ವರ್ಗಾವಣೆ ಸಂಘರ್ಷ; ಸಚಿವರ ಪಟ್ಟಿ ಬದಿಗೊತ್ತಿದ ಸಿಎಂ ಸಚಿವಾಲಯ, ಹೊಸ ಪಟ್ಟಿ ಜಾರಿಗೊಳಿಸಲು ಸೂಚನೆ

ಬೆಂಗಳೂರು; ಕಾರ್ಮಿಕ ನಿರೀಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ಸಚಿವ ಸಂತೋಷ್‌ ಲಾಡ್‌ ನಡುವೆ ಸಂಘರ್ಷ ಉಂಟಾಗಿದೆ.

 

 

ಈ ಮೊದಲು ಸಚಿವ ಲಾಡ್‌ ಅವರಿಂದ ಅನುಮೋದಿತಗೊಂಡಿದ್ದ ಪಟ್ಟಿಗೆ ಮುಖ್ಯಮಂತ್ರಿಗಳ ಸಚಿವಾಲಯದ ಉನ್ನತ ಅಧಿಕಾರಿಗಳು ಕತ್ತರಿಯಾಡಿಸಿದ್ದರು. ಸಚಿವರು ಅನುಮೋದಿಸಿದ್ದ ಬಹುತೇಕ ಅಧಿಕಾರಿಗಳ ಹೆಸರು ಸಿಎಂ ಅನುಮೋದಿತ ಪಟ್ಟಿಯಲ್ಲಿ ಇರಲಿಲ್ಲ.

 

ಹೀಗಾಗಿ ಇದರಿಂದ ಕುಪಿತರಾಗಿದ್ದ ಸಚಿವ ಲಾಡ್‌, ‘ವರ್ಗಾವಣೆ ಪ್ರಸ್ತಾಪಿತ ಅಧಿಕಾರಿಗಳ ಸೇವಾ ವಿವರ ಹಾಗೂ ಹುದ್ದೆಗಳ ವಿವರಗಳೊಂದಿಗೆ ಮಂಡಿಸಬೇಕು,’ ಎಂದು  ಸಚಿವ ಸಂತೋಷ್‌ ಲಾಡ್‌ ಅವರು ಟಿಪ್ಪಣಿ ಹಾಕಿದ್ದರು. ಈ ಟಿಪ್ಪಣಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಈ ಟಿಪ್ಪಣಿ ನಡುವೆಯೇ ಸಿಎಂ ಅನುಮೋದಿಸಿರುವಂತೆಯೇ  ವರ್ಗಾವಣೆ ಮಾಡಬೇಕು ಎಂದು  ಮುಖ್ಯಮಂತ್ರಿಗಳ ಸಚಿವಾಲಯದ ಉನ್ನತ ಅಧಿಕಾರಿಗಳು ಹಿಡಿದಿದ್ದ  ಪಟ್ಟಿಗೆ ಕಾರ್ಮಿಕ ಇಲಾಖೆಯ ಉನ್ನತ ಅಧಿಕಾರಿಗಳು ಮಣಿದಿದ್ದಾರೆ. ಇದು ಸಚಿವ ಲಾಡ್‌ ಅವರನ್ನು ಮತ್ತಷ್ಟು ಸಿಟ್ಟಿಗೆಬ್ಬಿಸಲು ಕಾರಣವಾಗಿದೆ.

 

ಸಚಿವ ಸಂತೋಷ್‌ ಲಾಡ್‌ ಅವರು ಆಗಸ್ಟ್‌ 24ರಂದು ನೀಡಿದ್ದ ಶಿಫಾರಸ್ಸು ಪಟ್ಟಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ಕಸದ ಬುಟ್ಟಿಗೆ ಎಸೆದಿದ್ದರು.  ಸಚಿವರ ಶಿಫಾರಸ್ಸು ಪಟ್ಟಿ ಯಲ್ಲಿ 40 ಮಂದಿ ಅಧಿಕಾರಿಗಳನ್ನು ಕೈ ಬಿಡಲಾಗಿತ್ತು.  ಮುಖ್ಯಮಂತ್ರಿ ಸಚಿವಾಲಯದ ಅಧಿಕಾರಿಗಳು ಸಿದ್ಧಪಡಿಸಿದ್ದ  ಹೊಸ ಪಟ್ಟಿಯನ್ನೇ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ  ಅನುಮೋದಿಸಿದ್ದರು.

