ಪ್ರತಿಮಾ ಹತ್ಯೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಅಕ್ರಮ ಸ್ಫೋಟಕ ಬಳಕೆ, ಕಟ್ಟಡ ಕಲ್ಲುಸಾಗಾಣಿಕೆ ತಪಾಸಣೆ ವರದಿ

ಬೆಂಗಳೂರು; ಗಣಿ-ಭೂ ವಿಜ್ಞಾನ ಇಲಾಖೆಯ ಬೆಂಗಳೂರು ಗ್ರಾಮಾಂತರ ಉಪ ನಿರ್ದೇಶಕಿ ಪ್ರತಿಮಾ ಅವರು ಹತ್ಯೆಗೀಡಾಗುವ ಒಂದು ತಿಂಗಳ ಮುನ್ನವೇ ಹುಣಸಮಾರನಹಳ್ಳಿ, ಸೊಣ್ಣಪ್ಪನಹಳ್ಳಿ, ಬೆಟ್ಟ ಹಲಸೂರು ಗ್ರಾಮದಲ್ಲಿ ಪರವಾನಿಗೆ ಇಲ್ಲದೆಯೇ ಕಟ್ಟಡ ಕಲ್ಲನ್ನು ಸಾಗಿಸಿದ್ದವರ ವಿರುದ್ಧ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.

 

ಇದೇ ವರದಿ ಆಧರಿಸಿ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಸಹಿತ ನಾಲ್ವರ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚಿಕ್ಕಜಾಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮುನಿರತ್ನ ಅವರನ್ನು ನಾಲ್ಕನೇ ಆರೋಪಿ ಎಂದು ಗುರುತಿಸಲಾಗಿತ್ತು.

 

ಪ್ರತಿಮಾ ಅವರ ಹತ್ಯೆಯು ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಸರ್ಕಾರಕ್ಕೆ 25 ಲಕ್ಷ ರು. ನಷ್ಟವಾಗಿದ್ದರ ಕುರಿತಾಗಿ ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಮತ್ತು ಎಫ್‌ಐಆರ್‌ ಇದೀಗ ಮುನ್ನೆಲೆಗೆ ಬಂದಿದೆ.

 

ಪ್ರತಿಮಾ ಅವರು ಜಿಲ್ಲಾಧಿಕಾರಿಗೆ 2023ರ ಜುಲೈ 12ರಂದು ಸಲ್ಲಿಸಿದ್ದ ವರದಿಯನ್ನು ಕೆಪಿಸಿಸಿ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿಯ ವಕ್ತಾರರಾದ ಸೂರ್ಯ ಮುಕುಂದರಾಜ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಸರ್ಕಾರಿ ಜಮೀನು ಸೇರಿದಂತೆ ಖಾಸಗಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಮಾಡಿದ್ದು, ಜೊತೆಗೆ ಹುಣಸಮಾರನಹಳ್ಳಿಯ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಜು.10ರಂದು ಜಿಲೆಟಿನ್ ಸ್ಫೋಟ ಮಾಡಿದ ಆರೋಪ ಕೇಳಿಬಂದಿತ್ತು. ಇದರ ವಿರುದ್ಧ ಹುಣಸಮಾರನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಧರಣಿ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ್ದ ತಹಶೀಲ್ದಾರ್ ದೂರು ದಾಖಲು ಮಾಡಿದ್ದರು.

 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಜಾಲ ಹೋಬಳಿಯ ಹುಣಸಮಾರನಹಳ್ಳಿ ಗ್ರಾಮದ ಸರ್ವೇ ನಂಬರ್‌ 177, 178, 179, ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ 34/1, 34/2, 34/3, 17/1, 17/8, 17/9 ಮತ್ತು ಬೆಟ್ಟಹಲಸೂರು ಗ್ರಾಮದ ಸರ್ವೆ ನಂಬರ್‌ 197/6ರ ಜಮೀನುಗಳ ತಪಾಸಣೆ ನಡೆಸಿ 2023ರ ಜುಲೈ 12ರಂದು ವರದಿ ಸಲ್ಲಿಸಿದ್ದರು.

 

ಹುಣಸಮಾರನಹಳ್ಳಿ ಗ್ರಾಮದಲ್ಲಿ ಜಿಲೆಟಿನ್‌ ಬಳಸಿ ಬಂಡೆ ಸ್ಪೋಟಿಸಿರುವ ಸಂಬಂಧ ಜೈ ಭೀಮ್‌ ಸೇನೆ ಸಂಘದವರು ಹಾಗೂ ಸ್ಥಳೀಯ ಜನರು 2023ರ ಜುಲೈ 10ರಂದು ಪ್ರತಿಭಟನೆ ನಡೆಸಿದ್ದರು. ಈ ಸ್ಥಳಕ್ಕೆ ಪ್ರತಿಮಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

 

ಪ್ರತಿಮಾ ಅವರು ನೀಡಿದ್ದ ವರದಿಯಲ್ಲೇನಿದೆ?

 

ಹುಣಸಮಾರನಹಳ್ಳಿ ಗ್ರಾಮದ ಸರ್ವೆ ನಂಬರ್‌ 177, 178, 179, ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ 34, 17 ರ ವಿಸ್ತೀರ್ಣದಲ್ಲಿ ಅಲ್ಲಲ್ಲಿ ಸುಮಾರು 4 ಕಡೆ ಮಣ್ಣನ್ನು ತೆಗೆದು ಕಲ್ಲು ಬಂಡೆಗಳನ್ನು ಒಡೆದಿದ್ದು, ಸದರಿ 4 ಪ್ರದೇಶಗಳಲ್ಲಿ ಸುಮಾರು 51,460 ಮೆ.ಟನ್‌ ಪ್ರಮಾಣದ ಭೂ ಅಗೆತ ಮಾಡಲಾಗಿತ್ತು.

 

ಸ್ಥಳದಲ್ಲಿ ಕಂಡು ಬಂದ ವೆದರಡ್‌ ರಾಕ್‌, ಅನುಪಯುಕ್ತ ಕಲ್ಲುಗಳು, ಮಣ್ಣುಗಳಿಂದ ಶೇ. 40ರಷ್ಟು ಕಳೆದು ಉಳಿದ ಅಂದಾಜು ಶೇ.60 ರ 30876 ಮೆ.ಟನ್‌ ಪ್ರಮಾಣದ ಕಟ್ಟಡ ಕಲ್ಲಿನ ಪೈಕಿ ಸ್ಥಳದಲ್ಲಿ ಅಲ್ಲಲ್ಲಿ ಸುಮಾರು 5,000 ಮೆಟ್ರಿಕ್‌ ಟನ್‌ ಕಟ್ಟಡ ಕಲ್ಲಿನ ದಾಸ್ತಾನು ಇತ್ತು.

 

ಉಳಿಕೆ 25,876 ಮೆ.ಟನ್‌ ಕಟ್ಟಡ ಕಲ್ಲನ್ನು ಸಾಗಾಣಿಕೆ ಮಾಡಿರುವುದು ಕಂಡು ಬಂದಿದ್ದು ಸದರಿ ಪ್ರಮಾಣಕ್ಕೆ ರಾಜಧನ ಮತ್ತು ಹೆಚ್ಚುವರಿ ಶುಲ್ಕ 25,35,848 ರು.ಗಳು ಸರ್ಕಾರಕ್ಕೆ ನಷ್ಟವಾಗಿರುತ್ತದೆ ಎಂದು ಕಚೇರಿಯ ತಾಂತ್ರಿಕ ಅಧಿಕಾರಿಯವರು ಅಂದಾಜಿಸಿದ್ದನ್ನು ವರದಿಯಲ್ಲಿ ಪ್ರಸ್ತಾವಿಸಿದ್ದರು.

 

‘ಜಾಲ ಹೋಬಳಿಯ ಬೆಟ್ಟ ಹಲಸೂರು ಗ್ರಾಮದ ಸರ್ವೆ ನಂಬರ್‌ 197/6ರಲ್ಲಿ 1.04 ಎಕರೆ, ಹುಣಸಮಾರನಹಳ್ಳಿಯ ಸರ್ವೆ ನಂಬರ್‌ 178/1, 178/2, 178/3, 177/3 ರಲ್ಲಿ 3.39 ಎಕರೆ ಹಾಗೂ ಸೊಣ್ಣಪ್ಪನಹಳ್ಳಿ ಗ್ರಾಮದ ಸರ್ವೆ ನಂಬರ್‌ 34/1, 34/2, ಮತ್ತು 17/8ರಲ್ಲಿ 4.36 ಎಕರೆ ವಿಸ್ತೀರ್ಣದ ಜಮೀನಿನ ವಾಣಿಜ್ಯ ಕಟ್ಟಡ ನಿರ್ಮಾಣದ ಕಾಮಗಾರಿಯಲ್ಲಿ ಅಡ್ಡಲಾಗಿ  ಬರುವ ಕಲ್ಲುಗಳನ್ನು ನುರಿತ ತಂತ್ರಜ್ಞಾನದಿಂದ ಲಘು ಸ್ಫೋಟಕಗಳನ್ನು ಬಳಸಿ ಬಂಡೆಗಳನ್ನು ತೆಗೆಯಲು ಅನುಮತಿ ನೀಡಬೇಕು,’ ಎಂದು 2022ರ ಅಕ್ಟೋಬರ್‌ 13ರಂದು ಜಿಲ್ಲಾಧಿಕಾರಿಗಳಿಗೆ ಮುನಿರತ್ನ ಅವರು ಅರ್ಜಿ ಸಲ್ಲಿಸಿದ್ದರು ಎಂಬ ಅಂಶವು ವರದಿಯಿಂದ ಗೊತ್ತಾಗಿದೆ.

 

ಈ ಸಂಬಂಧ 2022ರ ಅಕ್ಟೋಬರ್‌ 18ರಂದು ತಾಂತ್ರಿಕ ಅಧಿಕಾರಿಗಳು ಈ ಪ್ರದೇಶವನ್ನು ತನಿಖೆ ನಡೆಸಿ ವರದಿ ಸಲ್ಲಿಸಿದ್ದರು.

 

ಮುನಿರತ್ನ ಅವರ ಪಟ್ಟಾ ಜಮೀನಿನಲ್ಲಿ ಕಟ್ಟಡ ಕಾಮಗಾರಿ ಬ್ಲಾಸ್ಟಿಂಗ್‌ ಮುಖಾಂತರ ಸದರಿ ಗಟ್ಟಿ ಶಿಲೆಕಲ್ಲುಗಳನ್ನು ತೆರವುಗೊಳಿಸಲು ಸ್ಫೋಟಕ ಬಳಕೆಗೆ ಸಂಬಂಧಿಸಿದಂತೆ ಸ್ಫೋಟಕಗಳ ಕಾಯ್ದೆ 1884 ಮತ್ತು ನಿಯಮ 2008ರ ನಿಯಮಾನಸುಆರ ಆಧುನಿಕ ತಂತ್ರಜ್ಞಾನ ಲಘು ಸ್ಫೋಟಕಗಳನ್ನು ಬಳಸಲು ಸೂಕ್ತ ಷರತ್ತು ಹಾಗೂ ನಿಬಂಧನೆಗಳನ್ನು ವಿಧಿಸಿ ಅನುಮತಿ ನೀಡಬಹುದು ಎಂದು 2022ರ ನವೆಂಬರ್‌ 9ರಂದು ವರದಿಯನ್ನು ಸಲ್ಲಿಸಿದ್ದರು.

 

ಇದಾದ ನಂತರ 2023ರ ಜುಲೈ 10ರಂದು ಇದೇ ಪ್ರದೇಶದ ಮಾಲೀಕರು ಕಲ್ಲುಗಳನ್ನು ತೆರವುಗೊಳಿಸಲು ಅನುಮತಿ ಕೋರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪೂರ್ವಾನುಮತಿ ಇಲ್ಲದೆಯೆ ಸದರಿ ಪ್ರದೇಶದಲ್ಲಿದ್ದ ಕಟ್ಟಡ ಕಲ್ಲನ್ನು ತೆರವುಗೊಳಿಸಿದ್ದರು. ಈ ಪ್ರದೇಶದ ಮಾಲೀಕರು  ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಸ್ಫೋಟಕ ಬಳಸಿ ಕಲ್ಲು ಬಂಡೆಗಳನ್ನು ಹೊಡೆದು ತೆರವುಗೊಳಿಸಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿತ್ತು.

 

ಅಲ್ಲದೇ ಈ ಪ್ರದೇಶದ ಮಾಲೀಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಉಪ ಖನಿಜ ತೆರವುಗೊಳಿಸಿದ್ದರು ಎಂಬುದು ಸ್ಥಳ ತಪಾಸಣೆ ವರದಿಯನ್ನು ಸಲ್ಲಿಸಿದ್ದನ್ನು ಸ್ಮರಿಸಬಹುದು.

 

‘ಮುನಿರತ್ನ ವಿರುದ್ಧ ಅಕ್ರಮ ಸ್ಪೋಟಕ ಬಳಕೆ ಮಾಡಿ ಕಲ್ಲು ಶಿಲೆಗಳನ್ನು ಪುಡಿ ಮಾಡಿದ್ದ ಸಂಬಂಧ ಹಾಗೂ ಸರ್ಕಾರಕ್ಕೆ 25 ಲಕ್ಷ ರಾಯಧನ ನಷ್ಟ ಮಾಡಿದ್ದ ಕಾರಣಕ್ಕೆ ಹುಣಸಮಾರನಹಳ್ಳಿ ಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಬಹುಶಃ ಇವರ ಸಹೋದರನ ಹಳೆ ನಂಟು ಈ ಕೊಲೆ ಪ್ರಕರಣದಲ್ಲಿ ಏನಾದರೂ ಹಸ್ತಕ್ಷೇಪ ಮಾಡಿರಬಹುದು ಪೊಲೀಸರು ತನಿಖೆ ನಡೆಸಬಹುದು ಎಂದು ಭಾವಿಸುತ್ತೇನೆ,’ ಎಂದು ಸೂರ್ಯ ಮುಕುಂದರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

the fil favicon

SUPPORT THE FILE

Latest News

Related Posts