ಲಿಂಗಾಯತ ಧರ್ಮ ಮಾನ್ಯತೆ, ಬಸವಣ್ಣ ಸಾಂಸ್ಕೃತಿಕ ನಾಯಕ; ವರದಿ ಕೇಳಿ ನೆನಪೋಲೆ ಬರೆದ ಸರ್ಕಾರ

ಬೆಂಗಳೂರು; ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆ ಕಳಿಸುವುದು ಹಾಗೂ  ಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸುವ ಕುರಿತು ರಾಜ್ಯ ಕಾಂಗ್ರೆಸ್‌ ಸರ್ಕಾರವು ಬೀದರ್‍‌ ಜಿಲ್ಲಾಧಿಕಾರಿ ಮತ್ತು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಆಯುಕ್ತರಿಂದ ವರದಿ ಕೇಳಿರುವುದು ಇದೀಗ ಬಹಿರಂಗವಾಗಿದೆ.

 

2018ರ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಲಿಂಗಾಯತ ಧರ್ಮದ ಕುರಿತು ಕಾಂಗ್ರೆಸ್‌ ಪಕ್ಷವು ತಳೆದಿದ್ದ ನಿಲುವಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ 2023ರಲ್ಲಿ ಅಧಿಕಾರ ಹಿಡಿದಿರುವ ಹೊತ್ತಿನಲ್ಲಿಯೇ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸುವ ಸಂಬಂಧ ವರದಿ ಕೇಳಿರುವುದು ಮಹತ್ವ ಪಡೆದುಕೊಂಡಿದೆ.

 

ವಿಜಯಪುರ ಜಿಲ್ಲೆ ಮತ್ತು ನಮ್ಮ ಮೆಟ್ರೋಗೆ ಬಸವಣ್ಣನ ಹೆಸರು ಘೋಷಿಸುವ ಸಂಬಂಧ ಎಂ ಬಿ ಪಾಟೀಲ್‌ ನೀಡಿರುವ ಹೇಳಿಕೆ ಕುರಿತು ಚರ್ಚೆಯಾಗುತ್ತಿರುವ ಮಧ್ಯೆಯೇ ಇದೀಗ ಬಸವಣ್ಣನನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು 2023ರ ಜೂನ್‌ 28ರಂದೇ ವರದಿ ಕೇಳಿ   ಮೊದಲನೇ  ನೆನಪೋಲೆ ರವಾನಿಸಿದ್ದರು  ಎಂದು ಗೊತ್ತಾಗಿದೆ.

 

ಈ ಕುರಿತು ವರದಿ ಕೈ ಸೇರಿದ ನಂತರ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

 

ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2023ರ ಜೂನ್‌ 28ರಂದು ಬರೆದಿರುವ ನೆನಪೋಲೆಯು  (ಕಂಇ 53 ಆರ್‍‌ಬಿಎ 2023)  ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಲಿಂಗಾಯತ ಧರ್ಮದ ಮಾನ್ಯತೆಗಾಗಿ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸುವುದು ಮತ್ತು ಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರು ಎಂದು ಘೋಷಿಸುವ ಸಂಬಂಧ ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಬಸವ ದಳದ ಅಶೋಕ ಚ ಬೆಂಡಿಗೇರಿ ಅವರು  ಮನವಿ ಸಲ್ಲಿಸಿದ್ದರು. ಈ ಮನವಿ ಆಧರಿಸಿ ಕಂದಾಯ ಇಲಾಖೆಯು 2023ರ ಜೂನ್‌ 28ರಂದು ನೆನಪೋಲೆ  ಬರೆದಿದ್ದಾರೆ.

 

ನೆನಪೋಲೆಯಲ್ಲೇನಿದೆ?

 

ಲಿಂಗಾಯತ ಧರ್ಮದ ಮಾನ್ಯತೆಗಾಗಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಬೇಕು. ಬಸವಣ್ಣನವರ ಐಕ್ಯ ಮಂಟಪಕ್ಕೆ ಉಚಿತ ಪ್ರವೇಶ ನೀಡಬೇಕು. ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ವಿಶ್ವವಿದ್ಯಾಲಯವೆಂದು ನಾಮಕರಣಗೊಳಿಸಬೇಕು. ಹಾಗೂ ಗುರು ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕರು ಎಂದು ಘೋಷಿಸಬೇಕು ಎಂದು ಅಶೋಕ್‌ ಚ ಬೆಂಡಿಗೇರಿ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

 

ಈ ಮನವಿಯನ್ನು ಪರಿಶೀಲಿಸಿದ್ದ ಕಂದಾಯ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು 2023ರ ಮಾರ್ಚ್‌ 30ರಂದೇ ಬೀದರ್‍‌ ಜಿಲ್ಲಾಧಿಕಾರಿ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಆಯುಕ್ತರಿಗೆ ಪತ್ರ ಬರೆದಿತ್ತು. ಆದರೆ ಬೀದರ್‍‌ ಜಿಲ್ಲಾಧಿಕಾರಿ ಹಾಗೂ ಆಯುಕ್ತರು ಈ ಸಂಬಂಧ ವರದಿಯನ್ನು ಸಲ್ಲಿಸಿರಲಿಲ್ಲ. ಹೀಗಾಗಿ 2023ರ ಜೂನ್‌ 28ರಂದು ಮೊದಲನೇ ನೆನಪೋಲೆಯನ್ನು ರವಾನಿಸಿರುವುದು ತಿಳಿದು ಬಂದಿದೆ.

 

ವಿಜಯಪುರ ಜಿಲ್ಲೆಗೆ ಬಸವಣ್ಣನ ಹೆಸರು ಇಡುವ ವಿಚಾರವಾಗಿ ಸ್ಥಳೀಯ ಜನರ ಬೇಡಿಕೆ ಇದೆ. ಆದರೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದರು.

 

 

ಬಸವೇಶ್ವರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಮಾಡಿ ಎಂದು ಬೇಡಿಕೆ ಇದೆ. ಬೆಂಗಳೂರು ಮೆಟ್ರೋ ಗೆ ಬಸವೇಶ್ವರ ಮೇಟ್ರೊ ಎಂದು ಹೆಸರಿಡಿ ಎಂದು‌ ಬೇಡಿಕೆ ಇದೆ. ಅಷ್ಟೇ ಅಲ್ಲದೆ ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರ ಹೆಸರು ಇಡಿ ಎಂದು ಬೇಡಿಕೆ ಇವೆ ಎಂದು ಪ್ರಸ್ತಾವಿಸಿದ್ದರು.

 

 

ರಾಮನಗರ ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ಬೆನ್ನಲ್ಲೇ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲರು ನೀಡಿದ್ದ ಹೇಳಿಕೆಯು  ರಾಜಕೀಯ, ಸಾಮಾಜಿಕ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿತ್ತು.

 

‘ಹೊಯ್ಸಳರ ಕಾಲದಲ್ಲಿ ಈ ಪ್ರದೇಶವನ್ನು ವಿಜಯಪುರ ಎಂದು ಕರೆಯಲಾಗುತ್ತಿತ್ತು. ನಂತರ ಆದಿಲ್ ಶಾಹಿ ವಂಶಸ್ಥರ ಆಳ್ವಿಕೆಯಲ್ಲಿ ಬಿಜಾಪುರವಾಗಿ ಮಾರ್ಪಟ್ಟಿತು. ಈ ಹೆಸರನ್ನು ಮತ್ತೆ ವಿಜಯಪುರ ಎಂದು ಬದಲಾಯಿಸಲಾಯಿತು. ಇದೀಗ ಇದನ್ನು ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂದು ಅನೇಕರು ಒತ್ತಾಯಿಸಿದ್ದಾರೆ. ಈ ಜಿಲ್ಲೆ ಬಸವಣ್ಣನವರ ಜನ್ಮಸ್ಥಳವಾಗಿದ್ದು, ಇದರಲ್ಲಿ ಯಾವುದೇ ತಪ್ಪಿಲ್ಲ’ ಸಮರ್ಥಿಸಿಕೊಂಡಿದ್ದರು.

 

 

ಕರ್ನಾಟಕಕ್ಕೆ ‘ಬಸವ ನಾಡು’ ಎಂದು ಮರುನಾಮಕರಣ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಟೀಲ, ‘ಇದು ಸಹಜ, ಅದರಲ್ಲಿ ತಪ್ಪೇನಿದೆ?’ ಜಗತ್ತಿನ ಮೊದಲ ಸಂಸತ್ತು ‘ಅನುಭವ ಮಂಟಪ’ವನ್ನು ಸಮಾಜಕ್ಕೆ ಕೊಟ್ಟವರು ಬಸವಣ್ಣ. ನಮ್ಮ ನಾಡು ‘ಬಸವ ನಾಡು’ ಆಗಬೇಕು ಮತ್ತು ‘ಬಸವ ಸಂಸ್ಕೃತಿ’ಯನ್ನು ಅಳವಡಿಸಿಕೊಳ್ಳಬೇಕು ಎಂದು ನಾವು ಹೇಳುತ್ತಲೇ ಬಂದಿದ್ದೇವೆ’ ಎಂದು ಪ್ರತಿಪಾದಿಸಿದ್ದರು.

 

ಕರ್ನಾಟಕದಲ್ಲಿ ಸಾಂಸ್ಕೃತಿಕ ನಾಯಕತ್ವದ ಪರಿಕಲ್ಪನೆಯ ಕುರಿತಾದ ಚರ್ಚೆಯು ರಾಜಕೀಯಕರಣಗೊಳ್ಳುತ್ತಲೇ ಬಂದಿದೆ.  ಕನಕದಾಸರು, ಕೆಂಪೇಗೌಡರು,  ಬಸವಣ್ಣ, ದಾಸಿಮಯ್ಯ,  ಚೆನ್ನಯ್ಯ, ಕೃಷ್ಣ,  ವಾಲ್ಮೀಕಿ ಹೀಗೆ ಹಲವರನ್ನು ತಮ್ಮ ಜಾತಿಗಳಿಗೆ ಸಾಂಸ್ಕೃತಿಕ ನಾಯಕರು ಎಂದು ಕರೆದುಕೊಂಡಿದ್ದಾರೆ.

SUPPORT THE FILE

Latest News

Related Posts