ಎಂಎಸ್‌ಐಎಲ್‌ನಲ್ಲಿ ಅಕ್ರಮ; ತನಿಖಾ ವ್ಯಾಪ್ತಿಗೆ ಸೋಲಾರ್‌ ಉಪಕರಣ ಖರೀದಿ ಸೇರಿ ಹಲವು ಪ್ರಕರಣಗಳ ಸೇರ್ಪಡೆ

ಬೆಂಗಳೂರು; ಎಂಎಸ್‌ಐಎಲ್‌ನಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳ ಭಾಗವಾಗಿರುವ ಟಿಕೆಟ್‌ ಪ್ಯಾಕೇಜ್‌, ಮಾರಾಟ ಮತ್ತ ಫೋರೆಕ್ಸ್‌ ಇತ್ಯಾದಿಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳ ಶಾಖೆಗಳಲ್ಲಿ ನಿರ್ವಹಿಸಲು ಕರೆದಿದ್ದ ಟೆಂಡರ್‍‌ನಲ್ಲಿ ಅಕ್ರಮಗಳ ಕುರಿತಾಗಿ ತನಿಖೆ  ನಡೆಸುತ್ತಿರುವ ತಂಡಕ್ಕೀಗ ಸೋಲಾರ್‌ ಉಪಕರಣಗಳ ಖರೀದಿಯಲ್ಲಿನ ಅಕ್ರಮಗಳೂ ಸೇರಿದಂತೆ ಮಂಡಳಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮಗಳ ಕುರಿತಾಗಿ ತನಿಖೆ ನಡೆಸಲು ಸರ್ಕಾರವು ಹೊಸ ಆದೇಶವನ್ನು ಹೊರಡಿಸಿದೆ.

 

ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ನಡೆಸಲು 2023ರ ಸೆ.21ರಂದು ಆದೇಶ ಹೊರಡಿಸಿತ್ತು. ಇದೀಗ ತನಿಖಾ ವ್ಯಾಪ್ತಿಗೆ ಮತ್ತಷ್ಟು ಪ್ರಕರಣಗಳನ್ನು ಸೇರಿಸಿದೆ. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ ಎಸ್‌ ಸೆಲ್ವಕುಮಾರ್‌ ಅವರು  2023ರ ನವಂಬರ್‌ 4ರಂದು ಸೇರ್ಪಡೆ ಆದೇಶವನ್ನು ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜೀಕೆ ಅಸೋಸಿಯೇಟ್ಸ್‌ ಅವರು ನೀಡಿದ್ದ ದೂರರ್ಜಿಯನ್ನಾಧರಿಸಿ ತನಿಖಾ ವ್ಯಾಪ್ತಿಗೆ ಮತ್ತಷ್ಟು ಪ್ರಕರಣಗಳನ್ನು ಸೇರ್ಪಡೆ ಮಾಡಿರುವುದು ಹೊಸ ಆದೇಶದಿಂದ ತಿಳಿದು ಬಂದಿದೆ. ಇದಕ್ಕೆ ಸಚಿವ ಎಂ ಬಿ ಪಾಟೀಲ್‌ ಅವರೂ ಸಹ ಅನುಮೋದನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

 

ಪ್ರವಾಸೋದ್ಯಮ  ವ್ಯವಹಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಡೆದಿದ್ದ ಟೆಂಡರ್‍‌ ಪ್ರಕ್ರಿಯೆಯೂ ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಯುತ್ತಿದೆ. ಈ  ಹೊತ್ತಿನಲ್ಲಿಯೇ ತನಿಖಾ ವ್ಯಾಪ್ತಿಗೀಗ ಸೋಲಾರ್‌ ಉಪಕರಣಗಳ ಖರೀದಿಯೂ ಸೇರಿದಂತೆ ಇನ್ನಿತರೆ ಅಕ್ರಮಗಳೂ ಸೇರಿರುವುದು ಮುನ್ನೆಲೆಗೆ ಬಂದಿದೆ.

