆ ಹೊಣೆಗಾರರು ಯಾರೆಂಬುದನ್ನು ಇಲಾಖೆಯು ನಿರ್ದಿಷ್ಟಪಡಿಸಿರುವುದಿಲ್ಲ,’ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಅಕ್ರಮ ಗಣಿಗಾರಿಕೆಯ ಎಂಎಂಎಲ್ ಪ್ರಕರಣದಲ್ಲಿ ಸರ್ಕಾರದ ಬೊಕ್ಕಸಕ್ಕೆ 642,32,85,951 ಕೋಟಿ ರು. ಆರ್ಥಿಕ ನಷ್ಟವಾಗಿತ್ತು. ಇದಕ್ಕೆ 06 ಜನ ಐಎಎಸ್ ಮತ್ತು ಒಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಆರ್ಥಿಕ ನಷ್ಟವನ್ನು ವಸೂಲು ಮಾಡಲು ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.
ಎಂಎಂಎಲ್ ಅಕ್ರಮ ಗಣಿಗಾರಿಕೆ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸುವುದು ಮತ್ತು ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಐಎಎಸ್, ಐಪಿಎಸ್ ಅಧಿಕಾರಿಗಳ ವಿಚಾರಣೆಗೆ ಅನುಮತಿ ನೀಡಲು ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಪುಟ ಸಭೆಯ ಒಪ್ಪಿಗೆ ಪಡೆದಿದ್ದರು.
ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದ ತನಖೆಯನ್ನು ಲೋಕಾಯುಕ್ತ ಪೊಲೀಸ್ ವಿಶೇಷ ತನಿಖೆಗೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು.
ಎಂಎಂಎಲ್ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ವಿ.ಉಮೇಶ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಐ.ಆರ್.ಪೆರುಮಾಳ್, ಗಂಗಾರಾಂ ಭಡೇರಿಯಾ, ಮಹೇಂದ್ರ ಜೈನ್, ನಿವೃತ್ತ ಡಿಜಿಪಿ ಜೀಜಾ ಮಾಧವ ಹರಿಸಿಂಗ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿವೃತ್ತ ಅಧಿಕಾರಿಗಳಾದ ಶಿವಲಿಂಗಮೂರ್ತಿ, ಬಸಪ್ಪ ರೆಡ್ಡಿ, ಮಂಜುನಾಥ್, ಕೊಂಗವಾಡ, ಅಶೋಕ್ ವಿರುದ್ಧ ಎಸ್‌ಐಟಿ ಮೂಲಕ ತನಿಖೆ ನಡೆಸಲು ಒಪ್ಪಿಗೆ ಪಡೆದಿದ್ದರು.
ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗಾಗಿ ರಾಷ್ಟ್ರೀಯ ಸಮಿತಿ (ಸಮಾಜ ಪರಿವರ್ತನಾ ಸಮಾಜ) ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ನಲ್ಲಿನ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಕೋರಿತ್ತು.
“ಅದಿರು ರಫ್ತು ಹಗರಣದ ಕುರಿತು ಸಿಬಿಐ ತನಿಖೆಯನ್ನು ಘೋಷಿಸಿದ ರಾಜ್ಯ ಸರ್ಕಾರವು ಎಂಎಂಎಲ್ ಅನ್ನು ತನಿಖೆಯ ವ್ಯಾಪ್ತಿಯಿಂದ ಕೈಬಿಟ್ಟಿದೆ. ಸಂಸ್ಥೆಯು ದೊಡ್ಡ ಪ್ರಮಾಣದ ಅಕ್ರಮಗಳಲ್ಲಿ ತೊಡಗಿದೆ ಎಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಹಿರೇಮಠ ಅವರು ಆರೋಪಿಸಿದ್ದರು.