ಕಾರ್ಬನ್ ಬ್ಲ್ಯಾಕ್ ಫೀಡ್, ಪ್ಯಾರಾಫಿನ್ ಉತ್ಪನ್ನ ಶೇಖರಣೆ; ನಿರ್ಬಂಧ ತೆರವಿಗೆ ಅದಾನಿ ಮನವಿ, ವರದಿಗೆ ನಿರ್ದೇಶನ

ಬೆಂಗಳೂರು; ಕಾರ್ಬನ್ ಬ್ಲ್ಯಾಕ್ ಫೀಡ್ ಸ್ಟಾಕ್ ಮತ್ತು ಎನ್-ಪ್ಯಾರಾಫಿನ್ ಉತ್ಪನ್ನಗಳನ್ನು ಕರಾವಳಿ ನಿಯಂತ್ರಣ ವಲಯದಲ್ಲಿ ಶೇಖರಣೆ ಮಾಡುವ ಸಂಬಂಧ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದು ಅದಾನಿ ಪೋರ್ಟ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಯು ಕೇಂದ್ರಕ್ಕೆ ಸಲ್ಲಿಸಿದ್ದ ಮನವಿ ಆಧರಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ವರದಿ ಸಲ್ಲಿಸಲು ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿರುವುದು ಇದೀಗ ಬಹಿರಂಗವಾಗಿದೆ.

 

ಅದಾನಿ ಕಂಪನಿ ಮತ್ತು ಅದಾನಿ ಚಟುವಟಿಕೆಗಳನ್ನು ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಬಲವಾಗಿ ಟೀಕಿಸುತ್ತಿರುವ ನಡುವೆಯೇ ಅದಾನಿ ಕಂಪನಿಯ ಮನವಿ ಆಧರಿಸಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ತಾಂತ್ರಿಕ ವರದಿ ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಕಡತ, ದಾಖಲೆಗಳನ್ನು ಪಡೆದುಕೊಂಡಿದೆ.

 

ಪೆಟ್ರೋಲಿಯಂ ಉತ್ನನ್ನಗಳಾದ ಕಾರ್ಬನ್‌ ಬ್ಲಾಕ್‌ ಫೀಡ್‌ ಸ್ಟಾಕ್‌ ಮತ್ತು ಎನ್‌ ಫ್ಯಾರಾಫಿನ್‌ಗಳ ಶೇಖರಣೆಗಾಗಿ ಕರಾವಳಿ ನಿಯಂತ್ರಣ ವಲಯದ 2019ರ ಅಧಿಸೂಚನೆಯಲ್ಲಿ ಸೇರ್ಪಡೆಗೊಳಿಸಲು ಅದಾನಿ ಕಂಪನಿಯು ಸದರನ್‌ ಗುಜರಾತ್‌ ಛೇಂಬರ್‌ ಆಫ್‌ ಕಾಮರ್ಸ್‌ ಇಂಡಸ್ಟ್ರೀಸ್‌ ಮೂಲಕ ಕೇಂದ್ರ ಸರ್ಕಾರದ ಮೊರೆ ಹೊಕ್ಕಿತ್ತು.

 

 

ಅಭಿವೃದ್ಧಿ ಹೆಸರಿನಲ್ಲಿ ಕಡಲ ತೀರದ ಉದ್ದಕ್ಕೂ ಅಭಿವೃದ್ಧಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ಒದಗಿಸಿದರೆ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಳಿವಿನ ಅಂಚಿನಲ್ಲಿರುವ ಸಮುದ್ರ ಜೀವಿ, ಸಸ್ಯ ಪ್ರಭೇದಗಳ ರಕ್ಷಣೆ ಕಷ್ಟವಾಗಬಹುದು ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ ಅದಾನಿ ಕಂಪನಿ ಮಾಡಿದ್ದ ಮನವಿ ಮತ್ತು ರಾಜ್ಯ ಸರ್ಕಾರವು ಕೇಳಿರುವ ವರದಿಯು ಮುನ್ನೆಲೆಗೆ ಬಂದಿದೆ.