 

 

ಇದೀಗ ಇದೇ ಪಟ್ಟಿಯನ್ನು ಜಾರಿಗೊಳಿಸಬೇಕು ಎಂದು  ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹ್ಮದ್‌ ಮೊಹ್ಸೀನ್‌ ಅವರು ಕಾರ್ಮಿಕ ಇಲಾಖೆಯ ಆಯುಕ್ತರಿಗೆ 2023ರ ನವೆಂಬರ್‌ 2ರಂದು ರವಾನಿಸಿದ್ದಾರೆ. ಈ ಬೆಳವಣಿಗೆಯು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಲಾಡ್‌ ನಡುವೆ ಮುನಿಸಿಗೆ ದಾರಿಮಾಡಿಕೊಟ್ಟಂತಾಗಿದೆ.

 

 

ಕಾರ್ಮಿಕ ಇಲಾಖೆಯ ಗ್ರೂಪ್‌ ಬಿ ಮತ್ತು ಸಿ ವೃಂದದ ಅಧಿಕಾರಿ, ನೌಕರರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಲು ಸರ್ಕಾರವು ಅನುಮೋದನೆ ನೀಡಿದೆ ಎಂದು ಆಯುಕ್ತರಿಗೆ ಮೊಹ್ಸೀನ್‌ ಅವರು  ನಿರ್ದೇಶಿಸಿದ್ದಾರೆ.  ಈ ಪಟ್ಟಿಯು ಯಾವುದೇ ಕ್ಷಣದಲ್ಲಿ ಹೊರಬೀಳುವ ಸಾಧ್ಯತೆಗಳಿವೆ. ಈ ಪಟ್ಟಿಯಲ್ಲಿ 25 ಅಧಿಕಾರಿಗಳ ಹೆಸರಿದೆ. ನಿರ್ದೇಶನ ನೀಡಿರುವ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೇ ಸಚಿವ ಲಾಡ್‌ ಶಿಫಾರಸ್ಸಿನಂತೆ ಕಾರ್ಮಿಕ ಇಲಾಖೆ ಆಯುಕ್ತರು ಅಧಿಕಾರಿಗಳನ್ನು  ನಿಯುಕ್ತಿಗೊಳಿಸಿದ್ದ ಸ್ಥಳಗಳನ್ನೂ ಮುಖ್ಯಮಂತ್ರಿ ಸಚಿವಾಲಯದ ಉನ್ನತ ಅಧಿಕಾರಿಗಳು ಬದಲಾಯಿಸಿದ್ದಾರೆ.  ಹೊಸ ಸ್ಥಳವನ್ನು ತೋರಿಸಿರುವ ಹೊಸ ಪಟ್ಟಿಗೆ  ಸಿಎಂ ಅನುಮೋದಿಸಿರುವುದು  ಪಟ್ಟಿಯಿಂದ ತಿಳಿದು ಬಂದಿದೆ.

 

ಪ್ರಕರಣದ ವಿವರ

 

ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರು, ಹಿರಿಯ ಕಾರ್ಮಿಕ ನಿರೀಕ್ಷಕರು ಸೇರಿ ಒಟ್ಟು 60 ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಲು 2023ರ ಆಗಸ್ಟ್‌ 24ರಂದು ಶಿಫಾರಸ್ಸು ಪಟ್ಟಿಯನ್ನು ಇಲಾಖೆಯ ಆಯುಕ್ತರಿಗೆ ರವಾನಿಸಿದ್ದರು. ಅದರಂತೆ ಆಯುಕ್ತರು 2023ರ ಆಗಸ್ಟ್‌ 25ರಂದು ವರ್ಗಾವಣೆ ಆದೇಶ ಹೊರಡಿಸಿದ್ದರು. ಒಂದೇ ದಿನದಲ್ಲಿ ಈ ಮೂರು ವೃಂದದ ಅಧಿಕಾರಿಗಳ ವರ್ಗಾವಣೆ ಆದೇಶಗಳು ಹೊರಬಿದ್ದಿದ್ದವು. ಅಲ್ಲದೇ ಈ ಆದೇಶಗಳಿಗೆ ಯಾವುದೇ ಅನುಮೋದನೆ ದೊರೆತಿರಲಿಲ್ಲ.

