ಬರಪೀಡಿತ ಪಟ್ಟಿಗೆ ಹೊಸದಾಗಿ 7 ತಾಲೂಕು ಸೇರ್ಪಡೆ; ರಾಜ್ಯದಲ್ಲೀಗ 223 ತಾಲೂಕುಗಳಲ್ಲಿ ಬರ

ಬೆಂಗಳೂರು: ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ವರದಿ ಅನ್ವಯ ರಾಜ್ಯ ಸರ್ಕಾರವು ಇದೀಗ ಹೊಸದಾಗಿ 07 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ.

 

ಬೀದರ್‍‌, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಟ್ಟಾರೆ 07 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರವು 2023ರ ನವೆಂಬರ್‍‌ 4ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳ ಅನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ ವರದಿ ಅನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೊಸದಾಗಿ 07 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿರುವುದು ಆದೇಶದಿಂದ ತಿಳಿದು ಬಂದಿದೆ.

 

ಬೀದರ್‍‌ ಜಿಲ್ಲೆಯ ಔರಾದ್‌, ಬೀದರ್‍‌, ಚಿಟಗುಪ್ಪಾ, ಹುಮ್ನಾಬಾದ್‌, ಕಮಲ ನಗರ ತಾಲೂಕು, ರಾಯಚೂರು ಜಿಲ್ಲೆಯ ಸಿಂಧನೂರು, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕುಗಳು ಇದೀಗ ಹೊಸದಾಗಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿದೆ.

 

ಇದೀಗ 07 ತಾಲೂಕುಗಳ ಸೇರ್ಪಡೆಯಿಂದಾಗಿ ರಾಜ್ಯದಲ್ಲಿ 223 ತಾಲೂಕುಗಳು ಬರ ಪೀಡಿತವಾಗಿವೆ.

 

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಹಾಗೂ ಸಚಿವ ಸಂಪುಟದ ಉಪ ಸಮಿತಿ ಸಭೆಯ ನಿರ್ಣಯ ಮತ್ತು ಸಚಿವ ಸಂಪುಟದ ನಿರ್ಣಯದಂತೆ 2023ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಿತ್ತು.

 

ಇದೀಗ ಮಳೆ ಕೊರತೆ (ಶೇ.60ಕ್ಕಿಂತ ಹೆಚ್ಚು) ಅಥವಾ ಸತತ ಮೂರು ವಾರಗಳ ಅಥವಾ ಅದಕ್ಕಿಂತ ಹೆಚ್ಚು ಶುಷ್ಕ ವಾತಾವರಣ ಕಂಡು ಬಂದಿರುವ, ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ, ತೇವಾಂಶ ಕೊರತೆ, ನದಿಗಳಲ್ಲಿನ ಹರಿವು, ಜಲಾಶಯಗಳ ನೀರಿನ ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಸೂಚ್ಯಂಕಗಳಲ್ಲಿನ ತೀವ್ರತೆ ಆಧರಿಸಿ ಹೆಚ್ಚುವರಿಯಾಗಿ 07 ತಾಲೂಕುಗಳನ್ನು ಬರ ಪೀಡಿತ ಎಂದು ನಿರ್ಣಯಿಸಿರುವುದು ಆದೇಶದಿಂದ ಗೊತ್ತಾಗಿದೆ.

 

 

 

ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ವರದಿ ಅನ್ವಯ ಹೆಚ್ಚುವರಿ 22 ತಾಲೂಕುಗಳನ್ನು ಬರ ಪೀಡಿತ ಎಂದು ಈ ಮೊದಲು ಘೋಷಿಸಿತ್ತು. ಈ ಪೈಕಿ 11 ತಾಲೂಕುಗಳು ತೀವ್ರ ಬರಪೀಡಿತ ಎಂದು ಗುರುತಿಸಲಾಗಿತ್ತು.