 

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಮೂಲಕ ಅಂದಾಜು 100 ಕೋಟಿ ರು. ವೆಚ್ಚದಲ್ಲಿ ಖರೀದಿಸಿರುವ ಸೋಲಾರ್‌ ಉಪಕರಣಗಳ ಖರೀದಿ, ಕಾನೂನುಬಾಹಿರವಾಗಿ ಸಮಾಲೋಚಕರ ನೇಮಕ ಮತ್ತು ಇವರಿಗೆ ಲಕ್ಷಾಂತರ ರು. ಸಂಭಾವನೆ ಪಾವತಿಸುತ್ತಿರುವುದು, ಕಂಪನಿಯೊಂದರ ಬೇನಾಮಿ ಮಾಲೀಕನನ್ನೇ ಎಂಎಸ್‌ಐಎಲ್‌ಗೆ ಸಮಾಲೋಚಕರನ್ನಾಗಿ ನೇಮಕ ಮಾಡಿರುವ ಸಂಬಂಧ ಜೀಕೆ ಅಸೋಸಿಯೇಟ್ಸ್‌ ಸರ್ಕಾರಕ್ಕೆ ದೂರರ್ಜಿ ಸಲ್ಲಿಸಿತ್ತು.

 

ಪ್ರಧಾನಮಂತ್ರಿ ಜನೌಷಧ ಯೋಜನೆಯೂ ದುರುಪಯೋಗವಾಗಿದೆ ಎಂದು ದೂರಿರುವ ಜೀಕೆ ಅಸೋಸಿಯೇಟ್ಸ್‌, ಅಧಿಕಾರಿಗಳು  ಕಂಪನಿಯ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೈದರಬಾದ್‌ ಮೂಲದ ಕಂಪನಿಯೊಂದರ ಬೇನಾಮಿ ಮಾಲೀಕನನ್ನೇ ಎಂಎಸ್‌ಐಎಲ್‌ಗೆ ಸಮಾಲೋಚಕನನ್ನಾಗಿ ನೇಮಕ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

‘ಬಹು ಕೋಟಿ ರು. ಮೌಲ್ಯದ ಉತ್ಪನಗಳನ್ನು ಎಂಎಸ್‌ಐಎಲ್‌ಗೆ ಮಾರಾಟ ಮಾಡುತ್ತಿದ್ದಾರೆ. ಏಕಕಾಲಕ್ಕೆ ಸರಬರಾಜುದಾರ ಮತ್ತು ಎಂಎಸ್‌ಐಎಲ್‌ನ ಪರವಾಗಿ ಖರೀದಿದಾರನಾಗಿಯೂ ಸಮಾಲೋಚಕರು ಕಾರ್ಯನಿರ್ವಹಿಸುತ್ತಿದ್ದಾರೆ. ಎಂಎಸ್‌ಐಎಲ್‌ನ ಮುಖ್ಯ ಹಣಕಾಸು ವ್ಯವಸ್ಥಾಪಕ ಮತ್ತು ಅವರ ತಂಡದೊಂದಿಗೆ ನಡೆಸಿರುವ ಹಲವು ಅಪರಾಧಗಳಲ್ಲಿ ಭಾಗಿ ಆಗಿದ್ದಾರೆ,’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಹೈದರಾಬಾದ್‌ ಮೂಲದ ಕಂಪನಿಯ ಉತ್ಪನ್ನಗಳನ್ನು ಎಂಎಸ್‌ಐಎಲ್‌ ಖರೀದಿಸುತ್ತಿದೆ. ಇದರಲ್ಲಿ ವ್ಯವಸ್ಥಾಪಕ ನಿರ್ದೇಶಕ,  ಮುಖ್ಯ ಹಣಕಾಸು ವ್ಯವಸ್ಥಾಪಕರು ಮೌನ ವಹಿಸಿದ್ದಾರೆ. ಹೀಗಾಗಿ ಈ ವ್ಯವಹಾರದಲ್ಲಿ ಅವರಿಗೂ ಪಾಲು ಹೋಗುತ್ತಿದೆ ಎಂದು ದೂರುದಾರರು ಶಂಕಿಸಿದ್ದಾರೆ.

 

‘ಎಂಎಸ್‌ಐಎಲ್‌ಗೆ ಸಮಾಲೋಚಕನಾಗಿ ನೇಮಕ ಮಾಡಿರುವುದೇ ಕಾನೂನುಬಾಹಿರ. ಕೇಂದ್ರ ಸರ್ಕಾರದಹಲವು ಇಲಾಖೆಗಳ ಅಧಿಕಾರಶಾಹಿಯೊಂದಿಗೆ ಈತನ ಸಂಪರ್ಕವಿದೆ. ಹೈದರಬಾದ್‌ ಮೂಲದ ವ್ಯಕ್ತಿಗೆ ರಾಜ್ಯ ಸರ್ಕಾರದ ಕಂಪನಿಯ ಸಮಾಲೋಚಕನಾಗಿ ಹೇಗೆ ನೇಮಕಾವಾಗಿದ್ದಾರೆಮ ಹೈದರಬಾದ್‌ನಿಂದ ಎಂಎಸ್‌ಐಎಲ್‌ ಗೆ ಉತ್ಪನ್ನಗಳನ್ನೇಕೆ ಸರಬರಾಜು ಮಾಡಬೇಕು, ಇದರ ಗುಣಮಟ್ಟವನ್ನು ಪರೀಕ್ಷಿಸುವವಾರು,  ಇದರ ಬಗ್ಗೆ ತನಿಖೆ ಆಗಬೇಕು,’ ಎಂದು ಜೀಕೆ ಅಸೋಸಿಯೇಟ್ಸ್‌ ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

100 ಕೋಟಿ ರು.  ಅಧಿಕ ವೆಚ್ಚದಲ್ಲಿ ಸೋಲಾರ್‌ ಉಪಕರಣದಲ್ಲಿ ಖರೀದಿಯಲ್ಲಿಯೂ  ಅವ್ಯವಹಾರ ನಡೆದಿದೆ. 4 ಜಿ ವಿನಾಯಿತಿ ದುರ್ಬಳಕೆಯಾಗಿದೆಯಲ್ಲದೇ ಅಕ್ರಮ ಚಟುವಟಿಕೆಗಳಿಗೆ ಇದು ದಾರಿ ಮಾಡಿಕೊಟ್ಟಿದೆ. ಖರೀದಿ ಮತ್ತು ಮಾರಾಟದಲ್ಲಿಯೂ ಅವ್ಯವಹಾರ ನಡೆದಿದೆ.  ಎಂಎಸ್‌ಐಎಲ್‌ ಮೂಲ ಉತ್ಪಾದಕರಲ್ಲದಿದ್ದರೂ 4 ಜಿ ವಿನಾಯಿತಿ ನೀಡಿರುವುದು ಸರಿಯಲ್ಲ.   4 ಜಿ ವಿನಾಯಿತಿ ಸೌಲಭ್ಯವನ್ನು ತಕ್ಷಣವೇ ಹಿಂಪಡೆದುಕೊಳ್ಳಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.

 

