ದತ್ತ ಪೀಠ ಸುತ್ತ ಶುಚಿತ್ವ; ಮುಳ್ಳಯ್ಯನ ಗಿರಿ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆಗೆ ಸರ್ಕಾರದ ಪ್ರತಿಪಾದನೆ

ಬೆಂಗಳೂರು; ಮುಳ್ಳಯ್ಯನ ಗಿರಿಯನ್ನು ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದಕ್ಕೆ  ದತ್ತ ಪೀಠ ಮತ್ತಿತರ ಪ್ರವಾಸಿ ಸ್ಥಳಗಳ ಪ್ರದೇಶದಲ್ಲಿ ಶುಚಿತ್ವ ಕಾಪಾಡುವ ಉದ್ದೇಶವನ್ನು  ಮುಂದಿರಿಸಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಲದೇ ಕಂದಾಯ ಭೂಮಿಯನ್ನು ಡೀಮ್ಡ್‌ ಫಾರೆಸ್ಟ್‌ ಸೇರಿದಂತೆ ಎಲ್ಲಾ ಪ್ರದೇಶಗಳನ್ನೂ ಮುಳ್ಳಯ್ಯನ ಗಿರಿ ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಲು ಉದ್ದೇಶಿಸಿರುವ ಪ್ರದೇಶದೊಂದಿಗೆ ಸೇರ್ಪಡೆಗೊಳಿಸಬೇಕು. ಹೊಸದಾದ ನಕ್ಷೆ ಸಿದ್ಧಪಡಿಸಿ ನೂತನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಿರುವುದು ತಿಳಿದು ಬಂದಿದೆ.

 

ಮುಳ್ಳಯ್ಯನ ಗಿರಿ ಸಂರಕ್ಷಣಾ ಮೀಸಲು ಪ್ರದೇಶ ಜಾರಿ ವಿರೋಧಿಸಿ ಸ್ಥಳೀಯ ಮಟ್ಟದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದರ ಬೆನ್ನಲ್ಲೇ ಸಂರಕ್ಷಣಾ ಮೀಸಲು ಪ್ರದೇಶ ಘೋಷಣೆಗೆ ಸೂಕ್ತವಾಗಿದೆ ಎಂಬ ಶಿಫಾರಸ್ಸು ಮತ್ತು ಈ ಸಂಬಂಧ ನೀಡಿರುವ ನಿರ್ದೇಶನವು ಮುನ್ನೆಲೆಗೆ ಬಂದಿದೆ.

 

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅಧ್ಯಕ್ಷತೆಯಲ್ಲಿ 2023ರ ಸೆ.5ರಂದು ನಡೆದಿದ್ದ ಸಭೆಯಲ್ಲಿ ಈ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ. ಈ ಶಿಫಾರಸ್ಸಿನ ಕುರಿತಾಗಿ ಸಚಿವ ಈಶ್ವರ್‌ ಖಂಡ್ರೆ ಅವರು ಇನ್ನಷ್ಟೇ ಸಭೆ ನಡೆಸಬೇಕಿದೆ.  ಸಭೆಯ ನಡವಳಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸುವುದರಿಂದ ಈಗಾಗಲೇ ನಡೆಯುತ್ತಿರುವ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಈ ಘೋಷಣೆಯಿಂದ ಸದರಿ ಪ್ರದೇಶವನ್ನು ನಿರ್ವಹಿಸಲು ಹಾಗೂ ಅಲ್ಲಿ ದತ್ತ ಪೀಠ ಮತ್ತಿತರ ಪ್ರವಾಸಿ ಸ್ಥಳಗಳ ಪ್ರದೇಶದಲ್ಲಿ ಶುಚಿತ್ವವನ್ನು ಕಾಪಾಡಲು ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸುವುದು ಸೂಕ್ತವಾಗಿರುತ್ತದೆ,’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್‌ ಮಾಲ್ಪಡೆ ಅವರು ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

ಸಂರಕ್ಷಣಾ ಮೀಸಲು ಪ್ರದೇಶ ರಚಿಸುವುದರಿಂದ ಸದರಿ ಪ್ರದೇಶದಲ್ಲಿ ನಡೆಯುತ್ತಿರುವ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಜನರಿಗೆ ಅಥವಾ ಖಾಸಗಿ ಭೂಮಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದನ್ನು ಪಂಚಾಯ್ತಿ ಮತ್ತು ಅಲ್ಲಿನ ಜನರಿಗೆ ವಿವರಿಸಬೇಕು. ಗ್ರಾಮ ಪಂಚಾಯ್ತಿಗಳ ಒಪ್ಪಿಗೆ ಪಡೆಯಲು ಕ್ರಮ ವಹಿಸಬೇಕು ಎಂದು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಸಭೆಯಲ್ಲಿ ನಿರ್ದೇಶನ ನೀಡಿರುವುದು ಗೊತ್ತಾಗಿದೆ.

 

ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪ್ರದೇಶವೆಂದು ಘೋಷಿಸಲು ಉದ್ದೇಶಿಸಿರುವ ಪ್ರದೇಶದಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ರಿಟ್‌ ಅರ್ಜಿ (53985/2018) ಸಂಬಂಧ 2019ರ ಜುಲೈ 19ರಂದು ತೀರ್ಫು ನೀಡಿತ್ತು. ತೀರ್ಪು ನೀಡಿದ 4 ತಿಂಗಳೊಳಗಾಗಿ ಮುಳ್ಳಯ್ಯನ ಗಿರಿ ಸಂರಕ್ಷಿತ ಮೀಸಲು ಪ್ರದೇಶವೆಂದು ಅಧಿಸೂಚನೆ ಹೊರಡಿಸಬೇಕಿತ್ತು. ಅಲ್ಲದೇ ಸಂರಕ್ಷಣಾ ಪ್ರದೇಶವೆಂದು ಘೋಷಿಸಿದ ದಿನಾಂಕದಿಂದ 3 ತಿಂಗಳ ಒಳಗಾಗಿ ನಿರ್ವಹಣಾ ಸಮಿತಿಯನ್ನು ರಚಿಸಬೇಕಿತ್ತು.

 

ಈ ಹಿನ್ನೆಲೆಯಲ್ಲಿ 2019ರ ಜನವರಿ 9ರಂದು ನಡೆದಿದ್ದ 11ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಸುಮಾರು 14,000 ಎಕರೆ ಮುಳ್ಳಯ್ಯನ ಗಿರಿ ಬೆಟ್ಟದ ಅರಣ್ಯ ಪ್ರದೇಶವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಕರಡು ಅಧಿಸೂಚನೆಯನ್ನು ಸರ್ಕಾರಕ್ಕೆ ಸಲ್ಲಿಸುವ ಸಂಬಂಧ ನಿರ್ಣಯ ಕೈಗೊಂಡಿತ್ತು ಎಂಬುದು ನಡವಳಿಯಿಂದ ತಿಳಿದು ಬಂದಿದೆ.

 

ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲಿನ ಶೋಲಾಮಿಶ್ರಿತ ಹುಲ್ಲುಗಾವಲು ಪ್ರದೇಶಗಳನ್ನು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ವನ್ಯಜೀವಿ (ಸಂರಕ್ಷಣಾ) ಅಧಿನಿಯಮ 1972ರ ಕಲಂ 36 ಎ ಅನ್ವಯ 15,897.07 ಎಕರೆ ಪ್ರದೇಶಗಳನ್ನು ಮುಳ್ಳಯ್ಯನ ಗಿರಿ ಸಂರಕ್ಷಣಾ ಮೀಸಲು ಪ್ರದೇಶವೆಂದು ಅಧಿಸೂಚನೆ ಹೊರಡಿಸಲು ಸಚಿವ ಸಂಪುಟಕ್ಕೆ ಮಂಡಿಸಿತ್ತು.

 

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿಂದಿನ ಶಾಸಕ ಸಿ ಟಿ ಅವರು ಹಿಂದಿನ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದರು. ವಿವಿಧ ಉದ್ದೇಶಗಳಿಗೆ ಭೂಮಿಯನ್ನು ಕಾಯ್ದಿರಿಸುವಂತೆ ಕೋರಿದ್ದರಿಂದ ಕಡತವನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಹಿಂದಿರುಗಿಸಲಾಗಿತ್ತು. ಸದ್ಯಕ್ಕೆ ಸಚಿವ ಸಂಪುಟ ಮುಂದೆ ಮಂಡಿಸಲು ಬಾಕಿ ಇದೆ ಎಂಬುದು ನಡವಳಿಯಿಂದ ಗೊತ್ತಾಗಿದೆ.

 

ನ್ಯಾಯಾಲಯದ ಆದೇಶದಂತೆ ಅರಣ್ಯ ಇಲಾಖೆಯು ಜಂಟಿ ಮೋಜಣಿ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಈ ವೇಳೆಯಲ್ಲಿ 18,284.12 ಎಕರೆ ಪ್ರದೇಶವನ್ನು ಗುರುತಿಸಲಾಗಿತ್ತು. ಸಾರ್ವಜನಿಕ ಉದ್ದೇಶಗಳಿಗೆ 1,448.02 ಎಕರೆ ಪ್ರದೇಶವನ್ನು ಕೈಬಿಟ್ಟು ಅಂತಿಮವಾಗಿ 16,836.10 ಎಕರೆ ಪ್ರದೇಶವನ್ನು ಮುಳ್ಯಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಘೋಷಣೆ ಮಾಡಲು 2020ರ ಆಗಸ್ಟ್‌ 19ರಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಂಡಿತ್ತು.

 

ಇದರಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ಕಲಂ 17ರ ಅನ್ವಯ 488.12 ಎಕರೆ, ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 04 ಅನ್ವಯ 780.18 ಎಕರೆ, ಕಲಂ 33 ಅನ್ವಯ 30.20 ಎಕರೆ (ಸರ್ಕಾರಿ ವೈದ್ಯಕೀಯ ಕಾಲೇಜು ಬದಲಿಗೆ), ಕುವೆಂಪು ವಿವಿ ಕಾಲೇಜು ಬದಲಿಗೆ ಪರಿಹಾರಾತ್ಮಕ ಪ್ರದೇಶ 80.35 ಎಕರೆ ಸೇರಿ 1,380.05 ಎಕರೆ ಇತ್ತು.

 

ಹಾಗೆಯೆ ಸಂಭಾವಿತ ಅರಣ್ಯ ಪ್ರದೇಶ (ಡೀಮ್ಡ್‌) 9,811.03 ಎಕರೆ, ಪರಿಭಾವಿತ ಅರಣ್ಯ ಸರ್ವೆ ನಂಬರ್‌ಗಳೊಂದಿಗೆ ಇರುವ ಹೆಚ್ಚುವರಿ ಕಂದಾಯ ಭೂಮಿ 644.09 ಎಕರೆ, ಕಳಸಾ ಇನಾಂ ಪ್ರದೇಶದ ಬದಲಿಗೆ ಪರಿಹಾರಾತ್ಮಕ ಪ್ರದೇಶ 1,065 ಎಕರೆ, ಅತಿಕ್ರಮಣ ಹೊರತುಪಡಿಸಿ ಉಳಿಕೆ ಕಂದಾಯ ಭೂಮಿ 3,935 ಎಕರೆ ಒಳಗೊಂಡಿದೆ.

 

ಹುಲಿ ಸಂರಕ್ಷಿತ ಪ್ರದೇಶ, ಸರ್ಕಾರಿ ಉದ್ದೇಶಗಳಿಗಾಗಿ ಮೀಸಲಿರಿಸಿದ ಪ್ರದೇಶಗಳು, ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ನಮೂನೆ 50, 53, 57 ಮತ್ತು 94 ಸಿ ಅಡಿ ಸಾಗುವಳಿ ಸಕ್ರಮೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವ ಭೂಮಿ, ಒತ್ತುವರಿ ಭೂಮಿಯನ್ನು ಬಿಟ್ಟು ಕೇವಲ ಕಡಿದಾದ ಇಳಿಜಾರು ಪ್ರದೇಶಗಳು, ಶೋಲಾ ಅರಣ್ಯ ಮತ್ತು ನೀರಿನ ಸೆಲೆಗಳು ಇರುವಂತಹ ಪ್ರದೇಶಗಳನ್ನು ಒಳಗೊಂಡ ಒಟ್ಟು 17 ಬ್ಲಾಕ್‌ಗಳಲ್ಲಿ ಒಟ್ಟು 4,630.04 ಎಕರೆ ಗುಂಟೆ ಪ್ರದೇಶವನ್ನು ಮೊದಲ ಹಂತದಲ್ಲಿ ಮೀಸಲು ಸಂರಕ್ಷಿತ ಪ್ರದೇಶವೆಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

 

ಈ ಹಿಂದೆ ತಯಾರಿಸಿದ್ದ ಪ್ರಸ್ತಾವನೆಯಲ್ಲಿ ಶೇ.75ರಷ್ಟು ಭಾಗ ಅರಣ್ಯ ಇಲಾಖೆಯ ವಶದಲ್ಲಿತ್ತು. ಕೇವಲ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅತಿಕ್ರಮಣ ರಹಿತ ಹಾಗೂ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವಂತಹ ವಿಸ್ತೀರ್ಣ ಹೊರತುಪಡಿಸಲಾಗಿತ್ತು. ನದಿಗಳ ಮೂಲ, ಜಲಾನಯನ ಪ್ರದೇಶ, ಕಡಿದಾದ ಇಳಿಜಾರು ಮತ್ತು ಶೋಲಾ ಅರಣ್ಯ ಪ್ರದೇಶವಿರುವ ಒಟ್ಟು 3,935 ಎಕರೆ ಪ್ರದೇಶವನ್ನು ಮಾತ್ರ ಪರಿಗಣಿಸಲಾಗಿತ್ತು.

 

ಅಲ್ಲದೇ ಕಳಸಾ ಇನಾಂ ಪ್ರದೇಶದ ಬದಲಿಗೆ ಪರಿಹಾರಾತ್ಮಕ ಪ್ರಧೇಶ 1,065.33 ಎಕರೆ ಸೇರಿ ಒಟ್ಟು 5,000 ಎಕರೆ 33 ಗುಂಟೆ ಪ್ರದೇಶಕ್ಕೆ ಅನುಮತಿಯನ್ನೂ ಚಿಕ್ಕಮಗಳೂರು ಜಿಲ್ಲಾಧಿಕಾರಿ 2023ರ ಜೂನ್‌ 16ರಂದು ಅನುಮತಿ ನೀಡಿದ್ದರು.

the fil favicon

SUPPORT THE FILE

Latest News

Related Posts