ಆಳ್ವಾಸ್‌ ಕಾಲೇಜಿನಿಂದ ಹೆಚ್ಚುವರಿ ಶುಲ್ಕ, ಮಾರ್ಗಸೂಚಿ ಉಲ್ಲಂಘನೆ; ಮಾನ್ಯತೆ ಹಿಂಪಡೆಯಲು ನಿರ್ದೇಶನ

ಬೆಂಗಳೂರು; ರಾಜ್ಯದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡದ ಆಳ್ವಾಸ್‌ ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮತ್ತು ದಾಖಲಾತಿಯ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿರುವುದು ತನಿಖಾ ತಂಡ ವರದಿಯನ್ವಯ ದೃಢಪಟ್ಟಿದೆ.

 

ತನಿಖಾ ತಂಡದ ವರದಿ ಅನುಸಾರ ಆಳ್ವಾಸ್‌ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯಲು ನಿಯಮಾನುಸಾರ ಕ್ರಮ ವಹಿಸಬೇಕು ಎಂದು ರಾಜ್ಯ ಸರ್ಕಾರವು ನಿರ್ದೇಶಿಸಿರುವುದು ಇದೀಗ ಬಹಿರಂಗವಾಗಿದೆ.

 

ರಮೇಶ್‌ ಬೆಟ್ಟಯ್ಯ ಎಂಬುವರು ನೀಡಿದ್ದ ದೂರನ್ನಾಧರಿಸಿ ತನಿಖೆ ನಡೆಸಿದ್ದ ತನಿಖಾ ತಂಡವು ನೀಡಿದ್ದ ವರದಿ ಆಧರಿಸಿ ಆಳ್ವಾಸ್‌ ಪದವಿಪೂರ್ವ ಕಾಲೇಜಿಗೆ ನೀಡಿರುವ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯುವ ಬಗ್ಗೆ ಅಭಿಪ್ರಾಯ ಪಟ್ಟಿದೆ.

 

ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ 2023ರ ನವೆಂಬರ್‍‌ 22ರಂದು ನಿರ್ದೇಶಿಸಿದ್ದಾರೆ. ಇಲಾಖೆಯ ಅಧೀನ ಕಾರ್ಯದರ್ಶಿ ಎಸ್‌ ಎನ್‌ ಪದ್ಮಿನಿ ಅವರು ಪಿಯು ಮಂಡಳಿಯ ನಿರ್ದೇಶಕರಿಗೆ ಪತ್ರ (ಸಂಖ್ಯೆ ; ಇಪಿ 167 ಎಸ್‌ ಹೆಚ್‌ ಹೆಚ್‌ 2020, ದಿನಾಂಕ 22-11-2023) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ವರದಿಗೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ ನಂತರ ಆಳ್ವಾಸ್‌ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯುವ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದು ಮತ್ತು ದಾಖಲಾತಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಕುರಿತು ರಮೇಶ್‌ ಬೆಟ್ಟಯ್ಯ ಎಂಬುವರು ದೂರು ದಾಖಲಿಸಿದ್ದರು. ಈ ದೂರನ್ನಾಧರಿಸಿ ತನಿಖೆ ನಡೆಸಲು ತಂಡವೊಂದನ್ನು ರಚಿಸಿತ್ತು ಎಂಬುದು ಪತ್ರದಿಂದ ತಿಳಿದು ಬಂದಿದೆ.

 

ಪತ್ರದಲ್ಲೇನಿದೆ?

 

ಪದವಿಪೂರ್ವ ಶಿಕ್ಷಣ ಮಂಡಳಿಯ ನಿರ್ದೇಶಕರು ಬರೆದಿದ್ದ ಪತ್ರ (ಸಂಖ್ಯೆ ಪಪೂಶಿ/ಸಿ-2;ಸಿಆರ್‍‌ 4;1164193/ದೂರು/2019-20 ದಿನಾಂಕ 05-12-2022),( ಸಂಖ್ಯೆ; ಪಪೂಶಿ/ಸಿ-2;ಸಿಆರ್‍‌ 4;1164193/ದೂರು/2019-20 ದಿನಾಂಕ 24-05-2023)ಗಳಲ್ಲಿನ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್‌ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದು ಮತ್ತು ಇಲಾಖೆ ದಾಖಲಾತಿ ಮಾರ್ಗಸೂಚಿಗಳನ್ನು ಪಾಲಿಸದೇ ಇರುವುದು ತನಿಖಾ ತಂಡ ವರದಿಯನ್ವಯ ದೃಢಪಟ್ಟಿರುವುದರಿಂದ ಕರ್ನಾಟಕ ಶಿಕ್ಷಣ ಕಾಯ್ದೆ 1983 ಮತ್ತು ಅದರಡಿ ರಚಿತವಾದ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್‌ 39ರ ಅನ್ವಯ ಕಾಲೇಜಿನ ಶೈಕ್ಷಣಿಕ ಮಾನ್ಯತೆಯನ್ನು ಹಿಂಪಡೆಯುವ ಬಗ್ಗೆ ನಿಯಮಾನುಸಾರ ಕ್ರಮವಹಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ಶಿಕ್ಷಣ ಕಾಯ್ದೆಯಲ್ಲೇನಿದೆ?

 

ಮಾನ್ಯತೆ ನೀಡಿಕೆಯ ಎಲ್ಲ ಅಥವಾ ಯಾವುದೇ ಷರತ್ತುಗಳನ್ನು ಪಾಲಿಸಲು ತಪ್ಪಿದಲ್ಲಿ ಅಥವಾ ಸ್ಥಳಾವಕಾಶ, ಸಲಕರಣೆ, ಪಠ್ಯಕ್ರಮ, ಪಠ್ಯಪುಸ್ತಕ, ಉಪಾಧ್ಯಾಯರ ನೇಮಕಾತಿ, ಶಿಕ್ಷೆ, ಮತ್ತು ವಜಾ ಇವುಗಳಿಗೆ ಸಂಬಂಧಪಟ್ಟಂತೆ ಸಕ್ಷಮ ಪ್ರಾಧಿಕಾರದ ಆದೇಶಗಳನ್ನು ಪಾಲಿಸುವಲ್ಲಿ ತಪ್ಪಿದಲ್ಲಿ ಮಾನ್ಯತೆ ಹಿಂಪಡೆಯಬಹುದು.

 

ಮತ, ಜನಾಂಗ, ಜಾತಿ, ಭಾಷೆ ಇವುಗಳ ಆಧಾರದ ಮೆಲೆ ಅಥವಾ ಇವುಗಳ ಪೈಕಿ ಯಾವೊಂದರ ಆಧಾರದ ಮೇಲೆ ಯಾವುನೇ ನಾಗರೀಕನಿಗೆ ಪ್ರವೇಶ ನೀಡಲು ನಿರಾಕರಿಸಿದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಭಾರತದ ಯಾವುದೇ ನಾಗರಿಕ ವರ್ಗದ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವಂತ ಅಥವಾ ಆ ವರ್ಗದ ಧರ್ಮಕ್ಕೆ ಅಥವಾ ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಮಾಡುವಂಥ ಯಾವುದೇ ಪ್ರಚಾರಕ್ಕೆ ಅಥವಾ ಆಚರಣೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಲ್ಲಿ ಮಾನ್ಯತೆ ಹಿಂಪಡೆಯಲು ಅವಕಾಶವಿದೆ.

 

ಸೂಕ್ತ ವಿಚಾರಣೆಯ ತರುವಾಯ ಸಕ್ಷಮ ಪ್ರಾಧಿಕಾರವು ಯಾವ ಉಪಾಧ್ಯಾಯನ ಪ್ರಮಾಣಪತ್ರವನ್ನು ರದ್ದುಪಡಿಸಿದೆಯೋ ಅಥವಾ ನಿಲಂಬನಗೊಳಿಸದೆಯೋ ಆ ಯಾರೇ ಉಪಾಧ್ಯಾಯನನ್ನುನೇಮಿಸಿಕೊಂಡಲ್ಲಿ ಅಥವಾ ಅವನ ನೇಮಕವನ್ನು ಮುಂದುವರೆಸಿದಲ್ಲಿ ಅಥವಾ ಸೂಕ್ತ ವಿಚಾರಣೆಯ ತರುವಾಯ ಸಕ್ಷಮ ಪ್ರಾಧಿಕಾರವು ಯಾವ ಉಪಾಧ್ಯಾಯನು ಉಪಾಧ್ಯಾಯನಾಗಿರಲು ಅಯೋಗ್ಯನೆಂದು ಅಥವಾ ಉಪಾಧ್ಯಾಯನಾಗಿರುವುದು ಅಪೇಕ್ಷಣಿಯವಲ್ಲವೆಂದು ಪರಿಗಣಿಸಿದೆಯೋ ಆ ಉಪಾಧ್ಯಾಯನನ್ನು ನೇಮಿಸಿಕೊಂಡಲ್ಲಿ ಅಥವಾ ಅವರನ ನೇಮಕವನ್ನು ಮುಂದುವರೆಸಿದಲ್ಲಿ ಅಥವಾ ಉಪಾಧ್ಯಾಯನ್ನು ಯಾವುದೇ ಸಮಂಜಸ ಕಾರಣಗಳಿದಲ್ಲದೆಯೇ ತೆಗೆದುಹಾಕಿದಲ್ಲಿ ಅಥವಾ ಈ ಸಂಬಂಧವಾಗಿ ಸಕ್ಷಮ ಪ್ರಾಧಿಕಾರವು ಆಡಿದ ಆದೇಶಗಳನ್ನು ಪಾಲಿಸಲು ತಪ್ಪಿದಲ್ಲಿ ಮಾನ್ಯತೆ ಹಿಂಪಡೆಯಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಿದೆ.

 

ಶಿಕ್ಷಣಕ್ಕೆ ಅಥವಾ ಸ್ಥಳಾವಕಾಶಕ್ಕೆ ಸಂಬಂಧಪಟ್ಟ ಕುಕಂದುಕೊರತೆಗಳನ್ನು ಅಥವಾ ಆಡಳಿತಕ್ಕೆ ಅಥವಾ ಶಿಸ್ತು ಪಾಲನೆಗೆ ಸಂಬಮಧಪಟ್ಟ ಲೋಪದೋಷಗಳನ್ನುಸ ಕ್ಷಮ ಪ್ರಾಧಿಕಾರವು ಆ ಬಗ್ಗೆ ನಿರ್ದಿಷ್ಟಪಡಿಸಬಹುದಾದಂಥ ಅವಧಿಯೊಳಗೆ ಸರಿಪಡಿಸಲು ತಪ್ಪಿದಲ್ಲಿ, ಸ್ಥಳೀಯ ಪ್ರಾಧಿಕಾರಕ್ಕೆ ಅಥವಾ ಸಂದರ್ಭಾನುಸಾರ ಆಡಳಿತ ಪರಿಷತ್ತಿಗೆ ಮಾನ್ಯತೆಯನ್ನು ಹಿಂತೆಗೆದುಕೊಳ್ಳುವುದರ ಅಥವಾ ಯಾವುದೇ ಕ್ರಮ ತೆಗೆದುಕೊಳ್ಳುವುದರ ವಿರುದ್ಧ ಮನವಿಯನ್ನು ಸಲ್ಲಿಸಲು ಅವಕಾಶವನ್ನು ಕೊಟ್ಟ ತರುವಾಯ ಸಂಸ್ಥೆಯ ಮಾನ್ಯತೆಯನ್ನು ಹಿಂತೆಗೆದುಕೊಳ್ಳಬಹುದು ಅಥವಾ ಅಗತ್ಯವೆಂದು ಭಾವಿಸಬಹುದಾದ ಕ್ರಮ ಕೈಗೊಳ್ಳಲು ಅವಕಾಶವಿದೆ.

 

ಯಾವುದೇ ಸ್ಥಳೀಯ ಪ್ರಾಧಿಕಾರದ ಸಂಸ್ಥೆಗೆ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗೆ ಮಂಜೂರು ಮಾಡಿರುವ ಮಾನ್ಯತೆಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹಿಂತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವು ಅಭಿಪ್ರಾಯಪಟ್ಟಲ್ಲಿ ಸಂದಭಾನುಸಾರ ಸ್ಥಳೀಯ ಪ್ರಾಧಿಕಾರಕ್ಕೆ ಅಥವಾ ಸಂಸ್ಥೆಯ ಆಡಳಿತ ಪರಿಷತ್ತಿಗೆ ಯಾವುದೇ ಮನವಿಯನ್ನು ಸಲ್ಲಿಸಲು ಒಂದು ತಿಂಗಳ ನೋಟೀಸ್‌ನ್ನು ಕೊಟ್ಟ ನಂತರ ಸದರಿ ಸಂಸ್ಥೆಗೆ ಮಂಜೂರು ಮಾಡಿದ ಮಾನ್ಯತೆಯನ್ನು ಅಧಿಸೂಚನೆಯ ಮೂಲಕ ಹಿಂತೆಗೆದುಕೊಳ್ಳಬಹುದು.

SUPPORT THE FILE

Latest News

Related Posts