 

ಹೀಗಾಗಿ ಈ ಆದೇಶಗಳು ಹೊರಬಿದ್ದ ಕೇವಲ ಐದೇ ಐದು ದಿನದ ಅಂತರದಲ್ಲಿ ಅಂದರೆ ಆಗಸ್ಟ್‌ 31ರಂದು ಈ ಎಲ್ಲಾ ವರ್ಗಾವಣೆ ಆದೇಶಗಳನ್ನು ಆಯುಕ್ತರು ಹಿಂಪಡೆದಿದ್ದರು.

 

ಹಿಂಪಡೆದಿದ್ದ ಆದೇಶದಲ್ಲೇನಿತ್ತು?

 

‘ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರುಗಳ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ವರ್ಗಾವಣೆಗೊಳಿಸಿ ಸ್ಥಳನಿಯುಕ್ತಿಗೊಳಿಸಿ ಆದೇಶಿಸಿರಲಾಗಿರುತ್ತದೆ.

 

ಮುಂದುವರೆದು ಸದರಿ ವರ್ಗಾವಣೆಗೆ ಸಂಬಂಧಿಸಿದಂತೆ ಅನುಮೋದನೆ ಪಡೆದು ಕಾರ್ಯಗತಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಉಲ್ಲೇಖಿತ 2ರ ದಿನಾಂಕದಂತೆ ( ಉಲ್ಲೇಖ 2; ಕಾರ್ಮಿಕ ಆಯುಕ್ತರ ಅಧಿಕೃತ ಜ್ಞಾಪನ ಪತ್ರ ದಿನಾಂಕ 25-08-203) ಹೊರಡಿಸಲಾಗಿರುವ ಕಾರ್ಮಿಕ ಅಧಿಕಾರಿಗಳು ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು ದ್ವಿತೀಯ ದರ್ಜೆ ಸಹಾಯಕರುಗಳ ಹುದ್ದೆಗಳಿಗೆ ಸಂಬಂಧಿಸಿದ ವರ್ಗಾವಣೆ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದ್ದು, ಸದರಿ ಅಧಿಕಾರಿ, ನಿರೀಕ್ಷಕರು, ಸಿಬ್ಬಂದಿಗಳು ಈ ಹಿಂದೆ ನಿರ್ವಹಿಸುತ್ತಿದ್ದ ಹುದ್ದೆಗಳಲ್ಲಿಯೇ ಮುಂದುವರೆಯಬೇಕು ಎಂದು ಸೂಚಿಸಿದೆ ಎಂದು ಆಯುಕ್ತರು 2023ರ ಆಗಸ್ಟ್‌ 31ರಂದು ಕಚೇರಿ ಆದೇಶ ಹೊರಡಿಸಿದ್ದರು.

 

ಮತ್ತೊಂದು ವಿಶೇಷವೆಂದರೆ ಕಾರ್ಮಿಕ ಆಯುಕ್ತರು ಹೊರಡಿಸಿದ್ದ ಕಚೇರಿ ಆದೇಶದ ದಿನದಂದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಜಿ ಡಿ ಮಧುಚಂದ್ರ ತೇಜಸ್ವಿ ಅವರು ಸರ್ಕಾರಿ ನೌಕರರ ವರ್ಗಾವಣೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರುಗಳಿಗೆ ಸುತ್ತೋಲೆ ಹೊರಡಿಸಿದ್ದರು.

 

ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿರುವುದರಿಂದ ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆಗಳನ್ನ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಮಾಡುವುದು ಅತ್ಯಗತ್ಯವಾಗಿದ್ದಲ್ಲಿ ಮುಖ್ಯಮಂತ್ರಿಯವರ ಪೂರ್ವಾನುಮೋದನೆಯನ್ನು ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಿಲಾಗಿತ್ತು.

 

ಒಂದು ವೇಳೆ ಪೂರ್ವಾನುಮೋದನೆಯನ್ನು ಪಡೆಯದೇ ಯಾವುದೇ ವರ್ಗಾವಣೆಗಳನ್ನು ಮಾಡಿದಲ್ಲಿ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರನ್ನು ಜವಾಬ್ದಾರರನ್ನಾಗಿಸಲಾಗುವುದು ಮತ್ತು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಲಾಗಿತ್ತು.

 

ವರ್ಗಾವಣೆ ಪಟ್ಟಿಗೆ ಕತ್ತರಿ; ಲಾಡ್‌ ಶಿಫಾರಸ್ಸಿನ ಪೈಕಿ 40 ಮಂದಿ ಕೈಬಿಟ್ಟು ಹೊಸಪಟ್ಟಿ ರಚಿಸಿದ ಸಿಎಂ ಸಚಿವಾಲಯ

 

ಕಾರ್ಮಿಕ ನಿರೀಕ್ಷಕರ ಪಟ್ಟಿಗೆ ಕತ್ತರಿ

 

ಸಚಿವ ಸಂತೋಷ್‌ ಲಾಡ್‌ ಅವರು ಸಾರ್ವಜನಿಕ ಹಿತದೃಷ್ಟಿ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಒಟ್ಟು 14 ಮಂದಿ ಕಾರ್ಮಿಕ ನಿರೀಕ್ಷಕರನ್ನು ವರ್ಗಾವಣೆಗೊಳಿಸಲು 2023ರ ಆಗಸ್ಟ್‌ 24ರಂದು ಶಿಫಾರಸ್ಸು ಪಟ್ಟಿ ರವಾನಿಸಿದ್ದರು. ಈ ಪಟ್ಟಿಯಂತೆ ಆಯುಕ್ತರು 2023ರ ಆಗಸ್ಟ್‌ 25ರಂದು ಆದೇಶ ಹೊರಡಿಸಿದ್ದರು.

 

 

 

ಈ ಪಟ್ಟಿಗೆ ಮುಖ್ಯಮಂತ್ರಿಗಳ ಸಚಿವಾಲಯದ ಉನ್ನತ ಅಧಿಕಾರಿಗಳು ಕತ್ತರಿ ಹಾಕಿದ್ದಾರೆ. ಸಚಿವ ಲಾಡ್‌ ಮಾಡಿದ್ದ 14 ಮಂದಿ ಅಧಿಕಾರಿಗಳ ಶಿಫಾರಸ್ಸಿನ ಪೈಕಿ ಕೇವಲ ಹೊಳೆನರಸೀಪರ ವೃತ್ತದ ಕಾರ್ಮಿಕ ನಿರೀಕ್ಷಕ ಎನ್‌ ಮಂಜುನಾಥ್‌ ಅವರನ್ನು ಮಾತ್ರ ಹೊಸ ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ. ಉಳಿದ 13 ಮಂದಿಯನ್ನು ಸಿಎಂ ಸಚಿವಾಲಯದ ಅಧಿಕಾರಿಗಳು ಕೈ ಬಿಟ್ಟಿದ್ದರು.

 

ಅಲ್ಲದೇ ಸಚಿವರ ಶಿಫಾರಸ್ಸಿನಂತೆ ಈ ಅಧಿಕಾರಿಯನ್ನು ಟಿ ನರಸೀಪುರದ ವೃತ್ತಕ್ಕೆ ಎಂ ಆರ್‍‌ ಮಂಜುನಾಥ್‌ ಅವರ ಮುಂಬಡ್ತಿಯಿಂದ ತೆರವಾದ ಜಾಗಕ್ಕೆ ವರ್ಗಾಯಿಸಿದ್ದರು. ಆದರೆ ಸಿಎಂ ಸಚಿವಾಲಯವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆ ಪಡೆದುಕೊಂಡಿರುವ ಪಟ್ಟಿ ಪ್ರಕಾರ ಎನ್ ಮಂಜುನಾಥ್‌ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವೃತ್ತಕ್ಕೆ ವರ್ಗಾವಣೆ ಆಗಲಿದ್ದಾರೆ.

 

ಹಿರಿಯ ಕಾರ್ಮಿಕ ನಿರೀಕ್ಷಕರ ಪಟ್ಟಿಯಲ್ಲಿ ಕೈಯಾಡಿಸಿದ ಸಚಿವಾಲಯ

 

ಸಚಿವ ಲಾಡ್‌ ಅವರ ಶಿಫಾರಸ್ಸಿನಂತೆ ಒಟ್ಟು 33 ಮಂದಿ ಹಿರಿಯ ಕಾರ್ಮಿಕ ನಿರೀಕ್ಷಕರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿತ್ತು.

 

ಈ ಪೈಕಿ ಕೇವಲ 5 ಮಂದಿಯನ್ನು ಉಳಿಸಿಕೊಂಡು ಇದಕ್ಕೆ ನಾಲ್ಕು ಮಂದಿಯನ್ನು ಹೊಸದಾಗಿ ಸೇರಿಸಿ ಒಟ್ಟಾರೆ 9 ಹಿರಿಯ ಕಾರ್ಮಿಕ ನಿರೀಕ್ಷಕರ ವರ್ಗಾವಣೆ ಪಟ್ಟಿಗೆ ಸಿದ್ದರಾಮಯ್ಯ ಅವರು  ಅನುಮೋದನೆ ನೀಡಿದ್ದರು.

 

ಸಚಿವರ ಪಟ್ಟಿಯಂತೆ 28 ಮಂದಿಯನ್ನು ಕೈಬಿಡಲಾಗಿತ್ತು.

 

 

ಕಾರ್ಮಿಕ ಅಧಿಕಾರಿಗಳ ಪಟ್ಟಿಯಲ್ಲೇನಾಗಿದೆ?

 

ಸಚಿವರ ಶಿಫಾರಸ್ಸು ಪಟ್ಟಿಯಂತೆ ಒಟ್ಟು 13 ಮಂದಿ ಕಾರ್ಮಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

 

ಈ ಪೈಕಿ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳು ಕೇವಲ 4 ಮಂದಿಯನ್ನಷ್ಟೇ ಉಳಿಸಿಕೊಂಡು 9 ಮಂದಿಯನ್ನು ಕೈಬಿಟ್ಟಿದ್ದಾರೆ. 4 ಮಂದಿ ಜತೆಗೆ 6 ಮಂದಿಯನ್ನು ಹೊಸದಾಗಿ ಸೇರ್ಪಡೆಗೊಳಿಸಿ ಒಟ್ಟು 10 ಅಧಿಕಾರಿಗಳ ಹೊಸ ಪಟ್ಟಿ ಸಿದ್ಧಪಡಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಯನ್ನೂ ಪಡೆದಿದ್ದರು.

 

ಇದರಲ್ಲಿ ಶಿವಾನಂದ ಸಿ ಅವರನ್ನು ಮೊದಲು ಮಂಡ್ಯ ಉಪ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.  ಸಿಎಂ ಅನುಮೋದನೆ ಪಟ್ಟಿ ಪ್ರಕಾರ ಇವರನ್ನು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

 

ಬಿ ಜಿ ಚಂದ್ರಶೇಖರಯ್ಯ ಅವರನ್ನು ಮೊದಲು  ಕೈಗಾರಿಕ ಬಾಂಧವ್ಯ ಶಾಖೆಯ ಕಾರ್ಮಿಕ ಅಧಿಕಾರಿಯನ್ನಾಗಿ ವರ್ಗಾವಣೆಗೊಳಿಸಲಾಗಿತ್ತು. ಸಿಎಂ ಅನುಮೋದಿತ ಪಟ್ಟಿ ಪ್ರಕಾರ ಚಿತ್ರದುರ್ಗ ಜಿಲ್ಲೆಯ ಕಾರ್ಮಿಕ ಅಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಚೇತನ್‌ ಕುಮಾರ್‍‌ ಅವರನ್ನು ಬೆಂಗಳೂರು ಉಪ ವಿಭಾಗದ ಕಾರ್ಮಿಕ ಅಧಿಕಾರಿಯನ್ನಾಗಿ ಮೊದಲು ವರ್ಗಾವಣೆ ಮಾಡಲಾಗಿತ್ತು.

SUPPORT THE FILE

Latest News

Related Posts