 

ಮೊದಲ ಹಂತದಲ್ಲಿ ರಾಜ್ಯದ 236 ತಾಲೂಕುಗಳ ಪೈಕಿ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿತ್ತು. ಆದರೆ, ಈ ವರ್ಷ ಇತಿಹಾಸ ಕಾಣದ ತೀವ್ರ ಬರ ಎದುರಾಗಿದ್ದು, ಬಹುತೇಕ ಎಲ್ಲ ಜಿಲ್ಲೆಗಳಿಗೂ ಮಳೆ ಕೊರತೆ ಎದುರಾಗಿತ್ತು.

 

ಬರ ಘೋಷಣೆಯಿಂದ ಹೊರಗುಳಿದ 34 ತಾಲೂಕುಗಳ ಪೈಕಿ 22 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ನಡೆಸಲು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಲಾಗಿತ್ತು.

 

ಸೆಪ್ಟೆಂಬರ್ ಅಂತ್ಯದವರೆಗಿನ ಬೆಳೆ ಸಮೀಕ್ಷೆಯನ್ನಷ್ಟೇ ಪರಿಗಣಿಸುವುದಾದರೆ 22 ತಾಲೂಕುಗಳ ಪೈಕಿ 17 ತಾಲೂಕುಗಳನ್ನು ‘ತೀವ್ರ ಬರಪೀಡಿತ ತಾಲೂಕು ಎಂದು ಮತ್ತು ಉಳಿದ 5 ತಾಲೂಕನ್ನು ಸಾಧಾರಣ ಬರಪೀಡಿತ’ ಎಂದು ಗುರುತಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

 

ಈ ಮೂಲಕ ರಾಜ್ಯದಲ್ಲಿ ಒಟ್ಟು 236 ತಾಲೂಕುಗಳ ಪೈಕಿ 189 ತೀವ್ರ ಬರಪೀಡಿತ ಹಾಗೂ 27 ಸಾಧಾರಣಾ ಬರಪೀಡಿತ ತಾಲೂಕುಗಳು ಒಳಗೊಂಡಂತೆ ಒಟ್ಟು 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಂತಾಗಿತ್ತು. ಮೊದಲ ಹಂತದಲ್ಲೆ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು, ಕೇಂದ್ರ ಸರಕಾರದ ಪರಿಹಾರ ಕೋರಿ ಕಳೆದ ಸೆ.22 ರಂದು ಆನ್‍ಲೈನ್ ಮೂಲಕ ಕೇಂದ್ರಕ್ಕೆ ಮನವಿಯನ್ನೂ ಸಲ್ಲಿಸಲಾಗಿತ್ತು.

 

ಬರ ಪರಿಸ್ಥಿತಿಯ ಅಧ್ಯಯನ ನಡೆಸಿರುವ ಕೇಂದ್ರದ ತಂಡವು ರಾಜ್ಯದ ಮನವಿ ಪತ್ರ ವಾಸ್ತವದಿಂದಲೇ ಕೂಡಿದೆ ಎಂದು ಅಭಿಪ್ರಾಯ ಪಟ್ಟಿತ್ತು. ಅಲ್ಲದೆ, ಎರಡನೇ ಸುತ್ತಿನಲ್ಲಿ ಮತ್ತಷ್ಟು ತಾಲೂಕುಗಳನ್ನೂ ಬರ ಪೀಡಿತ ಪಟ್ಟಿಗೆ ಸೇರಿಸಿ ಮತ್ತೊಂದು ಮನವಿ ಪತ್ರ ಸಲ್ಲಿಸುವ ಹಕ್ಕು ರಾಜ್ಯಕ್ಕಿದೆ ಎಂದು ತಿಳಿದು ಬಂದಿದೆ.

 

ಇದರನ್ವಯ 22 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಬೆಳೆ ಸಮೀಕ್ಷೆ ದೃಢೀಕರಣ ನಡೆಸಲಾಗಿದ್ದು, ಮನವಿ ಪತ್ರ ಸಿದ್ದಪಡಿಸುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಹೆಚ್ಚುವರಿ 300 ರಿಂದ 350 ಕೋಟಿ ರೂ.ಬರ ಪರಿಹಾರ ಕೋರಲು ಅವಕಾಶವೂ ಇದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts