ಎನ್‌ಸಿಸಿ ಕೆಡೆಟ್‌ಗಳಿಗೆ ವೈಮಾನಿಕ ತರಬೇತಿ; ಅದಾನಿ ಒಡೆತನದಲ್ಲಿರುವ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಬಾಡಿಗೆ

ಬೆಂಗಳೂರು; ಅದಾನಿ ಸಂಸ್ಥೆಯ ಒಡೆತನಕ್ಕೆ ಒಳಪಟ್ಟಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ವೈಮಾನಿಕ ತರಬೇತಿಗೆ ಅನಗತ್ಯವಾಗಿ ಹೆಚ್ಚುವರಿ ಬಾಡಿಗೆ ತೆರಬೇಕಿದೆ. ಹೀಗಾಗಿ ತರಬೇತಿ ನೀಡುವ ಯೋಜನೆಯನ್ನು ಶಿವಮೊಗ್ಗ ಅಥವಾ ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳಲಿದೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಮಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ (O&M) ಅದಾನಿ ಗ್ರೂಪ್‌ಗೆ ಹಸ್ತಾಂತರಿಸುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನಿರ್ಧಾರಕ್ಕೆ ರಾಜ್ಯ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ವೈಮಾನಿಕ ತರಬೇತಿಗೆ ಅನಗತ್ಯವಾಗಿ ಹೆಚ್ಚುವರಿ ಬಾಡಿಗೆ ತೆರಬೇಕಿದೆ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ವೈಮಾನಿಕ ತರಬೇತಿ ನೀಡಲು ಮುಂದಾಗಿದ್ದ ಉನ್ನತ ಶಿಕ್ಷಣ ಇಲಾಖೆಯು ಈ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದೇ ವಿಮಾನ ನಿಲ್ದಾಣದಲ್ಲಿ ತರಬೇತಿ ನೀಡಿದ್ದಲ್ಲಿ ಅನಗತ್ಯವಾಗಿ ಹೆಚ್ಚುವರಿ ಬಾಡಿಗೆ ಪಾವತಿಸಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿದೆ.

 

ಉನ್ನತ ಶಿಕ್ಷಣ ಇಲಾಖೆಗೆ ಈ ಸಂಬಂಧ ಆರ್ಥಿಕ ಇಲಾಖೆಯು 2023ರ ಜುಲೈ 17ರಂದೇ ಅಭಿಪ್ರಾಯ (ಆಇ 393 ವೆಚ್ಚ-8/2023 , ಇಡಿ 139 ಹೆಚ್‌ಪಿಟಿ 2022) ನೀಡಿದೆ ಎಂದು ಗೊತ್ತಾಗಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಭಿಪ್ರಾಯದಲ್ಲೇನಿದೆ?

 

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಅದಾನಿ ಸಂಸ್ಥೆಯ ಒಡೆತನಕ್ಕೆ ಒಳಪಟ್ಟಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎನ್‌ಸಿಸಿ ಕೆಡೆಟ್‌ಗಳಿಗೆ ಮೈಕ್ರೋಲೈಟ್‌ ಏರ್‍‌ ಕ್ರಾಫ್ಟ್ ಗ್ಲೈಡರ್‍‌ (ವೈಮಾನಿಕ ತರಬೇತಿ) ಉಡಾವಣೆ ತರಬೇತಿಯನ್ನು ನೀಡಿದಲ್ಲಿ ಅನಗತ್ಯವಾಗಿ 95,64,662.00 ರು.ಗಳ ಹೆಚ್ಚುವರಿ ಬಾಡಿಗೆ ಪಾವತಿಸಬೇಕಾಗುತ್ತದೆ.

 

ಆದ್ದರಿಂದ ತರಬೇತಿ ಸ್ಥಳವನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಏರ್‍‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದ ಅಧೀನಕ್ಕೆ ಒಳಪಟ್ಟಿರುವ ಹತ್ತಿರದ ವಿಮಾನ ನಿಲ್ದಾಣಗಳಾದ ಶಿವಮೊಗ್ಗ ವಿಮಾನ ನಿಲ್ದಾಣ ಅಥವಾ ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಬೇಕು ಎಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ಕೆಡೆಟ್‌ಗಳು ಪಠ್ಯಕ್ರಮದ ಆಧಾರದ ಮೇಲೆ ತಮ್ಮ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಫ್ಲೈಯಿಂಗ್ ಭಾಗವು ಪ್ರಾಯೋಗಿಕ ಅಂಶವಾಗಿತ್ತು. ಹೀಗಾಗಿ ಮಂಗಳೂರಿನಲ್ಲಿ ಎನ್‌ಸಿಸಿ ಏರ್ ಫ್ಲೈಯಿಂಗ್ ಪುನರಾರಂಭಗೊಂಡಿತ್ತು. ವಿಮಾನಗಳನ್ನು ಹಾರಿಸುವುದರಿಂದ ಕೆಡೆಟ್‌ಗಳು ಭಾರತೀಯ ವಾಯುಪಡೆಗೆ ಮುಂದುವರಿಯಲು ಮತ್ತು ಸೇರಲು ಪ್ರೇರೇಪಿಸಬಹುದು ಎಂದು ಹೇಳಲಾಗಿತ್ತು.

 

ಕರ್ನಾಟಕದ ಬಂದರು ನಗರ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಅದಾನಿ ಗ್ರೂಪ್ ಅಕ್ಟೋಬರ್ 31, 2020 ರಂದು ವಹಿಸಿಕೊಂಡಿದೆ. ವಿಮಾನ ನಿಲ್ದಾಣವು ತನ್ನ ಇತ್ತೀಚಿನ ಸುಂಕ ವಿವರಗಳ ಸಲ್ಲಿಕೆಯಲ್ಲಿ ಈ ಅಕ್ಟೋಬರ್‌ನಿಂದ ದೇಶೀಯ ಪ್ರಯಾಣಿಕರ ಮೇಲೆ 250 ರೂ.ನಷ್ಟು ಯುಡಿಎಫ್‌ ಅನ್ನು ವಿಧಿಸಲು ಅನುಮತಿ ಕೇಳಿದೆ. ಮತ್ತು ಮಾರ್ಚ್ 31, 2026ರ ವೇಳೆಗೆ ಇದನ್ನು ಕ್ರಮೇಣ 725 ರೂ.ಗೆ ಹೆಚ್ಚಿಸಲು ಕೋರಿತ್ತು.

 

ಸುಂಕ ನಿರ್ಧರಿಸುವ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ಮಂಗಳೂರು ವಿಮಾನ ನಿಲ್ದಾಣಕ್ಕೆ ಏಪ್ರಿಲ್ 1, 2021ರಿಂದ ಮಾರ್ಚ್ 31, 2026ರ ಅವಧಿಗೆ ಸುಂಕವನ್ನು ನಿಗದಿಪಡಿಸುವ ಪ್ರಕ್ರಿಯೆಯಲ್ಲಿದೆ. ಈ ವೇಳೆ ಅದಾನಿ ಈ ಬೇಡಿಕೆ ಇಟ್ಟಿತ್ತು.

 

ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 525 ರೂ. ಶುಲ್ಕ ವಿಧಿಸಿ ಮಾರ್ಚ್ 2026ರ ವೇಳೆಗೆ ಇದನ್ನು 1,200 ರೂ.ಗೆ ಹೆಚ್ಚಿಸಲು ಅದಾನಿ ಏರ್‌ಪೋರ್ಟ್ಸ್‌ ಪ್ರಯತ್ನಿಸಿತ್ತು. ಎಇಆರ್‌ಎ ಒಪ್ಪಿದಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಹಾಗೂ ಆಗಮಿಸುವ ಎಲ್ಲಾ ಪ್ರಯಾಣಿಕರ ಮೇಲೆ ಈ ಯುಡಿಎಫ್‌ ಶುಲ್ಕವನ್ನು ವಿಧಿಸಲಾಗುತ್ತದೆ.

 

ಪ್ರಸ್ತುತ ದೇಶೀಯ ಪ್ರಯಾಣಿಕರಿಗೆ 150 ರೂ. ಯುಡಿಎಫ್‌ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 825 ರೂ. ಶುಲ್ಕವಿದೆ. ಆದರೆ ಸದ್ಯಕ್ಕೆ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಪ್ರಯಾಣಿಕರಿಗೆ ಮಾತ್ರ ಶುಲ್ಕವಿದೆ. ಆಗಮಿಸುವ ಪ್ರಯಾಣಿಕರಿಗೆ ಈ ಶುಲ್ಕ ಇಲ್ಲ ಎಂದು ಹೇಳಲಾಗಿತ್ತು.

 

ಬೆಲೆ ನಿಯಂತ್ರಕ ಸಂಸ್ಥೆಗೆ ಸಲ್ಲಿಸಿದ ದಾಖಲೆಯಲ್ಲಿ ಅದಾನಿ ಏರ್‌ಪೋರ್ಟ್ಸ್‌, 2010ರಿಂದ ಯಾವುದೇ ಸುಂಕ ಪರಿಷ್ಕರಣೆ ನಡೆದಿಲ್ಲ. “ವಿಮಾನ ನಿಲ್ದಾಣದ ಆಧುನೀಕರಣ ಯೋಜನೆಯು ಸಹ ನಡೆಯುತ್ತಿದೆ,” ಎಂದು ಹೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts