ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಡಿ ಅಲ್ಪಸಂಖ್ಯಾತರ ಕಲ್ಯಾಣ, ಜಲಸಂಪನ್ಮೂಲ, ಹಿಂದುಳಿದ ವರ್ಗ, ರೇಷ್ಮೆ, ಪರಿಶಿಷ್ಟ ಪಂಗಡ ಇಲಾಖೆಗಳಿಗೆ ರಾಜ್ಯ ಸರ್ಕಾರವು ತನ್ನ ಪಾಲಿನ 558.99 ಕೋಟಿ ರು ಪೈಕಿ ಬಿಡಿಗಾಸನ್ನೂ ನೀಡಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.
2023-24ರ ಸಾಲಿಗೆ ಸಂಬಂಧಿಸಿದಂತೆ 2023ರ ಅಕ್ಟೋಬರ್ 10ರಂದು ನಡೆದಿದ್ದ ಕೆಡಿಪಿ ಸಭೆಗೆ ಇಲಾಖಾವಾರು ಸಾಧಿಸಿರುವ ಆರ್ಥಿಕ ಪ್ರಗತಿ ಕುರಿತು ಅಂಕಿ ಅಂಶಗಳನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಮಂಡಿಸಿದೆ. ಇದರ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
‘ನನ್ನ ಅವಧಿ ಮುಗಿಯುವಷ್ಟರಲ್ಲಿ 10 ಸಾವಿರ ಕೋಟಿ ರೂ.ಗೆ ಏರಿಸುತ್ತೇನೆ. ಇದು ನನ್ನ ಕೆಲಸ. ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೇ ಭರವಸೆ ನೀಡಿದ್ದರ ಬೆನ್ನಲ್ಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕೇಂದ್ರ ಪುರಸ್ಕೃತ ಯೋಜನೆಯಡಿ ರಾಜ್ಯ ಸರ್ಕಾರದ ಪಾಲಿನ ಪೈಕಿ ಬಿಡಿಗಾಸೂ ನೀಡದಿರುವುದು ಮುನ್ನೆಲೆಗೆ ಬಂದಿದೆ.
ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರದ ಅನುದಾನದ ವಿವರಗಳನ್ನು ಸಭೆಗೆ ಮಂಡಿಸಿರುವ ಅಂಕಿ ಅಂಶಗಳ ಪ್ರಕಾರ ಸೆಪ್ಟಂಬರ್ ಅಂತ್ಯಕ್ಕೆ ರಾಜ್ಯ ಸರ್ಕಾರವು 9,520.81 ಕೋಟಿ ರು., ಕೇಂದ್ರ ಸರ್ಕಾರವು 7,495.89 ಕೋಟಿ ರು. ಸೇರಿ ಒಟ್ಟಾರೆ 17,016.71 ಕೋಟಿ ರು ಬಿಡುಗಡೆ ಮಾಡಿದೆ. ಆದರೆ ಅಲ್ಪಸಂಖ್ಯಾತರ ಕಲ್ಯಾಣ ಸೇರಿ ನಾಲ್ಕು ಇಲಾಖೆಗಳಿಗೆ ನಯಾಪೈಸೆಯನ್ನೂ ಸೆಪ್ಟಂಬರ್ ಅಂತ್ಯ ಕಳೆದರೂ ಬಿಡುಗಡೆ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ.
2023-24ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಸಂಬಂಧ ರಾಜ್ಯ ಸರ್ಕಾರವು 21,421.45 ಕೋಟಿ ರು., ಕೇಂದ್ರ ಸರ್ಕಾರವು 20,932.61 ಕೋಟಿ ರು. ಅನುದಾನ ಹಂಚಿಕೆ ಮಾಡಬೇಕು. ಈ ಪೈಕಿ 9,520.81 ಕೋಟಿ ರು.ಗಳನ್ನು ಸೆಪ್ಟಂಬರ್ ಅಂತ್ಯಕ್ಕೆ ಬಿಡುಗಡೆ ಮಾಡಿದೆ. ಇನ್ನೂ 11,900.64 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿದೆ. ಅದೇ ರೀತಿ ಕೇಂದ್ರ ಸರ್ಕಾರವು ಸೆಪ್ಟಂಬರ್ ಅಂತ್ಯಕ್ಕೆ 20,932.61 ಕೋಟಿ ರು ಪೈಕಿ 7,495.89 ಕೋಟಿ ರು. ಬಿಡುಗಡೆ ಮಾಡಿದೆ. 13,436.72 ಕೋಟಿ ರು. ಬಿಡುಗಡೆಗೆ ಬಾಕಿ ಇರುವುದು ತಿಳಿದು ಬಂದಿದೆ.
ರಾಜ್ಯ ಸರ್ಕಾರವು ವಸತಿ ಇಲಾಖೆಗೆ 164.00 ಕೋಟಿ ರು.ಗಳನ್ನು ನಿಗದಿಪಡಿಸಿತ್ತು. ಆದರೆ ಸೆಪ್ಟಂಬರ್ ಅಂತ್ಯಕ್ಕೆ ಶೂನ್ಯ ಬಿಡುಗಡೆ ಎಂದು ತೋರಿಸಿದೆ. ಪರಿಶಿಷ್ಟ ಪಂಗಡಕ್ಕೆ ಅನುದಾನವನ್ನೇ ನಿಗದಿಪಡಿಸಿಲ್ಲ. ಜಲಸಂಪನ್ಮೂಲ ಇಲಾಖೆಗೆ 100.49 ಕೋಟಿ ರು. ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ 83.00 ಕೋಟಿ ರು., ರೇಷ್ಮೆಗೆ 15.50 ಕೋಟಿ ರು ನಿಗದಿಪಡಿಸಿದೆಯಾದರೂ ಈ ಮೂರೂ ಇಲಾಖೆಗಳಿಗೆ ಸೆಪ್ಟಂಬರ್ ಅಂತ್ಯಕ್ಕೆ ಬಿಡಿಗಾಸನ್ನೂ ನೀಡಿಲ್ಲ ಎಂಬುದು ಅಂಕಿ ಅಂಶಗಳಿಂದ ಗೊತ್ತಾಗಿದೆ.
ಉಳಿದ ಇಲಾಖೆಗಳ ಬಿಡುಗಡೆ ವಿವರ
ಗ್ರಾಮೀಣಾಭಿವೃದ್ಧಿಗೆ 4,431.65 ಕೋಟಿ ರು ಪೈಕಿ 1,563.44 ಕೋಟಿ ರು. ಬಿಡುಗಡೆ ಮಾಡಿದೆ. ಪಿಡಬ್ಲ್ಯೂಡಿಯು 70.00 ಕೋಟಿ ರು ಪೈಕಿ 8.12 ಕೋಟಿ ರು., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ 2,853.86 ಕೋಟಿ ರು. ಪೈಕಿ 1,445.59 ಕೋಟಿ ರು., ಪ್ರಾಥಮಿಕ, ಪ್ರೌಢಶಿಕ್ಷಣ ಇಲಾಖೆಯ 4,677.30 ಕೋಟಿ ರು. ಪೈಕಿ 1,765.98 ಕೋಟಿ ರು., ನಗರಾಭಿವೃದ್ಧಿಗೆ 960 ಕೋಟಿ ರು ಪೈಕಿ 95.00 ಕೋಟಿ ರು., ಆರೋಗ್ಯ ಇಲಾಖೆಯ 1,0221.54 ಕೋಟಿ ರು ಪೈಕಿ 422.04 ಕೋಟಿ ರು., ಕೃಷಿ ಇಲಾಖೆಯಲ್ಲಿ 495.52 ಕೋಟಿ ರು ಪೈಕಿ 56.29 ಕೋಟಿ ರು., ಕಂದಾಯ ಇಲಾಖೆಯಲ್ಲಿ 5,399.80 ಕೋಟಿ ರು ಪೈಕಿ 3,343.72 ಕೋಟಿ ರು., ತೋಟಗಾರಿಕೆಯಲ್ಲಿ 293.64 ಕೋಟಿ ರುನಲ್ಲಿ 17.28 ಕೋಟಿ ರು., ಸಮಾಜ ಕಲ್ಯಾಣದಲ್ಲಿ 139.62 ಕೋಟಿ ರು ಪೈಕಿ 50.95 ಕೋಟಿ ರು, ಕೌಶಲ್ಯಾಭಿವೃದ್ಧಿಯಲ್ಲಿ 98.00 ಕೋಟಿ ರು ಪೈಕಿ 54.31 ಕೋಟಿ ರು., ಪಶು ಸಂಗೋಪನೆಯಲ್ಲಿ 43.86 ಕೋಟಿ ರು ನಲ್ಲಿ 1.81 ಕೋಟಿ ರು., ಅರಣ್ಯದಲ್ಲಿ 41.81 ಕೋಟಿ ರು ಪೈಕಿ 1.81 ಕೋಟಿ ಉ., ಮೀನುಗಾರಿಕೆಯಲ್ಲಿ 36.56 ಕೋಟಿ ರು.ನಲ್ಲಿ 24.37 ಕೋಟಿ ರು ಬಿಡುಗಡೆ ಮಾಡಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
2023ರ ಆಗಸ್ಟ್ ಅಂತ್ಯದಲ್ಲಿಯೂ 14 ಇಲಾಖೆಗಳಿಗೆ 6,371.34 ಕೋಟಿ ರು. ಅನುದಾನ ಲಭ್ಯವಾಗಿದ್ದರೂ ರಾಜ್ಯ ಸರ್ಕಾರವು ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರವು ತನ್ನ ಪಾಲಿನಲ್ಲಿ 3 ಇಲಾಖೆಗಳಿಗೆ ಒಟ್ಟು ಅನುದಾನದಲ್ಲಿ ಕೇವಲ 1,841.27 ಕೋಟಿ ರು. ಬಿಡುಗಡೆ ಮಾಡಿತ್ತು. ಆಗಸ್ಟ್ ಅಂತ್ಯದಲ್ಲಿಯೂ ಕೇಂದ್ರ ಪುರಸ್ಕೃತ ಯೋಜನೆಗಳಡಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ರಾಜ್ಯವು 33.00 ಕೋಟಿ ರು, ಕೇಂದ್ರ ಸರ್ಕಾರವು 50 ಕೋಟಿ ರು. ಸೇರಿ ಒಟ್ಟಾರೆ 83.00 ಕೋಟಿ ರು.ಗಳ ಅನುದಾನ ಲಭ್ಯವಾಗಿತ್ತು. ಈ ಪೈಕಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ನಯಾ ಪೈಸೆಯನ್ನೂ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ವೆಚ್ಚವನ್ನು ಶೂನ್ಯ ಎಂದು ತೋರಿಸಲಾಗಿತ್ತು. ಸೆಪ್ಟಂಬರ್ ಅಂತ್ಯದಲ್ಲಿಯೂ ಇದೇ ಸ್ಥಿತಿ ಮುಂದುವರೆದಿದೆ.
ಕೌಶಲ್ಯಾಭಿವೃದ್ದಿ ಇಲಾಖೆಗೆ 98 ಕೋಟಿ ರು., ತೋಟಗಾರಿಕೆ ಇಲಾಖೆಗೆ 293.62 ಕೋಟಿ ರು., ನಗರಾಭಿವೃದ್ಧಿ ಇಲಾಖೆಗೆ 960 ಕೋಟಿ ರು., ರೇಷ್ಮೆ 12.25 ಕೋಟಿ ರು., ವಸತಿ ಇಲಾಖೆಗೆ 200 ಕೋಟಿ ರು., ಹಿಂದುಳಿದ ವರ್ಗ ಇಲಾಖೆಗೆ 216.01 ಕೋಟಿ ರು., ಲೋಕೋಪಯೋಗಿ ಇಲಾಖೆಗೆ 105 ಕೋಟಿ ರು., ಅರಣ್ಯ ಇಲಾಖೆಗೆ 41.81 ಕೋಟಿ ರು., ಗ್ರಾಮೀಣಾಭಿವೃದ್ಧಿಗೆ 4,411.65 ಕೋಟಿ ರು. ಅನುದಾನ ಲಭ್ಯವಾಗಿಸಿಕೊಂಡಿತ್ತು. ಆದರೆ ಈ ಇಲಾಖೆಗಳಿಗೆ ರಾಜ್ಯ ಸರ್ಕಾರವು ತನ್ನ ಪಾಲಿನಲ್ಲಿ ಬಿಡಿಗಾಸನ್ನೂ ಕೊಟ್ಟಿರಲಿಲ್ಲ.
