ಬೆಂಗಳೂರು; ರಾಜ್ಯದ ಗ್ರಾಮಗಳಲ್ಲಿ ಸ್ಮಶಾನಗಳಿಗೆ ಖಾಸಗಿ ಜಮೀನು ಖರೀದಿ ಮಾಡಲು ಅನುದಾನ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರವು ಇದೀಗ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಯಾವುದೇ ಅನುದಾನ ಬಿಡುಗಡೆ ಮಾಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರಗಳನ್ನು ಬರೆದಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದ 1,000ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳೇ ಇಲ್ಲದಿರುವ ವಿಚಾರ ಕುರಿತು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸುತ್ತಿರುವ ಬೆನ್ನಲ್ಲೇ ಇದೀಗ ಸ್ಮಶಾನಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ಯಾವುದೇ ಅನುದಾನ ಬಿಡುಗಡೆ ಮಾಡಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಬರೆದಿರುವ ಪತ್ರಗಳು ಮುನ್ನೆಲೆಗೆ ಬಂದಿವೆ.
ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆಯುವ ಮುನ್ನ ಅಧಿಕಾರಿಗಳು ಈ ವಿಚಾರವನ್ನು ಸಚಿವ ಕೃಷ್ಣಬೈರೇಗೌಡ ಅವರ ಗಮನಕ್ಕೆ ತಂದಿದ್ದಾರೆ ಎಂದು ಗೊತ್ತಾಗಿದೆ.
ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಯಾವುದೇ ಅನುದಾನ ಬಿಡುಗಡೆ ಮಾಡಲು ಅವಕಾಶವಿಲ್ಲ ಎಂದು 2023ರ ಅಕ್ಟೋಬರ್ 16ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಅವರು ಹಾವೇರಿ ಜಿಲ್ಲಾಧಿಕಾರಿಗೆ ಪತ್ರ (ಸಂಖ್ಯೆ ಕಂಇ 90 ಎಲ್‌ಜಿಡಿ 2023) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
ರಾಣೆಬೆನ್ನೂರು ತಾಲೂಕು ಮಾಕನೂರು ಗ್ರಾಮದ ರಿ ಸರ್ವೆ ನಂಬರ್ 192ರ ಸ್ಮಶಾನ ಜಮೀಣಿಗೆ ರಿ ಸ ನಂ 134/5ರಲ್ಲಿ 00ಎ-06 ಗುಂಟೆ-04 ಆಣೆ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುವ ಸಲುವಾಗಿ ಖಾಸಗಿ ಜಮೀನು ಖರೀದಿಸುವ ಕುರಿತು ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದ್ದು, ಭೂ ಮಂಜೂರಾತಿ ಶಾಖೆಯಲ್ಲಿ ಸ್ಮಶಾನ ಖರೀದಿ ಮಾಡಲು ಅನುದಾನ ಬಿಡುಗಡೆ ಮಾಡಲಾಗುತ್ತದೆ. ಆದರೆ ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಯಾವುದೇ ಅನುದಾನ ಬಿಡುಗಡೆ ಮಾಡಲು ಅವಕಾಶವಿರುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿರುವುದು ಗೊತ್ತಾಗಿದೆ.
ಆದಿಜಾಂಬವ ಸಮುದಾಯದ ರುದ್ರಭೂಮಿಗೆ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ತಾಲೂಕಿನ ಬನ್ನೂರು ಪಟ್ಟಣದ ಸುಭಾಷ್‌ನಗರ ಸೇರಿದಂತೆ 28 ಗ್ರಾಮಗಳ ಮಾದಿಗ ಜನಾಂಗದ ನೂರಾರು ಜನರು ಕಾವೇರಿ ಸೇತುವೆ ಬಳಿ ಮೈಸೂರು-ಮಳವಳ್ಳಿ ರಸ್ತೆ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿಡಿಗಾನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ತೆರಳಲು ರಸ್ತೆಯಿಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಕಾರವಾರದಿಂದ 3 ಕಿ.ಮೀ ದೂರದಲ್ಲಿರುವ ಸ್ಮಶಾನಕ್ಕೆ ರಸ್ತೆ ಸಂಪರ್ಕ ಇಲ್ಲದ ಹಿನ್ನೆಲೆಯಲ್ಲಿ ತಾಲೂಕಿನ ಅಂಕೋಲಾ ತಾಲೂಕಿನ ಬೆರಡೆ ಗ್ರಾಮದ ನಿವಾಸಿಗಳು ಬುಧವಾರ ಮೃತ ವ್ಯಕ್ತಿಯ ಶವವನ್ನು ಅಂತಿಮ ಸಂಸ್ಕಾರಕ್ಕಾಗಿ ಜೋಳಿಗೆ (ಜೋಲಿ) ಹಾಕಿ ಕೊಂಡೊಯ್ದಿರುವ ಘಟನೆ ನಡೆದಿತ್ತು. ಇಂತಹ ಪ್ರಕರಣಗಳು ಹಲವು ಜಿಲ್ಲೆಗಳ ಗ್ರಾಮಗಳಲ್ಲೂ ಈಗಲೂ ಇಂತಹದ್ದೇ ಪರಿಸ್ಥಿತಿ ಇದೆ. ಅಲ್ಲದೇ 31 ಜಿಲ್ಲೆಗಳಲ್ಲಿನ 21, 388 ಗ್ರಾಮಗಳ ಪೈಕಿ ಇನ್ನೂ 1000 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳೇ ಇಲ್ಲ ಎಂಬುದು ಗೊತ್ತಾಗಿದೆ.
ರಾಜ್ಯದಲ್ಲಿ ಜನವಸತಿ ಇರುವ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದ್ದು, ಕೇವಲ ಐದು ಗ್ರಾಮಗಳಲ್ಲಿ ಮಾತ್ರವೇ ಮಂಜೂರು ಮಾಡಿರುವ ಭೂಮಿಯ ಪಹಣಿ ನೋಂದಣಿ ಮಾಡಿ ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ಜಮೀನು ಒಪ್ಪಿಸಬೇಕಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಾಹಿತಿ ನೀಡಿತ್ತು.
ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿದ್ದ ವಿಚಾರಣೆ ವೇಳೆಯಲ್ಲಿ ಸರ್ಕಾರವು ಈ ಮಾಹಿತಿ ನೀಡಿತ್ತು.
ಅಲ್ಲದೇ ‘ಕಳೆದ 75 ವರ್ಷಗಳಿಂದ ನಾವು ನಾಟಕ ಮಾಡುತ್ತಿದ್ದೇವೆ. ಜನರಿಗೆ ಮೊದಲು ಮೂಲಸೌಲಭ್ಯ ಕಲ್ಪಿಸಿ. ಅಭಿವೃದ್ಧಿ ಎನ್ನುವುದು ಇಲ್ಲಿ ಯಾರಿಗೂ ಬೇಕಿಲ್ಲವಾಗಿದೆ. ಸತ್ತವರಿಗಾದರೆ ದೊಡ್ಡ ದೊಡ್ಡ ಪುತ್ಥಳಿ ನಿರ್ಮಿಸುತ್ತೀರಿ…” ಎಂದು ರಾಜ್ಯಾದ್ಯಂತ ಪ್ರತಿಯೊಂದು ಜನವಸತಿ ಗ್ರಾಮಕ್ಕೂ ಅಗತ್ಯ ಸ್ಮಶಾನ ಭೂಮಿ ಕಲ್ಪಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿತ್ತು.
ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಯಾಗಿದ್ದ ಬಿ ವೀರಪ್ಪ ಮತ್ತು ನ್ಯಾ. ಟಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತ್ತು.
‘ಯಾವೆಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ ಎಂಬುದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಸಂಗ್ರಹ ಮಾಡಿದ್ದಾರೆಯೇ? ಇಲ್ಲ. ನಾವು ಅದನ್ನು ಮಾಡುತ್ತೇವೆ. ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಅವರನ್ನು ಎಲ್ಲೆಲ್ಲಿ ಸ್ಮಶಾನಕ್ಕೆ ಜಾಗವಿಲ್ಲ ಎಂಬ ಮಾಹಿತಿಯನ್ನು ಪಡೆಯಲು ಜಾಹೀರಾತು ನೀಡಲು ಸೂಚಿಸುತ್ತೇವೆ. ಮಾಡುವುದಕ್ಕಾಗಲ್ಲ ಎಂದರೆ ಹೇಳಿ ಬಿಡಿ. ಕಾಗದದ ಮೇಲಿನ ನ್ಯಾಯಾಲಯದ ಆದೇಶದ ಅನುಪಾಲನೆ ಬೇಡ, ಪ್ರಾಯೋಗಿಕವಾಗಿ ಪಾಲನೆಯಾಗಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶ, ಸರ್ಕಾರ, ನಾವು ಮತ್ತು ನೀವೆಲ್ಲರೂ ನಿಷ್ಟ್ರಯೋಜಕವಾಗುತ್ತೇವೆ,’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.
ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಗಳಲ್ಲಿ ಅಗತ್ಯ ಭೂಮಿ ಮಂಜೂರಾತಿಗೆ ಕೋರಿ ಸ್ಥಳೀಯ ನಿವಾಸಿಗಳು ಅರ್ಜಿ ಸಲ್ಲಿಸಬಹುದು ಎಂಬುದಾಗಿ ತಿಳಿಸಿ ಸರ್ಕಾರ ಸಾರ್ವಜನಿಕ ಪ್ರಕಟಣೆ ನೀಡಿತ್ತು. ಅದರಂತೆ ಸ್ಮಶಾನಕ್ಕೆ ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಅನೇಕ ಗ್ರಾಮಗಳ ನಿವಾಸಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ‘ಸ್ಮಶಾನ ಇಲ್ಲದ ಗ್ರಾಮಗಳಿಗೆ ಆರು ತಿಂಗಳಲ್ಲಿ ಅಗತ್ಯ ಜಮೀನು ಒದಗಿಸುವಂತೆ 2019ರಲ್ಲಿ ಆದೇಶವನ್ನು ಸರ್ಕಾರವು ಪಾಲಿಸದೇ ಇದ್ದದ್ದಕ್ಕೆ ಹೈಕೋರ್ಟ್ ‘ಸ್ಮಶಾನಕ್ಕೆ ಜಾಗ ಇಲ್ಲದ ಕಡೆ ಹೆಣಗಳನ್ನು ರಸ್ತೆಯಲ್ಲಿ ಹಾಕಬೇಕಾ’ ಎಂದು ಹಿಂದಿನ ಬಿಜೆಪಿ ರಾಜ್ಯ ಸರ್ಕಾರವನ್ನು ಹೈಕೋರ್ಟ್ ಖಾರವಾಗಿ ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ 974 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳಿಲ್ಲ ಎಂಬ ಅಂಕಿ ಅಂಶಗಳು ಬಹಿರಂಗವಾಗಿತ್ತು.
ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ಗೆ ಸರ್ಕಾರವು ಈ ಅಂಕಿ ಅಂಶಗಳನ್ನು ಒದಗಿಸಿತ್ತು.
ರಾಜ್ಯದ 974 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳೇ ಇಲ್ಲ; ಗ್ರಾಮ ವಾಸ್ತವ್ಯದ ಬಳಿಕವೂ ಬದಲಾಗದ ಪರಿಸ್ಥಿತಿ
ಸಕ್ಕರೆ ಕಾರ್ಖಾನೆಗಳು ಅತಿ ಹೆಚ್ಚು ಇರುವ ಬೆಳಗಾವಿ ಜಿಲ್ಲೆಯಲ್ಲಿ 307 ಗ್ರಾಮಗಳು ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗ ಜಿಲ್ಲೆಯಲ್ಲಿ 313 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳಿಲ್ಲ. 31 ಜಿಲ್ಲೆಗಳ ಪೈಕಿ ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದವು.
ಧಾರವಾಡದಲ್ಲಿ 76, ಗದಗ್‌ನಲ್ಲಿ 67, ಚಾಮರಾಜನಗರ 24, ಚಿಕ್ಕಮಗಳೂರು 29, ಹಾಸನ 37, ಮಂಡ್ಯ 38, ಮೈಸೂರು 51, ಕೊಪ್ಪಳ 08, ಕೋಲಾರ 12, ರಾಮನಗರ 12, ಬೆಳಗಾವಿ 307, ಶಿವಮೊಗ್ಗ ಜಿಲ್ಲೆಯಲ್ಲಿ 313 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಇಲ್ಲ.
ರಾಜ್ಯದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಜಮೀನು ಒದಗಿಸುವಂತೆ ನೀಡಿದ ಆದೇಶ ಪಾಲಿಸದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸುತ್ತಲೇ ಇದೆ. ಆದರೆ ಅಧಿಕಾರಿಗಳು ಹಾಗೂ ಸರ್ಕಾರವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತಿಲ್ಲ.
ಈ ಬಗ್ಗೆ ಬೆಂಗಳೂರಿನ ಮಹಮ್ಮದ್ ಇಕ್ಬಾಲ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠ ತೀವ್ರ ಬೇಸರ ವ್ಯಕ್ತಪಡಿಸಿತ್ತು.
‘ನ್ಯಾಯಾಲಯ ಯಾವುದೇ ಅಧಿಕಾರಿ ಅಥವಾ ಸರ್ಕಾರದ ವಿರುದ್ಧವಿಲ್ಲ. ಕೋರ್ಟ್ ಆದೇಶ ಉಲ್ಲಂಘಿಸಿದರೆ ಸಹಿಸಲಾಗದು. ಸ್ಮಶಾನಕ್ಕೆ ಜಾಗ ಒದಗಿಸಲು ಆರು ತಿಂಗಳು ಸಾಕಾಗುವುದಿಲ್ಲ ಎನ್ನುವುದಾರೆ ಆದೇಶ ಪ್ರಕಟವಾದ ದಿನವೇ ಹೆಚ್ಚಿನ ಸಮಯವನ್ನು ಸರ್ಕಾರ ಕೋರಬಹುದಿತ್ತು. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾದ ನಂತರ ಸಬೂಬು ಹೇಳಿ ಸಮಯ ಕೇಳಿದರೆ ಒಪ್ಪಲಾಗದು. ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ನ್ಯಾಯಮೂರ್ತಿ ವೀರಪ್ಪ ಅವರು, ಎಚ್ಚರಿಸಿದ್ದರು.
‘ಕೋರ್ಟ್ ಆದೇಶ ಪಾಲನೆಯ ವಸ್ತುಸ್ಥಿತಿ ವರದಿ ಸಲ್ಲಿಸಲು ಕಾಲಾವಕಾಶ ಬೇಕು’ ಎಂದು ಸರ್ಕಾರ ಕೋರಿತ್ತು. ಇದಕ್ಕೆ ವ್ಯಗ್ರವಾಗಿದ್ದ ನ್ಯಾಯಪೀಠ, ‘ವಸ್ತುಸ್ಥಿತಿ ವರದಿ ಸಲ್ಲಿಸಲು ಇದೇನು ನಾಪತ್ತೆ ಪ್ರಕರಣವೇ, ಒಳ್ಳೆಯ ಕೆಲಸ ಮಾಡಿದರೆ ಜನ ಮೆಚ್ಚಿ ವೋಟು ಹಾಕುತ್ತಾರೆ. ಕಡೇ ಪಕ್ಷ ಇದೊ ಒಂದು ವೋಟು ಗಿಟ್ಟಿಸುವ ಕಾರ್ಯಕ್ರಮ ಎಂದು ಸರ್ಕಾರ ಪರಿಗಣಿಸಬೇಕಿತ್ತು ’ ಎಂದು ಸರ್ಕಾರವನ್ನು ಕುಟುಕಿತ್ತು.
‘ನೀವು (ಸರ್ಕಾರ) ಭಂಡರಾದರೆ ನಾವು (ಕೋರ್ಟ್) ಜಗಭಂಡರು. ಕೋರ್ಟ್ ಆದೇಶ ಪಾಲನೆ ಮಾಡುವ ತನಕ ನಿಮ್ಮನ್ನು ಬಿಡುವುದಿಲ್ಲ. ಸ್ಮಶಾನಕ್ಕೆ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸುವ ಸಂಬಂಧ ಕೋರ್ಟ್ ಆದೇಶವನ್ನು 15 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲನೆ ಮಾಡದೇ ಹೋದರೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ ಜೈಲಿಗೆ ಕಳಿಸಲಾಗುವುದು’ ಎಂದು ನ್ಯಾಯಪೀಠ ಕಠಿಣ ಎಚ್ಚರಿಕೆ ನೀಡಿರುವುದನ್ನು ಸ್ಮರಿಸಬಹುದು.
‘ಸ್ಮಶಾನ ಇಲ್ಲದ ಗ್ರಾಮಗಳಿಗೆ ಆರು ತಿಂಗಳಲ್ಲಿ ಅಗತ್ಯ ಜಮೀನು ಒದಗಿಸುವಂತೆ 2019ರಲ್ಲಿ ಹೈಕೋರ್ಟ್ ಆದೇಶಿಸಿತ್ತು. ಮೂರು ವರ್ಷವಾದರೂ ಈ ಆದೇಶವನ್ನು ಪಾಲಿಸಿಲ್ಲ’ ಎಂದು ಅರ್ಜಿದಾರರು ಈ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿರುವುದನ್ನು ಸ್ಮರಿಸಬಹುದು.