ಲಿಕ್ಕರ್‌ ವಿಭಾಗದಲ್ಲಿಯೂ ನೇಮಕಾತಿ ಅಕ್ರಮ ನಡೆದಿದೆ.  ಎಂಎಸ್‌ಐಎಲ್‌ನಲ್ಲಿ ನೇಮಕವಾಗಿರುವ ಸಮಾಲೋಚಕರ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ. ಒಬ್ಬೊಬ್ಬ ಸಮಾಲೋಚಕರಿಗೆ  ಎರಡೆರಡು ಉದ್ಯೋಗ ನೀಡಲಾಗಿದೆ. ಆದರೆ  ವಿದ್ಯಾರ್ಹತೆ ಇಲ್ಲ,  ಅನುಭವವೂ ಇಲ್ಲ. ಪ್ರತಿ ವರ್ಷಕ್ಕೆ 5 ಲಕ್ಷಕ್ಕೂ ಹೆಚ್ಚು ಪಾವತಿಯಾಗುತ್ತಿದೆ . ಟೆಂಡರ್‌ ಇಲ್ಲದೆಯೇ ನೇಮಕವಾಗಿದೆ ಎಂಬುದು ದೂರಿನಿಂದ ಗೊತ್ತಾಗಿದೆ.

 

‘ಎಂಎಸ್‌ಐಎಲ್‌ನಲ್ಲಿ   ಕಳೆದ 10 ವರ್ಷಗಳ ವ್ಯವಹಾರಗಳನ್ನು ಫೋರೆನ್ಸಿಕ್‌ ಲೆಕ್ಕ ಪರಿಶೋಧನೆ ನಡೆಸಬೇಕು. ಮಂಡಳಿಯ  ಹಿಂದಿನ ಮಾರುಕಟ್ಟೆ ವ್ಯವಸ್ಥಾಪಕ ಎ ಎಂ ಚಂದ್ರಪ್ಪ, ಶ್ರಿ ಮಹಾಬಲೇಶ್ವರ ಎಂಟರ್‌ಪ್ರೈಸೆಸ್‌ ಮಾಲೀಕ, ರಮಾಕಾಂತ ಹೆಬ್ಬಳ್ಳಿ ಅವರನ್ನು ಮುಖ್ಯ ವ್ಯವಸ್ಥಾಪಕರನ್ನಾಗಿ ಮುಂಬಡ್ತಿ ನೀಡಿರುವುದರ ಕುರಿತು,  19 ಮಂದಿ ಸಮಾಲೋಚಕರಿಗೆ ಒಂದು ಲಕ್ಷದವರೆಗಗೆ ಸಂಭಾವನೆ ನೀಡುತ್ತಿರುವುದು ಕುರಿತು ತನಿಖೆ ನಡೆಸಬೇಕು ಎಂದು ಜೀಕೆ ಅಸೋಸಿಯೇಟ್ಸ್‌ ದಾಖಲೆ ಸಹಿತ ದೂರು ನೀಡಿರುವುದು ತಿಳಿದು ಬಂದಿದೆ.

 

ಎಂಎಸ್‌ಐಎಲ್‌ನಲ್ಲಿನ ಪ್ರವಾಸೋದ್ಯಮ ಚಟುವಟಿಕೆಗಳ ಭಾಗವಾಗಿರುವ ಟಿಕೆಟ್‌ ಪ್ಯಾಕೇಜ್‌, ಮಾರಾಟ ಮತ್ತ ಫೋರೆಕ್ಸ್‌ ಇತ್ಯಾದಿಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳ ಶಾಖೆಗಳಲ್ಲಿ ನಿರ್ವಹಿಸಲು ಕರೆದಿದ್ದ ಟೆಂಡರ್‍‌ನಲ್ಲಿ ಅಕ್ರಮಗಳು ನಡೆದಿದ್ದವು ಎಂದು ಹಲವು ದೂರುಗಳು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಸಲ್ಲಿಕೆಯಾಗಿದ್ದವು.

 

ಈ ದೂರನ್ನಾಧರಿಸಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಪಿ ಸತ್ಯಭಾಮ ಅವರ ನೇತೃತ್ವದಲ್ಲಿ ನಡೆದಿದ್ದ ಪ್ರಾಥಮಿಕ ತನಿಖೆಯು ಅಕ್ರಮಗಳು ನಡೆದಿವೆ ಎಂದು ಸಾಬೀತುಪಡಿಸಿತ್ತು. ಇದರ ಮುಂದುವರೆದ ತನಿಖೆಯನ್ನು ಇದೀಗ ರಾಜ್ಯ ಸರ್ಕಾರವು ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ನಡೆಸಲು 2023ರ ಸೆ.21ರಂದು ಆದೇಶ ಹೊರಡಿಸಿತ್ತ.

 

ಪ್ರಾಥಮಿಕ ತನಿಖಾ ವರದಿ ಆಧರಿಸಿ ಮುಂದಿನ ತನಿಖೆ ನಡೆಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಿ ವಿ ಪ್ರಕಾಶ್‌ ಎಂಬುವರನ್ನು ನೇಮಿಸಿತ್ತು.

 

ಮೈಸೂರ್‍‌ ಸೇಲ್ಸ್‌ ಇಂಟರ್‍‌ ನ್ಯಾಷನಲ್‌ ಲಿಮಿಟೆಡ್‌ನಿಂದ ನಡೆಯುತ್ತಿರುವ ಪ್ರವಾಸೋದ್ಯಮ ಚಟುವಟಿಕೆಗಳಾದ ಟಿಕೆಟಿಂಗ್‌ ಪ್ಯಾಕೇಜ್‌, ಮಾರಾಟ ಮತ್ತು ಫೋರೆಕ್ಸ್‌ ಇತ್ಯಾದಿ ಚಟುವಟಿಕೆಗಳನ್ನು ನಡೆಸಲು ನಿಶಿ ಫೋರೆಕ್ಸ್‌ ಅಂಡ್‌ ಲೆಸ್ಯೂರ್‍‌ ಪ್ರೈವೈಟ್‌ ಲಿಮಿಟೆಡ್‌ಗೆ ವಹಿಸಲಾಗಿತ್ತು. ಈ ಕಂಪನಿಯು 2022ರ ಮೇ 21ರಿಂದ ಜಾರಿಗೆ ಬರುವಂತೆ ರಾಜ್ಯದ ಹಾಗೂ ರಾಜ್ಯದ ಹೊರಗಿನ ಶಾಖೆಗಳಲ್ಲಿ ಕಾರ್ಯನಿರ್ವಹಿಸಬೇಕಿತ್ತು.

ಎಂಎಸ್‌ಐಎಲ್‌ ಟೆಂಡರ್‍‌ನಲ್ಲಿ ಅಕ್ರಮ; ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆಗೆ ಆದೇಶ

ಈ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ನಡೆದಿದ್ದ ಟೆಂಡರ್‍‌ನಲ್ಲಿ ಅಕ್ರಮಗಳು ನಡೆದಿವೆ ಎಂದು ಮಂಡಳಿಯ ನಿರ್ದೇಶಕರಾದ ವೆಂಕಟೇಶ್‌ ನಾಯ್ಡು ಮತ್ತು ರವೀಂದ್ರ ಹಾಗೂ ಮಾಜಿ ನಿರ್ದೇಶಕರಾದ ಎಸ್‌ ಆರ್‍‌ ಸನತ್‌ಕುಮಾರ್‍‌ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರು.

 

ಈ ಅಕ್ರಮದ ಕುರಿತು ಸತ್ಯಾಸತ್ಯತೆ ತಿಳಿಯಲು 2023ರ ಮಾರ್ಚ್‌ 24 ಮತ್ತು ಜೂನ್‌ 7ರಂದು ತನಿಖೆ ನಡೆಸಲು ಆದೇಶ ಹೊರಡಿಸಲಾಗಿತ್ತು. ಅದರಂತೆ ಪ್ರಾಥಮಿಕ ತನಿಖೆ ನಡೆಸಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಪಿ ಸತ್ಯಭಾಮ ಅವರು ತನಿಖೆ ನಡೆಸಿ 2023ರ ಜೂನ್‌ 28ರಂದು ತನಿಖಾ ವರದಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

 

the fil favicon

SUPPORT THE FILE

Latest News

Related Posts