ಅಲ್ಪಸಂಖ್ಯಾತರ ಕಲ್ಯಾಣ ಸೇರಿ 14 ಇಲಾಖೆಗಳಿಗೆ ತನ್ನ ಪಾಲಿನಲ್ಲಿ ಬಿಡಿಗಾಸೂ ನೀಡದ ರಾಜ್ಯ ಸರ್ಕಾರ
ಲೋಕೋಪಯೋಗಿ ಇಲಾಖೆಗೆ 105.00 ಕೋಟಿ ರು., ಕೇಂದ್ರ ಸರ್ಕಾರದ ಪಾಲಿನಲ್ಲಿ 1,500 ಕೋಟಿ ರು. ಅನುದಾನ ಲಭ್ಯವಾಗಿತ್ತು. ಈ ಪೈಕಿ ಕೇಂದ್ರ ಸರ್ಕಾರವು ಕೇವಲ 12.00 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಅದೇ ರೀತಿ ಅರಣ್ಯ ಇಲಾಖೆಗೆ ಕೇಂದ್ರ ಸರ್ಕಾರವು 58.89 ಕೋಟಿ ರು. ಪೈಕಿ ಕೇವಲ 3 ಕೋಟಿ ರು., ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೇಂದ್ರ ಸರ್ಕಾರದ 8,812.62 ಕೋಟಿ ರು ಪೈಕಿ 1,826.27 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು.
ಜನವರಿ 2023 ಅಂತ್ಯಕ್ಕೂ ಕೇಂದ್ರ ಸರ್ಕಾರವು ತನ್ನ ಪಾಲಿನಲ್ಲಿ 8,199 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. ಹೀಗಾಗಿ 122 ಕಾರ್ಯಕ್ರಮಗಳಿಗೆ ಚಾಲನೆಯೇ ಸಿಕ್ಕಿರಲಿಲ್ಲ.
ವರ್ಷ ಉರುಳಿದರೂ 122 ಕಾರ್ಯಕ್ರಮಗಳಿಗೆ ಸಿಗದ ಚಾಲನೆ, ಕೇಂದ್ರದಿಂದ ಬಾರದ 8,199 ಕೋಟಿ
ವಸತಿ ಸೇರಿದಂತೆ 8 ಇಲಾಖೆಗಳಿಗೂ ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನ ನೀಡಿರಲಿಲ್ಲ.
ಕೇಂದ್ರ ಪುರಸ್ಕೃತ ಯೋಜನೆ; 8 ಇಲಾಖೆಗಳಿಗಿಲ್ಲ ಬಿಡಿಗಾಸು, ಕೇಂದ್ರದಿಂದಲೇ 16,534 ಕೋಟಿ ಬಾಕಿ
ಅಲ್ಲದೇ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ತನ್ನ ಪಾಲಿನ ಅನುದಾನದಲ್ಲಿಯೂ ಇಳಿಕೆ ಮಾಡಿತ್ತು.
ಕೇಂದ್ರ ಅನುದಾನದಲ್ಲಿ ಶೇ.17.55ರಷ್ಟು ಇಳಿಕೆ; ಉಸಿರೆತ್ತದ ಬಿಜೆಪಿ ಸರ್ಕಾರ
ಕೇಂದ್ರ ಪುರಸ್ಕೃತ ಯೋಜನೆಯ ಕಾರ್ಯಕ್ರಮಗಳಡಿ 2,948 ಕೋಟಿ ರು.ನಲ್ಲಿ ಕೇವಲ 523 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಆಗಲೂ ಸಹ ಹಿಂದಿನ ರಾಜ್ಯ ಸರ್ಕಾರವು ತುಟಿಬಿಚ್ಚಿರಲಿಲ್ಲ.
ಕೇಂದ್ರ ಪುರಸ್ಕೃತ ಯೋಜನೆ; 2,948 ಕೋಟಿಯಲ್ಲಿ 523 ಕೋಟಿ ಕೊಟ್ಟರೂ ತುಟಿಬಿಚ್ಚದ ಸರ್ಕಾರ
ಕೇಂದ್ರ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಬಿಡುಗಡೆಗೊಳಿಸದಿದ್ದರೂ ಹಿಂದಿನ ರಾಜ್ಯ ಸರ್ಕಾರವು ಕೇಂದ್ರದ ಅನುದಾನವನ್ನು ನಿರೀಕ್ಷಿಸಿ ತನ್ನ ಪಾಲಿನ ಅನುದಾನವನ್ನು ಬಿಡುಗಡೆ ಮಾಡಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದನ್ನು ಸ್ಮರಿಸಬಹುದು.