 

 

ಪೆಟ್ರೋಲಿಯಂ ಉತ್ಪನ್ನಗಳೊಂದಿಗೆ ಕಾರ್ಬನ್‌ ಬ್ಲಾಕ್‌ ಫೀಡ್‌ ಸ್ಟಾಕ್‌ ಮತ್ತು ಎನ್‌ ಫ್ಯಾರಾಫಿನ್‌ನ್ನು ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಶೇಖರಣೆ ಮಾಡಲು ಅನುಮತಿ ನೀಡಬೇಕು ಮತ್ತು ಸಿಆರ್‌ಝಡ್‌ ಅಧಿಸೂಚನೆ 2019ರಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅದಾನಿ ಪೋರ್ಟ್ಸ್‌ ಅಂಡ್‌ ಲಾಜಿಸ್ಟಿಕ್ಸ್‌ ಸಂಸ್ಥೆಯು 2022ರ ನವೆಂಬರ್‌ 15ರಂದು ಸದರನ್‌ ಗುಜರಾತ್‌ ಛೇಂಬರ್‌ ಆಫ್‌ ಕಾಮರ್ಸ್‌ ಇಂಡಸ್ಟ್ರೀಸ್‌ ಗೆ ಮನವಿ ಮಾಡಿತ್ತು.

 

ಈ ಮನವಿಯನ್ನಾಧರಿಸಿ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರದ ಅರಣ್ಯ ಪರಿಸರ ಸಚಿವಾಲಯಕ್ಕೆ ಸದರನ್‌ ಗುಜರಾತ್‌ ಛೇಂಬರ್‌ ಆಫ್‌ ಕಾಮರ್ಸ್‌ ಇಂಡಸ್ಟ್ರೀಸ್‌ 2022ರ ನವೆಂಬರ್‌ 24ರಂದು ಪತ್ರವನ್ನು ಬರೆದಿತ್ತು.

 

ಈ ಪತ್ರವನ್ನಾಧರಿಸಿ ಕೇಂದ್ರ ಅರಣ್ಯ ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಕರಾವಳಿ ತೀರ ಪ್ರದೇಶಗಳ ರಾಜ್ಯ ಸರ್ಕಾರಗಳಿಗೆ 2023ರ ಜನವರಿ 18ರಂದು ಪತ್ರ ಬರೆದಿತ್ತು.

 

ಇದನ್ನಾಧರಿಸಿ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಉಡುಪಿ, ಕಾರವಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ (ಪರಿಸರ) ಪ್ರಾದೇಶಿಕ ನಿರ್ದೇಶಕರಿಗೆ 2023ರ ಸೆ.2ರಂದು ಪತ್ರವನ್ನು ಬರೆದಿರುವುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.

 

ಪತ್ರದಲ್ಲೇನಿದೆ?

 

ಪೆಟ್ರೋಲಿಯಂ ಉತ್ಪನ್ನಗಳಾದ ಕಾರ್ಬನ್‌ ಬ್ಲಾಕ್‌ ಫೀಡ್‌ ಸ್ಟಾಕ್‌ ಮತ್ತು ಎನ್‌ ಫ್ಯಾರಾಫಿನ್‌ ಇವುಗಳನ್ನು ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಶೇಖರಣೆಗಾಗಿ 2011/2019ರ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯಲ್ಲಿ ಸೇರ್ಪಡೆಗೊಳಿಸುವ ಕುರಿತು ಅಭಿಪ್ರಾಯ/ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅರಣ್ಯ,ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪ್ರಾದೇಶಿಕ ನಿರ್ದೇಶಕರಿಗೆ ನಿರ್ದೇಶನ ನೀಡಿರುವುದು ಪತ್ರದಿಂದ ತಿಳಿದು ಬಂದಿದೆ.

 

ಅದಾನಿ- ಸದರನ್‌ ಗುಜರಾತ್‌ ಛೇಂಬರ್‌ ಆಫ್‌ ಕಾಮರ್ಸ್‌ ಇಂಡಸ್ಟ್ರೀಸ್‌ ಪತ್ರದಲ್ಲೇನಿದೆ?

 

ಕಾರ್ಬನ್ ಬ್ಲ್ಯಾಕ್ ಫೀಡ್ ಸ್ಟಾಕ್ ಮತ್ತು ಎನ್-ಪ್ಯಾರಾಫಿನ್ ಕೆಲವು ಉತ್ಪನ್ನಗಳಾಗಿದ್ದು, ಇವುಗಳನ್ನು ಶೇಖರಿಸಲು ಸಿಆರ್‌ಝಡ್‌ ಅಧಿಸೂಚನೆಯ ಅಡಿಯಲ್ಲಿ ನಿರ್ಬಂಧಿಸಲಾಗಿದೆ. ಫೋ ಮತ್ತು ಬಿಟುಮೆನ್ ನಂತಹ ಇತರ ರೀತಿಯ ಉತ್ಪನ್ನಗಳನ್ನು ಅನುಮತಿಸಲಾಗಿದೆ. ಇವು ಬಹುತೇಕ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿವೆ. ಪೆಟ್ರೋಲಿಯಂನ ಹಲವು ಉತ್ಪನ್ನಗಳನ್ನು ಈಗಾಗಲೇ ಸಿಆರ್‌ಝಡ್‌ ಅಡಿಯಲ್ಲಿ ಶೇಖರಿಸಲು ಅನುಮೋದಿಸಲಾಗಿದೆ.

 

ಭಾರತದಲ್ಲಿ ಉತ್ಪಾದನೆಯಾಗದ ಹೆಚ್ಚಿನ ರಾಸಾಯನಿಕ ಉತ್ಪನ್ನಗಳನ್ನು ನಮ್ಮ ಪ್ರದೇಶದ ಕೈಗಾರಿಕೆಗಳಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು ಈ ಆಮದುಗಳು ಪ್ರದೇಶದ ಅತಿದೊಡ್ಡದಾದ ಅದಾನಿ ಬಂದರಿನಲ್ಲಿ ನಡೆಯುತ್ತದೆ. ಆದರೆ ಸಿಆರ್‌ಝಡ್‌ ಅಧಿಸೂಚನೆ ಪ್ರಕಾರ ಅವುಗಳಿಗೆ ಕೆಲವು ಮಿತಿಗಳನ್ನು ಹೇರಲಾಗಿದೆ. ನಮ್ಮ ಪ್ರದೇಶದಲ್ಲಿ ಪ್ರಾಮುಖ್ಯತೆ ಹೊಂದಿರುವ ಕೆಲವು ಸರಕುಗಳು ಅವರ ಬಂದರು ಅಂತಹ ವರ್ಗದ ಅಡಿಯಲ್ಲಿ ಬರುವುದರಿಂದ ಅವುಗಳನ್ನು ಸಾಗಿಸಲು ಬದ್ಧವಾಗಿಲ್ಲ.

 

ಈ ನಿಟ್ಟಿನಲ್ಲಿ ಸ್ಥಳೀಯ ಉದ್ಯಮವು ಹಜಿರಾ ಬಂದರು ಅಧಿಕಾರಿಗಳೊಂದಿಗೆ ನಮ್ಮನ್ನು ಸಂಪರ್ಕಿಸಿದೆ. ಆದ್ದರಿಂದ ಈ ಉತ್ಪನ್ನಗಳನ್ನು ಸಿಆರ್‌ಝಡ್ ಅಧಿಸೂಚನೆಯಲ್ಲಿ ಸೇರಿಸಬೇಕು. ಕಾರ್ಬನ್ ಕಪ್ಪು ಫೀಡ್‌ನ್ನು ಪ್ರಾಥಮಿಕವಾಗಿ ಟೈರ್ ಉದ್ಯಮದಲ್ಲಿ ಕಾರ್ಬನ್ ಕಪ್ಪು ತಯಾರಿಸಲು ಬಳಸಲಾಗುತ್ತದೆ. ರಬ್ಬರ್ ಪ್ರಕ್ರಿಯೆ ತೈಲ, ಅಗರಬತ್ತಿ ಎಣ್ಣೆ ತಯಾರಿಸಲಾಗುತ್ತದೆ.

 

ಮೇಲಿನ ಎಲ್ಲಾ ರಾಸಾಯನಿಕ ದ್ರವಗಳು ಆರೋಗ್ಯಕ್ಕೆ ಕಡಿಮೆ ಅಪಾಯಕಾರಿ. ಕಡಿಮೆ ಬಾಷ್ಪಶೀಲ ಮತ್ತು ಈಗಾಗಲೇ ಅನುಮೋದಿತ ದ್ರವಗಳಿಗಿಂತ ಕಡಿಮೆ ದಹನಕಾರಿ. ಪ್ರಸ್ತಾವಿತ ದ್ರವಗಳು ಮೇಕ್ ಇನ್ ಇಂಡಿಯಾವನ್ನು ಬೆಂಬಲಿಸಲು ಪ್ರಮುಖವಾಗಿವೆ. ದೇಶೀಯ ಉತ್ಪಾದನೆ ಮತ್ತು ಬಳಕೆಯಲ್ಲಿ ದೊಡ್ಡ ಅಂತರವಿದೆ. ಇತರ ಅನುಮೋದಿತ ದ್ರವಗಳಿಗೆ ಸಿಆರ್‌ಝಡ್‌ನಲ್ಲಿ ಅಭಿವೃದ್ಧಿಪಡಿಸಿದ ಟ್ಯಾಂಕ್‌ಗಳಲ್ಲಿನ ಶೇಖರಿಸಿದರೆ ಆಮದುದಾರರಿಗೆ ತಕ್ಷಣದ ಪರಿಹಾರವನ್ನು ನೀಡುತ್ತದೆ ಎಂದು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

CRZ-1 ನಲ್ಲೇನಿದೆ?

 

ಇವುಗಳು ಪರಿಸರ ಸೂಕ್ಷ್ಮ ಪ್ರದೇಶಗಳಾಗಿದ್ದು, ಕರಾವಳಿಯ ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಇದು ಅವಶ್ಯಕವಾಗಿದೆ. ಇವುಗಳಲ್ಲಿ ರಾಷ್ಟ್ರೀಯ ಉದ್ಯಾನವನಗಳು/ಸಾಗರ ಉದ್ಯಾನವನಗಳು, ಅಭಯಾರಣ್ಯಗಳು, ಮೀಸಲು ಅರಣ್ಯಗಳು, ವನ್ಯಜೀವಿ ಆವಾಸಸ್ಥಾನಗಳು, ಮ್ಯಾಂಗ್ರೋವ್‌ಗಳು ಮತ್ತು ಹವಳಗಳು/ಹವಳದ ಬಂಡೆಗಳು ಸೇರಿವೆ. ಈ ಪ್ರದೇಶಗಳು ಎತ್ತರದ ಮತ್ತು ಕಡಿಮೆ ಉಬ್ಬರವಿಳಿತದ ರೇಖೆಗಳ ನಡುವೆ ನೆಲೆಗೊಂಡಿವೆ.

 

CRZ-2

ಕರಾವಳಿ ತೀರದವರೆಗೆ ಈಗಾಗಲೇ ಅಭಿವೃದ್ಧಿ ಹೊಂದಿದ ಪ್ರದೇಶಗಳನ್ನು ಈ ವಲಯಕ್ಕೆ ಸೇರಿಸಲಾಗಿದೆ. ಈ ವಲಯದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ನಿಷೇಧಿಸಲಾಗಿದೆ.

 

CRZ-3

 

ತುಲನಾತ್ಮಕವಾಗಿ ತೊಂದರೆಗೊಳಗಾಗದ ಮತ್ತು ಮೊದಲ ಎರಡು ವರ್ಗಗಳಿಗೆ ಸೇರದ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು CRZ-3 ಅಡಿಯಲ್ಲಿ ಸೇರಿಸಲಾಗಿದೆ. ಈ ವಲಯದಲ್ಲಿ ಕೃಷಿ ಅಥವಾ ಕೆಲವು ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದ ನಿರ್ದಿಷ್ಟ ಚಟುವಟಿಕೆಗಳನ್ನು ಮಾತ್ರ ಅನುಮತಿಸಲಾಗಿದೆ. ಇದು ಪುರಸಭೆಯ ಮಿತಿಯೊಳಗೆ ಅಥವಾ ಕಾನೂನುಬದ್ಧವಾಗಿ ಗೊತ್ತುಪಡಿಸಿದ ನಗರ ಪ್ರದೇಶಗಳಲ್ಲಿ ಗಣನೀಯವಾಗಿ ನಿರ್ಮಿಸದ ಪ್ರದೇಶಗಳನ್ನು ಒಳಗೊಂಡಿದೆ.

 

 

CRZ-4

 

ಈ ಪ್ರದೇಶಗಳಲ್ಲಿ CRZ-I, CRZ-II, ಅಥವಾ CRZ-III ಎಂದು ಕರೆಯಲ್ಪಡುವ ಹೊರತುಪಡಿಸಿ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಇತರ ಕೆಲವು ಸಣ್ಣ ದ್ವೀಪಗಳ ಕರಾವಳಿ ಪ್ರದೇಶಗಳು ಸೇರಿವೆ. ಈ ಪ್ರದೇಶಗಳು ಪ್ರಾದೇಶಿಕ ಮಿತಿಗಳವರೆಗೆ ಜಲವಾಸಿ ಪ್ರದೇಶದಲ್ಲಿ ವಾಸಿಸುತ್ತವೆ. ಈ ವಲಯದಲ್ಲಿ ಮೀನುಗಾರಿಕೆ ಮತ್ತು ಇತರ ಸಂಬಂಧಿತ ಸೇವೆಗಳಂತಹ ಚಟುವಟಿಕೆಗಳನ್ನು ಅನುಮತಿಸಲಾಗಿದೆ. ಅಂತಹ ಭೂಮಿಯಲ್ಲಿ ಘನ ತ್ಯಾಜ್ಯವನ್ನು ಬಿಡುಗಡೆ ಮಾಡುವುದನ್ನು ನಿಷೇಧಿಸಲಾಗಿದೆ.

 

ಅಭಿವೃದ್ಧಿ ಹೆಸರಿನಲ್ಲಿ ಕಡಲ ತೀರದ ಉದ್ದಕ್ಕೂ ಅಭಿವೃದ್ಧಿ ಚಟುವಟಿಕೆಗಳಿಗೆ ಮುಕ್ತ ಅವಕಾಶ ಒದಗಿಸಿದರೆ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅಳಿವಿನ ಅಂಚಿನಲ್ಲಿರುವ ಸಮುದ್ರ ಜೀವಿ, ಸಸ್ಯ ಪ್ರಭೇದಗಳ ರಕ್ಷಣೆ ಕಷ್ಟವಾಗಬಹುದು ಎಂಬ ಆತಂಕ ಪರಿಸರವಾದಿಗಳಲ್ಲಿದೆ.

 

ಪ್ರವಾಸೋದ್ಯಮ ಹೆಸರಿನಲ್ಲಿ ಕಡಲ ತೀರದ ಪ್ರದೇಶಗಳನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ನೋಡಿದರೆ ಈ ಭಾಗದ ಜನರ ನೆಮ್ಮದಿ ಹಾಳಾಗಬಹುದು ಎನ್ನುವ ಆತಂಕ ಕೂಡ ಸ್ಥಳೀಯರಲ್ಲಿದೆ. 2019ರ ಜನವರಿಯಲ್ಲಿ ಕೇಂದ್ರ ಸರ್ಕಾರ ಸಿಆರ್‌ಝಡ್ ಅಧಿಸೂಚನೆ-2019 ಪ್ರಕಟಿಸಿತ್ತು. ಕೋವಿಡ್ ದಿಗ್ಬಂಧನ ಪರಿಣಾಮ ನಿಯಮಾವಳಿ ಜಾರಿಗೆ ಅಗತ್ಯ ನಕ್ಷೆ ವಿಳಂಬವಾಗಿತ್ತು.

the fil favicon

SUPPORT THE FILE

Latest News

Related Posts